ವಾಲ್ಮೀಕಿ ರಾಮಾಯಣದ ಮೊದಲ ವಾಕ್ಯವೇ ಯುದ್ಧ ವಿರೋಧಿಯಾಗಿದೆ: ಧನಂಜಯ ಮೂರ್ತಿ

| Published : Oct 19 2024, 01:34 AM IST

ವಾಲ್ಮೀಕಿ ರಾಮಾಯಣದ ಮೊದಲ ವಾಕ್ಯವೇ ಯುದ್ಧ ವಿರೋಧಿಯಾಗಿದೆ: ಧನಂಜಯ ಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ, ವಾಲ್ಮೀಕಿ ರಾಮಾಯಣದ ಮೊದಲ ವಾಕ್ಯವೇ ಯುದ್ಧ ವಿರೋಧಿಯಾಗಿದೆ. ವಾಲ್ಮೀಕಿ ಮಹರ್ಷಿ ಮಹಾನ್ ಮಾನವತಾವಾದಿ ಮತ್ತು ಜಾತ್ಯಾತೀತರಾಗಿದ್ದರು ಎನ್ನುವುದಕ್ಕೆ ಇದು ಉದಾಹಣೆಯಾಗಿದೆ ಎಂದು ಉಪನ್ಯಾಸಕ ಧನಂಜಯ ಮೂರ್ತಿ ಹೇಳಿದರು.

ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಉಪನ್ಯಾಸ

ಕನ್ನಡಪ್ರಭ ವಾರ್ತೆ, ಕೊಪ್ಪ

ವಾಲ್ಮೀಕಿ ರಾಮಾಯಣದ ಮೊದಲ ವಾಕ್ಯವೇ ಯುದ್ಧ ವಿರೋಧಿಯಾಗಿದೆ. ವಾಲ್ಮೀಕಿ ಮಹರ್ಷಿ ಮಹಾನ್ ಮಾನವತಾವಾದಿ ಮತ್ತು ಜಾತ್ಯಾತೀತರಾಗಿದ್ದರು ಎನ್ನುವುದಕ್ಕೆ ಇದು ಉದಾಹಣೆಯಾಗಿದೆ ಎಂದು ಉಪನ್ಯಾಸಕ ಧನಂಜಯ ಮೂರ್ತಿ ಹೇಳಿದರು.ಪಟ್ಟಣದ ಪುರಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಪಂ, ಸಮಾಜ ಕಲ್ಯಾಣ ಇಲಾಖೆ, ಕೊಪ್ಪ ಪಪಂ ನಿಂದ ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಉಪನ್ಯಾಸ ನೀಡಿ ಮಹರ್ಷಿ ವಾಲ್ಮೀಕಿ ತಮ್ಮ ಕೃತಿ ಮೂಲಕ ನಾಗರಿಕ ಸಮಾಜವನ್ನು ಸುಸ್ಥಿತಿ ಯಲ್ಲಿಡುವ ಕೆಲಸ ಮಾಡಿದರು. ಸಹವಾಸ ದೋಷದಿಂದ ದರೋಡೆಕೋರನಾಗಿದ್ದ ರತ್ನಾಕರನೆಂಬ ವ್ಯಕ್ತಿ ನಾರದರ ಉಪದೇಶದಂತೆ ಧ್ಯಾನಕ್ಕೆ ಕುಳಿತಾಗ ಕಾಲಕ್ರಮೇಣ ಆತನ ಮೈಮೇಲೆ ಹುತ್ತ ಬೆಳೆಯಿತು. ವಾಲ್ಮೀಕಿ ಎಂದರೆ ಹುತ್ತ ಎಂದು ಅರ್ಥ. ಆದ್ದರಿಂದಲೇ ಇವರನ್ನು ವಾಲ್ಮೀಕಿ ಮಹರ್ಷಿ ಎಂದು ಕರೆಯುತ್ತೇವೆ. ವಾಲ್ಮೀಕಿ ಮಹರ್ಷಿಗಳಿಗೂ ಮಣ್ಣಿಗೂ ಅವಿನಾಭಾವ ಸಂಬಂಧವಿದೆ. ರಾಮಾಯಣದಲ್ಲಿ ಬರುವ ಸೀತಾಮಾತೆ ಮಣ್ಣಿನಲ್ಲಿಯೇ ಸಿಕ್ಕಿರುವ ವೃತ್ತಾಂತವಿದ್ದು ಮಣ್ಣಿನ ಜೊತೆಗೆ ಮಾನವನ ಸಂಬಂಧವಿರಬೇಕು. ಅಂತವರು ಎಂದಿಗೂ ಪರರನ್ನು ದ್ವೇಷಿಸುವುದಿಲ್ಲ ಎಂದು ಸಾರಿದ ವಾಲ್ಮೀಕಿ ವಾಸ್ತವ ಒಪ್ಪಿಕೊಂಡು ಜೀವಿಸಬೇಕು ಎಂದರು. ವಾಲ್ಮೀಕಿ ಹೇಳ ಬಯಸಿದ್ದನ್ನು ರಾಮಾಯಣ ಎಂಬ ಮಹಾಕಾವ್ಯದ ಮೂಲಕ ಹೇಳಿದ್ದಾರೆ. ಅವರ ಕೃತಿಯಲ್ಲಿ ಶೋಕ ಮತ್ತು ಕರುಣಾ ರಸ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಆರ್ಯ ಕವಿ ವಾಲ್ಮೀಕಿ ೫೦೦೦ ವರ್ಷಗಳ ಹಿಂದೆಯೇ ಜೀವನ ದುಃಖಮಯವಾಗಿದೆ ಎಂದಿದ್ದರು. ಇಡೀ ರಾಮಾಯಣದಲ್ಲಿ ರಾಮ ಎಲ್ಲೂ ಯಾರನ್ನೂ ದ್ವೇಷಿಸಲಿಲ್ಲ. ಎಲ್ಲರನ್ನು ಒಂದೇ ರೀತಿಯಲ್ಲಿ ಸಮಾನವಾಗಿ ಕಂಡಿದ್ದಾನೆ ಎಂದರು.ತಹಸೀಲ್ದಾರ್ ಲಿಖಿತಾ ಮೋಹನ್ ಮಾತನಾಡಿ ನಮ್ಮಲ್ಲಿ ಸಾಕಷ್ಟು ರಾಮಾಯಣಗಳಿದ್ದು ಎಲ್ಲಾ ಕೃತಿಗಳಿಗೂ ವಾಲ್ಮೀಕಿ ರಾಮಾಯಣದ ಆಧಾರ ದಿಂದಲೇ ರಚಿಸಲ್ಪಟ್ಟಿದೆ. ಶಿಸ್ತು, ಸಂಯಮ, ನಿಷ್ಠೆ ರಾಮಾಯಣದಲ್ಲಿ ಅಡಗಿದೆ. ಅದನ್ನು ಮೈಗೂಡಿಸಿಕೊಳ್ಳುವ ಮೂಲಕ ಮಹರ್ಷಿ ವಾಲ್ಮೀಕಿ ಜಯಂತಿ ಅರ್ಥಪೂರ್ಣವಾಗಿಸೋಣ ಎಂದರು. ತಾಲೂಕು ರೈತಸಂಘದ ಅಧ್ಯಕ್ಷ ನವೀನ್ ಕರುವಾನೆ ಮಾತನಾಡಿ ತಂದೆ ತಾಯಿಯರ ಪ್ರೀತಿ, ಮಮತೆ ಮಲತಾಯಿ ಅಸೂಯೆ, ಅಣ್ಣ ತಮ್ಮಂದಿರ ಬಾಂಧವ್ಯ, ಸತಿಪತಿಯರ ಜೀವನ, ರಾಜರಾದವರು ಪಾಲಿಸುವ ರಾಜಧರ್ಮ ಎಲ್ಲವೂ ರಾಮಾಯಣದಲ್ಲಿದೆ. ಪ್ರತಿಯೊಬ್ಬರ ಆದರ್ಶ ಪುರುಷ ಶ್ರೀರಾಮನನ್ನು ಪ್ರಸ್ತುತ ಕಾಲಘಟ್ಟದಲ್ಲಿ ರಾಜಕಾರಣಕ್ಕಾಗಿ ಬೀದಿಯಲ್ಲಿ ನಿಲ್ಲಿಸಿರುವುದು ವಿಪರ್ಯಾಸ ಎಂದರು. ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎ.ಕೆ. ಪಾಟೀಲ್, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಶಾಸಕ ಟಿ.ಡಿ.ರಾಜೇಗೌಡರು ಕಾರ್ಯಕ್ರಮಕ್ಕೆ ಶುಭಕೋರಿ ಬರೆದ ಪತ್ರ ವಾಚಿಸಿದರು. ಪಪಂ ಅಧ್ಯಕ್ಷೆ ಗಾಯತ್ರಿ ವಸಂತ್, ಉಪಾಧ್ಯಕ್ಷೆ ಗಾಯತ್ರಿ ಶೆಟ್ಟಿ, ಸದಸ್ಯೆ ಹೇಮಾವತಿ, ನಾಮ ನಿರ್ದೇಶಿತ ಸದಸ್ಯೆ ಸುಮಾ, ಕೆಡಿಪಿ ಸದಸ್ಯ ಬಿ.ಪಿ. ಚಿಂತನ್, ರಾಜಶಂಕರ್, ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಸಿ.ರಾಜೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಯೋತಿ.ಎಲ್., ತಾಪಂ ಸಹಾಯಕ ಲೆಕ್ಕಾಧಿಕಾರಿ ಪ್ರಮೋದ್, ಲೋಕನಾಥಪುರ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎನ್.ಟಿ.ಗೋಪಾಲಕೃಷ್ಣ, ತಾಲೂಕು ಆರೋಗ್ಯಾಧಿಕಾರಿ ಡಾ.ಮಹೇಂದ್ರ ಕಿರೀಟಿ ಮುಂತಾದವರಿದ್ದರು.