ಸಾರಾಂಶ
ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ರೈತಾಪಿ ಜನರು ಮಣ್ಣಿನ ಮಡಿಕೆಗಳಿಲ್ಲದೆ ಬದುಕಿಲ್ಲ ಎನ್ನುವಷ್ಟು ಮಣ್ಣಿನ ಮಡಿಕೆಗಳೇ ಮುಖ್ಯವಾಗಿತ್ತು. ಆದರೆ, ಈ ಮಾತು ಇಂದು ಸುಳ್ಳೇನೋ ಅನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಬದಲಾಗಿದೆ.
ಅಣ್ಣಾಸಾಬ ತೆಲಸಂಗ
ಕನ್ನಡಪ್ರಭ ವಾರ್ತೆ ಅಥಣಿಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ರೈತಾಪಿ ಜನರು ಮಣ್ಣಿನ ಮಡಿಕೆಗಳಿಲ್ಲದೆ ಬದುಕಿಲ್ಲ ಎನ್ನುವಷ್ಟು ಮಣ್ಣಿನ ಮಡಿಕೆಗಳೇ ಮುಖ್ಯವಾಗಿತ್ತು. ಆದರೆ, ಈ ಮಾತು ಇಂದು ಸುಳ್ಳೇನೋ ಅನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಬದಲಾಗಿದೆ.
ಆಧುನಿಕ ಭರಾಟೆಯಲ್ಲಿ ಸ್ಟೀಲ್, ಅಲ್ಯೂಮಿನಿಯಂ, ಪ್ಲಾಸ್ಟಿಕ್, ಫೈಬರ್ ಬಂದು ಮಡಿಕೆಗಳು ಮಾಯವಾಗುತ್ತಿರುವ ಆತಂಕದ ನಡುವೆಯೇ ಕುಂಬಾರರು ವೃತ್ತಿ ಸಾಗಿಸುತ್ತಿದ್ದಾರೆ. ಕಳೆದೆರಡು ವರ್ಷಗಳಿಂದ ಸರಿಯಾಗಿ ಮಳೆಯಾಗದೇ ಬರಗಾಲದ ಛಾಯೆ ಅಧಿಕವಾಗಿದ್ದು, ಮಹಾಶಿವರಾತ್ರಿ ಮುಗಿಯುತ್ತಿದ್ದಂತೆಯೇ ಬಿಸಿಲಿನ ತಾಪ ಗರಿಷ್ಠ ಅಂಕಿಗೆ ಬಂದು ನಿಂತಿದೆ. ಬಿಸಿಲಿನ ತಾಪಕ್ಕೆ ಬಸವಳಿದಿರುವ ಅಥಣಿಯ ಜನತೆ ಅನಿವಾರ್ಯವಾಗಿ ತಂಪು ಪಾನೀಯ, ಮಜ್ಜಿಗೆ, ಎಳೆನೀರಿಗೆ ಮೊರೆ ಹೋಗುತ್ತಿದ್ದಾರೆ. ಮನೆ ಮನೆಗಳಲ್ಲಿ ಫ್ರಿಡ್ಜ್ ಇದ್ದರೂ ಕೂಡ ನೈಸರ್ಗಿಕವಾಗಿ ತಂಪು ನೀರು ಕುಡಿಯಬೇಕೆಂಬ ಬಯಕೆಯಿಂದ ಕುಂಬಾರಣ್ಣನ ಮಡಿಕೆಯ ಮೊರೆ ಹೋಗುತ್ತಿರುವುದು ಕುಂಬಾರನ ಮಗದಲ್ಲಿ ಮಂದಹಾಸ ಮೂಡಿಸುವಂತಾಗಿದೆ.ಬಡವರ ಫ್ರಿಡ್ಜ್ ಗಳು ಎಂದೇ ಕರೆಯಲ್ಪಡುವ ಮಣ್ಣಿನ ಮಡಿಕೆಗಳ ವ್ಯಾಪಾರದಲ್ಲಿ ಚೇತರಿಕೆ ಕಂಡ ಕುಂಬಾರಣ್ಣ ಕಳೆದ ಮೂರು ವರ್ಷಗಳಿಂದ ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆ ಎದುರಿಸುತ್ತಿದ್ದರು. ಆದರೆ, ಕುಂಬಾರರ ಬದುಕು ಈ ಬೇಸಿಗೆಯಲ್ಲಿ ಕೊಂಚ ಮಟ್ಟಿಗೆ ಹಸನಾಗುವಂತೆ ಕಾಣುತ್ತಿದೆ. ಕೊರೋನಾ ಮಹಾಮಾರಿ ಹಾಗೂ ಬೇಸಿಗೆಯ ಮಡಿಕೆ ವ್ಯಾಪಾರದ ಸಮಯದಲ್ಲಿ ಅಕಾಲಿಕ ಮಳೆಯಿಂದ ಕಂಗಾಲಾಗಿದ್ದರು. ಈ ವರ್ಷ ಬಿಸಿಲಿನ ತಾಪ ಹೆಚ್ಚಿದಂತೆ ಮಣ್ಣಿನ ಮಡಿಕೆಗೆ ಬೇಡಿಕೆ ಹೆಚ್ಚುತ್ತಿದ್ದು, ಈ ಬಾರಿ ಕುಂಬಾರರು ಜೇಜು ತುಂಬಿಸಿಕೊಳ್ಳುವ ಆಶಾಭಾವನೆ ಹೊಂದಿದ್ದಾರೆ.ಪಟ್ಟಣದ ಜೋಡಿ ಕೆರೆಗಳ ಹತ್ತಿರ ವಾಸವಾಗಿರುವ ಕುಂಬಾರಿಕೆಯ 6 ಕುಟುಂಬಗಳಿವೆ. ಅನೇಕ ತಲೆಮಾರುಗಳಿಂದ ಹದವಾದ ಮಣ್ಣನ ತಂದು ಮಡಿಕೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದು ಇವರ ನಿತ್ಯ ಕಸುಬಾಗಿತ್ತು. ದಿನಪೂರ್ತಿ ಬಿಸಿಲಿಗೆ ಬೆಂದು, ಕೈಗೆ ಬಂದ ಅಷ್ಟೋ ಇಷ್ಟು ಹಣದಿಂದ ನೆಮ್ಮದಿಯ ಜೀವನ ಸಾಗಿಸುತ್ತಾರೆ. ಬೇಡಿಕೆಗೆ ತಕ್ಕಂತೆ ಇಲ್ಲಿ ಮಡಿಕೆಗಳನ್ನು ತಯಾರಿಸಲಾಗದ, ನೆರೆಯ ಮಹಾರಾಷ್ಟ್ರದಿಂದ ಸಿದ್ಧವಾಗಿರುವ ಮಡಿಕೆಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ.ಈ ಹಿಂದೆ ಅನೇಕ ವರ್ಷಗಳಿಂದ ಮಡಿಕೆಗಳನ್ನು ಕೇಳುವವರಿಲ್ಲದಂತಾಗಿತ್ತು. ಕುಂಬಾರಿಕೆ ಮಾಡುತ್ತಿದ್ದವರು ಮೂಲ ವೃತ್ತಿಯನ್ನು ಬಿಡಬೇಕೆ? ಇದನ್ನೇ ನಂಬಿ ಕುಳಿತರೇ ಹೊಟ್ಟೆಪಾಡಿಗೆ ಮಾಡುವುದೇನು? ಇದನ್ನು ಬಿಟ್ಟು ಮತ್ಯಾವ ವೃತ್ತಿಯಲ್ಲಿ ತೊಡಗಿ ಜೀವ ಸಾಗಿಸಬೇಕು? ಎಂದು ಕುಂಬಾರರು ಚಿಂತೆಯಲ್ಲಿದ್ದರು. ಆದರೆ, ಈ ಬಾರಿ ಬಿಸಿಲು ಹೆಚ್ಚಾಗಿ ಮಡಿಕೆ ಮಾರಾಟ ವ್ಯಾಪಾರ ಕುಂಬಾರರ ಕೈ ಹಿಡಿದಿದೆ. ಉಳ್ಳವರು ಫ್ರಿಡ್ಜ್ ಮೊರೆ ಹೋಗಿದ್ದರೇ, ಬಡವರು ಮಡಿಕೆ ಖರೀದಿಸ ತೊಡಗಿದ್ದಾರೆ. ಇದರಿಂದ ಕುಂಬಾರರ ವ್ಯಾಪಾರ ತುಸು ಜೋರಾಗಿದ್ದು ಖುಷಿ ಇಮ್ಮಡಿಯಾಗಿದೆ.ಹೇಗಿದೆ ಮಡಿಕೆ ರೇಟು?ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ದರವೂ ಹೆಚ್ಚಾಗಿದೆ. ಮಡಿಕೆಗಳಿಗೆ ಏನಿಲ್ಲವೆಂದರೂ ₹100 ರಿಂದ ₹800 ಗಳನ್ನು ಕೊಡಬೇಕಾಗಿದೆ. ಕಪ್ಪು ಬಣ್ಣದ ಮಡಿಕೆ ಹಾಗೂ ಕಂದು ಬಣ್ಣದ ಮಡಿಕೆಗಳಿಗೆ ಪ್ರತ್ಯೇಕ ದರವೂ ಇದೆ. ಬಹುತೇಕ ಜನರು ಕಂದು ಬಣ್ಣದ ಮಡಿಕೆ ಕೊಳ್ಳಲು ಆಸಕ್ತಿ ತೋರುತ್ತಿದ್ದು, ಕುಂಬಾರರೂ ಕಂದು ಬಣ್ಣದ ಮಡಿಕೆಗಳನ್ನೇ ಹೆಚ್ಚಾಗಿ ನೆರೆಯ ಮಹಾರಾಷ್ಟ್ರದಿಂದ ತರಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ. ಮಡಿಕೆಗಳ ಜೊತೆಗೆ ಮಣ್ಣಿನಿಂದ ತಯಾರಿಸಿದ ನೀರಿನ ಬಾಟಟ್‌ಗಳು, ಹೊಗೆರಹಿತ ಒಲೆಗಳನ್ನು, ಮಣ್ಣಿನ ಗಡಿಗೆಗಳು, ಕುಳ್ಳಿ, ಹರವಿ, ಪರಿಯಣ, ಹಣತೆ ಮುಂತಾದ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಈಗ ಬೇಸಿಗೆ ಬರುತ್ತಿದ್ದಂತೆಯೇ ಮಣ್ಣಿನ ಮಡಿಕೆಗಳಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತಿದೆ. ನಿತ್ಯ ನೂರಾರು ಮಡಿಕೆಗಳನ್ನು ವ್ಯಾಪಾರಕ್ಕಾಗಿ ತರುತ್ತಿದ್ದು, ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.ಕುಂಬಾರಣ್ಣನಿಗೆ ಬೇಸಿಗೆ ಬಂದರೆನೇ ಅವನ ಕುಟುಂಬ ನಿರ್ವಹಣೆಗೆ ಬೇಕಾದಷ್ಟು ಹಣ ಗಳಿಸುವ ವಿಶ್ವಾಸ. ಆರೋಗ್ಯ ದೃಷ್ಟಿಯಿಂದ ಮಣ್ಣಿನ ಮಡಿಕೆಗಳನ್ನು ಬಳಸುವುದು ಒಳ್ಳೆಯದ್ದು. ಹಾಗೆಯೇ ನಮ್ಮ ಶರೀರದ ತಾಪವನ್ನೂ ಕಡಿಮೆ ಮಾಡಿಕೊಳ್ಳಬಹುದಾಗಿದೆ. ನಮ್ಮ ಹಿರಿಯರು ಬಳಸಿದಂತೆ ಮಡಿಕೆಯನ್ನು ಬಳಸುವ ಮೂಲಕ ಕುಂಬಾರಿಕೆಯ ಕುಲಕಸುಬನ್ನು ಉಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದು. ಆದಷ್ಟು ಹೆಚ್ಚೆಚ್ಚು ಮಣ್ಣಿನ ಮಡಿಕೆಗಳನ್ನು ಬಳಸಿ ಕುಂಬಾರಿಕೆ ವೃತ್ತಿ ಉಳಿಸೋಣ ಹಾಗೂ ಆರೋಗ್ಯದಾಯಕ ಜೀವನ ನಡೆಸೋಣ.- ಭಾರತಿ ಅಪ್ಪಾಸಾಹೇಬ
ಅಲಿಬಾದಿ, ಅಥಣಿ.ಪ್ರತಿವರ್ಷಕ್ಕಿಂತ ಈ ಬಾರಿ ಬಿಸಿಲಿನ ತಾಪ ಹೆಚ್ಚಿಗೆ ಇರುವುದರಿಂದ ಜನರು ತಣ್ಣನೆಯ ನೀರು, ತಂಪು ಪಾನೀಯ ಕುಡಿಯಲು ಬಯಸುವುದು ಸಹಜ. ಬಡವರಿಗೆ ಫ್ರಿಡ್ಜ್ ಇರುವುದಿಲ್ಲ. ಇನ್ನು ಅನೇಕ ಜನ ಫ್ರಿಡ್ಜ್ ಇದ್ದರೂ ಕೂಡ ಆರೋಗ್ಯದ ಹಿತ ದೃಷ್ಟಿಯಿಂದ ನೈಸರ್ಗಿಕವಾಗಿ ತಂಪಾಗುವ ನೀರನ್ನು ಕುಡಿಯಲು ಬೇಸಿಗೆ ಕಾಲದಲ್ಲಿ ಮಣ್ಣಿನ ಮಡಿಕೆಗಳನ್ನೇ ಕೊಳ್ಳುತ್ತಾರೆ. ಹೀಗಾಗಿ ಮಣ್ಣಿನ ಮಡಿಕೆಗಳಿಗೆ ಈ ಬಾರಿ ಹೆಚ್ಚಿನ ಬೇಡಿಕೆ ಇದೆ.-ಬಸಲಿಂಗಪ್ಪ ಕುಂಬಾರ,
ಮಡಿಕೆ ವ್ಯಾಪಾರಿ ಅಥಣಿ.