ಪರಶುರಾಮ ಸಂಸ್ಕೃತಿಯಲ್ಲೇ ಮರ್ಯಾದಾ ಹತ್ಯೆ ಇದೆ : ಡಾ.ತಾರಿಣಿ ಶುಭದಾಯಿನಿ

| Published : Dec 23 2024, 01:03 AM IST

ಪರಶುರಾಮ ಸಂಸ್ಕೃತಿಯಲ್ಲೇ ಮರ್ಯಾದಾ ಹತ್ಯೆ ಇದೆ : ಡಾ.ತಾರಿಣಿ ಶುಭದಾಯಿನಿ
Share this Article
  • FB
  • TW
  • Linkdin
  • Email

ಸಾರಾಂಶ

‘ಪಿತೃ ಪ್ರಧಾನ ಸಮಾಜಕ್ಕೊಂದು ಪವರ್‌ ಸ್ಟ್ರಕ್ಚರ್ ಇದೆ. ಇಲ್ಲಿ ಮೌಲ್ಯಗಳಿಗೆ ಎರವಾಗುವುದನ್ನು ಶಿಕ್ಷಿಸುವ ಪ್ರವೃತ್ತಿ ಇದೆ. ಆದರೆ ಈ ಶಿಕ್ಷೆಗೆ ಹೆಣ್ಣೇ ಬಲಿಪಶುವಾಗುತ್ತಿರುವುದು ಅವ್ಯಾಹತವಾಗಿ ನಡೆದು ಬರುತ್ತಿದೆ. ಉತ್ತರ ಭಾರತದ ಪಂಚಾಯತ್ ವ್ಯವಸ್ಥೆಗಳಲ್ಲಿ ಹೆಣ್ಣಿಗೆ ಜೀವ ತೆಗೆಯುವ ಶಿಕ್ಷೆಯನ್ನೂ ನೀಡಲಾಗುತ್ತದೆ. ಆಫ್ರಿಕ ದೇಶಗಳಲ್ಲಿ ಹೆಣ್ಣನ್ನು ಮಾನಭಂಗ ಮಾಡುವ ಮೂಲಕ ಶಿಕ್ಷಿಸುವ ಪದ್ಧತಿ ಇದ್ದು, ಇದಕ್ಕೆಂದೇ ಬಾಡಿಗೆಗೆ ಗಂಡಸರನ್ನು ನೇಮಿಸಲಾಗುತ್ತದೆ’

ಪ್ರಿಯಾ ಕೆರ್ವಾಶೆ

ಕೆಂಪನಂಜಮ್ಮಣ್ಣಿ ಪ್ರಧಾನ ವೇದಿಕೆ, ಮಂಡ್ಯ

‘ನಮ್ಮ ಸಂಸ್ಕೃತಿಯಲ್ಲೇ ಮರ್ಯಾದಾ ಹತ್ಯೆಗೆ ಹೆಣ್ಣು ಬಲಿಯಾದ ಪ್ರಸ್ತಾಪಗಳಿವೆ. ಇಲ್ಲಿ ಪ್ರಧಾನವಾಗಿ ಬರುವ ಪರಶುರಾಮ, ಸಣ್ಣ ವಿವೇಚನೆಯನ್ನೂ ಮಾಡದೇ ತಾಯಿ ತಲೆ ಕಡಿದುಹಾಕುತ್ತಾನೆ. ಆಮೇಲೆ ಅದಕ್ಕೊಂದಿಷ್ಟು ಸ್ಪಷ್ಟೀಕರಣ ನೀಡುತ್ತಾನೆ. ಜನಪದ ಉಲ್ಲೇಖವೊಂದರಲ್ಲಿ ಗಂಡೊಬ್ಬ, ಹೆಣ್ಣನ್ನು ನೋಡಿದರೆ ಆ ಹೆಣ್ಣನ್ನೇ ಬಂಡೆಯ ಬದಿಗೆ ಕರೆದೊಯ್ದು ಕೊಂದು ಹಾಕುವ ಪರಂಪರೆ ನಮ್ಮಲ್ಲಿತ್ತು ಎಂಬ ಮಾತು ಬರುತ್ತದೆ. ಹೀಗೆ ವಿವೇಚನ ಇಲ್ಲದೆ ಹೆಣ್ಣನ್ನು ಕೊಲ್ಲುವ ಪ್ರವೃತ್ತಿ ನಮ್ಮ ಸಂಸ್ಕೃತಿಯಲ್ಲೇ ಹಾಸು ಹೊಕ್ಕಾಗಿದೆ’

ಇದು ‘ಸ್ತ್ರೀ ಎಂದರೆ ಅಷ್ಟೇ ಸಾಕೇ’ ಗೋಷ್ಠಿಯಲ್ಲಿ ತಾರಿಣಿ ಶುಭದಾಯಿನಿ ಆಡಿರುವ ಮಾತುಗಳು. ಈ ಗೋಷ್ಠಿಗಳಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ಹಲವು ಬಗೆಯ ದೌರ್ಜನ್ಯಗಳ ಬಗ್ಗೆ ಲೇಖಕಿಯರು ಗಮನ ಸೆಳೆದದ್ದು ವಿಶೇಷವಾಗಿತ್ತು.

‘ಪಿತೃ ಪ್ರಧಾನ ಸಮಾಜಕ್ಕೊಂದು ಪವರ್‌ ಸ್ಟ್ರಕ್ಚರ್ ಇದೆ. ಇಲ್ಲಿ ಮೌಲ್ಯಗಳಿಗೆ ಎರವಾಗುವುದನ್ನು ಶಿಕ್ಷಿಸುವ ಪ್ರವೃತ್ತಿ ಇದೆ. ಆದರೆ ಈ ಶಿಕ್ಷೆಗೆ ಹೆಣ್ಣೇ ಬಲಿಪಶುವಾಗುತ್ತಿರುವುದು ಅವ್ಯಾಹತವಾಗಿ ನಡೆದು ಬರುತ್ತಿದೆ. ಉತ್ತರ ಭಾರತದ ಪಂಚಾಯತ್ ವ್ಯವಸ್ಥೆಗಳಲ್ಲಿ ಹೆಣ್ಣಿಗೆ ಜೀವ ತೆಗೆಯುವ ಶಿಕ್ಷೆಯನ್ನೂ ನೀಡಲಾಗುತ್ತದೆ. ಆಫ್ರಿಕ ದೇಶಗಳಲ್ಲಿ ಹೆಣ್ಣನ್ನು ಮಾನಭಂಗ ಮಾಡುವ ಮೂಲಕ ಶಿಕ್ಷಿಸುವ ಪದ್ಧತಿ ಇದ್ದು, ಇದಕ್ಕೆಂದೇ ಬಾಡಿಗೆಗೆ ಗಂಡಸರನ್ನು ನೇಮಿಸಲಾಗುತ್ತದೆ’ ಎಂದು ತಾರಿಣಿ ಹೇಳಿದರು.

‘ಇಂದಿನ ಆಧುನಿಕ ಕಾಲದಲ್ಲೂ ಶುದ್ಧೀಕರಣದ ನೆಪದಲ್ಲಿ ಮರ್ಯಾದಾ ಹತ್ಯೆಗಳು ನಡೆಯುತ್ತವೆ. ಮರ್ಯಾದೆಗೆ ಭಂಗ ತಂದವರನ್ನು ಹತ್ಯೆ ಮಾಡುವ ಮೂಲಕ ಶುದ್ಧೀಕರಣ ಮಾಡುತ್ತೇವೆ ಎಂಬ ವಿಕೃತ ಮನಸ್ಥಿತಿ ಬೆಳೆಯುತ್ತಿರುವುದು ವಿಪರ್ಯಾಸ’ ಎಂದೂ ಅಭಿಪ್ರಾಯಪಟ್ಟರು.

ಆಶಯ ಭಾಷಣ ಮಾಡಿದ ಹಿರಿಯ ಲೇಖಕಿ ಹೇಮಾ ಪಟ್ಟಣಶೆಟ್ಟಿ, ‘ಇಂದು ವಿವಾಹದ ನೆವದಲ್ಲಿ ಹೆಣ್ಣುಮಕ್ಕಳ, ಅಪ್ರಾಪ್ತರ ಮಾರಾಟ ಅವ್ಯಾಹತವಾಗಿ ನಡೆಯುತ್ತದೆ. ಅದರಲ್ಲೂ ಮೈನೆರೆಯದ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಪೈಶಾಚಿತ ಕೃತ್ಯ ಬೆಚ್ಚಿಬೀಳಿಸುತ್ತದೆ. ಇನ್ನೊಂದೆಡೆ ಹಸುಗಳಿಗೆ ಅಧಿಕ ಹಾಲಿಗಾಗಿ ಕೆಚ್ಚಲು ಹಿಗ್ಗುವಂತೆ ಮಾಡುವ ಹಾರ್ಮೋನಲ್ ಇಂಜೆಕ್ಷನ್‌ಗಳಿರುವಂತೆ ಎಳೆಯ ವಯಸ್ಸಿನ ಹೆಣ್ಣುಮಕ್ಕಳಿಗೆ ಹಾರ್ಮೋನಲ್ ಇಂಜೆಕ್ಷನ್ ಕೊಟ್ಟು ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವುದು ನೋವು ತರುವ ಸಂಗತಿ’ ಎಂದರು.

ಧೈರ್ಯ ತುಂಬುವುದು ಸದ್ಯದ ಅಗತ್ಯ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ, ‘ಬಳ್ಳಾರಿಯ ಹಳ್ಳಿಯೊಂದರ ಶಾಲೆಗೆ ಹೋಗಿದ್ದೆ. ಅಲ್ಲಿನ ಮಕ್ಕಳನ್ನು ಮಾತನಾಡಿಸಿದಾಗ ಏಳು ವರ್ಷದ ಬಾಲೆಯೊಬ್ಬಳು ನಾನು ಚೆನ್ನಾಗಿ ಕಲಿತು ಅಪ್ಪ ಮಾಡಿರುವ ಸಾಲ ತೀರಿಸ್ತೀನಿ ಅಂದಳು. ಭ್ರೂಣ ಹತ್ಯೆ ಮೂಲಕ ಇಂಥ ಅಂತಃಕರಣದ ಹೆಣ್ಣುಮಕ್ಕಳನ್ನೇ ಮುಗಿಸಲು ಹೊರಡುತ್ತಿರುವುದು ನಾಚಿಕೆಗೇಡು. ಹೆಣ್ಣುಮಕ್ಕಳಲ್ಲಿ ಧೈರ್ಯ ತುಂಬುವುದು ಸದ್ಯದ ಅಗತ್ಯ. ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ಈ ಬಗ್ಗೆ ಹೆಣ್ಣುಮಕ್ಕಳು ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಲು ಅಂಜಬಾರದು. ನಮ್ಮ ರಾಜಕಾರಣಿಗಳು ನಾಚಿಕೆ ಇಲ್ಲದೆ ಜೈಲಿನಲ್ಲಿ ಕಾಲಕ್ಷೇಪ ಮಾಡುತ್ತಿರುವಾಗ ತಮ್ಮ ಮೇಲಾಗುವ ಅನ್ಯಾಯದ ವಿರುದ್ಧ ಪೊಲೀಸ್‌ ಸ್ಟೇಷನ್‌ಗೆ ಹೋಗಲು ಹೆಣ್ಣುಮಕ್ಕಳಿಗೆ ಮುಜುಗರ ಯಾಕೆ’ ಎಂದೂ ಅವರು ಪ್ರಶ್ನಿಸಿದರು.

ಈ ವೇಳೆ ಸುಮತಿ ಜಿ. ಅವರು ‘ಭ್ರೂಣ ಹತ್ಯೆ’ ವಿಷಯ ಮಂಡನೆ ಮಾಡಿದರು. ‘ವರ್ತಮಾನದ ತಲ್ಲಣಗಳು’ ಎಂಬ ವಿಚಾರವಾಗಿ ಡಾ.ಶುಭಶ್ರೀ ಪ್ರಸಾದ್ ಮಾತನಾಡಿದರು.