ಸಾರಾಂಶ
ಸವಣೂರು: ರೈತರಿಗೆ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ವಿತರಿಸಲು ಸವಣೂರ ತಾಲೂಕಿನಲ್ಲಿ ೨ ರೈತ ಸಂಪರ್ಕ ಕೇಂದ್ರ ಹಾಗೂ ೪ ಹೆಚ್ಚುವರಿ ಬಿತ್ತನೆ ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ಮತ್ತು ಇತರೆ ಕೃಷಿ ಪರಿಕರಗಳ ಕೊರತೆ ಇರುವುದಿಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕಿ ಸವಿತಾ ಚಕ್ರಸಾಲಿ ಹೇಳಿದರು.
೨೦೨೪-೨೫ನೇ ಸಾಲಿನ ಮುಂಗಾರು ಹಂಗಾಮಿನ ರೈತರಿಗೆ ಅವಶ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಇತರೆ ಕೃಷಿ ಪರಿಕರಗಳ ರೈತರಿಗೆ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ತಾಲೂಕಿನಲ್ಲಿ ಆರು ಬೀಜ ವಿತರಣಾ ಕೇಂದ್ರಗಳು ಸವಣೂರ ನಗರ ಹಾಗೂ ಹುರುಳಿಕುಪ್ಪಿ, ತವರಮೇಳ್ಳಿಹಳ್ಳಿ, ಹತ್ತಿಮತ್ತೂರು ಹೋಬಳಿ ವ್ಯಾಪ್ತಿಯಲ್ಲಿ ಕಡಕೋಳ ಹಾಗೂ ಯಲವಿಗಿ ತಲಾ ಒಂದರಂತೆ ಬೀಜ ವಿತರಣಾ ಘಟಕವನ್ನು ಪ್ರಾರಂಭಿಸಲಾಗಿದೆ. ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸೋಯಾಬಿನ್, ಗೊಂಜಳ, ಹತ್ತಿ , ಶೇಂಗಾ ಬಿತ್ತನೆ ಪ್ರಾರಂಭ ಆಗಿದೆ. ಈ ಬಾರಿ ಮಳೆ ಉತ್ತಮ ಇದೆ ಎಂಬ ಭರವಸೆ ಇದೆ ಜಿಲ್ಲೆಯಲ್ಲಿ ಬಿತ್ತನೆ ಪ್ರಾರಂಭಿಸಿದ್ದಾರೆ. ರೈತರು ಹೀಗಾಗಿ ನಮ್ಮ ತಾಲೂಕಿಗೆ ಬೀಜ, ಗೊಬ್ಬರ ಬಂದಿದ್ದು ರೈತರು ತೆಗೆದುಕೊಳ್ಳಿ ಎಂದರು.ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಸಖಿ ನೇಮಕಗೊಂಡಿರುತ್ತಾರೆ. ಕೃಷಿಗೆ ಸಂಬಂಧಿಸಿದಂತೆ ಮಾಹಿತಿ ನೀಡುವರು. ಪ್ರಸಕ್ತ ಸಾಲಿನಲ್ಲಿ ಬಿತ್ತನೆ ಬೀಜ ಸೇರಿದಂತೆ ಕೃಷಿ ಪರಿಕರ ವಿತರಣೆಗೆ ಕ್ಯೂ ಆರ್ ಕೋಡ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ರೈತರು ಖರೀದಿಸುವ ಪ್ಯಾಕೆಟ್ ಮೇಲಿನ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದ ನಂತರ ರೈತರಿಗೆ ಬಿಲ್ ಜನರೇಟ್ ಆಗುತ್ತದೆ ಮತ್ತು ರಶೀದಿ ನೀಡುವ ವ್ಯವಸ್ಥೆಯೂ ಸಹ ಇರುತ್ತದೆ. ಬಿತ್ತನೆ ಬೀಜ ವಿತರಣೆ ಸಮಯದಲ್ಲಿ ಪ್ರತಿ ಪ್ಯಾಕೇಟ್ ಸ್ಕ್ಯಾನ್ ಮಾಡಿ "ಸೀಡ್ ಎಂಐಎಸ್ " ನಲ್ಲಿ ಕ್ಯೂ ಆರ್ ಕೋಡ್ ಜೊತೆಗೆ ಇತರೆ ದಾಖಲಾತಿ ನಮೂದಿಸಿದ ನಂತರವೇ ಬೀಜ ವಿತರಣೆ ಮಾಡಲಾಗುತ್ತಿದ್ದು, ಯಾವುದೇ ಕಾರಣಕ್ಕೂ ಬೇರೆ ರೈತರ ಹೆಸರಿನಲ್ಲಿ ಬಿತ್ತನೆ ಬೀಜ ಮತ್ತು ಕೃಷಿ ಪರಿಕರಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಖರೀದಿಸಿದಲ್ಲಿ ಮೊಬೈಲ್ ಸಂದೇಶ ತಕ್ಷಣವೇ ರೈತರಿಗೆ ಹೋಗುತ್ತದೆ. ಆದ ಪ್ರಯುಕ್ತ ರೈತರು ತಾವೇ ಖುದ್ದಾಗಿ "ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ಹೆಚ್ಚುವರಿ ಬೀಜ ವಿತರಣಾ ಕೇಂದ್ರಕ್ಕೆ " ಭೇಟಿ ನೀಡಿ ಬಿತ್ತನೆ ಬೀಜಗಳನ್ನು ಮತ್ತು ಕೃಷಿ ಪರಿಕರಗಳನ್ನು ಖರೀದಿಸಲು ಕೋರಿದೆ. ಹೊಸ ಕ್ಯೂ ಆರ್ ಕೋಡ್ ವ್ಯವಸ್ಥೆಯಿಂದ ಬಿತ್ತನೆ ಬೀಜ ವಿತರಣೆ ಸಮಯದಲ್ಲಿ ವಿಳಂಬವಾಗುವ ಸಾಧ್ಯತೆ ಇದ್ದು, ರೈತ ಬಾಂಧವರು ತಾಳ್ಮೆ ಕಳೆದುಕೊಳ್ಳದೇ ಶಾಂತ ರೀತಿಯಿಂದ ಸಿಬ್ಬಂದಿಯವರೋಂದಿಗೆ ಸಹಕರಿಸಲು ತಿಳಿಸಲಾಗಿದೆ. ಪ್ರಸಕ್ತ ವರ್ಷ ತಾಲ್ಲೂಕಿನ ೪೫೩೦೦ ಹೆಕ್ಟೇರ್ ಪ್ರದೇಶದಲಿ ಬಿತ್ತನೆ ಗುರಿ ಹೊಂದಿದ್ದು, ೧೮೫೦೦ ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳ, ೬೨೦ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, ೮೯೫೦ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, ೬೫೦ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್, ೧೪೪೦೦ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿಬೆಳೆ ಬಿತ್ತನೆಯ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ರಸಗೊಬ್ಬರ ಸಮಪರ್ಕ ಪೂರೈಕೆಗೆ ಕೃಷಿ ಇಲಾಖೆ ಕ್ರಮ ಕೈಗೊಂಡಿದ್ದು ಸದ್ಯ ತಾಲೂಕಿನಲ್ಲಿ ೧೮೫೦ ಟನ್ ಯೂರಿಯಾ, ೫೮೦ ಟನ್ ಡಿ ಎ ಪಿ, ೭೫೦ ಟನ್ ಎನ್.ಪಿ.ಕೆ ಕಾಂಪ್ಲೆಕ್ಸ್ ಮತ್ತು ೩೫ ಟನ್ ಪೋಟಾಸ್ ಇರುವುದು. ಖಾಸಗಿ ಗೊಬ್ಬರ ಮಾರಾಟಗಾರರು ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರ ದಾಸ್ತಾನು ಇರಿಸಿಕೊಳ್ಳುತ್ತಿದ್ದು ಯಾವುದೇ ರಸಗೊಬ್ಬರದ ಕೊರತೆ ಇಲ್ಲ ಎಂದರು.ರೈತ ಮುಖಂಡ ನಾಗರಾಜ ಬಂಕಾಪುರ ಮಾತನಾಡಿ, ಹೆಚ್ಚಿನ ದರದಲ್ಲಿ ಯೂರಿಯಾ, ಡಿ.ಎ.ಪಿ. ಮಾರುತ್ತಿರುವ ಕುರಿತು ತಾಲೂಕಿನ ರೈತರು ಆರೋಪಿಸಿದ್ದಾರೆ. ಯಾವುದೆ ಬಿಲ್ ಸಹ ನೀಡುವುದಿಲ್ಲ, ಬಿಲ್ ಕೇಳಿದರೆ ಬೀಜ, ಗೊಬ್ಬರ ಖಾಲಿಯಾಗಿದೆ. ಬೇರೆ ಕಡೆ ಹೋಗಿ ತಗೋಳಿ ಎಂದು ಹೇಳುತ್ತಾರೆ ಎಂದರು.ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷರಾದ ಬಾಬು ಫರಾಶ, ರೈತ ಮುಖಂಡರಾದ ನಾಗರಾಜ ಬಂಕಾಪೂರ, ಬಸವರಾಜ ಮೈಲಮ್ಮನವರ, ಶಿವಾನಂದ ಯಲಿಗಾರ, ಮಲ್ಲನಗೌಡ್ರ ವಿ. ದೊಡ್ಡಗೌಡ್ರ ಹಾಗೂ ಪಾಂಡಪ್ಪ ರು. ಕಡೆಮನಿ, ರೈತ ಸಂಘದ ಯುವ ಮುಖಂಡರು ಅಬ್ದುಲ್ ಖಾದರ್ ಇದ್ದರು.