ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಉದ್ಘಾಟನೆ

| Published : Nov 18 2024, 01:20 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ೨೦೨೪-೨೫ ನೇ ಸಾಲಿನಲ್ಲಿ ಮಂಜೂರಾದ ಡಿ.ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯವನ್ನು ಸಕ್ಕರೆ, ಕೃಷಿ ಮಾರುಕಟ್ಟೆ ಹಾಗೂ ಜವಳಿ ಸಚಿವ ಶಿವಾನಂದ ಪಾಟೀಲ ಡಿ.ದೇವರಾಜ ಅರಸು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ೨೦೨೪-೨೫ ನೇ ಸಾಲಿನಲ್ಲಿ ಮಂಜೂರಾದ ಡಿ.ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯವನ್ನು ಸಕ್ಕರೆ, ಕೃಷಿ ಮಾರುಕಟ್ಟೆ ಹಾಗೂ ಜವಳಿ ಸಚಿವ ಶಿವಾನಂದ ಪಾಟೀಲ ಡಿ.ದೇವರಾಜ ಅರಸು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಪ್ರಸ್ತುತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ೧೦೦ ಸಂಖ್ಯಾಬಲದ ಒಟ್ಟು ೬೨ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಮಂಜೂರಾತಿ ದೊರಕಿದೆ. ಇದರಲ್ಲಿ ಬಸವನಬಾಗೇವಾಡಿಗೂ ಒಂದು ಮಂಜೂರಾತಿ ದೊರೆತಿದೆ. ಈ ಭಾಗದಲ್ಲಿರುವ ವಿದ್ಯಾರ್ಥಿನಿಯರಿಗೆ ಈ ವಸತಿ ನಿಲಯ ತುಂಬಾ ಅನುಕೂಲವಾಗಲಿದೆ. ವಿದ್ಯಾರ್ಥಿನಿಯರು ಈ ವಸತಿ ನಿಲಯದ ಸದುಪಯೋಗ ಪಡೆದುಕೊಂಡು ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು. ಇಲಾಖೆಯ ಅಧಿಕಾರಿಗಳು ವಸತಿ ನಿಲಯದಲ್ಲಿರುವ ವಿದ್ಯಾರ್ಥಿನಿಯರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಈ ವಸತಿ ನಿಲಯವು ಬಾಡಿಗೆ ಕಟ್ಟಡದಲ್ಲಿ ಇದೀಗ ಆರಂಭವಾಗಿದೆ. ಈ ವಸತಿ ನಿಲಯಕ್ಕೆ ಹೋಗುವ ರಸ್ತೆಯನ್ನು ಪುರಸಭೆಯಿಂದ ಸುಧಾರಣೆ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ವಿದ್ಯಾರ್ಥಿನಿಯರಿಗೆ ಈ ವಸತಿ ನಿಲಯವು ವರದಾನವಾಗಲಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಎಪಿಎಂಸಿ ಮಾಜಿ ಅಧ್ಯಕ್ಷ ಶೇಖರ ಗೊಳಸಂಗಿ, ತಾಲೂಕು ಒಕ್ಕುಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಇಂಟರ್‌ನ್ಯಾಷನಲ್ ಶಾಲೆಯ ಮೇಲುಸ್ತುವಾರಿ ಸಮಿತಿ ಸದಸ್ಯ ಎಂ.ಜಿ.ಆದಿಗೊಂಡ, ಹಿಂದುಳಿದ ವರ್ಗಗಳ ಇಲಾಖೆಯ ಕಲ್ಯಾಣಾಧಿಕಾರಿ ಎಸ್.ವ್ಹಿ.ನಿಂಬಾಳ, ಇಲಾಖೆಯ ವಿಸ್ತೀರ್ಣಾಧಿಕಾರಿ ಸಿ.ಜಿ.ಬಿರಾದಾರ, ಕಚೇರಿ ವ್ಯವಸ್ಥಾಪಕ ಎಸ್.ಡಿ.ಪೂಜಾರಿ, ವಿವಿಧ ವಸತಿ ನಿಲಯಯಗಳ ಪಾಲಕರಾದ ಎಸ್.ಜಿ.ಕುಂಟೋಜಿ, ಪಿ.ಬಿ.ಬಡಿಗೇರ, ಬಿ.ಆರ್‌.ಹಳ್ಳಿ, ಸಿದ್ರಾಮ ಕುರಬರ, ಶ್ರೀದೇವಿ ಸಾವಳಗಿ, ಕವಿತಾ ತಾವರಖೇಡ, ಸುಜಾತಾ ಲಮಾಣಿ, ಕಚೇರಿ ಸಿಬ್ಬಂದಿ ಇತರರು ಇದ್ದರು.ನಂತರ ಸಚಿವರು ಉದ್ಯಾನವನಕ್ಕೆ ತೆರಳಿ ಮಕ್ಕಳ ಆಟಿಕೆ, ವ್ಯಾಯಾಮದ ಸಲಕರಣೆಗಳನ್ನು ವೀಕ್ಷಿಸಿದರು. ಉದ್ಯಾನವನದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆಗೆ ಹೈಮಾಸ್ಕ್, ಅಲ್ಲಲ್ಲಿ ವಿದ್ಯುದೀಪ ವ್ಯವಸ್ಥೆ, ಉದ್ಯಾನವನ ಆವರಣದಲ್ಲಿರುವ ಮೈದಾನವನ್ನು ಸಮತಟ್ಟಾಗಿಡುವುದು, ಸ್ವಚ್ಛತೆ ಕೈಗೊಳ್ಳುವಂತೆ ತಿಳಿಸಿದರು.