ಉಳುಮೆ ಮಾಡಲು ಅರಣ್ಯ ಒತ್ತುವರಿ ಮಾಡಿ ರಾತ್ರೋರಾತ್ರಿ ವಿವಿಧ ಬಗೆಯ ಸಾವಿರಾರು ಮರಗಳ ಮಾರಣ ಹೋಮ

| N/A | Published : Mar 15 2025, 01:07 AM IST / Updated: Mar 15 2025, 12:26 PM IST

ಉಳುಮೆ ಮಾಡಲು ಅರಣ್ಯ ಒತ್ತುವರಿ ಮಾಡಿ ರಾತ್ರೋರಾತ್ರಿ ವಿವಿಧ ಬಗೆಯ ಸಾವಿರಾರು ಮರಗಳ ಮಾರಣ ಹೋಮ
Share this Article
  • FB
  • TW
  • Linkdin
  • Email

ಸಾರಾಂಶ

ಅರಣ್ಯ ಇಲಾಖೆಯ ಸುಮಾರು 60 ಎಕರೆಗೂ ಅಧಿಕ ಅರಣ್ಯ ಪ್ರದೇಶದಲ್ಲಿನ ನೂರಾರು ನೀಲಗಿರಿ ಮರ ಸೇರಿದಂತೆ ವಿವಿಧ ಬಗೆಯ ಸಾವಿರಾರು ಮರಗಳ ಬುಡಕ್ಕೆ ಜೆಸಿಬಿ ಯಂತ್ರ ಬಳಸಿ ರಾತ್ರೋರಾತ್ರಿ ಅರಣ್ಯವನ್ನು ನಾಶಪಡಿಸಿದ್ದಾರೆ.

ಗುತ್ತಲ: ನೆಡುತೋಪಿಗಾಗಿ ಕಾಯ್ದಿರಿಸಿದ್ದ ನೂರಕ್ಕೂ ಅಧಿಕ ಎಕರೆ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿದು ಉಳುಮೆ ಮಾಡಲು ಅರಣ್ಯವನ್ನು ನಾಶ ಮಾಡಿರುವ ಘಟನೆ ಸಮೀಪದ ಹಾವನೂರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಶುಕ್ರವಾರ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.ಗುತ್ತಲ, ಹಾವನೂರ ಹರಳಹಳ್ಳಿ ಗ್ರಾಮಗಳಿಗೆ ಹೊಂದಿಕೊಂಡಿರುವ ಸರ್ವೆ ನಂ. 410ರಲ್ಲಿ 54 ಎಕರೆ 28 ಗುಂಟೆ, ಸರ್ವೆ ನಂಬರ್ 411ರಲ್ಲಿ 60 ಎಕರೆ 2 ಗುಂಟೆ ಅರಣ್ಯ ಇಲಾಖೆಯ ನೆಡುತೋಪು ಪ್ರದೇಶವಿದ್ದು, ಇದರಲ್ಲಿ ಗುತ್ತಲ ಪಟ್ಟಣ ಪಂಚಾಯಿತಿಯ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ರಾಜ್ಯಪಾಲರು ಹಾಗೂ ಮುಖ್ಯಾಧಿಕಾರಿ ಗುತ್ತಲ ಇವರ ಹೆಸರಿನಲ್ಲಿ 4 ಎಕರೆ ಅರಣ್ಯ ಭೂಮಿ ಕಾಯ್ದಿರಿಸಲಾಗಿದೆ.

ಅರಣ್ಯ ಇಲಾಖೆಯ ಸುಮಾರು 60 ಎಕರೆಗೂ ಅಧಿಕ ಅರಣ್ಯ ಪ್ರದೇಶದಲ್ಲಿನ ನೂರಾರು ನೀಲಗಿರಿ ಮರ ಸೇರಿದಂತೆ ವಿವಿಧ ಬಗೆಯ ಸಾವಿರಾರು ಮರಗಳ ಬುಡಕ್ಕೆ ಜೆಸಿಬಿ ಯಂತ್ರ ಬಳಸಿ ರಾತ್ರೋರಾತ್ರಿ ಅರಣ್ಯವನ್ನು ನಾಶಪಡಿಸಿದ್ದಾರೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಜಮೀನುಗಳಲ್ಲಿ ಅನೇಕ ರೈತರು ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಸರ್ಕಾರದ ಆಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ಕುರಿಗಾಹಿಗಳು ದೂರಿದರು.

ರಾಷ್ಟ್ರಪಕ್ಷಿಯಾದ ನವಿಲು ಸೇರಿದಂತೆ ವಿವಿಧ ಬಗೆಯ ಪಕ್ಷಿಗಳ ತಾಣವಾಗಿದ್ದ ಸ್ಥಳ ಇದೀಗ ಬಿಕೋ ಎನ್ನುತ್ತಿದೆ. ಅರಣ್ಯ ಪ್ರದೇಶದಲ್ಲಿ ಭೂ ಒತ್ತುವರಿ ಹಾಗೂ ಮಣ್ಣು ಗಣಿಗಾರಿಕೆಗೆ ಸ್ಥಳಿಯ ಪುಢಾರಿಗಳು ಕೆಲವು ಅಧಿಕಾರಿಗಳು, ರಾಜಕೀಯ ಮುಖಂಡರ ಪ್ರಭಾವದಿಂದ ಅರಣ್ಯದಲ್ಲಿನ ಮಣ್ಣು ಸಾಗಾಟ ಮಾಡುತ್ತಾರೆ. ಇಂಥವರ ವಿರುದ್ದ ಸ್ಥಳಿಯ ಶಾಸಕರು, ಜಿಲ್ಲಾಡಳಿತ, ತಾಲೂಕ ದಂಡಾಧಿಕಾರಿಗಳು, ಅರಣ್ಯ ಇಲಾಖೆ, ಕಂದಾಯ ಇಲಾಖೆಯ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸಿದರು.

ಮರಗಳನ್ನು ಕಡಿಯುವುದರ ಜತೆಗೆ ಕೃತ್ಯವನ್ನು ಮುಚ್ಚಿ ಹಾಕಲು ರಾತ್ರೋರಾತ್ರಿ ಕಡಿದ ಮರಗಳಿಗೆ ಬೆಂಕಿಯನ್ನು ಹಚ್ಚಿರುವುದು ಕಂಡುಬಂದಿದೆ. ಕಾಡು ಬೆಳೆಸಿ ನಾಡು ಉಳಿಸಿ ಎಂದು ಸರ್ಕಾರ ಕೋಟ್ಯಂತರ ರುಪಾಯಿ ಖರ್ಚು ಮಾಡುತ್ತಿದ್ದರೂ ಯಾವುದೇ ಅಧಿಕಾರಿಗಳ ಭಯವಿಲ್ಲದೇ ಅರಣ್ಯದಲ್ಲಿ ಬೆಳೆದ ಗಿಡಗಳನ್ನು ನಾಶ ಪಡಿಸಿರುವುದು ಹೇಯಕೃತ್ಯವಾಗಿದೆ. ಅರಣ್ಯ ಭೂಮಿ ಒತ್ತುವರಿ, ಅರಣ್ಯ ನಾಶ, ಮಣ್ಣು ಗಣಿಗಾರಿಕೆಯಂಥ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮಿಜಿ ಆಗ್ರಹಿಸಿದರು.

ಅರಣ್ಯ ನಾಶಪಡಿಸಿದ ಮಾಹಿತಿ ಹಿನ್ನಲೆ ಶುಕ್ರವಾರ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು, ತಾಲೂಕು ದಂಡಾಧಿಕಾರಿಗಳಿಗೆ ಅರಣ್ಯ ಭೂಮಿಯ ಸಂಪೂರ್ಣ ಸರ್ವೇ ಮಾಡಿ ಕೊಡಬೇಕೆಂದು ಅರ್ಜಿ ನೀಡಿದ್ದು, ನಂತರ ಸಂಪೂರ್ಣ ಅರಣ್ಯ ಭೂಮಿಗೆ ಬೇಲಿಯನ್ನು ಹಾಕಲಾಗುವುದು ಎಂದು ವಲಯ ಅರಣ್ಯ ಅಧಿಕಾರಿ ಹೇಳಿದ್ದಾರೆ.

ದುರುದ್ದೇಶ: ಅಕ್ರಮ ಸಕ್ರಮ ಕಾಯ್ದೆಯ ಪೂರ್ವಾಪರ ಮಾಹಿತಿ ಕೊರತೆಯಿಂದ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಉಳುಮೆ ಮಾಡುತ್ತ ತಮ್ಮ ಹೆಸರಿಗೆ ನೋಂದಾಯಿಸಿಕೊಳ್ಳಬಹುದೆಂಬ ದುರುದ್ದೇಶದಿಂದ ಕೆಲ ರೈತರು ಇಂತಹ ಕೃತ್ಯಕ್ಕೆ ಮುಂದಾಗಿದ್ದಾರೆ ಎಂಬ ಮಾಹಿತಿ ಇದ್ದು, ಈ ಘಟನೆ ಕುರಿತಂತೆ 8 ಜನರ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ಹಾವೇರಿ ವಲಯ ಅರಣ್ಯ ಅಧಿಕಾರಿ ವೈ.ಆರ್. ನದಾಫ ತಿಳಿಸಿದರು.