ಹಾವೇರಿ ಜಿಲ್ಲೆಯಲ್ಲಿ ರಾಜಕೀಯ ಬದಲಾವಣೆಗೆ ಸಾಕ್ಷಿಯಾದ ವರ್ಷ

| Published : Dec 29 2024, 01:16 AM IST

ಸಾರಾಂಶ

ಜಿಲ್ಲೆಯು ರಾಜಕೀಯವಾಗಿ ಈ ವರ್ಷ ಹಲವು ಬದಲಾವಣೆಗಳನ್ನು ಕಂಡಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸದರೆ, ಅವರ ಶಾಸಕ ಸ್ಥಾನದ ರಾಜೀನಾಮೆಯಿಂದ ತೆರವಾದ ಶಿಗ್ಗಾಂವಿ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಜಯಭೇರಿ ಬಾರಿಸಿತು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಉಳಿಸಿಕೊಂಡು ಸಮಾಧಾನ ಪಟ್ಟುಕೊಂಡರೆ, ವರ್ಷಾಂತ್ಯದಲ್ಲಿ ಶಿಗ್ಗಾಂವಿ ಉಪಚುನಾವಣೆ ಗೆಲುವಿನೊಂದಿಗೆ ಇಡಿ ಜಿಲ್ಲೆಯನ್ನು ಬಿಜೆಪಿ ಮುಕ್ತಗೊಳಿಸಿ ಕಾಂಗ್ರೆಸ್‌ ಸಂಭ್ರಮಿಸಿರುವುದು ಈ ವರ್ಷದ ಜಿಲ್ಲೆಯ ರಾಜಕೀಯ ಹೈಲೈಟ್ಸ್‌.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ, ಹಾವೇರಿ

ಜಿಲ್ಲೆಯು ರಾಜಕೀಯವಾಗಿ ಈ ವರ್ಷ ಹಲವು ಬದಲಾವಣೆಗಳನ್ನು ಕಂಡಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸದರೆ, ಅವರ ಶಾಸಕ ಸ್ಥಾನದ ರಾಜೀನಾಮೆಯಿಂದ ತೆರವಾದ ಶಿಗ್ಗಾಂವಿ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಜಯಭೇರಿ ಬಾರಿಸಿತು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಉಳಿಸಿಕೊಂಡು ಸಮಾಧಾನ ಪಟ್ಟುಕೊಂಡರೆ, ವರ್ಷಾಂತ್ಯದಲ್ಲಿ ಶಿಗ್ಗಾಂವಿ ಉಪಚುನಾವಣೆ ಗೆಲುವಿನೊಂದಿಗೆ ಇಡಿ ಜಿಲ್ಲೆಯನ್ನು ಬಿಜೆಪಿ ಮುಕ್ತಗೊಳಿಸಿ ಕಾಂಗ್ರೆಸ್‌ ಸಂಭ್ರಮಿಸಿರುವುದು ಈ ವರ್ಷದ ಜಿಲ್ಲೆಯ ರಾಜಕೀಯ ಹೈಲೈಟ್ಸ್‌.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವರ್ಷದ ಆರಂಭದಿಂದಲೇ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿತ್ತು. ಶಿವಕುಮಾರ ಉದಾಸಿ ರಾಜಕೀಯ ನಿವೃತ್ತಿ ಘೋಷಿಸಿದ್ದರಿಂದ ಬಿಜೆಪಿಯಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲವಿತ್ತು. ಅದೇ ರೀತಿ ಈ ಸಲ ಕಾಂಗ್ರೆಸ್‌ ಯಾರಿಗೆ ಟಿಕೆಟ್‌ ನೀಡಲಿದೆ ಎಂಬ ಚರ್ಚೆಯೂ ಜೋರಾಗಿತ್ತು. ಅಳೆದು ತೂಗಿ ಬಿಜೆಪಿ ಹೈಕಮಾಂಡ್‌ ಬಸವರಾಜ ಬೊಮ್ಮಾಯಿ ಅವರನ್ನೇ ಕಣಕ್ಕಿಳಿಸಿತು. ಅತ್ತ ಕಾಂಗ್ರೆಸ್‌ನಿಂದ ಹೊಸ ಮುಖ ಆನಂದ ಗಡ್ಡದೇವರಮಠ ಅವರಿಗೆ ಟಿಕೆಟ್ ನೀಡಿತು. ರಾಜಕೀಯದಲ್ಲಿ ಹಳೆ ಹುಲಿ ಎನಿಸಿದ್ದ ಬೊಮ್ಮಾಯಿ ಎದುರು ಗಡ್ಡದೇವರಮಠ ನಡುವೆ ಜಿದ್ದಾಜಿದ್ದಿ ಪೈಪೋಟಿ ನಡೆಯಿತು. ಮೇ 7ರಂದು ಮತದಾನವಾಗಿ, ಜೂ.4ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಿತು. ಬಸವರಾಜ ಬೊಮ್ಮಾಯಿ ಅವರು ಗಡ್ಡದೇವರಮಠ ವಿರುದ್ಧ 43 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಆ ಮೂಲಕ ಮೊದಲ ಬಾರಿಗೆ ಬೊಮ್ಮಾಯಿ ಅವರು ಲೋಕಸಭೆ ಪ್ರವೇಶಿಸಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತರೂ ಭರ್ಜರಿ ಪೈಪೋಟಿ ನೀಡಿತು. ಆ ಬಳಿಕ ಕೇಂದ್ರದಲ್ಲಿ ಬೊಮ್ಮಾಯಿ ಮಂತ್ರಿಯಾಗುವ ನಿರೀಕ್ಷೆ ಎಲ್ಲರಲ್ಲಿ ಇತ್ತಾದರೂ ಅದು ಈಡೇರಲಿಲ್ಲ. ಶಿವಕುಮಾರ ಉದಾಸಿ ಮೂರು ಸಲ ಗೆದ್ದಿದ್ದ ಹಾವೇರಿ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಶಿಗ್ಗಾಂವಿ ಬೈ-ಕೈ: ಸತತ ನಾಲ್ಕು ಸಲ ಶಿಗ್ಗಾಂವಿ ಕ್ಷೇತ್ರದಿಂದ ಗೆದ್ದಿದ್ದ ಬಸವರಾಜ ಬೊಮ್ಮಾಯಿ ಲೋಸಕಭೆಗೆ ಆಯ್ಕೆಯಾದ್ದರಿಂದ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆಗಲೇ ಶಿಗ್ಗಾಂವಿ ಉಪಚುನಾವಣೆಗೆ ಎರಡೂ ಪಕ್ಷಗಳು ಕಹಳೆ ಮೊಳಗಿಸಿಯಾಗಿತ್ತು. ಬಿಜೆಪಿಯಿಂದ ಬೊಮ್ಮಾಯಿ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬುದು ಎಲ್ಲರ ಪ್ರಶ್ನೆಯಾಗಿತ್ತು. ಅತ್ತ ಕಾಂಗ್ರೆಸ್‌ನಿಂದ ಹಲವು ಆಕಾಂಕ್ಷಿಗಳು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದರು. ಅದರಲ್ಲೂ ಅಜ್ಜಂಪೀರ್‌ ಖಾದ್ರಿ ಮತ್ತು ಯಾಸೀರ್ ಖಾನ್ ಪಠಾಣ್‌ ನಡುವೆ ಕಸರತ್ತು ಜೋರಾಗಿತ್ತು. ಬಿಜೆಪಿಯಿಂದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್‌ ಬೊಮ್ಮಾಯಿ ಹೆಸರು ಘೋಷಣೆಯಾದರೆ, ಕಾಂಗ್ರೆಸ್‌ನಿಂದ ಯಾಸೀರ್‌ಖಾನ್‌ ಪಠಾಣ್‌ಗೆ ಟಿಕೆಟ್‌ ನೀಡಲಾಯಿತು. ಅಲ್ಲಿಯವರೆಗೆ ತಣ್ಣಗಿದ್ದ ಖಾದ್ರಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು ಕಾಂಗ್ರೆಸ್‌ ಪಾಲಿಗೆ ನುಂಗಲಾರದ ತುತ್ತಾಯಿತು. ಸಿಎಂ, ಡಿಸಿಎಂ ಸೇರಿದಂತೆ ಹಲವರು ಸೇರಿ ಸಂಧಾನ ಮಾಡಿ ಖಾದ್ರಿ ಅವರಿಂದ ನಾಮಪತ್ರ ವಾಪಸ್‌ ಪಡೆದರು. ಆದರೂ ಬಿಜೆಪಿಗೆ ಸುಲಭದ ತುತ್ತು ಎಂದೇ ರಾಜಕೀಯ ತಜ್ಞರು ಎಣಿಸಿದ್ದರು. ಆದರೆ ಅಲ್ಲಿಂದ ನಿಜವಾದ ಆಟ ಶುರು ಮಾಡಿದ ಕಾಂಗ್ರೆಸ್‌ ನಾಯಕರು, ಬೊಮ್ಮಾಯಿ ಅವರನ್ನು ಅವರದೇ ಕ್ಷೇತ್ರದಲ್ಲಿ ಹಣಿಯಲು ಚಕ್ರವ್ಯೂಹವನ್ನೇ ರಚಿಸಿದರು. ಸಚಿವ ಸತೀಶ ಜಾರಕಿಹೊಳಿ, ಜಮೀರ್ ಅಹ್ಮದ್‌, ಅಜ್ಜಂಪೀರ್‌ ಖಾದ್ರಿ ಸೇರಿದಂತೆ ಎಲ್ಲರೂ ರಣತಂತ್ರ ಹೂಡಿ ಪ್ರತಿ ಸಮಾಜದ ವೋಟ್‌ ಪಡೆಯಲು ಹಗಲುರಾತ್ರಿ ಶ್ರಮಿಸಿದರು. ಕಳೆದ ನ.13ರಂದು ಮತದಾನ ನಡೆದು, ನ.23ರಂದು ಮತ ಎಣಿಕೆ ನಡೆಯಿತು. ಬಿಜೆಪಿ ಲೆಕ್ಕಾಚಾರ ತಪ್ಪಿರುವುದು ಆರಂಭದಲ್ಲೇ ಗೊತ್ತಾಯಿತು. ಅತ್ತ ಕಾಂಗ್ರೆಸ್‌ ಗೆಲುವಿನ ಅಂತರ ಹೆಚ್ಚಿಸಿಕೊಳ್ಳುತ್ತ ಸಾಗಿ 30 ವರ್ಷಗಳ ಬಳಿಕ ಶಿಗ್ಗಾಂವಿಯಲ್ಲಿ ಕೈ ಬಾವುಟ ರಾರಾಜಿಸುವಂತೆ ಮಾಡಿತು. ಅಪ್ಪ ಬಸವರಾಜ ಬೊಮ್ಮಾಯಿ ವಿರುದ್ಧ ಸೋತಿದ್ದ ಪಠಾಣ್‌, ಮಗ ಭರತ್‌ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡರು.

ಹಾವೇರಿಯಲ್ಲಿ ಕೈ ಪ್ರಾಬಲ್ಯ: ಶಿಗ್ಗಾಂವಿ ಉಪಚುನಾವಣೆಯ ಗೆಲುವು ಕಾಂಗ್ರೆಸ್‌ ಪಾಲಿಗೆ ದೊಡ್ಡ ಯಶಸ್ಸು ತಂದುಕೊಟ್ಟಿರುವುದು ನಿಶ್ಚಿತ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಶಿಗ್ಗಾಂವಿ ಹೊರತುಪಡಿಸಿ ಇನ್ನುಳಿದ 5 ಕ್ಷೇತ್ರಗಳನ್ನು ಗೆದ್ದಿತ್ತು. ಉಪಚುನಾವಣೆಯಲ್ಲಿ ಆ ಕ್ಷೇತ್ರವನ್ನೂ ಗೆದ್ದು ಇಡಿ ಜಿಲ್ಲೆಯನ್ನು ಬಿಜೆಪಿ ಮುಕ್ತಗೊಳಿಸಿದ್ದು ಕಾಂಗ್ರೆಸ್‌ ಸಾಧನೆಯಾಯಿತು. ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಾಲಿಗೆ ಹಿರೋ ಆಗಿದ್ದ ಅಜ್ಜಂಪೀರ್ ಖಾದ್ರಿ ಅವರಿಗೆ ಪಕ್ಷ ಹೆಸ್ಕಾಂ ಅಧ್ಯಕ್ಷ ಹುದ್ದೆ ನೀಡಿ ನುಡಿದಂತೆ ನಡೆಯಿತು.

ಜಿಲ್ಲೆಯ ಹಾನಗಲ್ಲ ಕ್ಷೇತ್ರದಿಂದ ಹಲವು ಬಾರಿ ಶಾಸಕರಾಗಿ, ವಿಧಾನಸಭೆ ಉಪಾಧ್ಯಕ್ಷರಾಗಿ, ಸಚಿವರಾಗಿದ್ದ ಮನೋಹರ ತಹಶೀಲ್ದಾರ್‌ ಅವರು ಇತ್ತೀಚೆಗೆ ನಿಧನರಾಗಿರುವುದು ಜಿಲ್ಲೆಯ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಯಿತು. ಹೀಗೆ ಈ ವರ್ಷ ರಾಜಕೀಯ ಮಂದಿ ಹಾಗೂ ಪಕ್ಷಗಳು ಹಲವು ಏಳುಬೀಳುಗಳನ್ನು ಕಂಡಿದ್ದು, ಹೊಸ ವರ್ಷದ ಸ್ವಾಗತಕ್ಕೆ ಅಣಿಯಾಗಿದ್ದಾರೆ.