ಕನ್ನಡಪ್ರಭ ವಾರ್ತೆ ಬೆಂಗಳೂರು

ವರನಟ ಡಾ। ರಾಜ್‌ಕುಮಾರ್‌ ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಚೇತನ್‌ ಅಹಿಂಸಾರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್‌ ಶೆಟ್ಟಿ ಬಣದಿಂದ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರವೀಣ್ ಶೆಟ್ಟಿ, ಭಾರತೀಯ ಚಿತ್ರರಂಗ ರಾಜ್ ಕುಮಾರ್ ಅವರನ್ನು ಗೌರವಿಸುತ್ತದೆ. ಅವರಿಗೆ ಅವಮಾನ ಮಾಡಿದರೆ ಸಹಿಸುವುದಿಲ್ಲ. ಚೇತನ್‌ ಸದಸ್ಯತ್ವವನ್ನು ಮಂಡಳಿ ರದ್ದು ಮಾಡಬೇಕು. ಯಾವ ದಲಿತರ ಪರವಾಗಿ ಚೇತನ್‌ ಕೆಲಸ ಮಾಡಿದ್ದಾರೆ. ದಲಿತರನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚೇತನ್‌ಗೆ ನೀಡಿರುವ ಭದ್ರತೆ ವಾಪಸ್ ಪಡೆಯಬೇಕು, ಗಡಿಪಾರು ಮಾಡಬೇಕು ಎಂದು ಆಗ್ರಹಿಸುತ್ತೇವೆ ಎಂದು ಹೇಳಿದರು.

ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದು ಮಾತನಾಡಿ, ಚೇತನ್‌ ನಿರುದ್ಯೋಗಿ. ಕೂಡಲೇ ಅವನನ್ನು ಗಡಿಪಾರು ಮಾಡಬೇಕು. ರಾಜ್‌ಕುಮಾರ್ ಅವರ ಬಗ್ಗೆ ಮಾತನಾಡಲು ಎಷ್ಟು ಧೈರ್ಯ ಅವನಿಗೆ. ಪೊಲೀಸರು ಚೇತನ್ ಮನೆಗೆ ಭದ್ರತೆ ಒದಗಿಸಿರುವುದು ದುರಂತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯತ್ವ ರದ್ದು ಮಾಡುವ


ಬಗ್ಗೆ ಚರ್ಚೆ: ಜಯಮಾಲಾ

ಚೇತನ್‌ ಸದಸ್ಯತ್ವ ರದ್ದು ಮಾಡಬೇಕು ಎಂದು ಕನ್ನಡಪರ ಹೋರಾಟಗಾರರು ನೀಡಿದ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ, ಸದಸ್ಯತ್ವ ರದ್ದು ಮಾಡುವ ಬಗ್ಗೆ ಚರ್ಚೆ ನಡೆಸಲಾಗುವುದು. ಸರ್ಕಾರಕ್ಕೂ ಈ ಬಗ್ಗೆ ಪತ್ರ ಬರೆಯುತ್ತೇವೆ ಎಂದು ಭರವಸೆ ನೀಡಿದರು.

ಚೇತನ್‌ ಹೇಳಿಕೆ ಬಹಳ ನೋವು ತಂದಿದ್ದು ಚಿತ್ರರಂಗ ತಲೆತಗ್ಗಿಸುವಂತೆ ಆಗಿದೆ. ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಾ ಮುಜುಗರ ಉಂಟು ಮಾಡುತ್ತಿದ್ದಾರೆ. ಅವರು ದೊಡ್ಡ ತಪ್ಪು ಮಾಡಿದ್ದು ಕ್ಷಮೆ ಕೇಳಲೇಬೇಕು ಎಂದು ಆಗ್ರಹಿಸಿದರು.-------