ಯುವ ಜನಾಂಗ ದುಷ್ಚಟಗಳಿಂದ ದೂರವಿರಬೇಕು

| Published : Feb 27 2025, 12:34 AM IST

ಸಾರಾಂಶ

ಯಾವುದನ್ನು ಸೇವಿಸಿದರೆ ನಶೆ ಬರುತ್ತದೆಯೋ ಅದನ್ನು ಮಾದಕ ವಸ್ತು ಅಥವಾ ಮಾದಕ ದ್ರವ್ಯ ಎನ್ನಲಾಗುತ್ತದೆ. ಯುವಜನಾಂಗ ದುಷ್ಚಟಗಳಿಂದ ದೂರವಿದ್ದು, ಸದೃಢ ಸಮಾಜಕ್ಕೆ ಕೊಡುಗೆ ನೀಡಬೇಕೆಂದು ಮನೋ ವೈದ್ಯಕೀಯ ಸಾಮಾಜಿಕ ಕಾರ್ಯಕರ್ತರಾದ ಪದ್ಮರೇಖಾ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಯಾವುದನ್ನು ಸೇವಿಸಿದರೆ ನಶೆ ಬರುತ್ತದೆಯೋ ಅದನ್ನು ಮಾದಕ ವಸ್ತು ಅಥವಾ ಮಾದಕ ದ್ರವ್ಯ ಎನ್ನಲಾಗುತ್ತದೆ. ಯುವಜನಾಂಗ ದುಷ್ಚಟಗಳಿಂದ ದೂರವಿದ್ದು, ಸದೃಢ ಸಮಾಜಕ್ಕೆ ಕೊಡುಗೆ ನೀಡಬೇಕೆಂದು ಮನೋ ವೈದ್ಯಕೀಯ ಸಾಮಾಜಿಕ ಕಾರ್ಯಕರ್ತರಾದ ಪದ್ಮರೇಖಾ ಕರೆ ನೀಡಿದರು.

ಪಟ್ಟಣದ ಸಂಪೂರ್ಣ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ರಿಸರ್ಚ್ ಸೆಂಟರ್‌ನಲ್ಲಿ ಬೆಂಗಳೂರಿನ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಮಾದಕ ವಸ್ತುಗಳ ವ್ಯಸನದಿಂದ ಮಾನಸಿಕ ಆರೋಗ್ಯ ಹಾಳಾಗುತ್ತದೆ, ಸಾಧಿಸುವ ಹಾದಿಯಲ್ಲಿರುವ ಯುವಜನಾಂಗ ವ್ಯಸನ ಮುಕ್ತರಾಗಿ ಸಾಧನೆಯತ್ತ ಗಮನ ಹರಿಸಬೇಕು. ಮಾದಕ ವಸ್ತುಗಳಲ್ಲಿ ಕಾನೂನು ಬದ್ಧ ಮಾದಕ ವಸ್ತುಗಳು, ಅಕ್ರಮ ಮಾದಕ ವಸ್ತುಗಳು ಹಾಗೂ ವೈದ್ಯರು ಸೂಚಿಸಿದ ಅಥವಾ ಅಂಗಡಿಗಳಲ್ಲಿ ದೊರೆಯುವ ಔಷಧಗಳ ದುರ್ಬಳಕೆ ಎಂದು ವಿಂಗಡಿಸಲಾಗುತ್ತದೆ. ಮಾದಕ ವಸ್ತುಗಳನ್ನು ಕುತೂಹಲಕ್ಕಾಗಿ, ಸ್ನೇಹಿತರ ಒತ್ತಡಕ್ಕೆ ಬಳಸಲು ಪ್ರಾರಂಭಿಸಿದರೆ ಇದು ವ್ಯಸನವಾಗಿ ಮಾರ್ಪಡುತ್ತದೆ.

ವ್ಯಸನವು ಮಾದಕ ವಸ್ತು, ಮಾದಕ ದ್ರವ್ಯಗಳಲ್ಲದೇ, ಕಂಪ್ಯೂಟರ್, ಟಿವಿ, ಮೊಬೈಲ್‌ಗಳನ್ನು ಅತಿ ಹೆಚ್ಚು ಬಳಸುವುದನ್ನು ಸಹ ಸ್ಕ್ರೀನ್ ಅಡಿಕ್ಷನ್ ಎಂದು ಗುರುತಿಸಲಾಗುತ್ತದೆ ಎಂದರು.

ದೇಶದಲ್ಲಿ ಶೇಕಡ 30 ರಷ್ಟು ಪುರುಷರು ಹಾಗೂ ಶೇಕಡ 5 ರಷ್ಟು ಮಹಿಳೆಯರು ಮದ್ಯಪಾನ ವ್ಯಸನಿಗಳಿದ್ದಾರೆ. 2005ರ ಅಂಕಿ ಅಂಶದ ಪ್ರಕಾರ ಶೇ. 42 ರಷ್ಟು ಪುರುಷರು ಹಾಗೂ ಶೇ. 14.2ರಷ್ಟು ಮಹಿಳೆಯರು ತಂಬಾಕು ವ್ಯಸನಿಗಳಿದ್ದಾರೆ. ಶೇ. 28.6 ರಷ್ಟು ಯುವ ಜನತೆ ತಂಬಾಕನ್ನು ಬಳಸುತ್ತಿದ್ದಾರೆ. 2.35 ಮಿಲಿಯನ್ ಜನ ಪ್ರತಿ ವರ್ಷ ಸಾವಿಗೀಡಾಗುತ್ತಿದ್ದಾರೆ.

8.75 ಮಿಲಿಯನ್ ಜನರು ಮಾದಕ ದ್ರವ್ಯ ವ್ಯಸನಿಗಳಿದ್ದಾರೆ ಎಂಬ ಆತಂಕಕಾರಿ ಅಂಕಿ- ಅಂಶಗಳನ್ನು ತಿಳಿಸಿದರು. 1985 ಎನ್.ಡಿ.ಪಿ.ಎಸ್. ಕಾಯ್ದೆಯ ಪ್ರಕಾರ ಮಾದಕ ದ್ರವ್ಯಗಳ ಸೇವನೆ, ಸಾಗಾಣಿಕೆ, ಕೊಂಡುಕೊಳ್ಳುವಿಕೆ, ಸಂಗ್ರಹಣೆ ಮತ್ತು ಉತ್ಪಾದನೆ ಎಲ್ಲವೂ ಸಹ ಶಿಕ್ಷಾರ್ಹ ಅಪರಾಧಗಳಾಗಿರುತ್ತವೆ. 2003ರ ಕೋಟ್ಪಾ ಕಾಯ್ದೆಯ ಪ್ರಕಾರ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳನ್ನು ನಿಯಂತ್ರಿಸುವ ಕಾಯ್ದೆಯಾಗಿದ್ದು, 18 ವರ್ಷದ ಒಳಗಿನ ಮಕ್ಕಳು ಇದನ್ನು ಬಳಸುವುದು ಶೈಕ್ಷಣಿಕ ಸಂಸ್ಥೆಗಳ 100 ಯಾರ್ಡ್ ಪ್ರದೇಶದಲ್ಲಿ ತಂಬಾಕಿನ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು, ತಂಬಾಕಿನ ಉತ್ಪನ್ನಗಳಿಗೆ ಜಾಹೀರಾತುಗಳನ್ನು ನೀಡುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆಯನ್ನು ಈ ಕಾಯ್ದೆಯು ನಿಷೇಧಿಸುತ್ತದೆ ಎಂದು ಹೇಳಿದರು.

ಹಲವಾರು ಕಾರಣಗಳಿಂದ ವ್ಯಸನದ ವಿಷ ಚಕ್ರಕ್ಕೆ ಸಿಲುಕಿದರೆ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯಕ್ಕೆ ದುಷ್ಪರಿಣಾಮ ಬೀಳುತ್ತದೆ. ಆರೋಗ್ಯವು ಒಮ್ಮೆ ಹದಗೆಟ್ಟರೆ ಅದನ್ನು ಸರಿ ಮಾಡುವುದು ಕಷ್ಟಕರವಾಗಿರುತ್ತದೆ. ಆದ್ದರಿಂದ ವ್ಯಸನಿಗಳಾಗದೆ ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಿ. ವ್ಯಸನದಿಂದ ಹೊರಬರಲು ನಿಮ್ಮ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಹಾಗೂ ಟೆಲಿ ಮನಸ್ ಸಹಾಯವಾಣಿ ಸಂಖ್ಯೆ 14416 ಕ್ಕೆ ಸಂಪರ್ಕಿಸಿ ಎಂದು ಪದ್ಮಾರೇಖಾ ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಚ್ .ಜಿ.ರವಿರಾಜ್, ಮುದುಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಸಾದ್ ಮಾತನಾಡಿದರು.

ಸಹಾಯಕ ಪ್ರೊಫೇಸರ್ ಡಾ. ಸುಧಾ, ಸಂಪೂರ್ಣ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ರಿಸರ್ಚ್ ನ ಪ್ರಾಂಶುಪಾಲರಾದ ಭರತೇಶ್, ಡೀನ್ ವಾಸುದೇವನ್ ಉಪಸ್ಥಿತರಿದ್ದರು.