2019ರಲ್ಲಿ ಹುಬ್ಬಳ್ಳಿ-ಧಾರವಾಡ ಮಧ್ಯೆ ಶುರುವಾದ ಬಿಆರ್‌ಟಿಎಸ್‌ಗೆ ಅಂದಿನಿಂದಲೂ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಶೇ.70ರಷ್ಟು ವಾಹನಗಳಿಗೆ ಮಿಶ್ರಪಥ, ಶೇ. 30ರಷ್ಟು ಜನರು ಓಡಾಟಕ್ಕೆ ಪ್ರತ್ಯೇಕ ಕಾರಿಡಾರ್‌. ಇದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಜನರ ಒತ್ತಡದಿಂದ ಇದೀಗ ಬಿಆರ್‌ಟಿಎಸ್‌ ಬದಲು ಲೈಟ್‌ ರೈಲ್‌ ಟ್ರಾನ್ಸಿಟ್‌ ಜಾರಿಗೆ ಚಿಂತನೆ ನಡೆದಿದೆ.

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಧ್ಯೆ ತ್ವರಿತ ಮತ್ತು ಜನಸಾಮಾನ್ಯರಿಗೂ ಆರಾಮದಾಯಕ ಸಂಚಾರಕ್ಕೆಂದು ಜಾರಿಯಾಗಿರುವ ಬಿಆರ್‌ಟಿಎಸ್‌ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಿ, ಅದರ ಬದಲು 250ಕ್ಕೂ ಹೆಚ್ಚು ಜನರನ್ನು ಏಕಕಾಲಕ್ಕೆ ತೆಗೆದುಕೊಂಡು ಹೋಗುವ ಎಲ್‌ಆರ್‌ಟಿ (ಲೈಟ್‌ ರೈಲ್‌ ಟ್ರಾನ್ಸಿಟ್‌) ಪರಿಚಯಿಸುವ ಹೊಸ ಚಿಂತನೆ ಮುನ್ನೆಲೆಗೆ ಬಂದಿದೆ.

ಈ ಸಂಬಂಧ ಇಷ್ಟರಲ್ಲಿಯೇ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಬಿಆರ್‌ಟಿಎಸ್‌ ವಿರೋಧಿಸುತ್ತಿರುವ ಸಾರ್ವಜನಿಕ ಸಂಘ -ಸಂಸ್ಥೆಗಳೊಂದಿಗೆ ಸಭೆ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಮುಂದಾಗಿದ್ದಾರೆ.

ಇಲ್ಲಿನ ಐಟಿ ಪಾರ್ಕ್‌ನಲ್ಲಿನ ಕೆಯುಡಿಎಫ್‌ಸಿ ಕಚೇರಿಯಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ ಸಚಿವರು, ಬಿಆರ್‌ಟಿಎಸ್‌ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಬಿಆರ್‌ಟಿಎಸ್‌ ನಿಲ್ಲಿಸಬೇಕೆಂದು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಆದಕಾರಣ ಈ ಬಗ್ಗೆ ಸಭೆ ನಡೆಸಿ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು ಎಂದರು.

ಸಮೀಕ್ಷೆಯೂ ಆಗಿದೆ:

ಈ ಸಂಬಂಧ ಈಗಾಗಲೇ ಖಾಸಗಿ ಸಂಸ್ಥೆಯೊಂದರಿಂದ ಅಧ್ಯಯನ ಕೂಡ ನಡೆಸಲಾಗಿದೆ. ನಾನೇ ಖುದ್ದಾಗಿ ಅಧ್ಯಯನ ಮಾಡಿಸಿದ್ದೇನೆ. ಫ್ರಾನ್ಸ್‌ ಸೇರಿದಂತೆ ವಿವಿಧ ದೇಶಗಳಲ್ಲಿ ಎಲ್‌ಆರ್‌ಟಿ ಮಾದರಿ ಸಂಚಾರ ವ್ಯವಸ್ಥೆ ಇದೆ. ಅದೇ ಮಾದರಿಯ ಸಂಚಾರ ವ್ಯವಸ್ಥೆ ಜಾರಿಗೊಳಿಸುವುದು ಸೂಕ್ತ ಎಂಬ ಅಭಿಪ್ರಾಯ ಅಧ್ಯಯನದಿಂದ ಗೊತ್ತಾಗಿದೆ. ಆದರೆ ಇದು ಬರೀ ಸದ್ಯಕ್ಕೆ ಚಿಂತನೆ ಅಷ್ಟೇ ಎಂದು ಲಾಡ್‌ ಹೇಳಿದರು.

ಎಲ್ಲ ಜನಪ್ರತಿನಿಧಿಗಳು, ಸಂಘ ಸಂಸ್ಥೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ನಿರ್ಧಾರಕ್ಕೆ ಬರಲಾಗುವುದು. ಎಲ್‌ಆರ್‌ಟಿಯಲ್ಲಿ ಏಕಕಾಲಕ್ಕೆ 250ಕ್ಕೂ ಹೆಚ್ಚು ಜನ ಪ್ರಯಾಣಿಸಬಹುದಾಗಿದೆ. ಇದು ಹುಬ್ಬಳ್ಳಿ-ಧಾರವಾಡಕ್ಕೆ ಯೋಗ್ಯ ಎಂಬುದು ನನ್ನ ಅಭಿಪ್ರಾಯ. ಆದರೆ ಎಲ್‌ಆರ್‌ಟಿ ಹಾಗೂ ಬಿಆರ್‌ಟಿಎಸ್‌ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲಾಗುವುದು. ಎಲ್‌ಆರ್‌ಟಿ ಜಾರಿಗೊಳಿಸುವುದರ ಬಗ್ಗೆ ಎದುರಾಗುವ ಸಾಧಕ-ಬಾಧಕಗಳನ್ನು ಸುದೀರ್ಘವಾಗಿ ಚರ್ಚೆ ನಡೆಸಲಾಗುವುದು. ಬಳಿಕವಷ್ಟೇ ನಿರ್ಧಾರಕ್ಕೆ ಬರಲಾಗುವುದು. ಈ ಮಾಸಾಂತ್ಯದಲ್ಲೇ ಈ ಕುರಿತು ಸಭೆ ನಡೆಸಲಾಗುವುದು. ಅಲ್ಲಿ ನಿರ್ಧಾರ ಕೈಗೊಂಡ ಬಳಿಕ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದ ಅವರು, ಶೀಘ್ರದಲ್ಲೇ ಮೀಟಿಂಗ್‌ ಕರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.ಏಕಿ ಈ ನಿರ್ಧಾರ?

2019ರ ಫೆಬ್ರವರಿಯಲ್ಲಿ ಬಿಆರ್‌ಟಿಎಸ್‌ ಉದ್ಘಾಟನೆಯಾಗಿದೆ. ಆದರೆ ಆಗಿನಿಂದಲೂ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಶೇ.70ರಷ್ಟು ವಾಹನಗಳಿಗೆ ಮಿಶ್ರಪಥ, ಶೇ. 30ರಷ್ಟು ಜನರು ಓಡಾಟಕ್ಕೆ ಪ್ರತ್ಯೇಕ ಕಾರಿಡಾರ್‌. ಇದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಆದಕಾರಣ ಇದಕ್ಕೆ ಸಾರ್ವಜನಿಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಪಾಲಿಕೆ ಸದಸ್ಯರು ಕಾರಿಡಾರ್‌ನ್ನು ಗಾತ್ರ ಕಡಿಮೆ ಮಾಡಿ ಎಂದು ಆಗ್ರಹಿಸಿದ್ದುಂಟು. ಜತೆಗೆ ಬಿಆರ್‌ಟಿಎಸ್‌ ವಿರೋಧಿಸಿ ಧಾರವಾಡದಲ್ಲಿ ಪಾದಯಾತ್ರೆ ನಡೆಸಲಾಗಿದೆ. ಇನ್ನು ಫ್ಲೈಓವರ್‌ನಿಂದಾಗಿ ಈಗಾಗಲೇ ಮೂರ್ನಾಲ್ಕು ಬಿಆರ್‌ಟಿಎಸ್‌ ಬಸ್‌ ನಿಲ್ದಾಣಗಳನ್ನು ತೆರವು ಕೂಡ ಮಾಡಲಾಗಿದೆ. ಇದೇ ಸರಿಯಾದ ಮಾರ್ಗ ಎಂದು ಇನ್ನಷ್ಟು ಕಡಿಮೆ ಮಾಡಿ ಎಂದು ಆಗ್ರಹ ಕೂಡ ಕೇಳಿ ಬಂದಿದೆ. ₹ 1000 ಕೋಟಿ ಖರ್ಚು ಮಾಡಿ ನಿರ್ಮಿಸಿರುವ ಬಿಆರ್‌ಟಿಎಸ್‌ ವ್ಯವಸ್ಥೆಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿರುವುದಂತೂ ಸತ್ಯ.

ಎಲ್‌ಆರ್‌ಟಿ- ಎಂಆರ್‌ಟಿ:ಎಲ್‌ಆರ್‌ಟಿ ಎಂದರೆ ಲೈಟ್‌ ರೈಲ್‌ ಟ್ರಾನ್ಸಿಟ್‌. ಇದನ್ನು ಲಘು ರೈಲ್‌ ಎಂದು ಕೂಡ ಕರೆಯಲಾಗುತ್ತದೆ. ಇದನ್ನು 200ರಿಂದ 250 ಜನರನ್ನು ಹೊತ್ತುಕೊಂಡು ಸಾಗುವ ಚಿಕ್ಕ ರೈಲು. ಇದು ಕಡಿಮೆ ಅಂತರದ ಸಾಮೂಹಿಕ ಸಾರಿಗೆಗೆ ಹೆಚ್ಚು ಅನುಕೂಲವಾಗಿರುತ್ತದೆ. ನಗರ ಪ್ರದೇಶಗಳಲ್ಲಿ ಪ್ರಚಲಿತದಲ್ಲಿರುವ ವ್ಯವಸ್ಥೆ. ನಮ್ಮ ದೇಶದಲ್ಲಿ ಸದ್ಯ ಎಲ್ಲೂ ಈ ವ್ಯವಸ್ಥೆ ಇಲ್ಲ. ಎಂಆರ್‌ಟಿ ಮೆಟ್ರೋ ರೈಲ್‌ ಟ್ರಾನ್ಸಿಟ್‌. ಬೆಂಗಳೂರು, ದೆಹಲಿ ಸೇರಿದಂತೆ ಸದ್ಯ ಇರುವುದು ಮೆಟ್ರೋ ರೈಲ್‌. ಹೆಚ್ಚು ದೂರ ಹಾಗೂ ಹೆಚ್ಚು ಜನರನ್ನು ಸಾಗಿಸುವ ಸಾಮರ್ಥ್ಯ ಇರುತ್ತದೆ.