ಸಂಸ್ಕೃತಿ, ನಾಗರೀಕತೆಯ ಬೇರು ಹೆತ್ತ ತಾಯಿ: ನಿಜಗುಣಾನಂದ ಮಹಾಸ್ವಾಮೀಜಿ

| Published : Mar 23 2025, 01:31 AM IST

ಸಂಸ್ಕೃತಿ, ನಾಗರೀಕತೆಯ ಬೇರು ಹೆತ್ತ ತಾಯಿ: ನಿಜಗುಣಾನಂದ ಮಹಾಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸ್ಕೃತಿ, ನಾಗರೀಕತೆಯ ಬೇರು ಹೆತ್ತ ತಾಯಿ. ಕುಟುಂಬ ಧರ್ಮದಲ್ಲಿ ತಾಯಿಗೆ ದೊಡ್ಡ ಸ್ಥಾನವಿದೆ. ಇಂಥ ತಾಯಿಯನ್ನು ನಿರ್ಲಕ್ಷಿಸುವವರು, ನೋಯಿಸುವವರು ಪ್ರಾಣಿಗಳಿಗಿಂತ ಕಡೆ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಹುಬ್ಬಳ್ಳಿ: ಸಂಸ್ಕೃತಿ, ನಾಗರೀಕತೆಯ ಬೇರು ಹೆತ್ತ ತಾಯಿ. ಕುಟುಂಬ ಧರ್ಮದಲ್ಲಿ ತಾಯಿಗೆ ದೊಡ್ಡ ಸ್ಥಾನವಿದೆ. ಇಂಥ ತಾಯಿಯನ್ನು ನಿರ್ಲಕ್ಷಿಸುವವರು, ನೋಯಿಸುವವರು ಪ್ರಾಣಿಗಳಿಗಿಂತ ಕಡೆ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಶನಿವಾರ ಉಣಕಲ್ ಸಿದ್ದಪ್ಪಜ್ಜನ ಜಾತ್ರೆಯ 7ನೇ ದಿನದ ಪ್ರವಚನ ನೀಡಿದ ಅವರು, ಮಗುವಿನ ತನು-ಮನ ಪೋಷಣೆ ಮಾಡುವುದು ತಾಯಿ ಮಾತ್ರ. ತನ್ನ ಪ್ರಾಣ ಪಣಕ್ಕಿಟ್ಟು ಇನ್ನೊಂದು ಜೀವವನ್ನು ಜಗತ್ತಿಗೆ ನೀಡುವ ತಾಯಿ ಸೃಷ್ಟಿ ಸಮಾನಳು ಎಂದು ಬಣ್ಣಿಸಿದರು.

ಸನ್ಯಾಸಿಗೂ ಹರಸುವ, ಆಶೀರ್ವದಿಸುವ ಶಕ್ತಿ ಇರುವುದು ತಾಯಿಗೆ ಮಾತ್ರ ಎನ್ನುವ ಕಾರಣಕ್ಕೆ ಅದ್ವೈತ ಸಿದ್ಧಾಂತದ ಮಹಾನ್ ಪ್ರತಿಪಾದಕ ಶಂಕರಾಚಾರ್ಯರು ಧರ್ಮ, ಶಾಸ್ತ್ರ, ಸಮುದಾಯದ ಕಟ್ಟಳೆಗಳನ್ನು ಮೀರಿ ತಮ್ಮ ತಾಯಿಯ ಅಂತ್ಯಸಂಸ್ಕಾರ ನೆರವೇರಿಸಿ ಬಾಲ್ಯದಲ್ಲಿ ತಾಯಿಗೆ ಕೊಟ್ಟ ಭಾಷೆ ಉಳಿಸಿಕೊಂಡರು. ಇಂದು ವೃದ್ಧ ತಾಯಿಯ ಸೇವೆ ಮಾಡದ ಎಷ್ಟೋ ಮಕ್ಕಳು ಯಾತ್ರೆ, ಮೇಳಗಳಿಗೆ ಹೋಗಿ ಪುಣ್ಯ ಅರಸುತ್ತಾರೆ. ಇಂಥವರಿಂದಲೇ ಇಂದು ದೇಶದಲ್ಲಿ 18 ಸಾವಿರ ವೃದ್ಧಾಶ್ರಮಗಳು ತಲೆ ಎತ್ತುವಂತಾಗಿದೆ. ಆದರೆ, ಅಂಥ ಮಕ್ಕಳೆಲ್ಲ ತಾಯಿಯ ಪಾದ ಹಿಡಿಯುವುದೇ ಪಾದಯಾತ್ರೆ ಎಂದು ಭಾವಿಸಿ, ಸೇವೆ ಮಾಡಿದರೆ ಅವರ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಶ್ರೀಗಳು ಕಿವಿಮಾತು ಹೇಳಿದರು.

ಆದಿಯೋಗಿ ಶಿವ

ಈ ದೇಶದ ಮೊದಲ ಗುರು ಶಿವ. ಆತ ಮೊದಲ ಯೋಗಿಯೂ ಹೌದು. ನೃತ್ಯಗಾರ, ಕಲಾಕಾರ ಕೂಡ. ಈತನಿಂದಾಗಿ ದ್ರಾವಿಡ ಪರಂಪರೆಯ ಶಿವಸಂಸ್ಕೃತಿ ಈ ದೇಶಲ್ಲಿ ಬೆಳೆಯಿತು. ಆದಾಗ್ಯೂ ನಾವೆಲ್ಲ ಪೂಜಿಸುವ, ಧ್ಯಾನಿಸುವ, ದೇವರೆಂದು ಭಾವಿಸಿರುವ ಈ ಶಿವ ದೇವರಲ್ಲ ಎಂದು ಪ್ರತಿಪಾದಿಸಿದ ನಿಜಗುಣಾನಂದರು, ಹಿಮಾಲಯದಲ್ಲಿ ಕಣ್ಣುಗಳನ್ನು ಮುಚ್ಚಿ ಧ್ಯಾನ ಮಾಡುವ ಫೋಟೋ, ಮೂರ್ತಿಗಳನ್ನು ನಾವೆಲ್ಲ ನೋಡಿರುತ್ತೇವೆ. ಶಿವ ದೇವರಾಗಿದ್ದರೆ ಯಾರನ್ನು ಕುರಿತು ಧ್ಯಾನ ಮಾಡುತ್ತಾನೆ? ಎಂದು ಪ್ರಶ್ನಿಸಿದರು.

ಈ ಶಿವನನ್ನು ಕಲ್ಪಿಸಿ ವ್ಯಾಸ ಮಹರ್ಷಿಗಳು ಶಿವಪುರಾಣ ರಚಿಸಿದ್ದರಿಂದ ಭಾರತೀಯರಿಗೆಲ್ಲ ಶಿವ ಆದಿಗುರು, ಆದಿಶಿವ ಆಗಿದ್ದಾನೆ. ಆದರೆ, ಪ್ರತಿ ಮಗುವಿಗೂ ಮೊದಲ ಗುರು ಮಾತ್ರ ಹೆತ್ತ ತಾಯಿ. ಹಾಗಾಗಿ ಮಾತೃದೇವೋಭವ, ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂದು ಪಾಲಿಸುತ್ತ ಬಂದಿದ್ದೇವೆ. ಇಂಥ ತಾಯಿ ವೃದ್ಧಾಪ್ಯದಲ್ಲಿ ಮಕ್ಕಳಿಂದ ಸೀರೆ, ಬಂಗಾರ, ರೊಟ್ಟಿಯ ಬದಲು ಪ್ರೀತಿಯ ನಾಲ್ಕು ಮಾತು ಬಯಸುತ್ತಾಳೆ. ಖರ್ಚು-ವೆಚ್ಚಕ್ಕಾಗಿ ತಂದೆ-ತಾಯಿಗಳನ್ನು ಹಂಚಿಕೊಳ್ಳುವ ಮೂರ್ಖ ಮಕ್ಕಳು ಈ ಮಾತೃ ಮಮತೆಯನ್ನು ಅರಿಯದಾಗಿದ್ದಾರೆ ಎಂದು ವಿಷಾಧಿಸಿದರು.

ಬಾಲ್ಯದ ಆರಂಭದಲ್ಲಿ ಅಕ್ಷರ, ಸಂಸ್ಕಾರ ನೀಡುವ ಪ್ರಾಥಮಿಕ ಶಾಲೆಯ ಶಿಕ್ಷಕ ಎರಡನೇ ಗುರು. ಇಂಥ ಗುರುಗಳ ಪ್ರಾಮಾಣಿಕ ಸೇವೆಯ ಮೇಲೆ ಈ ದೇಶದ ಭವಿಷ್ಯ ನಿಂತಿದೆ. ಭಾವಿ ಪ್ರಜೆಗಳನ್ನು ರೂಪಿಸುವ ಇಂದಿನ ಕೆಲವು ಶಿಕ್ಷಕರು ತಮ್ಮ ಕರ್ತವ್ಯ ಮರೆತು ರಾಜಕಾರಣಿಯಂತೆ ವರ್ತಿಸುತ್ತಿದ್ದಾರೆ. ಇವರಿಗೆಲ್ಲ ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಸಾವಿತ್ರಿಬಾಯಿ ಪುಲೆ ಮಾದರಿಯಾಗಬೇಕು. ಅಂದಾಗ ಮಾತ್ರ ನಾವು ಉತ್ತಮ ಸಮಾಜ ನಿರೀಕ್ಷಿಸಲು ಸಾಧ್ಯ ಎಂದರು.

ಮನುಷ್ಯನ ಬದುಕು ಪರಿಪೂರ್ಣವಾಗಲು ತಾಯಿ, ಗುರು ಅಷ್ಟೇ ಸಾಕಾಗುವುದಿಲ್ಲ. ಆತ್ಮದ ಅರಿವು ಮೂಡಿಸುವ ಆಧ್ಯಾತ್ಮ ಗುರುವೂ ಅತ್ಯಗತ್ಯ. ಹಾಗಾಗಿ ಬಸಬಣ್ಣ ತನುವಿಗೆ ಇಷ್ಟಲಿಂಗ, ಮನಕ್ಕೆ ಪ್ರಾಣಲಿಂಗ, ಭಾವಕ್ಕೆ ಆತ್ಮಲಿಂಗ ನೀಡಿ ಆತ್ಮಬಲವೇ ಮಹಾಬಲ ಎಂದು ಸಾರಿದ್ದರಿಂದ ಎಲ್ಲರೂ ಇಂಥ ಆಧ್ಯಾತ್ಮ ಚಿಂತನೆಯಲ್ಲಿ ಭಾಗವಹಿಸುವ ಮೂಲಕ ಈ ಭೂಲೋಕಕ್ಕೆ ಬಂದ ಯತಾರ್ಥ ಜ್ಞಾನ ಅರಿಯಬೇಕು ಎಂದು ನಿಜಗುಣಾನಂದ ಶ್ರೀಗಳು ಆಸೀರ್ವಚನ ನೀಡಿದರು.

ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಉಣಕಲ್ ಗ್ರಾಮದ ಹಿರಿಯರು ಭಾಗವಹಿಸಿದ್ದರು.