ಸಾರಾಂಶ
ಆಲಮೇಲ: ತಾಲೂಕಿನ ಭೀಮಾ ನದಿಯ ಪ್ರವಾಹ ಪೀಡಿತ ಶಂಬೇವಾಡದ ಹಳೆ ಗ್ರಾಮದಲ್ಲಿದ್ದ ಮೂವರು ಗರ್ಭಿಣಿಯರನ್ನು ಅಧಿಕಾರಿಗಳು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಶಂಬೇವಾಡ ಗ್ರಾಮಕ್ಕೆ ತೆರಳಿ ಹೆರಿಗೆಗಾಗಿ ತವರು ಮನೆಗೆ ಆಗಮಿಸಿದ 9 ತಿಂಗಳ ಗರ್ಭಿಣಿಯರಾದ ಸಂತೋಷಿ ನಾಗೇಶ ಕೋಳಿ, ಸವಿತಾ ಚಂದ್ರಕಾಂತ ಕೋಳಿ, ಸುನಂದಾ ಆಕಾಶ ತಳವಾರ ಸೇರಿ ಅವರ ಮಕ್ಕಳು ಸೇರಿ ಒಟ್ಟು ಆರು ಜನರನ್ನು ಮನೆಗಳಿಂದ ಕರೆತಂದು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ.ಶಂಬೇವಾಡ ಗ್ರಾಮ ಪ್ರವಾಹ ಪೀಡಿತವಾಗಿದ್ದು, ಹೆರಿಗೆ ನೋವು ಕಾಣಿಸಿಕೊಂಡರೆ ಆಸ್ಪತ್ರೆಗೆ ತೆರಳಲು ಸರಿಯಾದ ದಾರಿಯೂ ಇಲ್ಲ. ಈ ಹಿನ್ನಲೆಯಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಮನವೊಲಿಸಿ ಅವರನ್ನು ಬೋಟ್‌ಗಳಲ್ಲಿ ಪ್ರವಾಹದ ನೀರನ್ನು ದಾಟಿಸಿ ನಂತರ ದೇವಣಗಾವದ ಆರೋಗ್ಯ ಉಪ ಕೇಂದ್ರಕ್ಕೆ ಆರೋಗ್ಯ ತಪಾಸಣೆ ಮಾಡಿಸಿ ತಾಲೂಕ ಆಸ್ಪತ್ರೆಗೆ ಸ್ಥಳಾಂತರಿಸಲು ಅಧಿಕಾರಿಗಳು ಮುಂದಾಗಿದ್ದರು. ಆದರೆ, ಗರ್ಭಿಣಿಯರು ಮತ್ತು ಅವರ ಸಂಬಂಧಿಕರು ನಾವು ನಮ್ಮ ಸಂಬಂಧಿಕರ ಮನೆಗಳಿಗೆ ತೆರಳಿ ಅಲ್ಲಿಯೇ ಉಪಚಾರ ಮಾಡಿಸಿಕೊಳ್ಳುತ್ತೇವೆ ಎಂದು ಹೇಳಿದ ನಂತರ ಅವರನ್ನು ಅವರು ಹೇಳಿದಂತೆ ಅವರ ಸಂಬಂಧಿಕರ ಮನೆಗಳಿಗೆ ಕಳುಹಿಸಿ ಕೊಡಲಾಗಿದೆ.ಈ ವೇಳೆ ದೇವಣಗಾಂವ ಪಿಡಿಒ ಸಂಜೀವಕುಮಾರ ದೊಡಮನಿ, ಗ್ರಾಮ ಲೆಕ್ಕಾಧಿಕಾರಿ ಎಂ.ಕೆ.ಪೂಜಾರಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಲ್ಲಿಕಾರ್ಜುನ ಪೂಜಾರಿ, ಸಂತೋಷ್ ಕೋರಿ, ಆಶಾ ಕಾರ್ಯಕರ್ತೆ ರೇಖಾ ತಳವಾರ, ಮಲಕಣ್ಣ ವಾಲಿಕಾರ ಇದ್ದರು.
ಭೀಮಾ ನದಿಯಲ್ಲಿ ಹರಿವು ಯಥಾಸ್ಥಿತಿ:ಕಳೆದ 8-10 ದಿನಗಳಿಂದ ಏರುತಲೇ ಸಾಗಿದ್ದ, ಭೀಮ ನದಿ ಶನಿವಾರ ಸಂಜೆಗೆ ಕೊಂಚ ಇಳಿಕೆಯಾಗಿದೆ. ಶುಕ್ರವಾರ 3.55 ಲಕ್ಷ ಕ್ಯೂಸೆಕ್ಸ್ ನೀರು ಹರಿಯುತ್ತಿತ್ತು ಶನಿವಾರ ಭಿಮಾನದಿಯಲ್ಲಿ 3 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದ್ದು ಕೊಂಚ ಮಟ್ಟಿಗೆ ಕಡಿಮೆಯಾದಂತಾಗಿದೆ. ಆದರೆ ಈಗಲೂ ಹಲವಾರು ಮನೆಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ಇನ್ನು ನೀರಿದ್ದು, ನೀರು ಕಡಿಮೆಯಾದರೆ ಮಾತ್ರ ಜನರು ನಿರಾಳರಾಗಬಹುದು.ಮಹಾರಾಷ್ಟ್ರದ ಭೀಮಾ ನದಿ ಪಾತ್ರದಲ್ಲಿ ಮತ್ತೆ ಮಳೆ ಸುರಿಯಲು ಆರಂಭಿಸಿದ್ದು, ಉಜನಿ ಜಲಾಶಯದಿಂದ 1 ಲಕ್ಷ, ಸೀನಾ ನದಿಯಿಂದ 1.50 ಲಕ್ಷ ಕ್ಯೂಸೆಕ್ಸ್ ಹಾಗೂ ಕರ್ನಾಟಕ ಮತ್ತು ಮಹಾರಾಷ್ಟ್ರದ ಭೀಮಾ ನದಿ ಪಾತ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ 50 ಸಾವಿರ ಕ್ಯೂಸೆಕ್ ಹೀಗೆ 3ಲಕ್ಷಕ್ಕೂ ಅಧಿಕ ಕ್ಯುಸೆಕ್ಸ್ ನೀರು ಮತ್ತೆ ನದಿಗೆ ಬರುವ ಸಾಧ್ಯತೆ ಇದೆ ಎಂದು ಅಪಜಲಪುರ ಕೆಎನ್ಎನ್ಎಲ್ ಎಇಇ ಸಂತೋಷ್ ಕುಮಾರ ಸಜ್ಜನ ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದ ಮನೆಗಳು ಕುಸಿಯುತ್ತಿದ್ದು, ಮಳೆಯಿಂದಾಗಿ ಜನರು ಹೈರಾಣಾಗಿದ್ದಾರೆ.;Resize=(128,128))
;Resize=(128,128))
;Resize=(128,128))