ಸಾರಾಂಶ
ಮಸ್ಕಿ: ತಾಲೂಕಿನಾದ್ಯಂತ ಗುಡುಗು ಹಾಗೂ ಗಾಳಿಯಿಂದ ಕೂಡಿದ ಮಳೆಯಾಗಿದೆ. ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ರೈತರು ಬೆಳೆದಿದ್ದ ಭತ್ತದ ಬೆಳೆ ನೆಲ ಕಚ್ಚಿದ್ದು ಅಪಾರ ಪ್ರಮಾಣದ ಹಾನಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಬಳಗಾನೂರು, ಹಾಲಾಪುರ್, ಜಂಗಮರಹಳ್ಳಿ, ಸುಂಕನೂರು, ಉದ್ಬಾಳ, ಹುಲ್ಲೂರು, ಹಾಲಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಳೆಯಾಗಿದ್ದು, ಭತ್ತದ ಬೆಳೆ ನೆಲಕ್ಕಚ್ಚಿರುವುದರಿಂದ ರೈತರ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ ಎಂದು ರೈತ ಸಂತೋಷ್ ಹಿರೆದಿನ್ನಿ ಹೇಳಿದ್ದಾರೆ.ಮಳೆಯಿಂದಾಗಿ ಅಲ್ಲಲ್ಲಿ ರಸ್ತೆ ಮೇಲೆ ನೀರು ನಿಂತ ದೃಶ್ಯಗಳು ಕಂಡು ಬಂದವು. ಪುರಸಭೆ ಪೌರ ಕಾರ್ಮಿಕರು ಮಳೆಯಿಂದಾಗಿ ಸಂಗ್ರವಾಗಿದ್ದ ನೀರು ಹಾಗೂ ಕಸವನ್ನು ಸ್ವಚ್ಛಗೊಳಿಸಿದರು.
ಕ್ಷೇತ್ರದ ವ್ಯಾಪ್ತಿಯಲ್ಲಿ ಗುಡುಗು ಸಿಡಿಲು ಸಹಿತ ಗಾಳಿ ಮಳೆಯಿಂದಾಗಿ ಭತ್ತದ ಬೆಳೆಗಳು ನೆಲ ಕಚ್ಚಿದ್ದು, ಕೂಡಲೇ ಸರ್ಕಾರ ಪರಿಶೀಲನೆ ಮಾಡಿ ರೈತರಿಗೆ ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಆಗ್ರಹಿಸಿದ್ದಾರೆ.ಮಸ್ಕಿ ಕ್ಷೆತ್ರ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಹಾನಿಯಾಗಿರುವ ಭತ್ತದ ಬೆಳೆಗಳ ಸಮೀಕ್ಷನ್ನು ಕೂಡಲೇ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಈ ಬಗ್ಗೆ ನಾನು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಶಾಸಕ ಆರ್.ಬಸನಗೌಡ ತುರುವಿಹಾಳ ಅವರು ತಿಳಿಸಿದ್ದಾರೆ.
ಸಚಿವರು ಭೇಟಿ ಪರಿಶೀಲನೆರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ವಿವಿಧೆಡೆ ಸುರಿದ ಮಳೆಯಿಂದಾಗಿ ಭತ್ತ ಹಾನಿಗೀಡಾದ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಬೆಳೆಹಾನಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಗಾಳಿ ಮಳೆಗೆ ಮನೆ ಮೇಲ್ಛಾವಣಿ ಕುಸಿತ
ಮಸ್ಕಿ ತಾಲೂಕಿನಲ್ಲಿ ಗಾಳಿ ಮಳೆಯಿಂದಾಗಿ ಮಟ್ಟೂರ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತೆರಬಾವಿಯಲ್ಲಿ ದುರಗಮ್ಮ ಯಮನಪ್ಪ, ದೇವಮ್ಮ ಹುಸೇನಪ್ಪ, ಅಮರಮ್ಮ ಮನೆ ಮೇಲ್ಛಾವಣಿ ಕುಸಿದ ಘಟನೆ ನಡೆದಿದೆ. ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆಂದು ಎಂದು ತಹಸೀಲ್ದಾರ್ ಮಲ್ಲಪ್ಪ ಯರಗೋಳ ತಿಳಿಸಿದ್ದಾರೆ.