ಜೈನಕಾಶಿ ಜೊತೆ ಡಾ.ಕಮಲಾ ಹಂಪನಾ ನೆನಪು ಅಜರಾಮರ

| Published : Jun 24 2024, 01:36 AM IST

ಸಾರಾಂಶ

ನಿರಂತರ ಎಂಬಂತೆ ಮೂಡುಬಿದಿರೆಗೆ ಬರುತ್ತಿದ್ದ ಹಂಪನಾ ದಂಪತಿ ಇಲ್ಲಿನ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬೆರೆತಿದ್ದರು.

ಗಣೇಶ್‌ ಕಾಮತ್‌

ಕನ್ನಡಪ್ರಭ ವಾರ್ತೆ ಮೂಡುಬಿದಿರೆ ಬೆಂಗಳೂರಿನಲ್ಲಿ ಶನಿವಾರ ವಿಧಿವಶರಾದ ಹಿರಿಯ ಸಾಹಿತಿ , ಜೈನ ಸಾಹಿತ್ಯ ಸಂಶೋಧಕಿ ನಾಡೋಜ ಡಾ. ಕಮಲಾ ಹಂಪನಾ (89)ಗೆ ಜೈನ ಕಾಶಿ ಮೂಡುಬಿದಿರೆಯ ನಂಟು ಮರೆಯಲು ಸಾಧ್ಯವಿಲ್ಲ. ಮೂಡುಬಿದಿರೆಯಲ್ಲಿ ಜೈನ ಸಾಹಿತ್ಯ ಸಹಿತ ಕನ್ನಡ ಸಾಹಿತ್ಯ, ಸಂಸ್ಕೃತಿ ಸೇವೆಗೆ ಸ್ಫೂರ್ತಿಯಾಗಿ ಕನ್ನಡದ ಮನಸ್ಸುಗಳನ್ನು ಕಟ್ಟುವ ಸಾಹಿತ್ಯೋತ್ಸವಕ್ಕೆ ನಾಂದಿ ಹಾಡಿದ ಕಮಲಾ ಹಂಪನಾ ಅವರ ಅಗಲಿಕೆಯ ನೋವು ಬಹುಕಾಲ ಮರೆಯಲಾಗದ ನೆನಪುಗಳಾಗಿ ಕಾಡುವಂತಿದೆ.

ಮೂಡುಬಿದಿರೆಯ ನೆಲದಲ್ಲಿ 2003ರಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿದ್ದ ಕಮಲಾ ಹಂಪನಾ ಸಂಘಟಕ ಡಾ. ಮೋಹನ ಆಳ್ವರ ನುಡಿಸಿರಿಗೆ ಪ್ರೇರಣೆಯಾದರು ಎನ್ನುವುದು ವಿಶೇಷ. ಸಮ್ಮೇಳನದ ಯಶಸ್ಸು ಡಾ. ಆಳ್ವರನ್ನು ಕನ್ನಡದ ಮನಸ್ಸುಗಳನ್ನು ಕಟ್ಟುವ ಕಾಯಕದಲ್ಲಿ ಮುಂದೆ ನಾಡಿಗೇ ಮಾದರಿಯಾಗಿ ಕನ್ನಡ ಮಾಧ್ಯಮ ಶಾಲೆ ತೆರೆದು ಹೊಸ ಕ್ರಾಂತಿ ಸೃಷ್ಟಿಸಲು ಕಾರಣವಾಯಿತು ಎಂದರೆ ತಪ್ಪಾಗಲಾರದು.

ನಂತರ ನಿರಂತರ ಎಂಬಂತೆ ಮೂಡುಬಿದಿರೆಗೆ ಬರುತ್ತಿದ್ದ ಹಂಪನಾ ದಂಪತಿ ಇಲ್ಲಿನ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬೆರೆತಿದ್ದರು. ಜೈನಕಾಶಿಯ ನೆಲೆಯಲ್ಲಿ ಇಲ್ಲಿನ ಧವಲ ಗ್ರಂಥದಲ್ಲಿನ ಚಿತ್ರಕಲೆಗಳ ಬಗ್ಗೆ ವಾರಗಟ್ಟಲೆ ಜೈನ ಮಠದಲ್ಲಿ ಉಳಿದು ವಿಶೇಷ ಅಧ್ಯಯನವನ್ನೂ ನಡೆಸಿದ್ದ ಹಂಪನಾ ದಂಪತಿ 60ರ ದಶಕದಲ್ಲಿ ಇಂದಿರಾಗಾಂಧಿ ಜೈನ ಮಠಕ್ಕೆ ಭೇಟಿ ಇತ್ತಾಗಲೂ ಹಾಜರಿದ್ದರು.

ಸ್ತ್ರೀ ಸಂವೇದನೆಯ ದನಿ: ಭಟ್ಟಾರಕ ಶ್ರೀ

ಕಮಲಾ ಹಂಪನಾ ಧರ್ಮ, ಸಂಸ್ಕೃತಿ, ಸಾಹಿತ್ಯದ ಸಮನ್ವಯವಾಗಿದ್ದರು. ಜಾತಿ ಕಲಹದ ಅಸಹನೆ, ಸಂಸ್ಕೃತಿ, ಜಾನಪದ, ಸಾಹಿತ್ಯ, ಸ್ತ್ರೀವಾದಿ ಸಂವೇದನೆಯ ಪ್ರಬಲ ದನಿಯಾಗಿದ್ದರು. ತುಳುನಾಡಿನಲ್ಲಿ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ಸ್ಥಾಪನೆಯಲ್ಲಿ ಅವರ ಹೋರಾಟದ ಪಾಲಿದೆ ಎಂದು ಜೈನ ಮಠದ ಭಟ್ಟಾರಕ ಶ್ರೀಗಳು ತಮ್ಮ ಸಂತಾಪದಲ್ಲಿ ನುಡಿದಿದ್ದಾರೆ. ಸಹಕಾರದ ಮೂರ್ತಿ: ಡಾ ಆಳ್ವ

ಮೂಡುಬಿದಿರೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದಾಗ ಅಧ್ಯಕ್ಷೆಯಾಗಿ ನಿರೀಕ್ಷೆಗೂ ಮೀರಿದ ಸಹಕಾರ, ಸ್ಫೂರ್ತಿ ನೀಡಿದ್ದ ಡಾ. ಕಮಲಾ ಹಂಪನಾ ಅವರ ಸರಳತೆ, ಸೌಜನ್ಯ, ವಿದ್ವತ್ತು ಮರೆಯಲಾಗದ್ದು ಎನ್ನುತ್ತಾರೆ ಡಾ. ಮೋಹನ ಆಳ್ವ.

ಹಾಲು ನೀರಿನಂತೆ ಎಲ್ಲರೊಂದಿಗೆ ಬೆರೆತು ಸಮ್ಮೇಳನವನ್ನು ಮಾದರಿಯಾಗಿ ಸಂಘಟಿಸುವಲ್ಲಿ ಅವರ ಕೊಡುಗೆ, ಸ್ಫೂರ್ತಿ ವಿಶೇಷವಾದದ್ದು. ಕಮಲಾ ಹಂಪನಾ ಅವರ ಪತಿ ನಾಡೋಜ ಹಂಪ ನಾಗರಾಜಯ್ಯ ಅವರ ಮೇರು ಕೃತಿ ‘ಚಾರುವಸಂತ’ ನಾಟಕ ಕೃತಿಯನ್ನು ರಂಗ ನಿರ್ದೇಶನದದ ಜತೆ ಪ್ರದರ್ಶನವನ್ನು ಮೂಡುಬಿದಿರೆಯ ಕನ್ನಡ ಭವನದಿಂದಲೇ ಕಳೆದ ವರ್ಷ ಲೋಕಾರ್ಪಣೆ ಮಾಡಲಾಗಿತ್ತು. ಇದೀಗ ಕಮಲಾ ಹಂಪನಾ ನೆನಪಲ್ಲಿ ಮತ್ತೆ ಚಾರುವಸಂತ ಹೊಸತನದೊಂದಿಗೆ ಇನ್ನಷ್ಟು ಪ್ರದರ್ಶಗಳನ್ನು ಏರ್ಪಡಿಸಲು ನಿರ್ಧರಿಸಿದ್ದೇವೆ ಎಂದು ‘ಕನ್ನಡಪ್ರಭ’ದೊಂದಿಗೆ ಕಮಲಾ ಹಂಪನಾ ಅಗಲಿಕೆಯ ನೋವನ್ನು ಡಾ. ಆಳ್ವ ಹಂಚಿ ಕೊಂಡರು.ಸಾಹಿತ್ಯ ಸಮ್ಮೇಳನದ ನಂಟು!: ಕಮಲಾ ಹಂಪನಾ ಪತಿ ಹಂಪನಾ ಜತೆ ಮೂಡುಬಿದಿರೆಗೆ ಚಿರಪರಿಚಿತರು. ಜೈನ ಮಠದ ಹಿಂದಿನ ಮತ್ತು ಇಂದಿನ ಭಟ್ಟಾರಕರ ಮಾರ್ಗದರ್ಶನದಲ್ಲಿ ಜೈನ ಸಾಹಿತ್ಯ, ಸಂಶೋಧನೆಯ ಹತ್ತು ಹಲವು ಕಾರ್ಯಗಳಲ್ಲಿ ಅಪರೂಪದ ಈ ಸಾಹಿತಿಗಳ ಜೋಡಿ ತನ್ನನ್ನು ತೊಡಗಿಸಿಕೊಂಡಿತ್ತು.

2003ರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನನ್ನ ಜೀವಿತದ ಮರೆಯಲಾಗದ ಕ್ಷಣ ಎಂದಿದ್ದರು ಕಮಲಾ ಹಂಪನಾ. 2009ರ ನುಡಿಸಿರಿ ಸರ್ವಾಧ್ಯಕ್ಷತೆ ಹಂಪ ನಾಗರಾಜಯ್ಯ ಅವರಿಗೆ ಒಲಿದಾಗಲೂ ಕಮಲಾ ಹಂಪನಾ ಜತೆಗಿದ್ದರು. 2013ರಲ್ಲಿ ವಿಶ್ವ ನುಡಿಸಿರಿ ನಡೆದಾಗಲೂ ಕಮಲಾ ಹಂಪನಾ ಸಮ್ಮಾನಿತರಾಗಿದ್ದರು. 2015ರ ನುಡಿಸಿರಿ ವೇದಿಕೆಯಲ್ಲಿ ಸೇರಿದಂತೆ ಹಲವು ಬಾರಿ ಹಂಪನಾ ದಂಪತಿ ಕನ್ನಡದ ಈ ಉತ್ಸವದಲ್ಲಿ ಕಾಣಿಸಿಕೊಂಡಿತ್ತು.

2011ರಿಂದ 2016ರ ನಡುವೆ ಹಂಪನಾ ಪುತ್ರಿ ರಾಜ್ಯಶ್ರೀ ಎಲ್.ಐ.ಸಿ ಅಧಿಕಾರಿಯಾಗಿದ್ದಾಗಲೂ ಹಂಪನಾ ಜೋಡಿ ಮೂಡುಬಿದಿರೆಗೆ ಬಂದು ಉಳಿದುಕೊಂಡಿದ್ದ ದಿನಗಳಿದ್ದವು. ರಾಜ್ಯಶ್ರೀ ಹಂಪನಾ ಅವರೂ ಮೋಹನ ಆಳ್ವರ ಕುರಿತು ಕೃತಿಯೊಂದನ್ನೂ ಬರೆದು ಲೋಕಾರ್ಪಣೆ ಮಾಡಿದ್ದರು.

ಸಮ್ಮೇಳನವೂ ಅವಿಸ್ಮರಣೀಯ!

ಅಂದಿನ ರಾಜ್ಯ ಗೃಹಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಿದ್ದ ಮೂಡುಬಿದಿರೆಯ ಸಾಹಿತ್ಯ ಸಮ್ಮೇಳನ ಹಲವು ಕಾರಣಗಳಿಗೆ ಅವಿಸ್ಮರಣೀಯ. ಹಿಂದಿನ ನಿರ್ಣಯಗಳು ಜಾರಿಯಾಗದಿದ್ದುದಕ್ಕೆ ವೇದಿಕೆಯಲ್ಲೇ ಮಾತಿನ ಚಾಟಿ ಬೀಸಿದ್ದ ಪಾಟೀಲ ಪುಟ್ಟಪ್ಪ, ಅದೇ ಹಿನ್ನೆಲೆಯಲ್ಲಿ ಯಾವುದೇ ಹೊಸ ನಿರ್ಣಯಗಳಿಲ್ಲದೇ ಹಿಂದಿನದ್ದನ್ನೆಲ್ಲಾ ಅನುಷ್ಠಾನಗೊಳಿಸಿ ಎಂದು ನಿರ್ಣಯಿಸಿದ್ದ ಅಪರೂಪದ ಸಮ್ಮೇಳನ ಅದಾಗಿತ್ತು. ಅತಿ ಹೆಚ್ಚು (6) ಸಮ್ಮೇಳನಗಳಿಗೆ ಆತಿಥ್ಯವಹಿಸಿದ್ದ ಹಿರಿಮೆಯನ್ನು ದ.ಕ. ಜಿಲ್ಲೆಗೆ ನೀಡಿದ್ದೂ ಮೂಡುಬಿದಿರೆಯ ಸಮ್ಮೇಳನವೇ.

ಮೂರನೇ ಬಾರಿಗೆ ಮಹಿಳಾ ಅಧ್ಯಕ್ಷತೆ, ಮೊದಲ ಬಾರಿಗೆ ಸಮ್ಮೇಳನಾಧ್ಯಕ್ಷರ ಮಾತುಗಳು ಸಿಡಿಯಲ್ಲೂ , ಹಿಂದಿನ ಸಮ್ಮೇಳನಗಳ ನಿರ್ಣಯಗಳು ಕೃತಿ ರೂಪದಲ್ಲೂ ಕಾಣಸಿಕ್ಕ ಮೊದಲ ಸಮ್ಮೇಳನವಿದು.