ಕೆಲಸಕ್ಕೆ ಕಾಂಬೋಡಿಯಾಗೆ ತೆರಳಿದ ಯುವಕ ಮಾಲೀಕರ ಬಳಿ ಬಂಧಿ
KannadaprabhaNewsNetwork | Published : Oct 29 2023, 01:00 AM IST
ಕೆಲಸಕ್ಕೆ ಕಾಂಬೋಡಿಯಾಗೆ ತೆರಳಿದ ಯುವಕ ಮಾಲೀಕರ ಬಳಿ ಬಂಧಿ
ಸಾರಾಂಶ
ಕೆಲಸಕ್ಕೆ ಕಾಂಬೋಡಿಯಾಗೆ ತೆರಳಿದ ಯುವಕ ಮಾಲೀಕರ ಬಳಿ ಬಂಧಿ
-ಯುವಕನಿಗೆ ಚಿತ್ರಹಿಂಸೆ ನೀಡುತ್ತಿರುವ ಆರೋಪ । ವಾಪಾಸ್ ಕರೆತರಲು ಪೋಷಕರ ಒತ್ತಾಯ ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು ವಿದೇಶಕ್ಕೆ ಕೆಲಸಕ್ಕೆ ಹೋಗಿರುವ ಯುವಕನೊಬ್ಬ ಬ್ರೋಕರ್‌ಗಳಿಂದ ಮೋಸ ಹೋಗಿ ಮಾಲೀಕರ ಬಳಿ ಸಿಲುಕಿ ಸ್ವದೇಶಕ್ಕೆ ಹಿಂದಿರುಗಲಾಗದ ಪರಿಸ್ಥಿತಿಯಲ್ಲಿದ್ದು ಆತನನ್ನು ಬಿಡಿಸಿ ಸ್ವದೇಶಕ್ಕೆ ಕರೆತರುವಂತೆ ಪೋಷಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಬಾಳೆಹೊನ್ನೂರು ಸಮೀಪದ ಮಾಗುಂಡಿ-ಮಹಲ್ಗೋಡು ಗ್ರಾಮದ ಸುರೇಶ್, ಪ್ರೇಮಾ ದಂಪತಿ ಮೊದಲ ಪುತ್ರ ಅಶೋಕ್ (26) ವಿದೇಶದಲ್ಲಿ ಸಿಲುಕಿಕೊಂಡ ಯುವಕ. ಈತನಿಗೆ ಡಾಟಾ ಎಂಟ್ರಿ ಆಪರೇಟರ್ ಕೆಲಸ ಕೊಡಿಸುವುದಾಗಿ ನಂಬಿಸಿ ಎನ್ಆರ್ ಪುರ ಮೂಲದ ಭರತ್ ಮತ್ತು ನಿಕ್ಷೇಪ್ ಕಾಂಬೋಡಿಯಾಕ್ಕೆ 4 ತಿಂಗಳ ಹಿಂದೆ ರು.2 ಲಕ್ಷ ಹಣ ಪಡೆದು ವಿಸಿಟಿಂಗ್ ವೀಸಾದ ಮೂಲಕ ಕರೆದುಕೊಂಡು ಹೋಗಿದ್ದಾರೆ. ಕಾಂಬೋಡಿಯಾದಲ್ಲಿ ಕೆಲಸ ಪಡೆಯಲು ಸಹ ಹಣ ಕಟ್ಟಬೇಕು ಎಂದು ಪುನಃ 1.5 ಲಕ್ಷ ಹಣ ಪಡೆದಿದ್ದಾರೆ. ಆದರೆ ಡಾಟಾ ಎಂಟ್ರಿ ಆಪರೇಟರ್ ಕೆಲಸಕ್ಕೆ ಬದಲಾಗಿ ಅಶೋಕ್‌ನನ್ನು ಚೈನಾ ಮೂಲದ ಮ್ಯಾಟ್ರಿಮೋನಿ ಹೆಸರಿನ ಹಣ ವಂಚಿಸುವ ಕಂಪೆನಿ ಮಾಲೀಕನ ಬಳಿ ಬಿಟ್ಟು ಇವರು ಹೇಳುವ ಕೆಲಸ ಮಾಡು ಎಂದಿದ್ದಾರೆ. ಕೆಲಸಕ್ಕೆ ಸೇರಿದ ಬಳಿಕ ಯುವಕ ಅಶೋಕ್‌ಗೆ ಇದು ವಂಚನೆ ಜಾಲವಾಗಿದ್ದು, ವಿವಿಧ ಜನರ ಮೊಬೈಲ್‌ಗೆ ಕರೆ, ಮೆಸೇಜ್ ಮಾಡಿ ಹಣ ಲಪಟಾಯಿಸುವ ದಂಧೆ ಎಂದು ತಿಳಿದಿದೆ. ಆದರೆ ಯುವಕ ಅಶೋಕ್ ತಾನು ಈ ಕೆಲಸ ಮಾಡುವುದಿಲ್ಲ. ವಾಪಾಸ್ ಭಾರತಕ್ಕೆ ತೆರಳುತ್ತೇನೆ ಎಂದಾಗ ಕಂಪನಿ ಮಾಲೀಕ ಯುವಕನಿಗೆ ವಿಚಿತ್ರ ಶಿಕ್ಷೆ ನೀಡಿ ಬೆದರಿಸುತ್ತಾ ಆತನಿಂದ ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸಿಕೊಂಡಿದ್ದಾನೆ. ಕಳೆದ ಒಂದು ವಾರದಿಂದ ಯುವಕನನ್ನು ಬಲವಂತವಾಗಿ ಕೊಠಡಿಯೊಂದರಲ್ಲಿ ಕೂಡಿ ಹಾಕಿ, ನೀನು ಕೆಲಸ ಬಿಟ್ಟು ವಾಪಾಸ್ ಊರಿಗೆ ತೆರಳಬೇಕಾದರೆ ರು.13 ಲಕ್ಷ ಹಣ ನೀಡಬೇಕು. ಇಲ್ಲದಿದ್ದಲ್ಲಿ ನಿನ್ನನ್ನು ಎರಡು ದಿನದಲ್ಲಿ ಸಾಯಿಸು ವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಯುವಕನಿಂದ ಕುಟುಂಬಸ್ಥರಿಗೆ ಕರೆ ಮಾಡಿಸಿ ಹಣ ಕಳುಹಿಸಲು ಹೇಳುವಂತೆ ಒತ್ತಾಯಿಸಿದ್ದಾರೆ. ಪೋಷಕರಿಗೆ ಯುವಕ ಕರೆ ಮಾಡಿ ಈ ವಿಚಾರ ತಿಳಿಸುತ್ತಿದ್ದಂತೆ ಪೋಷಕರು ದಿಗ್ಬ್ರಮೆಗೊಳಪಟ್ಟಿದ್ದು, ತನ್ನ ಮಗನನ್ನು ವಾಪಾಸ್ ಊರಿಗೆ ಕರೆತರಲು ಹರಸಾಹಸ ಪಡುತ್ತಿದ್ದಾರೆ. ತಕ್ಷಣ ಈ ವಿಚಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ, ಎನ್ ಆರ್ ಐ ಸಮಿತಿಗೂ ದೂರು ನೀಡಿ ತಮ್ಮ ಮಗನನ್ನು ವಾಪಾಸ್ ಕರೆತರಿಸಿ ಕೊಡುವಂತೆ ಕೋರುತ್ತಿದ್ದಾರೆ. ಶನಿವಾರ ಯುವಕನ ಪೋಷಕರು ಸೇರಿದಂತೆ ಕುಟುಂಬಸ್ಥರು, ಗ್ರಾಮಸ್ಥರು ಬಾಳೆಹೊನ್ನೂರು ಠಾಣೆಗೆ ಮನವಿ ಸಲ್ಲಿಸಿ ಅಶೋಕ್‌ನನ್ನು ಕಾಂಬೋಡಿಯಾಕ್ಕೆ ಕರೆದುಕೊಂಡು ಹೋದ ನಿಕ್ಷೇಪ್, ಭರತ್ ಪೋಷಕರನ್ನು ಠಾಣೆಗೆ ಕರೆಯಿಸಿ ಅವರನ್ನು ವಿಚಾರಣೆ ಮಾಡಿ ಅಶೋಕ್‌ನನ್ನು ವಾಪಾಸ್ ಕರೆಯಿಸುವ ವ್ಯವಸ್ಥೆ ಮಾಡಬೇಕು ಎಂದು ಕೋರಿದರು. ಪಟ್ಟಣಕ್ಕೆ ಆಗಮಿಸಿದ ಮಾಜಿ ಸಚಿವ ಜೀವರಾಜ್ ಗೂ ಮನವಿ ಮಾಡಿ ಕೇಂದ್ರ ಸರ್ಕಾರದ ಮೂಲಕ ಒತ್ತಡ ತಂದು ನಮ್ಮ ಮಗನನ್ನು ವಾಪಾಸ್ ಕರೆಸಿಕೊಡಬೇಕು. ಇಲ್ಲದಿದ್ದರೆ ಅಲ್ಲಿ ಕೊಲೆಯಾಗುವ ಶಂಕೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಮಾಜಿ ಸಚಿವ ಜೀವರಾಜ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸಂಪರ್ಕಿಸಿ ಘಟನೆ ಮಾಹಿತಿ ನೀಡಿ ಸೂಕ್ತ ಕ್ರಮಕ್ಕೆ ತಿಳಿಸಲಾಗುವುದು ಎಂದರು. ಒಟ್ಟಾರೆಯಾಗಿ ಕೆಲಸ ಆಸೆಗಾಗಿ ತೆರಳಿದ ಗ್ರಾಮೀಣ ಯುವಕ ವಂಚನೆ ಜಾಲಕ್ಕೆ ಬಲಿಯಾಗಿ ತೊಂದರೆಗೆ ಸಿಲುಕಿದ್ದಾನೆ. --- ಕೋಟ್ ---- ಡಾಟಾ ಎಂಟ್ರಿ ಆಪರೇಟರ್ ಕೆಲಸ, ಹೆಚ್ಚು ಹಣದ ಆಸೆ ತೋರಿಸಿ ನನ್ನ ಮಗನನ್ನು ಭರತ್, ನಿಕ್ಷೇಪ್ ಕರೆದೊಯ್ದು ಕಾಂಬೋಡಿಯದಲ್ಲಿ ಬೇರೆಯವರಿಂದ ಹಣ ಪಡೆದು ವಂಚಕರಿಗೆ ಮಾರಾಟ ಮಾಡಿದ್ದಾರೆ. ಕೂಡಲೇ ಈ ಇಬ್ಬರ ಕುಟುಂಬಸ್ಥರನ್ನು ವಿಚಾರಣೆ ನಡೆಸಿದಲ್ಲಿ ನನ್ನ ಮಗನನ್ನು ವಾಪಾಸ್ ಕರೆತರಲು ಸಾಧ್ಯವಿದೆ. ಇಲ್ಲದಿದ್ದರೆ ಅವನ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿದೆ. ಸರ್ಕಾರ ನನ್ನ ಮಗನ ರಕ್ಷಣೆ ಮಾಡಿಕೊಡಬೇಕು. - ಸುರೇಶ್, ಯುವಕ ಅಶೋಕ್ ತಂದೆ. ಅಶೋಕ್ ತಂದೆ ಸುರೇಶ್ ನೀಡಿದ ದೂರು ಪಡೆಯಲಾಗಿದೆ. ಆದರೆ ಈ ಬಗ್ಗೆ ನಾವು ಹೆಚ್ಚಿನ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಸರ್ಕಾರ, ಅನಿವಾಸಿ ಭಾರತೀಯ ಸಮಿತಿ ಕ್ರಮಕೈಗೊಳ್ಳಬಹುದು. ನಾವು ಸಹಕಾರ ನೀಡಬಹುದಷ್ಟೆ. -ವಿ.ಟಿ.ದಿಲೀಪ್‌ಕುಮಾರ್, ಪಿಎಸ್‌ಐ. ಕಾಂಬೋಡಿಯಾ ಸೇರಿದಂತೆ ಕೆಲ ದೇಶಗಳು ತೀವ್ರ ಹಿಂದುಳಿದಿದ್ದು, ಇಲ್ಲಿಗೆ ಯುವಕರನ್ನು ಸುಳ್ಳು ಹೇಳಿ ಕೆಲವರು ಕರೆದೊಯ್ಯುತ್ತಿರುವ ವಂಚನೆ ಜಾಲಗಳು ಇವೆ. ವಿದೇಶಕ್ಕೆ ಕೆಲಸಕ್ಕೆ ಹೋಗುವ ಯುವಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಮೋಸದ ಜಾಲಕ್ಕೆ ಸಿಲುಕಿ ತೊಂದರೆಗೀಡಾಗುವ ಸಂಭವವಿದೆ. - ಮಹಮ್ಮದ್ ಹನೀಫ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ. ಅಶೋಕ್‌ನನ್ನು ಕರೆದೊಯ್ದ ಏಜೆನ್ಸಿಯವರು ಮೋಸ ಮಾಡಿ ಬೇರೆ ಕಂಪೆನಿಗೆ ಕಳಿಸಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ಬಂದಿದ್ದು, ಕೋಲಾರದ ಯುವಕನೊಬ್ಬ ಇದೇ ರೀತಿ ಮೋಸದ ಜಾಲಕ್ಕೆ ಸಿಲುಕಿದ್ದಾನೆ. ಈ ಬಗ್ಗೆ ಈಗಾಗಲೇ ನಾನು ಭಾರತ ಹಾಗೂ ಕಾಂಬೋಡಿಯಾ ರಾಯಭಾರ ಕಚೇರಿಯೊಂದಿಗೆ ಮಾತನಾಡಿ ಯುವಕನನ್ನು ವಾಪಾಸ್ ಕರೆತರುವ ಪ್ರಯತ್ನದಲ್ಲಿದ್ದೇವೆ. ಶನಿವಾರ, ಭಾನುವಾರ ರಜೆ ಇರುವ ಕಾರಣ ಸಂಪರ್ಕ ಸಾಧ್ಯವಾಗುತ್ತಿಲ್ಲ. ಯುವಕನನ್ನು ಕಳುಹಿಸಿದ ಏಜೆನ್ಸಿ ವಿವರ ಸಿಕ್ಕಿದರೆ ಅವರ ಮೇಲೆ ಕ್ರಮ ಸಾಧ್ಯ. ಇಂತಹ ಪ್ರಕರಣದಲ್ಲಿ ಅವರ ಲೈಸೆನ್ಸ್ ಸಹ ರದ್ದಾಗಲಿದೆ. ವಿದೇಶಾಂಗ ವ್ಯವಹಾರ ಖಾತೆ ಸಚಿವರ ಗಮನಕ್ಕೆ ತರಲಾಗಿದೆ. ಯುವಕನ ಕುಟುಂಬಸ್ಥರು ಆತಂಕಕ್ಕೆ ಒಳಗಾಗುವುದು ಬೇಡ. ಏಜೆನ್ಸಿಯವರ ಮೋಸದಿಂದ ಯುವಕ ಬೇರೆ ಕಂಪೆನಿಯಲ್ಲಿ ಸಿಲುಕಿದ್ದು ಅವರ ಗುತ್ತಿಗೆಯ ನಿಯಮಗಳ ಪ್ರಕಾರ ಆತನನ್ನು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಇದೆ. -ಡಾ. ಆರತಿ ಕೃಷ್ಣ, ಅನಿವಾಸಿ ಭಾರತೀಯ ಸಮಿತಿ ಅಧ್ಯಕ್ಷೆ. ೨೮ಬಿಹೆಚ್‌ಆರ್ ೨: ವಂಚನೆಗೊಳಗಾದ ಯುವಕ ಅಶೋಕ್ ೨೮ಬಿಹೆಚ್‌ಆರ್ ೩: ಬಾಳೆಹೊನ್ನೂರು ಠಾಣೆಗೆ ದೂರು ನೀಡಲು ಬಂದಿದ್ದ ಯುವಕ ಅಶೋಕ್ ಕುಟುಂಬಸ್ಥರು, ಸಾರ್ವಜನಿಕರು.