ಪ್ರಕೃತಿ ಏರುಪೇರಿನ ಬಗ್ಗೆ ಸಾಹಿತ್ಯ ಕ್ಷೇತ್ರವೂ ಗಮನಹರಿಸುತ್ತಿಲ್ಲ

| Published : Jan 08 2025, 12:19 AM IST

ಪ್ರಕೃತಿ ಏರುಪೇರಿನ ಬಗ್ಗೆ ಸಾಹಿತ್ಯ ಕ್ಷೇತ್ರವೂ ಗಮನಹರಿಸುತ್ತಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ನಾಳಿನ ಆತಂಕಗಳ ಬಗ್ಗೆ ಅತಿವೃಷ್ಟಿ, ಸುಂಟರಗಾಳಿ, ಕಾಳ್ಗಿಚ್ಚು, ಹಿಮ ಕುಸಿತ, ಬರಗಾಲ ರೂಪದಲ್ಲಿ ಭೂಮಿಯೇ ಮಾತನಾಡುತ್ತಿದ್ದರೂ, ಕೇಳಿಸಿಕೊಳ್ಳುವ ವ್ಯವಧಾನ ಯಾರಿಗೂ ಇಲ್ಲವಾಗಿದೆ ಎಂದು ಹಿರಿಯ ವಿಜ್ಞಾನ ಲೇಖಕ ನಾಗೇಶ್ ಹೆಗಡೆ ಕಳವಳ ವ್ಯಕ್ತಪಡಿಸಿದರು. ಸಾಹಿತ್ಯ ವಲಯವೂ ಈ ಬಗ್ಗೆ ಚಿತ್ತ ಹರಿಸಿಲ್ಲ. ವಾತಾವರಣ ಬದಲು, ಹವಾಗುಣದ ಬಗ್ಗೆ ಕತೆ, ಕಾದಂಬರಿ ಬರೆದಿಲ್ಲ. ಗ್ರಾಮೀಣ, ನಗರ ಹೀಗೆ ಎರಡು ಕತ್ತಲೆ ಮಧ್ಯೆ ಬದುಕುತ್ತಿರುವ ನಾವು ಎಚ್ಚೆತ್ತುಕೊಳ್ಳಬೇಕಿದೆ. ಮತ್ತೊಂದು ವಿಪರ್ಯಾಸ ಎಂದರೆ, ಭೂಮಿ ಇಷ್ಟೊಂದು ಸಂಕಟ ಪಡುತ್ತಿದ್ದರೂ, ಅಧಿಕಾರಿಗಳಾಗಲೀ, ರಾಜಕಾರಣಿಗಳಾಗಲೀ ಮಾತನಾಡುತ್ತಿಲ್ಲ ಎಂದು ಬೇಸರ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ಹಾಸನ

ನಾಳಿನ ಆತಂಕಗಳ ಬಗ್ಗೆ ಅತಿವೃಷ್ಟಿ, ಸುಂಟರಗಾಳಿ, ಕಾಳ್ಗಿಚ್ಚು, ಹಿಮ ಕುಸಿತ, ಬರಗಾಲ ರೂಪದಲ್ಲಿ ಭೂಮಿಯೇ ಮಾತನಾಡುತ್ತಿದ್ದರೂ, ಕೇಳಿಸಿಕೊಳ್ಳುವ ವ್ಯವಧಾನ ಯಾರಿಗೂ ಇಲ್ಲವಾಗಿದೆ ಎಂದು ಹಿರಿಯ ವಿಜ್ಞಾನ ಲೇಖಕ ನಾಗೇಶ್ ಹೆಗಡೆ ಕಳವಳ ವ್ಯಕ್ತಪಡಿಸಿದರು.

ನಗರದ ಕಲಾಭವನದಲ್ಲಿ ನಡೆದ ಹಾಸನ ಸಾಹಿತ್ಯೋತ್ಸವದ ೨ನೇ ದಿನದ ೬ನೇ ಗೋಷ್ಠಿಯಲ್ಲಿ "ನಾಳೆಗಳು ನಮಗಿರಲಿ " ವಿಚಾರ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು. ೨೦೨೪ ಭೀಕರ ವರ್ಷ ಎಂದು ದಾಖಲಾಗಿದೆ. ದೇಶದಲ್ಲೂ ಯಮುನಾ ದಿನ ಉಕ್ಕಿ ಹರಿಯಿತು, ಸೇತುವೆ ಕುಸಿದರೂ ನಮಗೆ ಗೊತ್ತಾಗಲಿಲ್ಲ. ನಾಳೆಯ ಭೀಕರತೆ ಬಗ್ಗೆ ಎಲ್ಲರೂ ಚಿಂತೆ ಮಾಡಲೇಬೇಕಿದೆ ಎಂದರು. ಸಾಹಿತ್ಯ ವಲಯವೂ ಈ ಬಗ್ಗೆ ಚಿತ್ತ ಹರಿಸಿಲ್ಲ. ವಾತಾವರಣ ಬದಲು, ಹವಾಗುಣದ ಬಗ್ಗೆ ಕತೆ, ಕಾದಂಬರಿ ಬರೆದಿಲ್ಲ. ಗ್ರಾಮೀಣ, ನಗರ ಹೀಗೆ ಎರಡು ಕತ್ತಲೆ ಮಧ್ಯೆ ಬದುಕುತ್ತಿರುವ ನಾವು ಎಚ್ಚೆತ್ತುಕೊಳ್ಳಬೇಕಿದೆ. ಮತ್ತೊಂದು ವಿಪರ್ಯಾಸ ಎಂದರೆ, ಭೂಮಿ ಇಷ್ಟೊಂದು ಸಂಕಟ ಪಡುತ್ತಿದ್ದರೂ, ಅಧಿಕಾರಿಗಳಾಗಲೀ, ರಾಜಕಾರಣಿಗಳಾಗಲೀ ಮಾತನಾಡುತ್ತಿಲ್ಲ ಎಂದು ಬೇಸರ ಹೊರ ಹಾಕಿದರು.

ರೋಗಗಳ ಸೃಷ್ಟಿಸಿದ್ದೇವೆ: ನಮ್ಮವರೇ ಆದ ನ್ಯಾ. ಸಂತೋಷ್ ಹೆಗಡೆ ಅವರು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿದ್ದಾಗ, ಇಡೀ ಭಾರತದಲ್ಲಿ ಪರಿಸರ ಶಿಕ್ಷಣ ಕೊಡಬೇಕು ಎಂದು ಆದೇಶ ಮಾಡಿದರು, ಆದರೂ ಜಾರಿಯಾಗಲಿಲ್ಲ. ಭೂಮಿಯ ತಾಪಮಾನ ಏರುತ್ತಲೇ ಇದೆ. ಆದರೂ, ಭೂಮಿ, ಅರಣ್ಯ, ನದಿ ಧ್ವಂಸ ಮಾಡಿದ್ದೇವೆ, ಮಾಡುತ್ತಲೇ ಇದ್ದೇವೆ. ದೊಡ್ಡ ಸಂಕಟ ಬರುವ ಮುಂಚೆ ದೇಶವನ್ನು ಖಂಡಾಬಟ್ಟೆ ಮಾಡಿದ್ದೇವೆ. ಹಲವು ರೋಗಗಳನ್ನು ಸೃಷ್ಟಿ ಮಾಡಿದ್ದೇವೆ ಎಂದು ಆತಂಕ ಹೊರಹಾಕಿದರು.

ರೈತರು ಉಳಿಯಬೇಕು: ಮಕ್ಕಳ ಮೂಲಕವೂ ಭೂಮಿ, ಪರಿಸರ ದುರಪಯೋಗ, ಪ್ಲಾಸ್ಟಿಕ್ ದುರ್ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು. ಮನುಷ್ಯರಿಗೆ ಊಟ, ಬಟ್ಟೆ ಅನಿವಾರ್ಯ. ಇದಕ್ಕಾಗಿ ರೈತರು ಆಹಾರ ಬೆಳೆಯಬೇಕು, ಹತ್ತಿ ಬೆಳೆಯಬೇಕು. ಆದರೀಗ ಕೈಗಾರಿಗೆ ಬಂದು ಕೃತಕ ಆಹಾರ ತಯಾರಿಸಲಾಗುತ್ತದೆ. ಇಂಥ ನಿಷ್ಪ್ರಯೋಜಕರ ಸಮಾಜ ನಮಗೆ ಬೇಡ, ರೈತರು ಉಳಿಯಬೇಕು ಎಂದರು.

ಕೃಷಿರಂಗದಲ್ಲಿ ವಿಶೇಷ ಸಾಧನೆ ಮಾಡಿರುವ ವಿ.ಗಾಯತ್ರಿ ಮಾತನಾಡಿ, ಹಲವು ದಶಕಗಳಿಂದ ಕೃಷಿರಂಗವನ್ನು ಹವಾಮಾನ ಬದಲಾವಣೆ ಮಾಡುತ್ತಿದೆ. ಮಳೆಯ ಏರುಪೇರು ಬಾಧಿಸುತ್ತಿದೆ. ಮಳೆ ಆಶ್ರಿತ ರೈತರು ನಾನಾ ರೀತಿಯ ತೊಂದರೆ, ನಷ್ಟ ಅನುಭವಿಸುತ್ತಿದ್ದಾರೆ. ಅವರ ಬದುಕು ಅಲ್ಲೋಲ ಕಲ್ಲೋಲ ಆಗಿದೆ. ರೈತರ ಲೆಕ್ಕಾಚಾರ ತಲೆಕೆಳಕಾಗಿದೆ ಎಂದರು. ಮಳೆಯ ರೀತಿ ಇಬ್ಬನಿಯೂ ಮುಖ್ಯ. ಬೆಳಗ್ಗೆ ಇಬ್ಬನಿ ಸುರಿದು, ಮಧ್ಯಾಹ್ನ ಬಿಸಿಲು ಸುಡಬೇಕು. ಹಿಂಗಾರು ಬೆಳೆ ಇಬ್ಬನಿಯನ್ನು ಅವಲಂಬಿಸಿದೆ. ಈಗ ಅದೂ ಏರುಪೇರಾಗಿದೆ. ಹೆಚ್ಚು ಕಡೆ ಮೋಡ ಕವಿದ ವಾತಾವರಣ ಇದೆ. ಇದರಿಂದ ಕಾಳುಕಟ್ಟುವುದು, ಇಳುವರಿ ಕಡಿಮೆ ಆಗಿದೆ. ಕೀಟಬಾಧೆ ಅತಿಯಾಗಿದೆ. ಅತಿಯಾದ ಶಾಖ, ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಸಣ್ಣ ಅತಿ ಸಣ್ಣ ರೈತರ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಆತಂಕಿಸಿದರು.

ಪಂಚಾಯ್ತಿ ಮಟ್ಟದಲ್ಲಿ ಕೃಷಿ ಬಗ್ಗೆ ಸಣ್ಣ ಮಾಹಿತಿ ನೀಡುವ ಕೆಲಸ, ಕಾಳಜಿ ಆಗುತ್ತಿಲ್ಲ. ಸರ್ಕಾರದ ಹಂತದಲ್ಲಂತೂ ಯಾವ ಬೆಳೆ ಬೆಳೆಯಬೇಕು. ಹೇಗೆ ಬೆಳೆಯಬೇಕು ಎಂಬ ಮಾಹಿತಿ ಹಂಚುವ ಜವಾಬ್ದಾರಿ ಇಲ್ಲ, ಆದರೆ ಆಸೆ, ಆಮಿಷ, ಆಕರ್ಷಣೆಯ ಜಾಹೀರಾತಿನ ಮೂಲಕ ಕಂಪನಿಗಳು ಮನುಷ್ಯರನ್ನು ವಂಚಿಸುತ್ತಿವೆ. ಆದರೂ ನಮ್ಮ ಸರ್ಕಾರಗಳು ನಿಷ್ಕ್ರಿಯವಾಗಿವೆ. ಹೀಗಾಗಿ ರೈತರಿಗೆ ವಿಷ ಮಾರುವ ಅಂಗಡಿಯವರೇ ಮಾರ್ಗದರ್ಶಕರಾಗಿದ್ದಾರೆ. ಅಂಗಡಿಯವರನ್ನೇ ರೈತರು ಅವಲಂಬಿತರಾಗಿದ್ದಾರೆ. ಅದಕ್ಕೂ ನಮಗೂ ಏನೂ ಸಂಬಂಧ ಇಲ್ಲದಂತೆ ಸರ್ಕಾರ ಇರುವುದು ದುರದೃಷ್ಟಕರ ಎಂದರು.

ಕುಲಾಂತರಿ ಟೆಕ್ನಾಲಜಿ ಆಹಾರ ಉತ್ಪಾದನೆ ಮಾಡಲು ರೈತರು ಬೇಕಾಗಿಲ್ಲ ಎನ್ನುತ್ತಿದೆ. ಆದರೆ ಕೃಷಿ ಕೇವಲ ಆಹಾರ ಉತ್ಪಾದನೆ ಮಾಡುವುದಲ್ಲ, ಅದೊಂದು ಜೀವನ ಕ್ರಮ, ಸಂಸ್ಕೃತಿ, ಬದುಕಿನ ಕ್ರಮ, ಸಮುದಾಯ ಉಳಿದರೆ ಕೃಷಿ ಉಳಿಯಲಿದೆ. ಆದರೆ ಸಾಹಿತ್ಯದಲ್ಲಿ ಯಾವುದೇ ಭತ್ತದ ತಳಿಯ ಹೆಸರಿಲ್ಲದಿರುವುದು ಬೇಸರದ ವಿಷಯ. ರೈತರ ಸಮುದಾಯ, ರೈತ ಸಂಸ್ಕೃತಿ ಉಳಿಸಿ ಬೆಳೆಸಬೇಕು. ಅದಕ್ಕಾಗಿ ಕೃಷಿ ಸಂಸ್ಕೃತಿ ಸಾಹಿತ್ಯದಲ್ಲಿ ಬರಲಿ ಎಂದು ಆಶಿಸಿದರು.

ಶಾಲೆ ಪ್ರಜಾಪ್ರಭುತ್ವದ ಗರಡಿಮನೆ:

ಪರಿಸರ ಸಂರಕ್ಷಕ ಅಮಹದ್ ಹಗರೆ ಮಾತನಾಡಿ, ನಾಳೆಗಳ ಆತಂಕವನ್ನು ಮೊದಲು ಶಾಲಾ ಮಟ್ಟದಲ್ಲಿ ತಿಳಿಸುವಂತಾಗಬೇಕು. ಶಾಲೆ ಪ್ರಜಾಪ್ರಭುತ್ವದ ಗರಡಿಮನೆ ಶಾಲೆ, ಆ ಜಾಗದಲ್ಲಿ ಬಿಸಿ ಮುಟ್ಟಬೇಕು. ಹವಾಮಾನ ಬದಲಾವಣೆ, ಕ್ರೈಸಿಸ್ ಕುರಿತು ವಿದ್ಯುನ್ಮಾನ ಮಾಧ್ಯಮಗಳು ಬೆಳಕು ಚೆಲ್ಲಬೇಕು. ಆದರೆ ಅದಾಗುತ್ತಿಲ್ಲ. ರಾಜಕಾರಣಿಗಳಿಗೂ ಗೊತ್ತಿಲ್ಲ ಎಂದರು. ಸಾಹಿತಿಗಳಿಗೆ ಗೊತ್ತಾ ಎಂದು ಕೇಳಿದ ಅವರು, ರಾಜಕಾರಣಿಗಳಿಗೆ ಓದುವುದನ್ನು ಕಲಿಸಬೇಕು. ಹೊಸ ಪೀಳಿಗೆಗೆ ಬಿಸಿ ಮುಟ್ಟಿಸಬೇಕು ಎಂದರು.

ಈ ವಿಷಯ ಪಠ್ಯದಲ್ಲಿ ಕಡ್ಡಾಯ ಆಗಬೇಕು. ಪರೀಕ್ಷೆಯಲ್ಲೂ ಬರಬೇಕು. ಪ್ರಧಾನ ನೆಲೆ ಒಳಗೆ ಕ್ಲೈಮೇಟ್ ಕ್ರೈಸಿಸ್ ತರಬೇಕು. ಪರಿಸರದ ಹುಚ್ಚು ಇರುವವರು ಎಲ್ಲರನ್ನೂ ಎಚ್ಚರಿಸುವ ಕೆಲಸ ಮಾಡಬೇಕು. ಮಕ್ಕಳನ್ನು ಗಿಡಗಳೊಂದಿಗೆ ಮಾತನಾಡಿಸಬೇಕು. ವಿವಿಧ ವಿಷಯ ಸೇರಿದಂತೆ ಕಮ್ಮಟ ಆಗಬೇಕು. ಹೊಸ ತಲೆಮಾರಿನ ಮಕ್ಕಳು ಬರೆಯಲು ಆಲೋಚಿಸಬೇಕು. ವಿಜ್ಞಾನವನ್ನು ಜನರ ಭಾಷೆಗೆ ತರಲು ಸಾಹಿತ್ಯ ಬೇಕು ಎಂದು ಪ್ರತಿಪಾದಿಸಿದರು. ಹೆತ್ತೂರು ನಾಗರಾಜ್ ನಿರ್ವಹಣೆ ಮಾಡಿದರು.