ತೆಪ್ಪದಲ್ಲಿ ಮರಳು ಅಕ್ರಮವಾಗಿಸಾಗಾಟ: ಕೈ ಕಟ್ಟಿ ಕುಳಿತ ಜಿಲ್ಲಾಡಳಿತ

| Published : Oct 09 2023, 12:45 AM IST

ತೆಪ್ಪದಲ್ಲಿ ಮರಳು ಅಕ್ರಮವಾಗಿಸಾಗಾಟ: ಕೈ ಕಟ್ಟಿ ಕುಳಿತ ಜಿಲ್ಲಾಡಳಿತ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ, ವಿಜಯನಗರ ಮತ್ತು ಗದಗ ಜಿಲ್ಲಾಡಳಿತದಿಂದ ಏಕಾಕಾಲಕ್ಕೆ ದಾಳಿ ನಡೆದಾಗ ಮಾತ್ರ ಅಕ್ರಮ ಮರಳು ದಂಧೆಕೋರರ ಬಂಧನ ಜತೆಗೆ ಎಲ್ಲ ಕಬ್ಬಿಣದ ತೆಪ್ಪಗಳನ್ನು ವಶಪಡಿಸಿಕೊಳ್ಳಲು ಸಾಧ್ಯ ಎಂಬ ಮಾತು ಕೇಳಿ ಬರುತ್ತಿದೆ.
ಚಂದ್ರು ಕೊಂಚಿಗೇರಿ ಕನ್ನಡಪ್ರಭ ವಾರ್ತೆ ಹೂವಿನಹಡಗಲಿ ತುಂಗಭದ್ರಾ ನದಿ ತೀರದಲ್ಲಿ ತೆಪ್ಪದ ಮೂಲಕ ಮರಳು ಎತ್ತಲು ನಾ ಮುಂದು ತಾ ಮುಂದು ಎನ್ನುವ ರೀತಿಯಲ್ಲಿ ಸ್ಪರ್ಧೆಗೆ ಇಳಿದವರಂತೆ ಅಕ್ರಮ ಸಾಗಾಣಿಕೆ ಮಾಡುತ್ತಿದ್ದರೂ ಇತ್ತ ವಿಜಯನಗರ ಅತ್ತ ಹಾವೇರಿ ಹಾಗೂ ಗದಗ ಜಿಲ್ಲಾಡಳಿತಗಳು ಜಂಟಿ ದಾಳಿಗೆ ಮುಂದಾಗುತ್ತಿಲ್ಲ. ಇದರಿಂದ ಮರಳು ಅಕ್ರಮ ದಂಧೆಕೋರರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ತಾಲೂಕಿನ ಬ್ಯಾಲಹುಣ್ಸಿ, ನಂದಿಗಾವಿ ಮತ್ತು ಮಕರಬ್ಬಿ, ಅಂಗೂರು ಸುತ್ತಮುತ್ತಲಿನ ನದಿ ತೀರ ಪ್ರದೇಶದಲ್ಲಿ ಅತ್ತ ಹಾವೇರಿ ಜಿಲ್ಲೆಯ ಮೇವುಂಡಿ, ತೆರದಹಳ್ಳಿ, ಹೊಳೆ ಇಟಗಿ ಭಾಗದ ಮರಳು ಅಕ್ರಮ ದಂಧೆಕೋರರು 30ಕ್ಕೂ ಹೆಚ್ಚು ಕಬ್ಬಿಣದ ತೆಪ್ಪಗಳನ್ನು ಹಾಗೂ ಬಿದರಿನ ಬಂಬುಗಳನ್ನು ಬಳಸಿಕೊಂಡು ಅಮಾಯಕ ಕಾರ್ಮಿಕರಿಗೆ ಹಣದ ಆಸೆ ತೋರಿಸಿ ಆಳದ ನೀರಿನಲ್ಲಿ ಮರಳು ಲೂಟಿ ಮಾಡುತ್ತಿದ್ದಾರೆ. ತಾಲೂಕಿನ ಹರವಿ- ಹರನಗಿರಿ ಸೇತುವೆ ಬಳಿ ಗುಣಮಟ್ಟದ ಮರಳನ್ನು ರಾತ್ರಿ ವೇಳೆ ಲಾರಿಗಳ ಮೂಲಕ ಲೂಟಿ ಮಾಡಿ ಸಾಗಿಸುತ್ತಿದ್ದಾರೆ. ಸೇತುವೆಗೆ ಧಕ್ಕೆಯಾಗುವ ಹಿನ್ನೆಲೆಯಲ್ಲಿ ಇದರ 1 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಮರಳು ಎತ್ತುವಂತಿಲ್ಲ ಎಂಬ ನಿಯಮ ಉಲ್ಲಂಘನೆಯಾಗುತ್ತಿದೆ. ಈ ವರೆಗೂ ಹರವಿ ಮರಳಿನ ಸ್ಟಾಕ್‌ಯಾರ್ಡ್‌ ಟೆಂಡರ್‌ ಆಗಿಲ್ಲ. ಇದರಿಂದ ಇರುವ ಮರಳು ಅಕ್ರಮ ದಂಧೆಕೋರರ ಪಾಲಾಗುತ್ತಿದೆ. ಇತ್ತ ಲಿಂಗನಾಯಕನಹಳ್ಳಿ, ಮೈಲಾರ, ಬನ್ನಿಮಟ್ಟಿ ಭಾಗದಲ್ಲಿ ತುಂಗಭದ್ರಾ ನದಿ ನೀರು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ತೆರೆದ ಮರಳು ಸಾಕಷ್ಟಿದೆ. ಇದನ್ನು ರಾತ್ರಿ ವೇಳೆ ಟ್ರ್ಯಾಕ್ಟರ್‌ ಹಾಗೂ ಲಾರಿಗಳ ಮೂಲಕ ಲೂಟಿ ಮಾಡುತ್ತಿದ್ದಾರೆ. ಅಕ್ರಮ ತಡೆಗಟ್ಟಲು ರಚನೆಯಾಗಿರುವ ಸಮಿತಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು, ತಹಸೀಲ್ದಾರ್‌, ಪೊಲೀಸ್‌ ಇಲಾಖೆ, ಪಿಡಿಒ ಇನ್ನಿತರ ಪದಾಧಿಕಾರಿಗಳು ಇದ್ದಾರೆ. ಮರಳು ದಂಧೆಗೂ- ನಮಗೂ ಸಂಬಂಧವಿಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬುದು ಜನರ ಆರೋಪ. ವಿಜಯನಗರ ಜಿಲ್ಲೆಯ ಪೊಲೀಸರು ಅನೇಕ ಬಾರಿ ದಾಳಿಗೆ ಮುಂದಾಗುತ್ತಿದಂತೆ ಆ ಭಾಗದ ಅಕ್ರಮ ಮರಳು ದಂಧೆಕೋರರು ತೆಪ್ಪಗಳನ್ನು ನದಿಯಲ್ಲಿ ಬಿಟ್ಟು ಈಜಿ ಪರಾರಿಯಾಗುತ್ತಿದ್ದಾರೆ. ಹಾವೇರಿ, ವಿಜಯನಗರ ಮತ್ತು ಗದಗ ಜಿಲ್ಲಾಡಳಿತದಿಂದ ಏಕಾಕಾಲಕ್ಕೆ ದಾಳಿ ನಡೆದಾಗ ಮಾತ್ರ ಅಕ್ರಮ ಮರಳು ದಂಧೆಕೋರರ ಬಂಧನ ಜತೆಗೆ ಎಲ್ಲ ಕಬ್ಬಿಣದ ತೆಪ್ಪಗಳನ್ನು ವಶಪಡಿಸಿಕೊಳ್ಳಲು ಸಾಧ್ಯ ಎಂಬ ಮಾತು ಕೇಳಿ ಬರುತ್ತಿದೆ. ಹೆಚ್ಚಾದ ಮರಳಿನ ಬೇಡಿಕೆ: ತಾಲೂಕಿನಲ್ಲಿ ಕಟ್ಟಡ ಇನ್ನಿತರ ಕಾಮಗಾರಿಗಳಿಗೆ ಮರಳಿನ ಬೇಡಿಕೆ ಹೆಚ್ಚಾಗಿದೆ. ಇದ್ದ 6 ಮರಳಿನ ಸ್ಟಾಕ್‌ಯಾರ್ಡ್‌ನಲ್ಲಿ ಕೇವಲ ಬನ್ನಿಮಟ್ಟಿ, ಪುರ ಹಾಗೂ ಹಕ್ಕಂಡಿಯಲ್ಲಿ ಮಾತ್ರ ಸದ್ಯ ಸಂಗ್ರಹವಾಗಿರುವ ಮರಳನ್ನು ಪಾಸ್‌ ಪಡೆದು ಮಾರಾಟ ಮಾಡಲು 6 ತಿಂಗಳ ಕಾಲವಕಾಶ ನೀಡಲಾಗಿದೆ. ಈ ಸ್ಟಾಕ್‌ಯಾರ್ಡ್‌ಗಳಲ್ಲಿ ಸಾಕಷ್ಚು ಮರಳು ಅಧಿಕಾರಿಗಳಿಗೆ ಗೊತ್ತಿಲ್ಲದೇ ಲೂಟಿಯಾಗುತ್ತಿದ್ದರೂ ಅಧಿಕಾರಿಗಳು ಪರಿಶೀಲಿಸುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ. 4 ಹೊಸ ಬ್ಲಾಕ್‌ ವಶಕ್ಕೆ: ತಾಲೂಕಿನ ಈ ವರೆಗೂ ಟೆಂಡರ್‌ ಆಗದೇ ಉಳಿದಿರುವ ಕೆಲವು ಬ್ಲಾಕ್‌ಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಮರಳಿನ ಲಭ್ಯತೆ ಹಾಗೂ ಗುಣಮಟ್ಟ ಮಾಹಿತಿಯನ್ನು ಈಗಾಗಲೇ ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮ (ಕೆಎಸ್‌ಎಂಸಿಎಲ್‌)ಕ್ಕೆ ನೀಡಿದ್ದಾರೆ. ನಿಗಮವು ಈ 4 ಬ್ಲಾಕ್‌ಗಳ ಪರಿಸರ ವಿಮೋಚನಾ ಪತ್ರವನ್ನು ರಾಜ್ಯ ಪರಿಸರ ಇಲಾಖೆಯಿಂದ ಪಡೆದಾಗ ಮಾತ್ರ ಈ ಬ್ಲಾಕ್‌ಗಳನ್ನು ಟೆಂಡರ್‌ ಮಾಡಲು ಸಾಧ್ಯವಿದೆ. ಈ ಪ್ರಕ್ರಿಯೆ ವಿಳಂಬವಾಗುತ್ತಿರುವ ಧೋರಣೆಯನ್ನೇ ಬಂಡವಾಳ ಮಾಡಿಕೊಂಡಿರುವ ಮರಳು ಅಕ್ರಮ ದಂಧೆಕೋರರು ನಿತ್ಯ ಮರಳು ಲೂಟಿ ಮಾಡುತ್ತಿದ್ದಾರೆ. ನದಿ ತೀರದಲ್ಲಿ ನಡೆಯುತ್ತಿರುವ ಅಕ್ರಮ ತಡೆಯಲು ಅನೇಕ ದಾಳಿ ಮಾಡಿ ಕೇಸ್‌ ಮಾಡಿದ್ದೇವೆ. ಜಂಟಿ ದಾಳಿ ಕುರಿತು ಜಿಲ್ಲಾಧಿಕಾರಿಗಳ ಜತೆಗೆ ಚರ್ಚಿಸಬೇಕಿದೆ. ಜತೆಗೆ ಹಾವೇರಿ ಮತ್ತು ಗದಗ ಜಿಲ್ಲೆಯ ಅಧಿಕಾರಿಗಳ ಜತೆಗೆ ಚರ್ಚಿಸಿ ಜಂಟಿ ದಾಳಿ ಮಾಡಿ ಮರಳು ಅಕ್ರಮ ದಂಧೆಯನ್ನು ಮಟ್ಟ ಹಾಕುತ್ತೇವೆ ಎಂದು ಹರಪನಹಳ್ಳಿ ಸಹಾಯಕ ಆಯುಕ್ತ ಟಿ.ವಿ. ಪ್ರಕಾಶ ತಿಳಿಸಿದ್ದಾರೆ.