ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವಣ ವೇದದಿಂದ ಕಲಿಕೆ, ಸಂಗೀತ, ಅಭಿನಯ ಹಾಗೂ ರಸ(ಸಾರ)ವನ್ನು ಒಳಗೊಂಡ ವಿಷಯದ ಆಧಾರದಲ್ಲಿ ನಾಟ್ಯವೇದ ಎಂಬುದನ್ನು ಬ್ರಹ್ಮದೇವ ಸೃಷ್ಠಿ ಮಾಡಿದರು. ನಂತರ ಬ್ರಹ್ಮದೇವರ ನಿರ್ದೇಶನದಂತೆ ಭರತಮುನಿಗಳು ಭರತನಾಟ್ಯವನ್ನು ಪ್ರಯೋಗಕ್ಕೆ ತಂದರು ಎಂಬ ಉಲ್ಲೇಖವಿದೆ. ಇಂತಹ ಇತಿಹಾಸ ಹೊಂದಿರುವ ದೇವಲೋಕದ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸುವ ಮತ್ತು ಸನಾತನ ಧರ್ಮ ಹಾಗೂ ಸಂಸ್ಕೃತಿಯನ್ನು ಕಾಪಾಡುವ ಜವಾಬ್ದಾರಿ ನಮ್ಮಗಳ ಮೇಲಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ದಂತವೈದ್ಯೆ ಡಾ. ಅಶ್ವತಿ ಅಭಿಪ್ರಾಯಪಟ್ಟರು.
ಪಟ್ಟಣದ ಮಿಲನ ಆರ್ಕೆಡ್‌ನಲ್ಲಿ ಕ್ರಿಯೇಟಿವ್ ಡ್ಯಾನ್ಸ್ ಫಾರ್ಮ್ ಅವರು ಮೈಸೂರಿನ ನೃತ್ಯ ವಿದ್ಯಾಪೀಠದ ಗುರು ವಿದುಷಿ ಸಿ.ಎನ್. ಅನಿತ ಅವರ ಮಾರ್ಗದರ್ಶನದಲ್ಲಿ ಪ್ರಾರಂಭಿಸಿದ ಭರತನಾಟ್ಯ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಭರತನಾಟ್ಯದಿಂದ ಶಿಕ್ಷಣಕ್ಕೆ ಪೂರಕವಾದ ಏಕಾಗ್ರತೆ, ಆತ್ಮವಿಶ್ವಾಸ, ಕಲಿಯಬೇಕೆಂಬ ತುಡಿತ, ಸಮಸ್ಯೆ ಮೆಟ್ಟಿ ನಿಲ್ಲುವ ಆತ್ಮಸ್ಥೈರ್ಯ, ಉತ್ತಮ ಆರೋಗ್ಯ, ಸದೃಢ ದೇಹ ಜತೆಗೆ ಸಂಸ್ಕೃತಿಯ ಪಾಲನೆಯಿಂದ ಗುರು ಹಿರಿಯರಲ್ಲಿ ಗೌರವ, ಸಮಾಜದಲ್ಲಿ ಸ್ಥಾನಮಾನ ಮತ್ತು ಹಲವಾರು ಪ್ರಯೋಜನಗಳು ದೊರೆಯುತ್ತದೆ. ಆದ್ದರಿಂದ ಕಲಿಕೆಯ ತುಡಿತ ಇರುವವರು ಭರತನಾಟ್ಯದ ಪ್ರಯೋಜನವನ್ನು ಪಡೆಯಬೇಕೆಂದು ಸಲಹೆ ನೀಡಿದರು.ಪಟ್ಟಣದ ಸ್ವರ್ಣಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶೋಭ ಬಾಲಕೃಷ್ಣ ಮಾತನಾಡಿ, ಗುರು ವಿದುಷಿ ಸಿ.ಎನ್.ಅನಿತ ಅವರು ಮೈಸೂರಿನ ನೃತ್ಯ ವಿದ್ಯಾಪೀಠ ಸ್ಥಾಪಿಸಿ, ೧೪ ವರ್ಷಗಳಿಂದ ಧರ್ಮದ ಪರಿಪಾಲನೆ, ಕುಟುಂಬ ಒಡನಾಟ ಜತೆಗೆ ಭರತನಾಟ್ಯ ಕಲಿಸುತ್ತಾ ಮನೆ ಮಾತಾಗಿದ್ದಾರೆ. ಶಿಕ್ಷಕಿ ಶೋಭರವರ ಕಲಿಸುವಲ್ಲಿ ಅವರ ಸಮರ್ಪಣೆ ಅಮೂಲ್ಯವಾಗಿದೆ ಎಂದು ತಿಳಿಸಿ, ಸಂಸ್ಥೆಯ ಬೆಳವಣಿಗೆ ಹಾಗೂ ಇತರೆ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಎಚ್.ವಿ.ಸುರೇಶ್ ಕುಮಾರ್, ಅರವಳಿಕೆ ತಜ್ಞೆ ಡಾ. ಭವ್ಯ ಮಾತನಾಡಿದರು. ಮೈಸೂರಿನ ನೃತ್ಯ ವಿದ್ಯಾಪೀಠದ ಹಿರಿಯ ವಿದ್ಯಾರ್ಥಿನಿಯರಾದ ಲಾಸ್ಯ, ಜನಮಿತ್ರ ಹಾಗೂ ದೀಪ್ತಿ ಭರತನಾಟ್ಯ ಪ್ರದರ್ಶಿಸಿ, ಉಪಸ್ಥಿತರ ಮನಗೆದ್ದರು. ಸಿ.ಎನ್.ಅನಿತ ಸ್ವಾಗತಿಸಿ, ನಿರೂಪಿಸಿದರು.ಹಿರಿಯರಾದ ನಾಗರತ್ನ, ರಾಧಾಮಣಿ, ಕ್ರಿಯೇಟಿವ್ ಡ್ಯಾನ್ಸ್ ಫಾರ್ಮ್‌ದ ಮಾಲೀಕ ಹಾಗೂ ನೃತ್ಯ ಸಂಯೋಜಕ ಪ್ರಥಮ್, ಹಿರಿಯ ಪತ್ರಕರ್ತ ರಾಧಾಕೃಷ್ಣ, ಡಾ. ವಿನಯ್, ಡಾ. ಭವ್ಯ, ಡಾ. ಅಜಯ್, ಲಕ್ಷ್ಮಿ ಕಿರಣ್, ರಂಜಿತ ಪ್ರಥಮ್, ಇತರರು ಇದ್ದರು.