ಸಾರಾಂಶ
ವಿಧಾನಸಭೆ : ಸದನದಲ್ಲಿ ಮೊದಲು ಆಗಮಿಸುವವರ ಹೆಸರನ್ನು ಓದುವ ಮತ್ತು ಸದನ ಆರಂಭಗೊಂಡ ಮೊದಲ ದಿನ ಸಂವಿಧಾನ ಪೀಠಿಕೆ ಓದುವುದನ್ನು ಆರಂಭಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ಇದೀಗ ಸದಸ್ಯರ ಹುಟ್ಟುಹಬ್ಬದ ಶುಭಾಶಯ ಕೋರುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
ಸೋಮವಾರ ಸದನ ಆರಂಭಗೊಂಡಾಗ ಯು.ಟಿ.ಖಾದರ್, ಅಧಿವೇಶನ ನಡೆಯುವ ವೇಳೆ ಹುಟ್ಟುಹಬ್ಬವಿದ್ದವರಿಗೆ ಇನ್ನು ಮುಂದೆ ಸದನದಲ್ಲಿ ಶುಭಾಶಯ ಕೋರಲಾಗುವುದು ಎಂದು ಹೇಳಿದರು. ಇದೇ ವೇಳೆ, ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡ ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ, ಕಾಂಗ್ರೆಸ್ ಸದಸ್ಯ ಅಲ್ಲಮ ಪ್ರಭು ಪಾಟೀಲ್, ಬಿಜೆಪಿ ಸದಸ್ಯರಾದ ಬಸವರಾಜ ಮತಿಮೋಡ್, ಉಮೇಶ್ ಜಾಧವ್ ಅವರಿಗೆ ಶುಭಾಶಯ ತಿಳಿಸಿದರು.
ಸಂಸತ್‌ನಲ್ಲಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ಸಂಪ್ರದಾಯವಿದ್ದು, ಇಲ್ಲಿಯೂ ಪ್ರಾರಂಭಿಸುವ ಬಗ್ಗೆ ಸಚಿವ ಕೆ.ಎಚ್.ಮುನಿಯಪ್ಪ ಸಲಹೆ ನೀಡಿದ್ದರು. ಅದರಂತೆ ಪ್ರಾರಂಭಿಸಲಾಗಿದೆ. ಹುಟ್ಟುಹಬ್ಬ ಆಚರಿಸಿಕೊಳ್ಳುವವರು ಊಟ ಕೊಡಿಸಬಹುದು. ಅವರು ಬಿಲ್ ಕೊಡುವುದು ಬೇಡ. ಆದರೆ, ಸಂಬಳದಲ್ಲಿ ಕಡಿತ ಮಾಡಿಕೊಳ್ಳಲಾಗುವುದು ಎಂದು ಚಟಾಕಿ ಹಾರಿಸಿದರು.
ಅನುದಾನ ನೀಡುವುದಾದರೆಬೆಳಗ್ಗೆ ಬರ್ತೀವಿ: ವಿಶ್ವನಾಥ್
ಈ ನಡುವೆ, ಬಿಜೆಪಿ ಸದಸ್ಯ ಸಿದ್ದು ಸವದಿ ಮಾತನಾಡಿ, ಈ ಬಾರಿ ಬೆಳಗ್ಗೆ ಬೇಗ ಬರುವವರ ಹೆಸರು ಪ್ರಕಟಿಸಿಲ್ಲ ಎಂದು ಹೇಳಿದರು. ಆಗ ಮತ್ತೋರ್ವ ಬಿಜೆಪಿ ಸದಸ್ಯ ಎಸ್.ಆರ್.ವಿಶ್ವನಾಥ್, ವಿಶೇಷ ಅನುದಾನ ನೀಡಿದರೆ ಬೆಳಗ್ಗೆ 7 ಗಂಟೆಗೆ ಬರಲು ಸಿದ್ಧ. ಒಂದು ಲಕ್ಷ ರು.ಅನುದಾನ ನೀಡಿದರೆ ಒಳ್ಳೆಯದು ಎಂದು ಹೇಳಿದರು. ಇದಕ್ಕೆ ಸಭಾಧ್ಯಕ್ಷರು ಮುಗುಳ್ನಕ್ಕು ಕಲಾಪ ಮುಂದುವರಿಸಿದರು.