ಸಾರಾಂಶ
ಡಂಬಳದಲ್ಲಿ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಶ್ರೀ ಸದ್ಭಾವನಾ ಪಾದಯಾತ್ರೆಡಂಬಳ: ಹಿರಿಯರು, ಶರಣರು ಬಹಳಷ್ಟು ಚಿಂತನೆ ನಡೆಸಿದರೂ ನಮ್ಮ ಜೀವನ ಯಾಕ ಕೆಟ್ಟಿದೆ ಅಂದರೆ ನಮ್ಮ ವಿಚಾರಗಳು ಕೆಟ್ಟಿವೆ. ವಿಚಾರ ಕೆಟ್ಟಿದ್ದಕ್ಕ ಜೀವನ ಕೆಟ್ಟಿದೆ, ವಿಚಾರ ಒಳ್ಳೆಯವು ಇದ್ದರೆ ಜೀವನ ಸುಧಾರಿಸುತ್ತವೆ. ಸಾಮಾನ್ಯರ ಜೀವನ ದೃಷ್ಟಿಕೋನಕ್ಕೂ ಒಬ್ಬ ಅನುಭಾವಿ ಜೀವನ ದೃಷ್ಟಿಕೋನ ನೋಡುವುದು ಬಹಳ ವ್ಯತ್ಯಾಸ ಇದೆ, ಈ ನಾಡಿನ ಶರಣ ಪರಂಪರೆಯಲ್ಲಿ ಅಲ್ಲಮ ಪ್ರಭುಗಳು ಬಹಳ ದೊಡ್ಡವರು ಎಂದು ಕೊಪ್ಪಳದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ನುಡಿದರು.
ಡಂಬಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಸದ್ಭಾವನಾ ಪಾದಯಾತ್ರೆಯಲ್ಲಿ ಹೇಳಿದರು. ಬಳಗಾನೂರ ಮಠದ ಚಿಕೇನಕೊಪ್ಪ ಶರಣರಿಂದ ವಚನಗಳ ಮತ್ತು ಭಜನಾ ಪದಗಳ ಮೂಲಕ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಸಾಗಿ ಜಗದ್ಗುರು ತೋಂಟದ ಮದರ್ಧನಾರಿಶ್ವರ ಮಠದ ಆವರಣದಲ್ಲಿ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿ ಮಾತನಾಡಿದರು.ನಾವೆಲ್ಲ ಡಾ. ಲಿಂ ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಗಳ ಭಾಷಣ ಕೇಳಲಿಕ್ಕೆ ಹೋಗುತ್ತಿದ್ದೆವು. ಅವರು ಡಂಬಳದಲ್ಲಿ ದಾಳಿಂಬೆ ಬೆಳೆಸಿರುವ ಕುರಿತು ಕೃಷಿ ಪರಿಸರ ಸಂರಕ್ಷಣೆ ಕುರಿತು ಬಹಳ ಒತ್ತಿಹೇಳುತ್ತಿದ್ದರು. ಅವರ ಕೊಡುಗೆ ಅಪಾರ, ಅವರ ವಿಚಾರ ಸದಾ ಕಾಲ ಇರುತ್ತವೆ ಎಂದು ಹೇಳಿದರು.
ನಮ್ಮ ದೃಷ್ಟಿಯಲ್ಲಿ ಸುಖ, ದುಃಖ ಯಾಕೆ ಕಾಣಿಸಿಕೊಂಡಿವೆ ಅಂದರೆ ನಮ್ಮ ಜೀವನದಲ್ಲಿ ಅವರು ದೊಡ್ಡವರು ನಾವು ಸಣ್ಣವರು, ಅವರು ಬಹಳ ಶ್ರೀಮಂತರು- ನಾವು ಬಡವರು, ಅವರು ಶ್ರೇಷ್ಠ ನಾವು ಕನಿಷ್ಠ ಇದ್ದೇವೆ ಎನ್ನುವ ಕೀಳರಿಮೆ ನಮ್ಮಲ್ಲಿದೆ. ಈ ಭಾವನೆಗಳು ಅಲ್ಲಮಪ್ರಭುಗಳು ಹೇಳತಾರೆ ನಿಸರ್ಗದ ದೇವನ ಸೃಷ್ಟಿಯಲ್ಲಿ ಇಲ್ಲಿ ಯಾವುದು ಸಣ್ಣದು, ಯಾವುದು ದೊಡ್ಡದು ಯಾವುದು ಶ್ರೇಷ್ಠ, ಯಾವುದು ಶ್ರೀಮಂತ ಎಂಬುದಿಲ್ಲ, ಎಲ್ಲವು ಒಂದೇ ಎಂದರು.ಆಕಾಶ ಮತ್ತು ಭೂಮಿಯಲ್ಲಿ ಕನಿಷ್ಠ - ಗರಿಷ್ಠ ಎಂಬ ಭೇದಭಾವ ಇಲ್ಲ. ಆಕಾಶದ ಮೋಡಗಳು ಕಟ್ಟಬೇಕಾದರೂ ಭೂಮಿಯ ಮೇಲಿನ ನದಿಗಳು, ಸಮುದ್ರದ ನೀರು ಆವಿಯಾದಾಗಲೇ ಮೋಡಗಳು ಕಟ್ಟುತ್ತವೆ. ಮಳೆ ನೀರು ಬಿದ್ದಾಗಲೇ ಭೂಮಿ ತಾಯಿ ಬೆಳೆ ಹೊಂದಲು ಸಾಧ್ಯ. ಹಾಗಾಗಿ ಯಾವುದು ಶ್ರೇಷ್ಠ- ಕನಿಷ್ಠ ಇಲ್ಲವೇ ಇಲ್ಲ.
ಹೂವು ಹೇಳಿತು ನಾನು ಶ್ರೇಷ್ಠ, ದೇವರ ಮೇಲೆ, ಸ್ವಾಮೀಜಿಗಳ ಮೇಲೆ ಹೋಗಿ ಕುಂದಿರುತ್ತೇನೆ, ಬೇರು ಹೇಳಿತು ನಾಳೆಯಿಂದ ನೀರನ್ನೇ ಸಪ್ಲೈ ಮಾಡೋದಿಲ್ಲ ಎಂದು ಹೇಳಿದರೆ .ಭೂಮಿಯ ಒಳಗೆ ಇದ್ದು ನೀರು ಒದಗಿಸುವ ಕೆಲಸ ಮಾಡುವ ಬೇರು ಕೂಡಾ ಶ್ರೇಷ್ಠ ಹಾಗೆ ಪ್ರತಿಯೊಬ್ಬರೂ ಶ್ರೇಷ್ಠ ಎಂದು ಶ್ರೀಗಳು ಮಾರ್ಮಿಕವಾಗಿ ಹೇಳಿದರು.ನಾವು ಹೇಳಬಹುದು, ಸೂರ್ಯ ಶ್ರೇಷ್ಠ, ಸೂರ್ಯನಿಗೆ ಚಿಂತೆ ಆಯಿತು, ನಾನು ಮುಳಗಿದ ಮೇಲೆ ರಾತ್ರಿ ನಡೆಯೋದ ಹೇಗೆ, ಅವಾಗ ಸೂರ್ಯನಿಗೆ ಪಣತಿಯ ದೀಪ ಹೇಳಿತು, ನಾನು ಮನೆ ಬೆಳಗಿಸತೀನಿ. ಸೂರ್ಯ ಹೇಳಿದ ನಾನು ಎಲ್ಲಿ, ನೀನು ಎಲ್ಲಿ ನನ್ನ ವೈಭೋಗ ನೋಡು ಪಣತಿ. ನೀನು ಇಷ್ಟೇ ಇದಿ ಎಂದು ಸೂರ್ಯ ಹೇಳಿದ. ಪಣತಿ ಹೇಳಿತು ಮನೆಯ ಕತ್ತಲೆಯ ಕಳೆಯಬೇಕಾದರೆ ನಾನೇ ಬೇಕು, ಸೂರ್ಯ. ನಿನ್ನ ಪಾಡಿಗೆ ನೀನೇ ಶ್ರೇಷ್ಠ, ನನ್ನ ಪಾಡಿಗೆ ನಾನೇ ಶ್ರೇಷ್ಠ. ನೀನು ಇಲ್ಲದ ಸಮಯದಲ್ಲಿ ನಾನು ಶ್ರೇಷ್ಠ ಆಗುತ್ತೇನೆ ಎಂದು ಹೇಳಿತು. ದೊಡ್ಡವರು ಕುಂಟಾಡಬಾರದು ಎಂದರೆ ಸಣ್ಣವರು ಆಸರೆ ಬೇಕು ಎಂದರು.
ಭೂಮಿ ತಾಯಿಗೆ ಲಕ್ಷಾಂತರ ಮಳೆ ಹನಿ ನೀರು ಬಿದ್ದಾಗ ಸಂತೋಷ ಆಗುವುದಿಲ್ಲ, ಯಾವಾಗ ಸಂತೋಷ ಆಗತಾಳ ಅಂದರ ರೈತರ ಬೇವರ ಹನಿಗಳು ಭೂಮಿ ಮೇಲೆ ಬಿದ್ದಾಗ ಸಂತೋಷ ಆಗುತ್ತಾಳೆ ಎಂದು ಹೇಳಿದರು.ಗ್ರಾಮದ ಪ್ರಮುಖ ಬೀದಿಗಳನ್ನು ಸ್ವಚ್ಛಗೊಳಿಸಿ ಮಹಿಳೆಯರು ರಂಗೋಲಿಯನ್ನು ಬಿಡಿಸಿರುವುದು ಕಂಡು ಬಂತು.
ಕಾರ್ಯಕ್ರಮದಲ್ಲಿ ಹೂವಿನಹಡಗಲಿಯ ಹಿರೇಶಾಂತವೀರ ಶ್ರೀ, ಹೊಸಹಳ್ಳಿಯ ಬೂದೀಶ್ವರ ಸಂಸ್ಥಾನ ಮಠದ ಅಭಿನವ ಬೂದೀಶ್ವರ ಸ್ವಾಮೀಜಿ, ಹರ್ಲಾಪೂರದ ಕೊಟ್ಟೂರೇಶ್ವರ ಶ್ರೀ, ಮಾಜಿ ಶಾಸಕ ಡಿ.ಆರ್. ಪಾಟೀಲ್, ಮಿಥುನ ಜಿ. ಪಾಟೀಲ್, ಶಿವಾನಂದ ಪಟ್ಟಣಶೆಟ್ಟರ, ಜಿ.ವಿ. ಹಿರೇಮಠ, ಗ್ರಾಪಂ ಅಧ್ಯಕ್ಷೆ ಶಿವಲೀಲಾ ಬಂಡಿಹಾಳ, ಪ್ರವಚನ ವ್ಯವಸ್ಥಾಪಕರು ಸಂಗಪ್ಪ ಗಡಗಿ, ಕೆ.ಬಿ. ಕಂಬಳಿ, ವಿ.ಎಸ್. ಯರಾಶಿ, ಬಿ.ಎಸ್. ಬಂಡಿ, ಬಸುರಡ್ಡಿ ಬಂಡಿಹಾಳ, ಕೆ.ಕೆ. ಬಂಡಿ, ಮಹೇಶ ಗಡಗಿ, ಆರ್.ಜಿ. ಕೊರ್ಲಹಳ್ಳಿ, ಮುತ್ತಣ್ಣ ಕೊಂತಿಕಲ್ಲ, ಮಂಜುನಾಥ ಸಂಜೀವಣ್ಣವರ, ಶಂಕ್ರಪ್ಪ ಗಡಗಿ, ಬಶೀರಹಮ್ಮದ ತಾಂಬೋಟಿ, ಮರಿಯಪ್ಪ ಸಿದ್ದಣ್ಣವರ, ಎಲ್ಲಾ ಗ್ರಾಪಂ ಸರ್ವ ಸದಸ್ಯರು, ಗ್ರಾಪಂ ಸಿಬ್ಬಂದಿ ವರ್ಗ, ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮದ ಸಾವಿರಾರು ಭಕ್ತರು ಇದ್ದರು.