ಸಾರಾಂಶ
ಬಿ.ಶ್ರೀರಾಮುಲು ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕಡೆ ವಲಸೆ ಹೋದ ಬೆನ್ನಲ್ಲೇ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಅಕ್ರಮ ಗಣಿಗಾರಿಕೆ ಪ್ರಕರಣ ಸಾಬೀತು ಆಗಿದ್ದರಿಂದ ಜೈಲು ಪಾಲಾಗಿರುವುದು ಗಣಿ ಜಿಲ್ಲೆಯ ಕಮಲ ಪಾಳಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಬಳ್ಳಾರಿ : ರಾಜಕೀಯ ಭವಿಷ್ಯದ ನೆಲೆ ಕಂಡುಕೊಳ್ಳಲು ಮಾಜಿ ಸಚಿವ ಬಿ.ಶ್ರೀರಾಮುಲು ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕಡೆ ವಲಸೆ ಹೋದ ಬೆನ್ನಲ್ಲೇ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಅಕ್ರಮ ಗಣಿಗಾರಿಕೆ ಪ್ರಕರಣ ಸಾಬೀತು ಆಗಿದ್ದರಿಂದ ಜೈಲು ಪಾಲಾಗಿರುವುದು ಗಣಿ ಜಿಲ್ಲೆಯ ಕಮಲ ಪಾಳಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ರೆಡ್ಡಿ ಬಳ್ಳಾರಿಗೆ ಮರು ಪ್ರವೇಶ ಪಡೆಯುತ್ತಿದ್ದಂತೆಯೇ ಪಕ್ಷ ಮತ್ತೆ ಮುನ್ನೆಲೆಗೆ ಬರಲಿದೆ. ಜಿಲ್ಲೆಯಲ್ಲಿ ಮತ್ತೆ ಬಿಜೆಪಿ ಸಂಘಟನಾ ಶಕ್ತಿ ಹೆಚ್ಚಿಸಿಕೊಳ್ಳಲಿದೆ ಎಂಬ ನಿರೀಕ್ಷೆಯಿರುವಾಗಲೇ ಅಕ್ರಮ ಗಣಿಗಾರಿಕೆ ಆರೋಪ ಸಾಬೀತುಗೊಂಡು ರೆಡ್ಡಿ ಜೈಲು ಪಾಲಾಗಿರುವುದು ಪಕ್ಷಕ್ಕೆ ದೊಡ್ಡ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಬಿಜೆಪಿಯಲ್ಲಿ ಮೂರು ಬಣಗಳು ಸೃಷ್ಟಿಯಾಗಿದ್ದರೂ ರೆಡ್ಡಿ ಹಾಗೂ ಶ್ರೀರಾಮುಲು ಪಕ್ಷದ ದೊಡ್ಡ ಶಕ್ತಿಯಾಗಿಯೇ ಇದ್ದಾರೆ. ಬರುವ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ಪಕ್ಷದ ಕಾರ್ಯಕರ್ತರು ನಂಬಿದ್ದರು. ಆದರೆ, ಕಳೆದ ಐದಾರು ತಿಂಗಳಲ್ಲಿ ಬಿಜೆಪಿ ವಲಯದಲ್ಲಾದ ಬೆಳವಣಿಗೆ ಕಮಲ ಪಕ್ಷ ಸಂಘಟನಾತ್ಮಕವಾಗಿ ಬಲಗೊಳ್ಳುವುದು ಕಷ್ಟಸಾಧ್ಯ ಎಂಬ ವಾತಾವರಣ ಸೃಷ್ಟಿಗೊಂಡಿದೆ.
ರೆಡ್ಡಿ ಜೈಲು ಪಾಲು- ಕಾಂಗ್ರೆಸ್‌ನಲ್ಲಿ ಸಂತಸ:
ಅಕ್ರಮ ಗಣಿಗಾರಿಕೆಯ ಆರೋಪದಿಂದಾಗಿ ಸುಪ್ರೀಂ ಕೋರ್ಟ್ ಸೂಚನೆಯಂತೆ ಬಳ್ಳಾರಿಯಿಂದ ದೂರ ಉಳಿದಿದ್ದ ಜನಾರ್ದನ ರೆಡ್ಡಿ ನ್ಯಾಯಾಲಯ ಸಮ್ಮತಿ ಮೇರೆಗೆ ಕಳೆದ ಅಕ್ಟೋಬರ್‌ನಲ್ಲಿ ಬಳ್ಳಾರಿಗೆ ಮರು ಪ್ರವೇಶ ಪಡೆದರು. ನವೆಂಬರ್‌ನಲ್ಲಿ ಜರುಗಿದ ಸಂಡೂರು ವಿಧಾನಸಭಾ ಉಪ ಚುನಾವಣೆಯ ಜವಾಬ್ದಾರಿ ವಹಿಸಿಕೊಂಡ ರೆಡ್ಡಿ, ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದರು. ಚುನಾವಣೆ ಬಳಿಕ ಬೆಂಗಳೂರಿನಲ್ಲಿ ಜರುಗಿದ ಕೋರ್ ಕಮಿಟಿ ಸಭೆಯಲ್ಲಿ ಶ್ರೀರಾಮುಲು ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳದಿರುವ ಕುರಿತು ಜನಾರ್ದನ ರೆಡ್ಡಿ ಪ್ರಸ್ತಾಪಿಸಿದರು. ಇಷ್ಟೊತ್ತಿಗೆ ರೆಡ್ಡಿ ಹಾಗೂ ಶ್ರೀರಾಮುಲು ನಡುವಿನ ಶೀತಲ ಸಮರ ಶುರುಗೊಂಡಿತ್ತಾದರೂ ಸ್ಫೋಟಗೊಂಡಿರಲಿಲ್ಲ.
ಕೋರ್ ಕಮಿಟಿ ಸಭೆ ಬಳಿಕ ಶ್ರೀರಾಮುಲು ಬಹಿರಂಗವಾಗಿಯೇ ರೆಡ್ಡಿ ವಿರುದ್ಧ ಅಬ್ಬರಿಸಿದರು. ಈ ಬೆಳವಣಿಗೆ ನಡುವೆ ಶ್ರೀರಾಮುಲು ಕ್ಷೇತ್ರ ಅರಸಿ ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರಕ್ಕೆ ವಲಸೆ ಹೋದರು. ಶ್ರೀರಾಮುಲು ಬೇರೆ ಜಿಲ್ಲೆಯಲ್ಲಿ ರಾಜಕೀಯ ಆಶ್ರಯ ಪಡೆಯಲು ತೆರಳಿದರೂ ರೆಡ್ಡಿ ಪಕ್ಷವನ್ನು ಸಂಘಟಿಸುತ್ತಾರೆ ಎಂಬ ವಿಶ್ವಾಸ ಪಕ್ಷದ ಒಂದು ಗುಂಪಿನಲ್ಲಿತ್ತು. ಸಾರ್ವಜನಿಕ ವಲಯದಲ್ಲೂ ರೆಡ್ಡಿ ಪಕ್ಷ ಬೆಳವಣಿಗೆಗೆ ಶ್ರಮಿಸುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ, ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಪಾಲಾಗುತ್ತಿದ್ದಂತೆಯೇ ಪಕ್ಷದ ಭವಿಷ್ಯ ಹೇಗೆ ಎಂಬ ಚಿಂತೆ ಕಾರ್ಯಕರ್ತರನ್ನು ಕಾಡತೊಡಗಿದೆ.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಕಾಂಗ್ರೆಸ್ ಸಂಘಟನೆ ಬಲಗೊಂಡಿದ್ದು, ಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಕಮಲ ಅರಳಿಸುವುದು ಹೇಗೆ? ಎಂಬ ಪ್ರಶ್ನೆ ಮೂಡಿದೆ.-
ರಾಜ್ಯ ನಾಯಕರು ಗಮನಹರಿಸುತ್ತಿದ್ದಾರೆ
ಬಳ್ಳಾರಿ ಜಿಲ್ಲೆಯ ಬಿಜೆಪಿ ಬೆಳವಣಿಗೆಯನ್ನು ರಾಜ್ಯದ ನಾಯಕರು ಗಮನಿಸುತ್ತಿದ್ದಾರೆ. ಪಕ್ಷದ ಪ್ರಗತಿ ದೃಷ್ಟಿಯಿಂದ ರಾಜ್ಯದ ನಾಯಕರೇ ಸೂಕ್ತ ನಿಲುವು, ನಿರ್ಧಾರಗಳನ್ನು ಕೈಗೊಳ್ಳುತ್ತಾರೆ.
-ಅನಿಲ್‌ಕುಮಾರ್ ಮೋಕಾ, ಜಿಲ್ಲಾಧ್ಯಕ್ಷ, ಬಳ್ಳಾರಿ ಬಿಜೆಪಿ ಘಟಕ
ಸಾಕಷ್ಟು ನಾಯಕರಿದ್ದಾರೆ
ಜನಾರ್ದನ ರೆಡ್ಡಿ ಜೈಲಿಗೆ ಹೋದ ಬಳಿಕ ಪಕ್ಷಕ್ಕೆ ಯಾವುದೇ ನಷ್ಟವಾಗಿಲ್ಲ. ಪಕ್ಷದಲ್ಲಿ ಸಾಕಷ್ಟು ಜನರು ನಾಯಕರಿದ್ದಾರೆ. ಪಕ್ಷವನ್ನು ಸಂಘಟಿಸುತ್ತಾರೆ.
-ಕೆ.ಎ.ರಾಮಲಿಂಗಪ್ಪ, ಬಿಜೆಪಿ ಹಿರಿಯ ಮುಖಂಡ, ಬಳ್ಳಾರಿ.