ಕೆಲಸ ಕಳೆದುಕೊಂಡವರೇ 50 ಜನರಿಗೆ ನೌಕರಿ ಕೊಟ್ಟರು!

| N/A | Published : Jul 19 2025, 01:00 AM IST / Updated: Jul 19 2025, 11:31 AM IST

ಸಾರಾಂಶ

ತುಮಕೂರಿನ ಕಿರಣ್ ಕುಮಾರ್ ಅಗ್ರಿ ಮ್ಯಾನೇಜರಾಗಿ ಕೆಲಸ ಮಾಡುತ್ತಿದ್ದ ರಿವಿಯಾನ ಕಂಪನಿ ನಾನಾ ಕಾರಣಕ್ಕೆ ಮುಚ್ಚಿತು. ಬಹುದಿನಗಳ ಆಸೆಯಾಗಿದ್ದ ಸ್ವಂತ ಕಂಪನಿ ಕಟ್ಟುವ ಆಸೆಯು ಅನಿವಾರ್ಯವಾಯಿತು. ಆಗ ಹುಟ್ಟಿಕೊಂಡಿದ್ದೇ ವಿನಾಯಕ ಆಗ್ರೋ ಟೆಕ್ ಕಂಪನಿ.

ಅವರಿಗೆ ಕೃಷಿ ಆಧಾರಿತ ಕಂಪನಿಗಳಲ್ಲೇ 13 ವರ್ಷ ಕೆಲಸದ ಅನುಭವ. ಆ ಕಂಪನಿಗಳಿಗಾಗಿ ಊರೂರು ಸುತ್ತಿ, ಕಂಪನಿಗೆ ಬೇಕಾದ ಬೆಳೆ ಬೆಳೆಯುವಂತೆ ರೈತರ ಮನ ಒಲಿಸುವುದೇ ಅವರ ಕೆಲಸವಾಗಿತ್ತು. ಅವರು ಕೆಲಸ ಮಾಡಿದ 3 ಕಂಪನಿಗಳು ಮಿಡಿ ಸೌತೆ ಅಥವಾ ಮಿನಿ ಸೌತೆ ಎಂದೇ ಕರೆಯಿಸಿಕೊಳ್ಳುವ ಗರ್ಕಿನ್ ಬೆಳೆ ಅನುಸರಿಸಿ ಕೆಲಸ ಮಾಡುತ್ತಿದ್ದವು. ಒಂದಲ್ಲ ಅಂತ 13 ವರ್ಷದಲ್ಲಿ 3 ಕಂಪನಿಗಳಲ್ಲಿ ಕೆಲಸ ಮಾಡಿ ರಾಶಿ ರಾಶಿ ಅನುಭವ ಸಂಪಾದಿಸಿದ್ದರು. ಸ್ವಂತ ಏನಾದರು ಮಾಡಬೇಕು ಎಂದು ಯೋಚಿಸಿದರೂ ಧೈರ್ಯ ಸಾಲುತ್ತಿರಲಿಲ್ಲ.

ತುಮಕೂರಿನ ಕಿರಣ್ ಕುಮಾರ್ ಅಗ್ರಿ ಮ್ಯಾನೇಜರಾಗಿ ಕೆಲಸ ಮಾಡುತ್ತಿದ್ದ ರಿವಿಯಾನ ಕಂಪನಿ ನಾನಾ ಕಾರಣಕ್ಕೆ ಮುಚ್ಚಿತು. ಬಹುದಿನಗಳ ಆಸೆಯಾಗಿದ್ದ ಸ್ವಂತ ಕಂಪನಿ ಕಟ್ಟುವ ಆಸೆಯು ಅನಿವಾರ್ಯವಾಯಿತು. ಆಗ ಹುಟ್ಟಿಕೊಂಡಿದ್ದೇ ವಿನಾಯಕ ಆಗ್ರೋ ಟೆಕ್ ಕಂಪನಿ. 13 ವರ್ಷದ ಅನುಭವ, ಕೃಷಿ ಕಂಪನಿಗಳ ದೊಡ್ಡ ಸಂಪರ್ಕಗಳಿದ್ದವು. ಆದರೆ ಕಂಪನಿಗೆ ಬಂಡವಾಳ ಇರಲಿಲ್ಲ.ಕಂಪನಿ ಕನಸಿಗೆ ಕಪೆಕ್‌ ಸಹಕಾರ

ಸಾಲ ಕೇಳಿಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಹೋದ ಕಿರಣ್ ಕುಮಾರ್‌ಗೆ ಬ್ಯಾಂಕಿನವರೇ ಕರ್ನಾಟಕ ರಾಜ್ಯ ಆಹಾರ ಸಂಸ್ಕರಣೆ ಹಾಗೂ ರಫ್ತು ನಿಗಮ (ಕಪೆಕ್) ಹಾಗೂ ಪಿಎಂಎಫ್ಎಂಇ ಯೋಜನೆಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಕಪೆಕ್‌ನವರ ಸಲಹೆಯಂತೆ ಪ್ರಾಜೆಕ್ಟ್ ರಿಪೋರ್ಟ್, ಮತ್ತಿತರ ದಾಖಲಾತಿಗಳನ್ನು ಸಿದ್ಧಪಡಿಸಿ ಕಿರಣ್ ಕುಮಾರ್ ಎರಡು ವರ್ಷಗಳ ಹಿಂದೆ ತುಮಕೂರು ಸಮೀಪದ ಚೇಳೂರು ಇಂಡಸ್ಟ್ರೀಯಲ್ ಏರಿಯಾದಲ್ಲಿ ಗರ್ಕಿನ್ ಸಂಗ್ರಹ, ಸಂಸ್ಕರಣೆಯ ಘಟಕ ಆರಂಭಿಸಿದರು.

ಎರಡೇ ವರ್ಷಗಳಲ್ಲಿ ವಿನಾಯಕ ಆಗ್ರೋ ಟೆಕ್ ವಾರ್ಷಿಕ ವಹಿವಾಟು ₹2.5 ಕೋಟಿ ದಾಟಿದೆ. ಈ ಆರ್ಥಿಕ ವರ್ಷಾಂತ್ಯಕ್ಕೆ ₹5 ಕೋಟಿ ವಹಿವಾಟು ದಾಖಲಿಸುವ ಗುರಿಯೊಂದಿಗೆ ಮುನ್ನಡೆಯುತ್ತಿರುವ ಕಿರಣ್ ಅವರು 50 ಜನರಿಗೆ ನೇರ ಉದ್ಯೋಗ ಕಲ್ಪಿಸಿದ್ದಾರೆ. ತುಮಕೂರು ಆಸುಪಾಸಿನ 100 ರೈತರು ಗರ್ಕಿನ್ ಬೆಳೆಯುವಂತೆ ಮಾಡಿದ್ದಾರೆ. 3 ತಿಂಗಳ ಬೆಳೆದಯಾದ ಗರ್ಕಿನ್ ಬಿತ್ತನೆ ವೇಳೆಯೇ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳುವ ವಿನಾಯಕ ಆಗ್ರೋ ಟೆಕ್, ಫಲವನ್ನು ಸಂಪೂರ್ಣ ತಾನೇ ಖರೀದಿಸಿ, ಚೇಳೂರು ಘಟಕದಲ್ಲಿ ಸಂಸ್ಕರಿಸಿ ಉಪ್ಪಿನಕಾಯಿ ಸಿದ್ಧಪಡಿಸುತ್ತದೆ. ಈ ಗರ್ಕಿನ್ ಉಪ್ಪಿನಕಾಯಿ ನಮ್ಮಲ್ಲಿ ಬಳಸುವುದು ಅತೀ ವಿರಳ. ಇದನ್ನು ಬಳಸುವ ದೇಶಗಳಿಗೆ ರಫ್ತಾಗುತ್ತದೆ.

ಪ್ರಸ್ತುತ ವಿನಾಯಕ ಆಗ್ರೋ ಟೆಕ್ ನೇರವಾಗಿ ರಫ್ತು ಮಾಡಲು ಸಾಧ್ಯವಿಲ್ಲದ ಕಾರಣ, ಫ್ರೆಶ್ ರಾ, ಫ್ರೆಶ್ ಬೀನ್ಸ್ ಆಗ್ರೋ, ಸಾತ್ವಿಕ್ ಮುಂತಾದ ಕಂಪನಿಗಳಿಗೆ ಬ್ಯಾರಲ್‌ಗಳ ರೂಪದಲ್ಲಿ ಸಗಟು ವ್ಯವಹಾರ ನಡೆಸುತ್ತದೆ. ಈ ಕಂಪನಿಗಳು ಬ್ರ್ಯಾಂಡಿಂಗ್ ಮಾಡಿ ಇದನ್ನು ಬಳಸುವ ದೇಶಗಳಾದ ಅಮೆರಿಕ. ರಷ್ಯಾ, ಅರಬ್ ಹಾಗೂ ಯುರೋಪ್ ರಾಷ್ಟ್ರಗಳಿಗೆ ರಫ್ತು ಮಾಡುತ್ತವೆ. ₹1 ಕೋಟಿ ಸಾಲ ಮಾಡಿ ಬಂಡವಾಳ ಹಾಕಿದ್ದೇನೆ. ಕಪೆಕ್ ಇದಕ್ಕೆ ₹15 ಲಕ್ಷ ಸಬ್ಸಿಡಿ ನೀಡಲಿದೆ. ಈ ಹಣಕಾಸು ನೆರವು ದೊರೆಯದಿದ್ದರೆ ಸ್ವಂತ ವ್ಯವಹಾರ ಮಾಡುವ ಕನಸು ನನಸಾಗುತ್ತಿರಲಿಲ್ಲ ಎಂದು ಸಂತಸದಿಂದ ‘ಕನ್ನಡಪ್ರಭ’ಕ್ಕೆ ಕಿರಣ್ ಕುಮಾರ್ ವಿವರಿಸಿದರು.ಗರ್ಕಿನ್, ಜಲಪೆನೋ ಸಂಶೋಧನೆ

ಮಾರ್ಕೆಟಿಂಗ್ ಅವಕಾಶಗಳ ಬಗೆಗೆ ತರಬೇತಿ ಪಡೆಯಲು ಕಪೆಕ್ ಆಹ್ವಾನಿಸಿದೆ. ಇತ್ತೀಚೆಗೆ ಕೇತಿವಾಲ್ ಮತ್ತು ಕಪೆಕ್‌ನವರು ಜಂಟಿಯಾಗಿ ನಮ್ಮ ವಿನಾಯಕ ಆಗ್ರೋ ಟೆಕ್‌ಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಕಪೆಕ್‌ನ ಪ್ರೋತ್ಸಾಹ, ಸಹಕಾರ ನಮ್ಮನ್ನು ಇನ್ನಷ್ಟು ಕೆಲಸಕ್ಕೆ ಪ್ರೇರೇಪಿಸುತ್ತಿದೆ. ಸದಸ್ಯ ನಮ್ಮ ಗರ್ಕಿನ್, ಸಂಗ್ರಹಣೆ ಹಾಗೂ ಸಂಸ್ಕರಣಾ ಘಟಕವು ಬಾಡಿಗೆ ಜಾಗದಲ್ಲಿದೆ. ಇನ್ನೊಂದು ವರ್ಷದಲ್ಲಿ ಸ್ವಂತ ಜಾಗ ಖರೀದಿಸಿ, ಸ್ವಂತ ಕಟ್ಟಡದ ಗುರಿ ಹಾಕಿಕೊಂಡಿದ್ದೇವೆ. ಚೇಳೂರು ಸಮೀಪವೇ 10 ಎಕರೆ ಜಮೀನನ್ನು ಲೀಸ್‌ಗೆ ಪಡೆದು ಗರ್ಕಿನ್ ಹಾಗೂ ಜಲಪೆನೋ (ಒಂದು ಬಗೆಯ ಮೆಣಸಿನಕಾಯಿ) ಬೆಳೆಯ ಸಂಶೋಧನೆ ಮತ್ತು ಅಭಿವೃದ್ಧಿ ನಡೆಸುವ ಆಲೋಚನೆ ಇದೆ ಎಂದು ತಮ್ಮ ಭವಿಷ್ಯದ ಯೋಜನೆಗಳನ್ನು ಕಿರಣ್ ಕುಮಾರ್ ಹೇಳಿಕೊಂಡರು.

ನಾನು 3 ಕಂಪನಿಗಳಲ್ಲಿ ಕೆಲಸ ಮಾಡಿದ್ದು ನನಗೆ ಘಟಕ ಸ್ಥಾಪನೆ, ನಿರ್ವಹಣೆ ಹಾಗೂ ಮಾರ್ಕೆಟಿಂಗ್ ಕೆಲಸಗಳನ್ನು ಸಲೀಸು ಮಾಡಿದೆ. ಸ್ವಂತ ಉದ್ದಿಮೆ ಮಾಡುವವರು ಆಸಕ್ತಿ ಕ್ಷೇತ್ರದಲ್ಲಿ ಸ್ವಲ್ಪ ದಿನ ಕೆಲಸ ಮಾಡಿದ ನಂತರ ಸ್ವಂತ ಮಾಡಲಿ. 50 ಜನರಿಗೆ ನೇರ ಉದ್ಯೋಗ, 100 ರೈತರಿಗೆ ಗ್ಯಾರಂಟಿ ಆದಾಯವು ವಿನಾಯಕ ಆಗ್ರೋ ಟೆಕ್‌ನಿಂದ ಸಿಕ್ಕಿದೆ. 3 ತಿಂಗಳ ಬೆಳೆಯಾದ ಗರ್ಕಿನ್ ಬೆಳೆದಲ್ಲಿ ಎಕರೆಗೆ ₹80 ಸಾವಿರದಿಂದ ₹1 ಲಕ್ಷದವರೆಗೂ ಆದಾಯ ಗಳಿಸಬಹುದು. 

ರೈತರಿಗೆ, ಕಾರ್ಮಿಕರಿಗೆ ಅವಕಾಶ ನೀಡಿದ ಖುಷಿ ನನ್ನದು ಎಂದು ವಿನಾಯಕ ಆಗ್ರೋ ಟೆಕ್‌ ಸಂಸ್ಥಾಪಕ ಕಿರಣ್‌ಕುಮಾರ್‌ ವಿವರಿಸಿದರು. ಈ ಕುರಿತ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ - 9740093000.

Read more Articles on