ಆರ್‌ಟಿಇ ಸೀಟ್‌ಗಿಲ್ಲ ಡಿಮ್ಯಾಂಡ್‌

| Published : Jul 02 2024, 01:35 AM IST

ಸಾರಾಂಶ

ಖಾಲಿ ಇರುವ ಸೀಟುಗಳು ಮತ್ತು ಬಂದಿರುವ ಅರ್ಜಿಗಳನ್ನು ಪರಿಗಣಿಸಿದಾಗ, ಪಾಲಕರು ಆರ್‌ಟಿಇ ಬಗ್ಗೆ ಆಸಕ್ತಿ ವಹಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಧಾರವಾಡ ಗ್ರಾಮೀಣದಲ್ಲಿ 38 ಸೀಟುಗಳು ಆರ್‌ಟಿಇ ಅಡಿ ಲಭ್ಯವಿದ್ದು ಒಂದೂ ಅರ್ಜಿ ಬಂದಿಲ್ಲ.

ಬಸವರಾಜ ಹಿರೇಮಠ

ಧಾರವಾಡ:

ಆರ್ಥಿಕವಾಗಿ ದುರ್ಬಲ ಮಕ್ಕಳು ಕೂಡಾ ಖಾಸಗಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಲು ನೆರವಾಗುವುದಕ್ಕಾಗಿ ಕೇಂದ್ರ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಜಾರಿಗೆ ತಂದಿದ್ದು, ಆರಂಭದಲ್ಲಿ ತುಂಬ ಬೇಡಿಕೆ ಹೊಂದಿದ್ದ ಆರ್‌ಟಿಇ ಸೀಟುಗಳನ್ನು ಇದೀಗ ಕೇಳುವವರಿಲ್ಲ. ಈ ಕಾಯ್ದೆ ಅಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳ ಸಂಖ್ಯೆ ಧಾರವಾಡ ಜಿಲ್ಲೆಯಲ್ಲಿ ಕ್ರಮೇಣ ಇಳಿಮುಖಗೊಂಡಿದೆ.

ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಶೇ. 25ರಷ್ಟು ಸ್ಥಾನಗಳನ್ನು ಆರ್‌ಟಿಇ ಕಾಯ್ದೆ ಅಡಿಯಲ್ಲಿ ಮೀಸಲು ಇಡಬೇಕೆಂದು 2009ರಲ್ಲಿ ಸರ್ಕಾರ ನಿಯಮ ರೂಪಿಸಿತ್ತು. ಅದರಂತೆ ಧಾರವಾಡ ಜಿಲ್ಲೆಯಲ್ಲಿ 672 ಸೀಟುಗಳನ್ನು ಪ್ರಸಕ್ತ ವರ್ಷ ಕಾಯ್ದಿರಿಸಲಾಗಿದೆ. ನಿಯಮಾವಳಿ ಜಾರಿಯಾದಾಗಿನಿಂದ ಕೋವಿಡ್‌ ಪೂರ್ವ ಅವಧಿ ವರೆಗೂ ಆರ್‌ಟಿಇ ಅಡಿಯಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ಪಡೆಯುವ ಪಾಲಕರ ಸಂಖ್ಯೆ ಗಣನೀಯವಾಗಿತ್ತು. ಆದರೆ, ಈ ಕಾಯ್ದೆಗೆ ಸರ್ಕಾರ ತಿದ್ದುಪಡಿ ತಂದ ನಂತರ ಆರ್‌ಟಿಇ ಕಾಯ್ದೆ ಅಡಿಯಲ್ಲಿ ಸೀಟು ಪಡೆಯುವ ಅರ್ಜಿಗಳ ಸಂಖ್ಯೆ ಇಳಿಮುಖವಾಗಿದೆ.

ಏನು ತಿದ್ದುಪಡಿ?

ಆರ್‌ಟಿಇ ಅಡಿಯಲ್ಲಿ ಸೀಟು ಪಡೆಯಬೇಕಾದರೆ ಪಾಲಕರು ವಾಸಿಸುವ ಪ್ರದೇಶದ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ ಇಲ್ಲದಿದ್ದರೆ ಮಾತ್ರ ಅರ್ಜಿ ಹಾಕಬಹುದು ಎಂಬುದು ಇತ್ತೀಚೆಗೆ ಕಾಯ್ದೆಗೆ ತಂದಿರುವ ತಿದ್ದುಪಡಿಯೇ ಇದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಸರ್ಕಾರಿ ಶಾಲೆಗಳು ಇರುವುದರಿಂದ ಪಾಲಕರಿಗೆ ಆರ್‌ಟಿಇ ಕಾಯ್ದೆ ಅಡಿ ಪ್ರಯೋಜನ ಪಡೆಯುವುದು ದುಸ್ತರವಾಗಿದೆ. ಅರ್ಜಿ ಹಾಕಿದರೂ ಪ್ರವೇಶ ಸಿಗದ ಹಿನ್ನೆಲೆಯಲ್ಲಿ ಪಾಲಕರು ಆಸಕ್ತಿ ಕಳೆದುಕೊಂಡಿದ್ದಾರೆ.

ಸೀಟುಗಳಿಗಿಂತ ಕಡಿಮೆ ಅರ್ಜಿ:

ಜಿಲ್ಲೆಯಲ್ಲಿ ಶಾಲೆಗಳು ಪ್ರಾರಂಭವಾಗಿ ಒಂದು ತಿಂಗಳು ಗತಿಸಿದ್ದು, ಇದುವರೆಗೆ ಆರ್‌ಟಿಇ ಅಡಿಯಲ್ಲಿ ಸೀಟು ಪಡೆಯಲು ಕೇವಲ 252 ಅರ್ಜಿಗಳು ಮಾತ್ರ ಶಿಕ್ಷಣ ಇಲಾಖೆಗೆ ಬಂದಿವೆ. ಸೀಟುಗಳನ್ನು ಎರಡು ಹಂತಗಳಲ್ಲಿ ಹಂಚಿಕೆ ಮಾಡಲಾಗುತ್ತದೆ. ಪ್ರಥಮ ಹಂತದಲ್ಲಿ 458 ಸೀಟುಗಳು ಲಭ್ಯವಿದ್ದು 2 ಹಂತದಲ್ಲಿ 222 ಸೀಟುಗಳನ್ನು ನೀಡಲಾಗುತ್ತದೆ. ಆದರೆ, ಪ್ರಥಮ ಹಂತದಲ್ಲಿ ಕೇವಲ 252 ಅರ್ಜಿಗಳು ಬಂದಿರುವುದರಿಂದ ಇನ್ನೂ ಅನೇಕ ಸೀಟುಗಳು ಖಾಲಿ ಉಳಿದುಕೊಂಡಿವೆ. ಹೀಗೆ ಉಳಿದಿರುವ ಸೀಟುಗಳನ್ನು 2ನೇ ಹಂತಕ್ಕೆ ವಿತರಣೆಗಾಗಿ ವರ್ಗಾಯಿಸುವ ಸ್ಥಿತಿ ಬಂದಿದೆ.

ಗ್ರಾಮೀಣದಲ್ಲಿ ಒಂದೂ ಇಲ್ಲ:

ಖಾಲಿ ಇರುವ ಸೀಟುಗಳು ಮತ್ತು ಬಂದಿರುವ ಅರ್ಜಿಗಳನ್ನು ಪರಿಗಣಿಸಿದಾಗ, ಪಾಲಕರು ಆರ್‌ಟಿಇ ಬಗ್ಗೆ ಆಸಕ್ತಿ ವಹಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಧಾರವಾಡ ಗ್ರಾಮೀಣದಲ್ಲಿ 38 ಸೀಟುಗಳು ಆರ್‌ಟಿಇ ಅಡಿ ಲಭ್ಯವಿದ್ದು ಒಂದೂ ಅರ್ಜಿ ಬಂದಿಲ್ಲ. ಧಾರವಾಡ ನಗರದಲ್ಲಿ 169 ಸೀಟುಗಳಿದ್ದು, 49 ಅರ್ಜಿಗಳು ಬಂದಿವೆ. ಹುಬ್ಬಳ್ಳಿ ನಗರದಲ್ಲಿ 29 ಸೀಟುಗಳಿದ್ದು ಕೇವಲ ಎರಡು ಅರ್ಜಿಗಳು ಬಂದಿವೆ. ಕುಂದಗೋಳದಲ್ಲಿ 28 ಸೀಟುಗಳಿಗೆ ನಾಲ್ಕು ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗಿದೆ. ನವಲಗುಂದದಲ್ಲಿ 29 ಸೀಟುಗಳಲ್ಲಿ ನಾಲ್ಕಕ್ಕೆ ಅರ್ಜಿಗಳಿವೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 392 ಸೀಟುಗಳಿದ್ದು ಬಂದಿರುವ ಅರ್ಜಿಗಳ ಸಂಖ್ಯೆ 193 ಮಾತ್ರ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಎಲ್ಲ ಶಾಲೆಗಳಲ್ಲಿ ಪಠ್ಯಕ್ರಮದ ಪ್ರಕಾರ ಬೋಧನೆ ಮತ್ತು ಕಲಿಕೆ ಆರಂಭವಾಗಿದ್ದು, ಉಳಿದಿರುವ ಆರ್‌ಟಿಇ ಸೀಟುಗಳನ್ನು ತುಂಬುವ ಸಾಧ್ಯತೆಗಳು ತೀರಾ ಕಡಿಮೆ ಎಂಬುದು ಶಿಕ್ಷಣ ಇಲಾಖೆ ಅಧಿಕಾರಿಗಳ ಅಭಿಮತ. ಆರ್‌ಟಿಇ ಅಡಿಯಲ್ಲಿ ಸೀಟು ಬಯಸುವವರ ಸಂಖ್ಯೆ ಕಡಿಮೆಯಾಗಲು ಇನ್ನೊಂದು ಕಾರಣವೆಂದರೆ, ಮಕ್ಕಳಿಗೆ ತಮ್ಮ ಆಯ್ಕೆಯ ಖಾಸಗಿ ಶಾಲೆಯಲ್ಲಿ ಪ್ರವೇಶ ದೊರೆಯುವ ಸಂಭವ ಕಡಿಮೆ ಎಂದು ಡಿಡಿಪಿಐ ಎಸ್‌.ಎಸ್‌. ಕೆಳದಿಮಠ ಮಾಹಿತಿ ನೀಡಿದರು. ಮುಂದಿನ ವಾರ ದ್ವಿತೀಯ ಹಂತದ ಆರ್‌ಟಿಇ ಸೀಟುಗಳ ಹಂಚಿಕೆ ನಡೆಯಲಿದ್ದು, ಖಾಲಿ ಉಳಿದಿರುವ ಸೀಟುಗಳನ್ನು ತುಂಬುವ ಸಾಧ್ಯತೆಗಳು ಸಹ ತೀರಾ ಕಡಿಮೆ ಎನ್ನುತ್ತಾರೆ ಅವರು.