ನಗರಸಭೆ ಮೇಲ್ದರ್ಜೆಗೇರುತ್ತಿರುವುದು ಹಾಸ್ಯಾಸ್ಪದ

| Published : Jan 13 2024, 01:31 AM IST

ಸಾರಾಂಶ

ಜನಸಂಖ್ಯೆಗೆ ಅನುಗುಣವಾಗಿ ನಗರಸಭೆಯಲ್ಲಿ ಕಾರ್ಮಿಕರಿಲ್ಲ, ಸೌಲಭ್ಯಗಳೂ ಇಲ್ಲ. ಹೀಗಿರುವಾಗ ಮಹಾನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೆ ಏರಿಕೆ ಮಾಡಿ ಜನತೆಗೆ ಏನು ನೀಡಲಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರ

ಕೋಲಾರ ನಗರವನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪಕ್ಕೆ ಸರ್ಕಾರದಿಂದ ಹಸಿರು ನಿಶಾನೆ ದೊರೆತಿದೆ. ಆದರೆ ಇದನ್ನು ಯಾವ ಮಾನದಂಡದ ಮೇಲೆ ನೀಡಲಾಗುತ್ತಿದೆ?. ನಗರದಲ್ಲಿ ನಗರಸಭೆಯ ನಿಯಮಗಳನ್ನು ಅನುಷ್ಠಾನಕ್ಕೆ ತರುವ ಕಾಳಜಿಯಿಲ್ಲದ ಅಧಿಕಾರಿಗಳು, ಜನಪ್ರತಿನಿಧಿಗಳಿರುವಾಗ ಮಹಾನಗರಪಾಲಿಕೆಗೆ ಏರಿಕೆ ಮಾಡುವ ಯತ್ನ ಫಲ ನೀಡುವುದೇ?

ಜನಸಂಖ್ಯೆಗೆ ಅನುಗುಣವಾಗಿ ನಗರಸಭೆಯಲ್ಲಿ ಕಾರ್ಮಿಕರಿಲ್ಲ, ಸೌಲಭ್ಯಗಳೂ ಇಲ್ಲ. ಹೀಗಿರುವಾಗ ಮಹಾನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೆ ಏರಿಕೆ ಮಾಡಿ ಜನತೆಗೆ ಏನು ನೀಡಲಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ನಗರದಲ್ಲಿ ಸ್ವಚ್ಛತೆ ಎಂಬುವುದು ಕೇವಲ ಘೋಷಣೆ ಹಾಗೂ ಪ್ರಚಾರಕ್ಕೆ ಸೀಮಿತವಾಗಿದ ಹೊರತು ಕಾರ್ಯಗತವಾಗುತ್ತಿಲ್ಲ. ನಗರಸಭೆಯ ಆವರಣದಲ್ಲಿಯೇ ಸ್ವಚ್ಛತೆ ಎಂಬುದು ಇಲ್ಲ, ಇನ್ನು ಇವರು ನಗರದ ೩೫ ವಾರ್ಡುಗಳನ್ನು ಸ್ವಚ್ಛತೆಯಾಗಿ ಇಟ್ಟುಕೊಳ್ಳಲು ಸಾಧ್ಯವೇ?

ನಗರದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹೊಸದಾಗಿ ಬಂದ ಹುಮ್ಮಸ್ಸಿನಲ್ಲಿ ಪ್ರಚಾರಕ್ಕಾಗಿ ಎಲ್ಲಾ ವಾರ್ಡ್‌ಗಳಿಗೆ ಭೇಟಿ ನೀಡಿ ಮಾಧ್ಯಮದವರನ್ನು ಆಹ್ವಾನಿಸಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡು ಒಂದೆರಡು ತಿಂಗಳು ಹಾರಾಡಿ, ನಂತರ ಸಾರ್ವಜನಿಕರೇ ದೂರು ನೀಡಿದರೂ ಪಂಚೇಂದ್ರಿಯಗಳನ್ನು ಕಳೆದುಕೊಂಡ ವಿಕಲಚೇತನರಂತೆ ಕಂಡುಬರುತ್ತಿದ್ದಾರೆ.

ನಗರದಲ್ಲಿ ಆಡಳಿತದ ವೈಫಲ್ಯಗಳ ಕುರಿತು ಹಲವು ಬಾರಿ ಅವರ ಗಮನಕ್ಕೆ ತಂದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುವುದಿಲ್ಲ. ಜನಪ್ರತಿನಿಧಿಗಳು ಸಾರ್ವಜನಿಕರ ಸಮ್ಮುಖದಲ್ಲಿ ತಮ್ಮ ಅಧಿಕಾರ ಚಲಾವಣೆ ಮಾಡಿದರೂ ಅಧಿಕಾರಿಗಳು ಜೀ ಹುಜೂರ್ ಎನ್ನುತ್ತಾರೆಯೇ ಹೊರತು ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.

ಸರ್ಕಾರದ ಯೋಜನೆಗಳನ್ನೇ ಅನುಷ್ಠಾನಕ್ಕೆ ತರದೇ ಗಾಳಿಗೆ ತೂರುತ್ತಿರುವವರು, ಇನ್ನು ಜನಪ್ರತಿನಿಧಿಗಳ ಮಾತಿಗೆ ಮಾನ್ಯತೆ ನೀಡುತ್ತಾರೆಯೇ? ಕೆ.ಡಿ.ಪಿ., ದಿಶಾ ಸಭೆಗಳು ನಾಮ್‌ಕೆವಾಸ್ಥೆಗೆ ನಡೆಯುತ್ತಿವೆ ಹೊರತು ಮೂರು ಕಾಸಿನ ಪ್ರಯೋಜನವಿಲ್ಲವಾಗಿದೆ.

ಸಮರ್ಪಕವಾಗಿ ಕೆಲಸ ಮಾಡದ ಅಧಿಕಾರಿಗಳ ಪರವಾಗಿ ಜಿಲ್ಲಾಮಟ್ಟದ ಅಧಿಕಾರಿಗಳೇ ವಕಾಲತ್ತು ಹಾಕುವ ಮೂಲಕ ಜನಪ್ರತಿನಿಧಿಗಳಿಗೆ ರಾಜೀ ಮಾಡುವ ಕೆಲಸಗಳು ಸಭೆಗಳಲ್ಲಿ ನಡೆಯುತ್ತಿವೆ. ಸಭೆಗಳಲ್ಲಿ ಸಚಿವರಿಗೆ ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತಾರೆ, ಇದು ಸಚಿವರಿಗೆ ತಿಳಿದರೂ ತೆಪ್ಪಗೆ ಕೂತಿರುವುದು ಸಭೆಗಳಲ್ಲಿ ಕಂಡು ಬರುತ್ತಿತ್ತು.

ಈ ಕುರಿತು ಮಾಧ್ಯಮಗಳು ಪ್ರಚಾರ ಮಾಡುತ್ತಿದ್ದ ಹಿನ್ನೆಲೆ ಈಗ ಬಹುತೇಕ ಸಭೆಗಳು ಮಾಧ್ಯಮಗಳನ್ನು ದೂರ ಮಾಡಿ ಸಭೆಗಳನ್ನು ಮಾಡುವ ಮೂಲಕ ಪಾರದರ್ಶಕ ಆಡಳಿತಕ್ಕೆ ವಿರುದ್ಧವಾಗಿ ಮುಂದುವರೆಯುತ್ತಿವೆ ಎಂಬುದಕ್ಕೆ ಮೊನ್ನೆ ಮುಖ್ಯಮಂತ್ರಿಗಳು ಜಿಲ್ಲಾಡಳಿತ ಕಚೇರಿಯಲ್ಲಿ ನಡೆಸಿದ ಪ್ರಗತಿ ಪರಿಶೀಲನೆಯೇ ನಿದರ್ಶನವಾಗಿತ್ತು, ಆಡಳಿತದ ಸಭೆಗಳನ್ನು ರಹಸ್ಯವಾಗಿ ನಡೆಸಿದರೆ ಪಾರದರ್ಶಕ ಆಡಳಿತಕ್ಕೆ ಏನಾದರೂ ಅರ್ಥ ಇದೆಯೇ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.ನಗರದಲ್ಲಿ ಬೀದಿಗೆ ಎರಡು, ಮೂರು ಕಸಾಯಿಖಾನೆಗಳಿವೆ. ದೇವಾಲಯ, ಮನೆಗಳ ಪಕ್ಕದಲ್ಲಿ ಮಾಂಸದಂಗಡಿಗಳನ್ನು ತೆರೆಯಲು ನಗರಸಭೆಯಿಂದ ಪರವಾನಗಿ ನೀಡಲಾಗುತ್ತಿದೆ. ಕಸಾಯಿಖಾನೆ, ಮಾಂಸದ ಅಂಗಡಿಗಳನ್ನು ಎಲ್ಲೆಂದರಲ್ಲಿ ಇಡಬಹುದೇ? ಇವುಗಳಿಗೆ ಯಾವುದೇ ನೀತಿ, ನಿಯಮಗಳಿಲ್ಲವೇ? ಇಷ್ಟೊಂದು ಹದಗೆಟ್ಟ ನಗರಸಭೆಯನ್ನು ಸರ್ಕಾರವು ಮೇಲ್ದರ್ಜೆಗೆ ಏರಿಸುವುದು ವ್ಯರ್ಥ ಎಂಬುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.ನಗರದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆ

ನಗರದಲ್ಲಿ ಕಳೆದ ಎರಡು ವರ್ಷಗಳಿಂದ ರಸ್ತೆಗಳಲ್ಲಿರುವ ತಗ್ಗು, ಗುಂಡಿಗಳನ್ನು ಮುಚ್ಚುವ ಮೂಲಕ ದುರಸ್ತಿಯನ್ನೂ ಮಾಡದ ನಾಲಾಯಕರು ನಗರಸಭೆಯನ್ನು ಮೇಲ್ದರ್ಜೆಗೆ ಏರಿಸಲು ಮುಂದಾಗಿರುವುದು ನಾಚಿಕೆಗೇಡು, ಸ್ವಚ್ಛತೆ ಎಂಬುವುದು ನಗರದಲ್ಲಿ ಮರೀಚಿಕೆಯಾಗಿದೆ. ನಗರದ ಚರಂಡಿಗಳಲ್ಲಿ ಕಸವನ್ನು ವಾರ್ಡಗಳಲ್ಲಿ ೩-೪ ದಿನಕ್ಕೊಮ್ಮೆ ವಿಲೇವಾರಿ ಮಾಡಲಾಗುತ್ತಿದೆ.

ಈ ಕುರಿತು ನಗರಸಭೆ ಅಧಿಕಾರಿಗಳನ್ನು ಕೇಳಿದರೆ ಪೌರಕಾರ್ಮಿಕರು, ಸಿಬ್ಬಂದಿ ಕೊರತೆ ಇದೆ. ವಾಹನಗಳು ಇಲ್ಲ, ಡ್ರೈವರ್ ಇಲ್ಲ, ಡಿಸೇಲ್ ಇಲ್ಲ, ಗಾಡಿ ಕೆಟ್ಟು ಹೋಗಿದೆ. ವಾಹನವನ್ನು ದುರಸ್ತಿಗೆ ಬಿಡಲಾಗಿದೆ. ಇತ್ಯಾದಿಗಳು ಸಬೂಬು ಉತ್ತರಗಳನ್ನು ನೀಡಿ ಎಲ್ಲವನ್ನೂ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ.