ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದವರ ಪರಂಪರೆಯಿಂದ ನಾವು ಪ್ರೇರಣೆ ಪಡೆಯಬೇಕು. ನನ್ನ ದೇಶ ಅಜೇಯವಾಗಿರಬೇಕೆಂಬ ಅದಮ್ಯ ಪ್ರೇರಣೆಯನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ಸಾಹಿತಿ ಡಾ.ಬಾಬು ಕೃಷ್ಣಮೂರ್ತಿ ಹೇಳಿದರು.ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಸೋಮವಾರ ಅಜೇಯ ಕೃತಿಗೆ ಸುವರ್ಣ ಸಂಭ್ರಮ ಹಾಗೂ ಆದಮ್ಯ ಕೃತಿಗೆ 40 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರೋತ್ಥಾನ ಬಳಗದಿಂದ ವಿಕಾಸ ಟ್ರಸ್ಟ್, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಹಾಗೂ ಸಂಸ್ಕಾರ ಭಾರತೀ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯ ಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ರಾಷ್ಟ್ರವೆಂಬ ಪರಿಕಲ್ಪನೆ ಅತ್ಯಂತ ಪ್ರಾಚೀನವಾದುದು. ದೇಶಕ್ಕೆ ದಶ ದಿಕ್ಕುಗಳಿಂದಲೂ ಸಂಕಷ್ಟ ಎದುರಾಗುತ್ತಿದೆ. ದೇಶದಲ್ಲಿ ಅಪಾಯಕಾರಿ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಸನ್ನಿವೇಶದಲ್ಲಿ ದೇಶ ಮೊದಲು ಎಂಬ ಮನೋಧರ್ಮ ಪ್ರತಿಯೊಬ್ಬರಲ್ಲೂ ಬೆಳೆಯಬೇಕಿದೆ ಎಂದರು.
ವೀರ ಸಾವರ್ಕರ್ ಹೆಸರು ಹೇಳಿದರೆ ಒಂದು ಕಾಲದಲ್ಲಿ ಕಲ್ಲೇಟುಗಳು ಬೀಳುತ್ತಿದ್ದವು. ಆದರೆ, ಇಂದು ಅವರ ಹೆಸರು ಹೇಳಿದರೆ ಸನ್ಮಾನಗಳಾಗುತ್ತವೆ. ಅಜೇಯ ನನ್ನ ನಿರೀಕ್ಷೆಗೂ ಮೀರಿ ಸಮಾಜದ ಮೇಲೆ ಪ್ರಭಾವ ಬೀರಿತು ಎಂಬ ಸಂಗತಿ ನನ್ನಲ್ಲಿ ಧನ್ಯತೆಯ ಭಾವನೆ ಮೂಡಿಸಿದೆ ಎಂದು ತಿಳಿಸಿದರು.ನಾನು ಐದು ವರ್ಷದವನಿದ್ದಾಗಲೇ ಸಂಘದ ಸಂಪರ್ಕಕ್ಕೆ ಬಂದೆ. ಮನೆಯಲ್ಲಿ ಕ್ಷಾತ್ರತೇಜದ ಪುಸ್ತಕಗಳ ಸಂಗ್ರಹವೇ ಇತ್ತು. ನನ್ನ ಹಿರಿಯಣ್ಣ ಸ್ವಾತಂತ್ರೃ ಹೋರಾಟಗಾರನಾಗಿದ್ದ. ಅವನ ಬಳಿಕ ಕ್ರಾಂತಿಕಾರಿ ಸಂಘಟನೆ ಹಾಗೂ ಹೋರಾಟಕ್ಕೆ ಸಂಬಂಧಿಸಿದ ಅನೇಕ ಲೇಖನಗಳಿದ್ದವು. ಅದೆಲ್ಲವೂ ನನ್ನ ಮೇಲೆ ಅಪಾರ ಪರಿಣಾಮ ಉಂಟುಮಾಡಿತು ಎಂದರು.
ಲೇಖಕ ಆದರ್ಶ ಗೋಖಲೆ ಅವರು ಅಜೇಯ ಹಾಗೂ ಅದಮ್ಯ ಕೃತಿಗಳ ಕುರಿತು ಮಾತನಾಡಿ, ನಮ್ಮ ದೇಶದ ಸ್ವಾತಂತ್ರೃ ಹೋರಾಟದಲ್ಲಿ ಕ್ರಾಂತಿ ಚಿಂತನೆಗಳು 90 ವರ್ಷ ವಿಜೃಂಭಿಸಿದ್ದವು. ಆದರೆ, ಸ್ವಾತಂತ್ರೃ ಸಿಕ್ಕಿದ್ದು ಕೇವಲ ಶಾಂತಿ ಮಂತ್ರದಿಂದ, ಚರಕದಿಂದ ಎಂಬ ಸುಳ್ಳು ಇತಿಹಾಸವನ್ನು ಸೃಷ್ಟಿ ಮಾಡಲಾಯಿತು. ಐದು ದಶಕಗಳ ಹಿಂದೆ ಅಜೇಯ ಕೃತಿಯ ಮೂಲಕ ನಿರ್ಮಾಣವಾದ ಇತಿಹಾಸ ನಮಗೆ ಕ್ರಾಂತಿಕಾರಿ ಹೋರಾಟದ ನೈಜ ಸ್ಥಿತಿಯನ್ನು ವಿವರಿಸಿತು. ಭಾರತದ ಸ್ವಾತಂತ್ರ್ಯಹೋರಾಟದ ಕ್ಷಾತ್ರ ತೇಜಸ್ಸಿನ ವಿರಾಟ್ ದರ್ಶನವೇ ಅಜೇಯ ಕೃತಿ ಎಂದು ಬಣ್ಣಿಸಿದರು.ತನ್ನ ಯೌವ್ವನವನ್ನು ಬದಿಗೊತ್ತಿ ವೈಯಕ್ತಿಕ ಆಸೆ, ಆಕಾಂಕ್ಷೆಗಳನ್ನು ಹತ್ತಿಕ್ಕಿ ಸ್ವಾತಂತ್ರ್ಯ ಚಳವಳಿಯಲ್ಲಿ ಚಂದ್ರಶೇಖರ ಆಜಾದ್ ಕ್ರಾಂತಿಕಾರಿ ಹೋರಾಟ ಮಾಡದೇ ಇದ್ದರೆ ಅವರು ಸ್ವಾತಂತ್ರ್ಯ ಭಾರತದ ಸಚಿವ ಸಂಪುಟದ ಭಾಗವಾಗಿರುತ್ತಿದ್ದರು. ಆದರೆ ಅವರು ಕ್ರಾಂತಿಕಾರಿ ಎಂಬ ಕಾರಣಕ್ಕೆ ಅವರ ಹೋರಾಟವನ್ನು ಮುಚ್ಚಿಡುವ ವ್ಯವಸ್ಥಿತ ಪ್ರಯತ್ನವೊಂದು ನಡೆದಿತ್ತು. ಆದರೆ, ಅಜೇಯ ಕೃತಿ ಅದೆಲ್ಲವನ್ನೂ ತೆರೆದಿಟ್ಟಿತ್ತು ಎಂದರು.
ಶಿವಮೊಗ್ಗ ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಡಾ. ಪಿ.ಸುಧೀಂದ್ರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುರೇಶ್, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಕಾಸ ಟ್ರಸ್ಟ್ ಅಧ್ಯಕ್ಷ ಬಿ.ಎ.ರಂಗನಾಥ್ ಉಪಸ್ಥಿತರಿದ್ದರು. ಆರ್‌ಎಸ್‌ಎಸ್ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಇದ್ದರು.