ಸಾರಾಂಶ
‘ಮೈಸೂರಿನಲ್ಲಿ ನಿರ್ಮಿಸಿರುವುದೇ ಡಾ.ವಿಷ್ಣುವರ್ಧನ್ ಅವರ ನಿಜವಾದ ಸ್ಮಾರಕ, ಸಮಾಧಿ. ಅಭಿಮಾನ್ ಸ್ಟುಡಿಯೋದಲ್ಲಿ ಅವರ ಅಸ್ಥಿ ಇಲ್ಲ. ಅಲ್ಲಿ ಕೇವಲ ಅವರ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಲಾಗಿದೆ. ವಿಷ್ಣು ಅವರ ಅಸ್ಥಿ ಇರುವುದು ಮೈಸೂರಿನ ಸ್ಮಾರಕದಲ್ಲಿರುವ ವಿಷ್ಣು ಅವರ ಪುತ್ಥಳಿ ಕೆಳಗೆ.
ಬೆಂಗಳೂರು : ‘ಮೈಸೂರಿನಲ್ಲಿ ನಿರ್ಮಿಸಿರುವುದೇ ಡಾ.ವಿಷ್ಣುವರ್ಧನ್ ಅವರ ನಿಜವಾದ ಸ್ಮಾರಕ, ಸಮಾಧಿ. ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಅಸ್ಥಿ ಇಲ್ಲ. ಅಲ್ಲಿ ಕೇವಲ ಅವರ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಲಾಗಿದೆ. ವಿಷ್ಣು ಅವರ ಅಸ್ಥಿ ಇರುವುದು ಮೈಸೂರಿನ ಸ್ಮಾರಕದಲ್ಲಿರುವ ವಿಷ್ಣು ಅವರ ಪುತ್ಥಳಿ ಕೆಳಗೆ. ಹೀಗಾಗಿ ಮೈಸೂರಿನಲ್ಲಿರುವುದೇ ವಿಷ್ಣುವರ್ಧನ್ ಅವರ ಸಮಾಧಿ ಎಂದು ದಿ. ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಸ್ಪಷ್ಟಪಡಿಸಿದ್ದಾರೆ.
ಭಾನುವಾರ ವಿಷ್ಣುವರ್ಧನ್ ಅವರ ಬೆಂಗಳೂರಿನ ನಿವಾಸದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ನಡೆದ ವಿಷ್ಣು ಅಭಿಮಾನಗಳ ಸಭೆಯಲ್ಲಿ ಮಾತನಾಡಿದ ಅವರು, ಬೇರೆ ಕಡೆ ಸಮಾಧಿ ಮಾಡುತ್ತೇವೆ ಎನ್ನುವವರ ಜೊತೆಗೆ ವಿಷ್ಣುವರ್ಧನ್ ಕುಟುಂಬ ಹೋಗುವುದಿಲ್ಲ. ಬೇರೆ ಕಡೆ ಯಾರೇ ಸಮಾಧಿ ಮಾಡಿದರೂ ಅದನ್ನು ಮೈಸೂರಿನಲ್ಲಿರುವ ನಿಜವಾದ ಸಮಾಧಿ ಜೊತೆಗೆ ಹೋಲಿಕೆ ಮಾಡಬೇಡಿ. ವಿಷ್ಣುವರ್ಧನ್ ಆಸೆಯಂತೆ ಅವರು ಮೈಸೂರಿನಲ್ಲಿ ನೆಲೆಸಿದ್ದಾರೆ’ ಎಂದರು.
‘ಪುಣ್ಯಭೂಮಿ ತೆರವು ಮಾಡಿದ ನಂತರ ಈಗ ಕೆಲವರು ಬಂದು ಜಾಗ ತಗೊಂಡು ಅಭಿಮಾನ್ ಸ್ಟುಡಿಯೋದಲ್ಲಿ ಮತ್ತೆ ಸಮಾಧಿ ಮಾಡುತ್ತೇವೆ ಅಂತಿದ್ದಾರೆ. ಆರು ವರ್ಷ ನಾವೇ ಪ್ರಯತ್ನ ಮಾಡಿದ್ದೇವೆ. ರಾಜ್ಯ ಸರ್ಕಾರವೂ ಜೊತೆಗೆ ಇತ್ತು. ಆದರೂ ಆಗಿಲ್ಲ. ಈಗ ಆಗುತ್ತದೆ ಎಂದರೆ ಆಗಲಿ. ಒಂಭತ್ತು ವರ್ಷ ಆಯಿತು. ಯಾಕೆ ಯಾರೂ ಇನ್ನೂ ಅದನ್ನು ಖರೀದಿಸಲಿಲ್ಲ’ ಎಂದು ಅನಿರುದ್ಧ್ ತೀಕ್ಷ್ಣವಾಗಿ ಪ್ರಶ್ನಿಸಿದರು.
‘ನಾವು ಸ್ಮಾರಕ ಜಾಗಕ್ಕಾಗಿ ಅಲೆದ ಸರ್ಕಾರಿ ಕಚೇರಿಗಳು, ಭೇಟಿ ಮಾಡಿದ ಜನಪ್ರತಿನಿಧಿಗಳು, ಸಿಎಂಗಳಿಗೆ ಲೆಕ್ಕವಿಲ್ಲ. ಆದರೂ ನಮ್ಮ ಕುಟುಂಬದ ಮೇಲೆ ಕೆಲವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಮುಂದುವರಿದರೆ ವಿಷ್ಣು ಕುಟುಂಬ ಕಾನೂನು ಮೊರೆ ಹೋಗಬೇಕಾಗುತ್ತದೆ’ ಎಂದು ಅನಿರುದ್ಧ್ ಎಚ್ಚರಿಕೆ ನೀಡಿದ್ದಾರೆ.
‘ವಿಷ್ಣುವರ್ಧನ್ ಅವರನ್ನು ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ಮಾಡುವ ಯೋಚನೆ ನಮ್ಮ ಕುಟುಂಬಕ್ಕೆ ಇರಲಿಲ್ಲ. ಚಾಮರಾಜಪೇಟೆಯ ರುಧ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡುವ ಪ್ಲಾನ್ ಮಾಡಿದ್ವಿ. ಆದರೆ, ಕುಮಾರಸ್ವಾಮಿ ಅವರು ಅಲ್ಲಿ ಬೇಡ. ಅವರಿಗೆ ಸಕಲ ಗೌರವ ಸಿಗಬೇಕು ಎಂದು ಅಭಿಮಾನ್ ಸ್ಟೂಡಿಯೋದಲ್ಲಿ ಮಾಡುವಂತೆ ಸಲಹೆ ನೀಡಿದರು ಎಂದರು.
ಆಗ ಯಡಿಯೂರಪ್ಪ ಅವರು ಸಿಎಂ ಆಗಿದ್ದರು. ಅಂಬರೀಶ್ ಅವರು ಕೂಡ ಆಗ ಅಲ್ಲಿಯೇ ಇದ್ದರು. ಅಂತ್ಯಕ್ರಿಯೆ ಮಾಡಿದ ಕೆಲ ದಿನಗಳ ನಂತರ ಆ ಜಾಗದ ವಿಚಾರ ಕೋರ್ಟ್‌ನಲ್ಲಿದೆ ಅಂತ ಗೊತ್ತಾಯಿತು. ಎರಡು ವರ್ಷ ಕಾದರೂ ಜಾಗ ಸಿಗದಿದ್ದಕ್ಕೆ ನಾವು ಬೇರೆ ಕಡೆ ಜಾಗ ಕೇಳಿದ್ದು. ಆದರೆ, ಈಗ ಮಾಡಿರುವ ಸ್ಮಾರಕವನ್ನು ವ್ಯಾಪಾರೀಕರಣದ ಉದ್ದೇಶ ಎಂದು ಬಣ್ಣಿಸುತ್ತಿದ್ದಾರೆ. ಸಮಾಧಿ ಸ್ಥಳದಲ್ಲಿ ಏನು ವ್ಯಾಪಾರ ಮಾಡಕ್ಕಾಗುತ್ತದೆ? ಅಲ್ಲದೆ ಅದು ಸರ್ಕಾರಿ ಜಮೀನು. ಸ್ಮಾರಕ ಅಭಿವೃದ್ಧಿ ಮಾಡೋದು ಸರ್ಕಾರ. ಅದರಿಂದ ನಮ್ಮ ಕುಟುಂಬಕ್ಕೆ ಯಾವುದೇ ಲಾಭ ಬರಲ್ಲ’ ಎಂದು ಅನಿರುದ್ಧ್ ಸ್ಪಷ್ಟನೆ ನೀಡಿದರು.
ಸಭೆಯಲ್ಲಿ ಮಾತಿನ ಚಕಮಕಿ
ಅಭಿಮಾನ್ ಸ್ಟುಡಿಯೋದಲ್ಲಿ ಡಾ.ವಿಷ್ಣುವರ್ಧನ್ ಅವರ ಸಮಾಧಿ ತೆರವು ವಿಚಾರವಾಗಿ ಕರೆದಿದ್ದ ಅಭಿಮಾನಿಗಳ ಸಭೆ ಮಾತಿನ ಚಕಮಕಿ, ಪ್ರತಿಭಟನೆಗೆ ದಾರಿ ಮಾಡಿಕೊಟ್ಟಿತು. ಪ್ರಶ್ನೋತ್ತರ ವೇಳೆ ಡಾ.ವಿಷ್ಣುವರ್ಧನ್ ಜೊತೆ ನಟ ಯಶ್ ಮಾತ್ರ ಇದ್ದರು ಎನ್ನುವ ಅಭಿಮಾನಿಯೊಬ್ಬರ ಹೇಳಿಕೆ ಸಭೆಯಲ್ಲಿ ಮತ್ತಷ್ಟು ಗದ್ದಲ, ಗಲಾಟೆಗೆ ಕಾರಣವಾಯಿತು. ಬೆಳಗ್ಗೆ 11 ಗಂಟೆಗೆ ನಟ ಹಾಗೂ ಡಾ.ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಅವರ ಸಾರಥ್ಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಸಭೆ ನಡೆಯಿತು.
ಸ್ಮಾರಕಕ್ಕಾಗಿ ನಮಗೆ ಮೈಸೂರಿನಲ್ಲಿ ಜಾಗ ಕೊಟ್ಟಾಗಲೇ ಬೇರೆ ಕಡೆ ಹೋಗಬೇಡಿ ಅಂತ ಅಧಿಕಾರಿಗಳು ಹೇಳಿದ್ದರು. ಹೀಗಾಗಿ ನಾವು ಅಭಿಮಾನ್ ಸ್ಟುಡಿಯೋ ಕಡೆ ಬಂದಿಲ್ಲ. ಹೈಕೋರ್ಟ್ ಅದೇಶದ ಮೇರೆಗೆ ಅಲ್ಲಿರುವ ಪುಣ್ಯಭೂಮಿಯನ್ನು ತೆರವು ಮಾಡಲಾಗಿದೆ. ಕೋರ್ಟ್ ಅದೇಶದ ಕಾರಣಕ್ಕೆ ನಾವು ಅಲ್ಲೇ ಜಾಗ ಬೇಕು ಎಂದು ಪ್ರತಿಭಟನೆ ಮಾಡುವುದಕ್ಕೆ ಅವಕಾಶವೂ ಇಲ್ಲ.
ಕಾನೂನು ಸಮಸ್ಯೆಯಲ್ಲಿರುವ ಅಭಿಮಾನ್ ಸ್ಟುಡಿಯೋ ಜಾಗ ನಮಗೆ ಬೇಕಿಲ್ಲ. ಒಬ್ಬ ವ್ಯಕ್ತಿಗೆ ಎರಡೆರಡು ಕಡೆ ಜಾಗ ಕೊಡಲಿಕ್ಕಾಗಲ್ಲ. ಇದನ್ನು ಅಭಿಮಾನಿಗಳು ಅರ್ಥ ಮಾಡಿಕೊಳ್ಳದೆ ನಮ್ಮ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ನಮ್ಮ ಕುಟುಂಬದ ವಿರುದ್ಧ ಮಾಧ್ಯಮಗಳಲ್ಲಿ ಹೇಳಿಕೆ ಕೊಡುತ್ತಿರುವವರಿಗೆ ವಿಷ್ಣು ಕುಟುಂಬ ಕಾನೂನಿನ ಮೂಲಕ ಉತ್ತರಿಸುತ್ತದೆ’ ಎಂದರು.