ಸಾರಾಂಶ
ನೀರಿಲ್ಲದೆ ಕೆರೆ-ಕಟ್ಟೆಗಳು ಭತ್ತಿ ಹೋಗಿವೆ. ಹೇಮಾವತಿ ಜಲಾಶಯದಲ್ಲಿ ಒಂದಷ್ಟು ನೀರಿದ್ದರೂ ಅದನ್ನು ಕಾಲುವೆಗಳ ಮೂಲಕ ಹರಿಸದೆ ರಾಜ್ಯ ಸರ್ಕಾರ ರೈತ ಸಮುದಾಯ ವಂಚಿಸಿದೆ. ಕೂಡಲೇ ವನ್ಯ ಜೀವಿಗಳ ನೆರವಿಗೆ ಧಾವಿಸಬೇಕು. ಜನ ಜಾನುವಾರುಗಳ ಸಂರಕ್ಷಣೆ ಜವಾಬ್ದಾರಿಯಿಂದ ರಾಜ್ಯ ಸರ್ಕಾರ ನುಣಚಿಕೊಂಡಿದೆ. ಈಗಾಗಲೇ ಶೇ.70 ರಷ್ಟು ಕೊಳವೆ ಬಾವಿಗಳು ನೀರಿದಲ್ಲೇ ಸ್ಥಗಿತಗೊಂಡಿವೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಅರಣ್ಯ ಪ್ರದೇಶಗಳಲ್ಲಿ ನೀರಿನ ತೊಟ್ಟಿ ಅಳವಡಿಸಿ ಅವುಗಳಿಗೆ ನೀರು ತುಂಬುವ ಮೂಲಕ ವನ್ಯ ಜೀವಿಗಳಿಗೆ ಆಸರೆಯಾಗುವಂತೆ ರೈತಸಂಘ ತಾಲೂಕು ಆಡಳಿತಕ್ಕೆ ಮನವಿ ಮಾಡಿದೆ.ಈ ಕುರಿತು ತಹಸೀಲ್ದಾರ್ ಡಾ.ಎಸ್.ವಿ.ಲೋಕೇಶ್ ಮತ್ತು ತಾಪಂಗೆ ಮನವಿ ಮಾಡಿರುವ ರೈತಸಂಘದ ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ನೀರಿಲ್ಲದೆ ಕೆರೆ-ಕಟ್ಟೆಗಳು ಭತ್ತಿ ಹೋಗಿವೆ. ಹೇಮಾವತಿ ಜಲಾಶಯದಲ್ಲಿ ಒಂದಷ್ಟು ನೀರಿದ್ದರೂ ಅದನ್ನು ಕಾಲುವೆಗಳ ಮೂಲಕ ಹರಿಸದೆ ರಾಜ್ಯ ಸರ್ಕಾರ ರೈತ ಸಮುದಾಯ ವಂಚಿಸಿದೆ. ಕೂಡಲೇ ವನ್ಯ ಜೀವಿಗಳ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ.
ಜನ ಜಾನುವಾರುಗಳ ಸಂರಕ್ಷಣೆ ಜವಾಬ್ದಾರಿಯಿಂದ ರಾಜ್ಯ ಸರ್ಕಾರ ನುಣಚಿಕೊಂಡಿದೆ. ಚುನಾವಣೆಯಲ್ಲಿ ಮುಳುಗಿರುವ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರಿಗೆ ರೈತರ ನೆರವಿಗೆ ನಿಲುವ ಮನಸ್ಥಿತಿ ಇಲ್ಲ. ಈಗಾಗಲೇ ಶೇ.70 ರಷ್ಟು ಕೊಳವೆ ಬಾವಿಗಳು ನೀರಿದಲ್ಲೇ ಸ್ಥಗಿತಗೊಂಡಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ವನ್ಯ ಜೀವಿಗಳಾದ ಮುಂಗುಸಿ, ಅಳಿಲು, ನವಿಲುಗಳು, ಗೋಸುಂಬೆ, ಓತಿಕ್ಯಾತ, ಕಾಡುಬೆಕ್ಕು, ಗುಳ್ಳೇನರಿ ಮುಂತಾದ ಪ್ರಾಣಿಗಳಲ್ಲದೆ ಪಕ್ಷಿ ಸಂಕುಲಗಳು ಜಮೀನಿಗೆ ನೀರು ಹಾಯಿಸುತ್ತಿದ್ದ ಸಂದರ್ಭದಲ್ಲಿ ರೈತರ ಹೊಲ ಗದ್ದೆಗಳಲ್ಲಿ ನೀರು ಕುಡಿಯುತ್ತಿದ್ದವು. ಈಗ ಕೊಳವೆ ಬಾವಿಗಳು ಸ್ಥಗಿತಗೊಂಡಿರುವುದರಿಂದ ವನ್ಯ ಜೀವಿಗಳು ಮತ್ತು ಪಕ್ಷಿ ಸಂಕುಲ ಹನಿ ನೀರಿಗಾಗಿ ಪರಿತಪಿಸುತ್ತಿವೆ. ಮೂಕ ಪ್ರಾಣಿಗಳ ರೋಧನ ಅರಣ್ಯ ಇಲಾಖೆಯ ಅಧಿಕಾರಿಗಳ ಕಣ್ಣಿಗೆ ಮಾತ್ರ ಬೀಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಪಟ್ಟಣದ ಹೊರವಲಯದ ಕುರುಚಲು ಕಾಡುಗಳು ಸೇರಿದಂತೆ ತಾಲೂಕು ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಸಂಚರಿಸಿ ವನ್ಯ ಜೀವಿಗಳ ಇರುವ ಒಳ ಭಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದ್ದಾರೆ. ಅದೇ ರೀತಿ ಕಾಗೆ, ಗುಬ್ಬಚ್ಚಿ, ಹುಣ್ಣಿಗೊರವ, ಗೌಜಲ, ಕೆಂಬೂತ ಮುಂತಾದ ಪಕ್ಷಿಗಳು ಮನೆಯ ಸುತ್ತಲ ಕಲುಷಿತ ಬಚ್ಚಲು ನೀರಿಗೆ ಮುಗಿ ಬೀಳುತ್ತಿವೆ. ಆದ ಕಾರಣ ಮನೆಗಳ ಬಳಿ ಪಾತ್ರೆಯಲ್ಲಿ ನೀರಿಟ್ಟು ಪಕ್ಷಿಗಳು ನೀರು ಕುಡಿಯಲು ಅವಕಾಶ ಕಲ್ಪಿಸುವಂತೆ ಪುಟ್ಟೇಗೌಡ ಮನವಿ ಮಾಡಿದ್ದಾರೆ.