ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೆಆರ್‌ಎಸ್ ಸುತ್ತ ನಡೆಯುವ ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯವಿದೆಯೋ, ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಜಾರ್ಖಂಡ್ ವಿಜ್ಞಾನಿಗಳೊಂದಿಗೆ ಜಿಲ್ಲಾಡಳಿತ ನಡೆಸಲು ಮುಂದಾಗಿರುವ ಟ್ರಯಲ್ ಬ್ಲಾಸ್ಟ್ ಸಂಪೂರ್ಣ ಅವೈಜ್ಞಾನಿಕ ಎಂಬ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಯುತ್ತಿದೆ.ಗಣಿ ಇಲಾಖೆ ಅಧಿಕಾರಿಗಳೇ ಹೇಳುವ ಪ್ರಕಾರ ಪರೀಕ್ಷಾರ್ಥ ಸ್ಫೋಟಕ್ಕಾಗಿ ಕೆಆರ್‌ಎಸ್ ಅಣೆಕಟ್ಟು ಬಳಿ 23 ಅಡಿ ಆಳದವರೆಗೆ, ಕೆಆರ್‌ಎಸ್ ಅಣೆಕಟ್ಟೆಯಿಂದ ದೂರದ ಸ್ಥಳಗಳಲ್ಲಿ 60 ಅಡಿ ಆಳದವರೆಗೆ ಟ್ರಯಲ್ ಬ್ಲಾಸ್ಟ್ ನಡೆಸಲಾಗುತ್ತಿದೆ. ವಿಜ್ಞಾನಿಗಳು ಗುರುತಿಸಿರುವ ಆಳದವರೆಗೆ ನಡೆಸಲಾಗುವ ಸ್ಫೋಟದಲ್ಲಿ ಅಣೆಕಟ್ಟೆಗೆ ಉಂಟಾಗುವ ಅಪಾಯವನ್ನು ಗುರುತಿಸಲು ಹೇಗೆ ಸಾಧ್ಯ ಎನ್ನುವುದು ಪ್ರಶ್ನೆಯಾಗಿದೆ.
ಗಣಿಗಾರಿಕೆ ನಡೆಯುವ ಸ್ಥಳಗಳಲ್ಲಿ ಮೆಗ್ಗರ್ ಬ್ಲಾಸ್ಟ್, ಬೋರ್ ಬ್ಲಾಸ್ಟ್, ಶಬ್ಧರಹಿತ ಸ್ಫೋಟಗಳನ್ನು ನೂರಾರು ಅಡಿ ಆಳದಲ್ಲಿ ನಡೆಸಲಾಗುತ್ತಿದೆ. ಈ ಮಾದರಿಯ ಸ್ಫೋಟಗಳಿಂದ ಅಣೆಕಟ್ಟೆಗೆ ಉಂಟಾಗುವ ಅಪಾಯವನ್ನು ಗುರುತಿಸದೆ ಭೂಮಿಯ ಮೇಲ್ಪದರದಲ್ಲಿ ಸ್ಫೋಟಿಸಿ ವರದಿ ಪಡೆದುಕೊಳ್ಳಲು ಹೊರಟಿರುವುದು ಬೇಬಿ ಬೆಟ್ಟದಲ್ಲಿರುವ ಗಣಿ ಮಾಲೀಕರಿಗೆ ಅನುಕೂಲ ಮಾಡಿಕೊಡುವುದಕ್ಕೆ ರಾಜಕಾರಣಿಗಳು ಮತ್ತು ಜಿಲ್ಲಾಡಳಿತದ ಹುನ್ನಾರವೇ ಹೊರತು ಬೇರೇನೂ ಅಲ್ಲ ಎಂಬುದಾಗಿ ರೈತರು ಟ್ರಯಲ್ ಬ್ಲಾಸ್ಟ್ ಕ್ರಮವನ್ನು ವಿರೋಧಿಸುತ್ತಿದ್ದಾರೆ.ಅಣೆಕಟ್ಟೆಯ ಹಿನ್ನೀರಿನಲ್ಲಿರುವ ೬ ರಿಂದ ೭ ಕಿ.ಮೀ. ದೂರದಲ್ಲಿರುವ ಬೇಬಿಬೆಟ್ಟದ ಕಾವಲ್ (ಸರ್ವೆ ನಂ.೧ರಲ್ಲಿ)೧ ಸಾವಿರ ೯೪ ಎಕರೆ ಪ್ರದೇಶ ಬೆಟ್ಟಗುಡ್ಡವಿದೆ. ಇಲ್ಲಿ ನಿಯಮಗಳನ್ನು ಉಲ್ಲಂಘಿಸಿ ಭಾರಿ ಪ್ರಮಾಣದ ಸ್ಪೋಟಕಗಳನ್ನು ಬಳಸಿ ಗಣಿಗಾರಿಕೆ ನಡೆಸುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಕಲ್ಲುಕ್ವಾರೆಗಳಲ್ಲಿ ಸಿಡಿಮದ್ದು, ಸೀಮೆಎಣ್ಣೆ ಮಿಶ್ರಿತ ಉಪ್ಪು, ಎಲೆಕ್ಟ್ರಿಕಲ್ ಡಿಟೋನೆಟರ್ ಒಳಗೊಂಡಿರುವ ಕೈ ಕೇಪ್ ಹಾಗೂ ಮೆಗ್ಗರ್ ಕೇಪ್ ಅನ್ನು ಬಳಸಿ ಬಂಡೆಗಳನ್ನು ಸೋಟಿಸಲಾಗುತ್ತಿದೆ. ಆದರೆ, ಇವರೆಡು ಸ್ಪೋಟಕಗಳಿಗೆ ಹೋಲಿಸಿದರೆ ಬೋರ್ ಬ್ಲಾಸ್ಟಿಂಗ್‌ನ ತೀವ್ರತೆ ಹೆಚ್ಚಿನ ಪ್ರಮಾಣದಲ್ಲಿದೆ.
ಮೆಗ್ಗರ್ ಕೇಪ್‌ನಿಂದ ಕಲ್ಲುಬಂಡೆ ಸೋಟಿಸಿದರೆ, ಸುಮಾರು ಎರಡರಿಂದ ಎರಡೂವರೆ ಕಿ.ಮೀ.ವರೆಗೆ ಭೂಮಿ ಕಂಪಿಸಿದ ಅನುಭವ ಆಗುತ್ತದೆ. ಭಾರಿ ಪ್ರಮಾಣದ ಸೋಟಕವಾದ ಬೋರ್‌ಬ್ಲಾಸ್ಟಿಂಗ್‌ನಿಂದ ಅಂದಾಜು ೬ ರಿಂದ ೭ ಕಿ.ಮೀ.ವರೆಗೆ ಭೂಮಿ (ಬಂಡೆಯ ಸೆಲೆ) ಕಂಪಿಸುವ ಸಾಧ್ಯತೆ ಇರುತ್ತದೆ ಎಂಬುದು ತಜ್ಞರ ಅಭಿಪ್ರಾಯ.ಕಂಟ್ರೋಲ್ ಬ್ಲಾಸ್ಟಿಂಗ್‌ನಿಂದ ಹೆಚ್ಚಿನ ಪ್ರಮಾಣದ ಹಾನಿ ಉಂಟಾಗಲ್ಲ. ಅನ್ ಕಂಟ್ರೋಲ್ ಬ್ಲಾಸ್ಟಿಂಗ್‌ನಲ್ಲಿ ಜಿಲೆಟಿನ್ ಸ್ಟಿಕ್‌ಗಳ ಬಳಕೆ ಮೇಲೆ ತೀವ್ರತೆ ಅವಲಂಬಿಸಿರುತ್ತದೆ. ಬಂಡೆಗಳು ಒಡಕು - ಬಿರುಕು ಇಲ್ಲದೆ, ಸುಮಾರು ೨೫ ರಿಂದ ೩೦ ಸ್ಕ್ವೇರ್ ಕಿ.ಮೀ.ವರೆಗೆ ಹರಡಿದ್ದರೆ ಕಂಪನದ ಸಾಧ್ಯತೆಗಳಿರುತ್ತವೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
2018ರಲ್ಲಿ ಶ್ರೀರಂಗಪಟ್ಟಣ ಡಿವೈಎಸ್ಪಿಯಾಗಿದ್ದ ವಿಶ್ವನಾಥ್ ಜಿಲ್ಲಾ ಆರಕ್ಷಕ ಅಧೀಕ್ಷಕರಿಗೆ ಸಲ್ಲಿಸಿರುವ ಆರು ಪುಟಗಳ ತನಿಖಾ ವರದಿಯಲ್ಲಿ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಅಣೆಕಟ್ಟೆಗೆ ಎದುರಾಗಬಹುದಾದ ಅಪಾಯದ ಮುನ್ಸೂಚನೆಯನ್ನು ಅರಿಯದಿದ್ದರೆ ಜಿಲ್ಲೆಯ ಜೀವನಾಡಿ ಕೆಆರ್‌ಎಸ್ ಜಲಾಶಯ ಬಲಿಯಾಗುವುದರಲ್ಲಿ ಆಶ್ಚರ್ಯವಿಲ್ಲ ಎಂದು ಎಚ್ಚರಿಸಿದ್ದರು.ಅಲ್ಲದೇ, ಅಪಾರ ಪ್ರಮಾಣದಲ್ಲಿ ಸ್ಫೋಟಕ ವಸ್ತುಗಳನ್ನು ಲಾರಿಗಳಲ್ಲಿ ಸಾಗಿಸಲಾಗುತ್ತಿದ್ದು, ನಿಷೇಧಿತ ಸ್ಫೋಟಕಗಳನ್ನು ಗಣಿಗಾರಿಕೆ ನಡೆಯುವ ಸ್ಥಳಗಳಲ್ಲಿ ಸ್ಫೋಟಿಸಲಾಗುತ್ತಿದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದರು.
ಇದರ ಬೆನ್ನಹಿಂದೆಯೇ 2018ರ ಸೆ.25ರಂದು ಬೇಬಿ ಬೆಟ್ಟದಲ್ಲಿ ಸಂಭವಿಸಿದ ಗಣಿ ಸ್ಫೋಟದಿಂದ ಉಂಟಾದ ಕಂಪನದ ಅಲೆಗಳನ್ನು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸ್ಯಾಟಲೈಟ್ ಚಿತ್ರ ಸಹಿತ ಗುರುತಿಸಿ, ಕಂಪನದ ಅಲೆ ಸಾಗಿರುವ ಮಾರ್ಗವನ್ನೂ ವೈಜ್ಞಾನಿಕವಾಗಿ ಗುರುತಿಸಿ ವರದಿ ನೀಡಿದ್ದರೂ ಅದನ್ನುಮೂಲೆಗುಂಪು ಮಾಡುತ್ತಿರುವುದು ವಿಪರ್ಯಾಸ.