ಎಸ್‌ಐಟಿ ರಚನೆ ಕಾಂಗ್ರೆಸ್ಸಿಗೆ ತಿರುಗು ಬಾಣ ಆಗಲಿದೆ : ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ

| Published : Nov 18 2024, 01:20 AM IST / Updated: Nov 18 2024, 09:31 AM IST

ಎಸ್‌ಐಟಿ ರಚನೆ ಕಾಂಗ್ರೆಸ್ಸಿಗೆ ತಿರುಗು ಬಾಣ ಆಗಲಿದೆ : ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕೊರೋನಾ ಸಂದರ್ಭದಲ್ಲಿ ಹಗರಣ, ಭ್ರಷ್ಟಾಚಾರ ನಡೆಸಿದ್ದಾರೆಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ರಾಜ್ಯ ಸರ್ಕಾರ ರಚಿಸಿದ ಎಸ್‌ಐಟಿ ತಿರುಗು ಬಾಣವಾಗಲಿದೆ. ಇದನ್ನು ಸರ್ಕಾರ ನೆನಪಿಟ್ಟುಕೊಳ್ಳಲಿ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ದಾವಣಗೆರೆಯಲ್ಲಿ ಹೇಳಿದ್ದಾರೆ.

  ದಾವಣಗೆರೆ : ಕೊರೋನಾ ಸಂದರ್ಭದಲ್ಲಿ ಹಗರಣ, ಭ್ರಷ್ಟಾಚಾರ ನಡೆಸಿದ್ದಾರೆಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ರಾಜ್ಯ ಸರ್ಕಾರ ರಚಿಸಿದ ಎಸ್‌ಐಟಿ ತಿರುಗು ಬಾಣವಾಗಲಿದೆ. ಇದನ್ನು ಸರ್ಕಾರ ನೆನಪಿಟ್ಟುಕೊಳ್ಳಲಿ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಮಾರಿ ಕೊರೋನಾ ಹಾವಳಿ ಸಂದರ್ಭ ಯಡಿಯೂರಪ್ಪ ರಾಜ್ಯದ ಜನರ ಜೀವ ಉಳಿಸಲು ಕ್ರಮ ಕೈಗೊಂಡಿದ್ದರು. ಬಿಜೆಪಿ ಸರ್ಕಾರದ ವಿರುದ್ಧ ಶೇ.40 ಕಮೀಷನ್ ಸರ್ಕಾರವೆಂದು ಕಾಂಗ್ರೆಸ್ಸಿಗರು ಆರೋಪ ಮಾಡಿದ್ದರು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಶೇ.100 ಕಮಿಷನ್ ಸರ್ಕಾರವಾಗಿದೆ ಎಂದು ಟೀಕಿಸಿದರು.

ಕೇಂದ್ರ ಸರ್ಕಾರವು ಆಹಾರ ಭಾಗ್ಯದಡಿ 5 ಕೆಜಿ ಅಕ್ಕಿ ನೀಡುತ್ತಿದೆ. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಭರವಸೆ ಈಡೇರಿಸಲಾಗದೇ, 11 ಲಕ್ಷ ಬಿಪಿಎಲ್ ಕಾರ್ಡ್ ರದ್ದುಪಡಿಸುವುದಾಗಿ ಹೇಳುತ್ತಿದೆ. ಬಿಪಿಎಲ್ ಕಾರ್ಡ್‌ಗಳ ರದ್ದುಪಡಿಸಲು ಕಾಂಗ್ರೆಸ್ ಸರ್ಕಾರ ಮುಂದಾದರೆ, ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ನನ್ನನ್ನು ಥರ್ಡ್‌ ರೇಟ್ ರಾಜಕಾರಣಿ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. 4ನೇ ರೇಟ್‌ ಸೇರಿದಂತೆ ಎಲ್ಲವೂ ಆಗಿರುವ ರಾಜಕಾರಣಿ ಯತ್ನಾಳ್. ತಾವು ವಾಜಪೇಯಿ ಸಂಪುಟದ ಸಚಿವನೆಂದು ಹೇಳಿಕೊಂಡು, ಅವರಿಗೆ ಅವಮಾನಿಸುವ ಕೆಲಸ ಯತ್ನಾಳ್ ಮಾಡುತ್ತಿದ್ದಾರೆ. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರು ಶಾಸಕ ಯತ್ನಾಳ್‌ರ ಕನಸಲ್ಲೂ ಸಿಂಹಸ್ವಪ್ನವಾಗಿ ಕಾಡುತ್ತಾರೆ. ಅವರ ಬಗ್ಗೆ ಮಾತನಾಡದಿದ್ದರೆ ಯತ್ನಾಳ್‌ಗೆ ಊಟ ಸೇರುವುದಿಲ್ಲ, ನಿದ್ರೆಯೂ ಬರುವುದಿಲ್ಲ. ವಕ್ಫ್‌ ವಿರುದ್ಧದ ಹೋರಾಟಕ್ಕೆ ರಚಿಸಿದ ಮೂರು ತಂಡಗಳೇ ಅಧಿಕೃತ. ಯತ್ನಾಳ್‌ ಮತ್ತು ತಂಡಕ್ಕೆ ಮಾನ್ಯತೆಯೇ ಇಲ್ಲ. ಬೇರೆ ಯಾರೇ ತಂಡ ಮಾಡಿದರೂ ಅಧಿಕೃತವಲ್ಲ ಎಂದು ಹೇಳಿದರು.

ಸಿಎಂ ಯಾಕಾಗಬಾರದು?:

ವಿಜಯೇಂದ್ರ ಸಿಎಂ ಯಾಕಾಗಬಾರದು? ಜನಾಶೀರ್ವಾದದಿಂದ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯೂ ಆಗುತ್ತಾರೆ. ಅದಕ್ಕೆ ಯತ್ನಾಳ್‌ರಿಗೆ ಹೊಟ್ಟೆಯುರಿ. ನಮಗೆ ಯಾವುದೇ ರೀತಿಯ ರಹಸ್ಯ ಸಭೆ ನಡೆಸದಂತೆ ಯಡಿಯೂರಪ್ಪ, ವಿಜಯೇಂದ್ರ ಸೂಚಿಸಿದ್ದರಿಂದ ನಾವು ಸಭೆ ಮಾಡಿರಲಿಲ್ಲ, ಮಾತನಾಡಿರಲಿಲ್ಲ. ಇನ್ನು ಮುಂದೆ ನಾವೂ ಸಭೆ ಮಾಡುತ್ತೇವೆ. ನಾವೂ ದೆಹಲಿಗೆ ಹೋಗುತ್ತೇವೆ ಎಂದು ರೇಣುಕಾಚಾರ್ಯ ಹೇಳಿದರು.

ಸಿಎಂ, ಡಿಸಿಎಂ ಈಗ ಮೌನ:

ಗುತ್ತಿಗೆದಾರನೇ ಅಲ್ಲದ ಅಂಬಿಕಾಪತಿ ಎಂಬ ಕಾಂಗ್ರೆಸ್ ಮುಖಂಡ ಬಿಜೆಪಿ ಸರ್ಕಾರದ ವಿರುದ್ಧ ಕೇಂದ್ರಕ್ಕೆ ಪತ್ರ ಬರೆದು, ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಕಾಂಗ್ರೆಸ್‌ ಮಾಡಿದ್ದ ಆರೋಪಕ್ಕೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿದೆ. ಅಧಿಕಾರ ಹಿಡಿಯಲು ಪೇ ಸಿಎಂ ಶೇ.40 ಕಮಿಷನ್ ಸರ್ಕಾರವೆಂದು ಸುಳ್ಳು ಆರೋಪ ಮಾಡಿದ್ದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಈಗ ಮೌನವಹಿಸಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಪ್ರವೀಣ ರಾವ್ ಜಾಧವ್, ರಾಜು ವೀರಣ್ಣ, ಕೆ.ಎನ್.ವೆಂಕಟೇಶ, ಮಂಜು, ಪ್ರಶಾಂತ, ಮಂಜುನಾಥ ಇತರರು ಇದ್ದರು.

ಕೋಟ್‌ ಪುರುಷರಿಗೂ ಇನ್ನು ಮುಂದೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣವೆಂಬ ಘೋಷಣೆ ಮಾಡುವ ಮಾತುಗಳನ್ನಾಡಿದ್ದಾರೆ. ಮೊದಲು ಹಳೇ ಗ್ಯಾರಂಟಿಗಳನ್ನು ಸರಿಯಾಗಿ ಕೊಟ್ಟು, ನಂತರ ಹೊಸದಾಗಿ ಪುರುಷರಿಗೂ ಉಚಿತ ಪ್ರಯಾಣ ಘೋಷಣೆ ಮಾಡಿ

- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ