ಸಾರಾಂಶ
ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಲೋಪಗಳು ಸೇರಿ ಬರೀ ವಿವಾದಗಳಿಂದಲೇ ಚರ್ಚೆಯಲ್ಲಿದ್ದ 384 ಗೆಜೆಟೆಡ್ ಪ್ರೊಬೆಷನರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಬಹುತೇಕ ನೆನೆಗುದಿಗೆ ಬಿದ್ದಿದೆ. 2 ತಿಂಗಳ ಹಿಂದೆ ನಡೆದಿರುವ ಮುಖ್ಯಪರೀಕ್ಷೆಯ ಮೌಲ್ಯಮಾಪನವನ್ನು ಕೂಡ ಆರಂಭಿಸದೆ ಕೆಪಿಎಸ್‌ಸಿ ಕೈಚಲ್ಲಿದೆ.
ಬೆಂಗಳೂರು : ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಲೋಪಗಳು ಸೇರಿ ಬರೀ ವಿವಾದಗಳಿಂದಲೇ ಚರ್ಚೆಯಲ್ಲಿದ್ದ 384 ಗೆಜೆಟೆಡ್ ಪ್ರೊಬೆಷನರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಬಹುತೇಕ ನೆನೆಗುದಿಗೆ ಬಿದ್ದಿದೆ.
ಕೆಎಎಸ್ ನೇಮಕಾತಿಯಲ್ಲಿ ಮೀಸಲಾತಿಯನ್ನು ಶೇ.56ಕ್ಕೆ ಹೆಚ್ಚಿಸಿರುವ ಕಾನೂನು ಬದ್ಧತೆಯನ್ನು ಪ್ರಶ್ನಿಸಿ ಕೆಎಎಸ್ ಆಕಾಂಕ್ಷಿ ಮಧು ಬಿ.ಎನ್ ಎಂಬುವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ (ಕೆಎಟಿ) ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೆಎಟಿ ನೇಮಕಾತಿ ಅಧಿಸೂಚನೆಯನ್ನು ಅಮಾನ್ಯಗೊಳಿಸಿರುವ ಹಿನ್ನೆಲೆಯಲ್ಲಿ 2 ತಿಂಗಳ ಹಿಂದೆ ನಡೆದಿರುವ ಮುಖ್ಯಪರೀಕ್ಷೆಯ ಮೌಲ್ಯಮಾಪನವನ್ನು ಕೂಡ ಆರಂಭಿಸದೆ ಕೆಪಿಎಸ್‌ಸಿ ಕೈಚಲ್ಲಿದೆ.
ರಾಜ್ಯ ಸರ್ಕಾರದ ನೇಮಕಾತಿಗಳಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.50ರಿಂದ ಶೇ.56ಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ 2022ರಲ್ಲಿ ಸುಗ್ರೀವಾಜ್ಞೆ ಆದೇಶ ಹೊರಡಿಸಿತ್ತು. ಈ ಆಧಾರದ ಮೇಲೆ ಮಾಡಲಾಗಿದ್ದ ಕೆಎಎಸ್ ನೇಮಕಾತಿ ‘ಹುದ್ದೆಗಳ ಮೀಸಲಾತಿ ವರ್ಗೀಕರಣ’ವನ್ನು ಮಧು ಬಿ.ಎನ್ ಪ್ರಶ್ನಿಸಿದ್ದರು. ವಿಚಾರಣೆ ವೇಳೆ ಮೀಸಲಾತಿ ವರ್ಗೀಕರಣವನ್ನು ಅಮಾನ್ಯಗೊಳಿಸಿ ಹೊಸ ಅಧಿಸೂಚನೆ ಹೊರಡಿಸಬಹುದು ಎಂದು ಕೆಎಟಿ ತನ್ನ ಆದೇಶದಲ್ಲಿ ತಿಳಿಸಿತ್ತು.
‘ಮುಖ್ಯ ಪರೀಕ್ಷೆಯ ಮೌಲ್ಯಮಾಪನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಪ್ರಕ್ರಿಯೆ ಆರಂಭಿಸಬೇಕು ಎನ್ನುವಷ್ಟರಲ್ಲೇ ಕೆಎಟಿ ಆದೇಶ ಬಂದಿದೆ. ಮುಂದೆ ಏನಾಗುತ್ತದೆ ಎನ್ನುವ ಮಾಹಿತಿ ಇಲ್ಲ. ಕೆಎಟಿ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಇದೇ ವಾರ ವಿಚಾರಣೆಗೆ ಬರಲಿದೆ. ಈ ಹಂತದಲ್ಲಿ, ನಾವು ಯಾವುದೇ ಹೆಜ್ಜೆಗಳನ್ನು ಇರಿಸಲಾಗದು. ಮುಖ್ಯ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆ ವೆಚ್ಚದಾಯಕ. ಮೌಲ್ಯಮಾಪನ ಮಾಡಿದ ನಂತರ ನ್ಯಾಯಾಲಯದಲ್ಲಿ ಯಾವುದೇ ರೀತಿಯ ಆದೇಶಗಳಿಂದ ಸಂಪನ್ಮೂಲ ವ್ಯರ್ಥವಾಗಬಾರದು ಎನ್ನುವ ಕಾರಣಕ್ಕೆ ಪ್ರಕ್ರಿಯೆ ನಿಲ್ಲಿಸಿಬಿಟ್ಟಿದ್ದೇವೆ. ಮುಂದೆ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು’ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.
ಒಂದೂವರೆ ವರ್ಷದ ಹಿಂದೆ ಕೆಎಎಸ್ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಪೂರ್ವಭಾವಿ ಪರೀಕ್ಷೆಯ ಕನ್ನಡ ಪತ್ರಿಕೆಯಲ್ಲಿ ದೋಷಗಳು, ಮರುಪರೀಕ್ಷೆ, ಅಭ್ಯರ್ಥಿಗಳಿಂದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಸೇರಿ ಅನೇಕ ಕಾರಣಗಳಿಂದ ಪ್ರಕ್ರಿಯೆ ವಿಳಂಬವಾಗಿದೆ. ಇದೆಲ್ಲದರ ನಡುವೆ ಮೇ ಮೊದಲ ವಾರದಲ್ಲಿ ಮುಖ್ಯ ಪರೀಕ್ಷೆ ನಡೆದಿತ್ತು. ನಿಟ್ಟುಸಿರು ಬಿಟ್ಟಿದ್ದ ಅಭ್ಯರ್ಥಿಗಳು ಫಲಿತಾಂಶದ ನಿರೀಕ್ಷೆಯಲ್ಲಿದ್ದರು. ಅಷ್ಟರಲ್ಲೇ ಕೆಎಟಿ ಆದೇಶ ಬಂದಿದ್ದು, ಅಭ್ಯರ್ಥಿಗಳು ಮತ್ತೆ ಅನಿರ್ಧಿಷ್ಟಾವಧಿಗೆ ಕಾಯುವಂತಾಗಿದೆ.
ನೇಮಕ ಏಕೆ ಸ್ಥಗಿತ?
- ಕೆಎಎಸ್ ನೇಮಕದಲ್ಲಿ ಶೇ.56ಕ್ಕೆ ಮೀಸಲು ಹೆಚ್ಚಿಸಲಾಗಿತ್ತು
- ಇದರ ಕಾನೂನು ಬದ್ಧತೆ ಪ್ರಶ್ನಿಸಿ ಕೆಎಟಿಗೆ ದೂರಲಾಗಿತ್ತು
- ವಿಚಾರಣೆ ಬಳಿಕ ಅಧಿಸೂಚನೆ ಅಮಾನ್ಯಗೊಳಿಸಿದ ಕೆಎಟಿ
- ಹೀಗಾಗಿ 2 ತಿಂಗಳ ಹಿಂದಿನ ಪರೀಕ್ಷೆ ಮೌಲ್ಯಮಾಪನ ಸ್ತಬ್ಧ