ಸಾರಾಂಶ
ನಾರಾಯಣ ಹೆಗಡೆ
ಹಾವೇರಿ : ಶಿಗ್ಗಾಂವಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಸೋಲಿನ ಬಗ್ಗೆಯೂ ವಿಮರ್ಶೆ ಶುರುವಾಗಿದೆ. ಬೊಮ್ಮಾಯಿ ಕುಟುಂಬಕ್ಕೆ ಮೊದಲ ಚುನಾವಣೆ ಸೋಲಿನ ಪರಂಪರೆಯೇ ಇರುವುದು ಚರ್ಚೆಗೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರು ಮೊದಲ ಬಾರಿಗೆ 1962ರಲ್ಲಿ ಕುಂದಗೋಳ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. 1994ರಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಿಂದ ಪ್ರಥಮ ಬಾರಿಗೆ ಸ್ಪರ್ಧಿಸಿ ಸೋಲು ಕಂಡಿದ್ದರು. ಅದೇ ರೀತಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಕೂಡ ತಮ್ಮ ಮೊದಲ ಚುನಾವಣೆಯಲ್ಲಿಯೇ ಸೋಲು ಕಂಡಿದ್ದಾರೆ. ಆ ಮೂಲಕ ಮೊದಲ ಚುನಾವಣೆಯ ಸೋಲಿನ ಪರಂಪರೆ ಮುಂದುವರಿದಿದೆ. ಅದೇ ರೀತಿ ಭರತ್ ಕೂಡ ಮುಂದೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದೂ ಅನೇಕರು ಭವಿಷ್ಯ ನುಡಿದು ಸೋಲಿನ ಬೇಸರದಲ್ಲೂ ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.
ಕೈ ಹಿಡಿದ ಸವಣೂರು: ನಾವಣೆಯಲ್ಲಿ ಶಿಗ್ಗಾಂವಿ ತಾಲೂಕಿನಲ್ಲಿ ಬಿಜೆಪಿಗೆ ಅಲ್ಪ ಮುನ್ನಡೆ ಸಿಕ್ಕಿದ್ದರೆ ಕಾಂಗ್ರೆಸ್‌ಗೆ ಸವಣೂರು ಗೆಲುವನ್ನೇ ತಂದಿತ್ತಿದೆ. ಫಲಿತಾಂಶದ ಬಳಿಕ ಬಿಜೆಪಿಯವರು ಯಾವ ಬೂತ್ ಕೈಕೊಟ್ಟಿತು ಎಂಬ ವಿಶ್ಲೇಷಣೆಯಲ್ಲಿ ತೊಡಗಿದ್ದರೆ, ನಿರೀಕ್ಷೆಗೂ ಮೀರಿ ಜನರು ಬೆಂಬಲಿಸಿರುವುದರಿಂದ ಕಾಂಗ್ರೆಸಿಗರು ಫುಲ್ ಖುಷ್ ಆಗಿದ್ದಾರೆ.
ಶಿಗ್ಗಾಂವಿ ತಾಲೂಕಿನಲ್ಲಿ ಬಿಜೆಪಿ ಕೇವಲ 244 ಮತಗಳ ಮುನ್ನಡೆ ಸಾಧಿಸಿದರೆ, ಮುಸ್ಲಿಂ ಪ್ರಾಬಲ್ಯ ಇರುವ ಸವಣೂರು ತಾಲೂಕಿನಲ್ಲಿ ಕಾಂಗ್ರೆಸ್ 13,871ಮತಗಳ ಮುನ್ನಡೆ ಕಾಯ್ದುಕೊಂಡಿದೆ. ಬಂಕಾಪುರ ಪಟ್ಟಣದಲ್ಲಿ ಕಾಂಗ್ರೆಸಿಗೆ 2942 ಮತಗಳು, ಶಿಗ್ಗಾಂವಿ ಪಟ್ಟಣದಲ್ಲಿ 1642 ಮತಗಳು, ಕಾರಡಗಿ ಭಾಗದಲ್ಲಿ 2191, ಯಲವಿಗಿ ಗ್ರಾಮದಲ್ಲಿ 383 ಮತಗಳ ಲೀಡ್ ಸಿಕ್ಕಿದೆ. ಅಲ್ಲದೇ ಸವಣೂರು ಪಟ್ಟಣವೊಂದರಲ್ಲೇ ಕಾಂಗ್ರೆಸ್ 11,787 ಮತಗಳ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಇದು ಖಾದ್ರಿ ಮ್ಯಾಜಿಕ್ ಎಂದು ಹೇಳಲಾಗುತ್ತಿದೆ. ಈ ಚುನಾವಣೆ ಮೂಲಕ ಅಜ್ಜಂಪೀರ್ ಖಾದ್ರಿ ಸಾಮರ್ಥ್ಯದ ಅರಿವು ಕಾಂಗ್ರೆಸ್ ನಾಯಕರಿಗೆ ಆಗಿದೆ. ಶಿಗ್ಗಾಂವಿ ತಾಲೂಕಿನ ಗ್ರಾಮೀಣದಲ್ಲಿ ಬಿಜೆಪಿಗೆ ಲೀಡ್ ಸಿಕ್ಕರೂ ಸವಣೂರು ತಾಲೂಕಿನಲ್ಲಿ ಕಾಂಗ್ರೆಸ್ಸಿಗೆ ಸಿಕ್ಕ ಮತಗಳನ್ನು ಹಿಂದಿಕ್ಕಲು ಸಾಧ್ಯವಾಗದೇ ಬಿಜೆಪಿ ಸೋಲು ಒಪ್ಪಿಕೊಳ್ಳಬೇಕಾಯಿತು.
ಶಿಗ್ಗಾಂವಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ಹಾಗೂ ಕಾಂಗ್ರೆಸ್‌ನ ಯಾಸೀರ್‌ಖಾನ್ ಪಠಾಣ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಯಾರೇ ಗೆದ್ದರೂ ಕೂದಲೆಳೆಯ ಅಂತರದಲ್ಲಿ ಮಾತ್ರ ಎಂಬ ಲೆಕ್ಕಾಚಾರವೂ ನಡೆದಿತ್ತು. ಆದರೆ, ಎಲ್ಲ ಲೆಕ್ಕಾಚಾರ ತಲೆಕೆಳಗಾಗಿದ್ದು, ಕಾಂಗ್ರೆಸ್ ಭರ್ಜರಿ ಅಂತರದಲ್ಲಿ ಗೆದ್ದು ಬೀಗಿದೆ.
ಉಪಚುನಾವಣೆ ಫಲಿತಾಂಶ ಘೋಷಣೆ ಬೆನ್ನಲ್ಲೆ ಕ್ಷೇತ್ರದಲ್ಲಿ ಬೂತ್‌ವಾರು, ಜಿಲ್ಲಾ ಪಂಚಾಯಿತಿವಾರು ಪಟ್ಟಿ ಹಿಡಿದು ಪಕ್ಷಗಳ ಮುಖಂಡರು ಬಿಜೆಪಿ ಚುನಾವಣೆಯಲ್ಲಿ ಮುಗ್ಗರಿಸಿದ್ದು ಎಲ್ಲಿ, ಕಾಂಗ್ರೆಸ್ ಗೆದ್ದಿದ್ದು ಎಲ್ಲಿ ಎಂಬ ಲೆಕ್ಕಾಚಾರ ನಡೆಸುತ್ತಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಂಡಿದ್ದರೆ, ಅನಿರೀಕ್ಷಿತವಾಗಿ ಕ್ಷೇತ್ರ ಕಳೆದುಕೊಂಡಿರುವ ಬಿಜೆಪಿ ಮುಖಂಡರು, ಕಾರ್ಯಕರ್ತರು ಚುನಾವಣೆಯ ಹಿನ್ನಡೆಗೆ ಕಾರಣಗಳ ಕುರಿತು ಜಿಪಂ ಕ್ಷೇತ್ರವಾರು, ಹಳ್ಳಿಗಳ ಪಟ್ಟಿ ಹಿಡಿದು ಎಲ್ಲಿ ಪ್ಲಸ್ ಆಗಿದೆ? ಎಲ್ಲಿ ಮೈನಸ್ ಆಗಿದೆ? ಎಂಬ ವಿಶ್ಲೇಷಣೆಗೆ ನಡೆಸುತ್ತಿದ್ದಾರೆ.
ಬಿಜೆಪಿಗೆ ಕೈಕೊಟ್ಟ ಶಿಗ್ಗಾಂವಿ: ಪ್ರತಿ ಚುನಾವಣೆಯಲ್ಲಿ ಶಿಗ್ಗಾಂವಿ ತಾಲೂಕಿನಲ್ಲಿ ಮತದಾರರು ಬಿಜೆಪಿಗೆ 10-15 ಸಾವಿರಕ್ಕೂ ಹೆಚ್ಚು ಮತಗಳ ಲೀಡ್ ಕೊಟ್ಟು ಬಸವರಾಜ ಬೊಮ್ಮಾಯಿ ಬೆನ್ನಿಗೆ ನಿಲ್ಲುತ್ತಿದ್ದರು. ಆದರೆ ಶಿಗ್ಗಾಂವಿಯಲ್ಲೂ ಈ ಸಾರಿ ನಿರೀಕ್ಷಿತ ಮತಗಳು ಬಂದಿಲ್ಲ. ಆದರೆ ಈ ಉಪಚುನಾವಣೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಲೀಡ್ ಕೊಡದೇ ಕೇವಲ 244 ಮತಗಳಷ್ಟೇ ಮುನ್ನಡೆ ಕಾಯ್ದುಕೊಂಡಿದೆ. ಪ್ರತಿ ಸಾರಿ ಶಿಗ್ಗಾಂವಿ ಪಟ್ಟಣದಲ್ಲಿ ಮುನ್ನಡೆ ಕಾಯ್ದುಕೊಳ್ಳುತ್ತಿದ್ದ ಬಿಜೆಪಿ ಈ ಸಾರಿ ಶಿಗ್ಗಾಂವಿ ಪಟ್ಟಣದಲ್ಲೇ 1642 ಮತಗಳ ಹಿನ್ನಡೆ ಅನುಭವಿಸಿದೆ.
ಬಿಜೆಪಿಯು ಶಿಗ್ಗಾಂವಿ ತಾಲೂಕಿನಲ್ಲಿ 244 ಮತ, ತಡಸ ಜಿಪಂ ಭಾಗದಲ್ಲಿ 1034 ಮತ, ಹುಲಗೂರು ಭಾಗದಲ್ಲಿ 806, ದುಂಡಶಿ ಭಾಗದಲ್ಲಿ 1253, ಕುಂದೂರ ಭಾಗದಲ್ಲಿ 1735, ಹುರುಳಿಕುಪ್ಪಿ ಜಿಪಂ ಕ್ಷೇತ್ರದಲ್ಲಿ 490 ಮತಗಳ ಮುನ್ನಡೆ ಸಾಧಿಸಿದೆ. ಆದರೆ, ಈ ಸಂಖ್ಯೆ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಹೀಗೆ ಸೋಲು ಗೆಲುವಿನ ಲೆಕ್ಕಾಚಾರ ಮುಂದುವರಿದಿದ್ದು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಗೆದ್ದ ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ.