ಸಾರಾಂಶ
ಮೊಹರಂ ಹಿಂದೂ ಮುಸ್ಲಿಂರೂ ಭೇದಭಾವವಿಲ್ಲದೇ ಎಲ್ಲರೂ ಒಂದಾಗಿ ಆಚರಿಸುವ ಹಬ್ಬವಾಗಿದೆ. ಹುತಾತ್ಮರನ್ನು ನೆನೆಯುವ ಉದ್ದೇಶದಿಂದ ಮೊಹರಂ ಹಬ್ಬವನ್ನು ಶೋಕದ ಮೂಲಕ ಆಚರಿಸಲಾಗುತ್ತದೆ.
ಗಜೇಂದ್ರಗಡ: ಮೊಹರಂ ಹಿಂದೂ ಮುಸ್ಲಿಂರೂ ಭೇದಭಾವವಿಲ್ಲದೇ ಎಲ್ಲರೂ ಒಂದಾಗಿ ಆಚರಿಸುವ ಹಬ್ಬವಾಗಿದೆ. ಹುತಾತ್ಮರನ್ನು ನೆನೆಯುವ ಉದ್ದೇಶದಿಂದ ಮೊಹರಂ ಹಬ್ಬವನ್ನು ಶೋಕದ ಮೂಲಕ ಆಚರಿಸಲಾಗುತ್ತದೆ.
ಗ್ರಾಮಗಳಲ್ಲಿ ಈ ಹಬ್ಬವನ್ನು ಉತ್ಸಾಹದಿಂದ ಆಚರಿಸುತ್ತಾರೆ. ಈ ಹಬ್ಬವನ್ನು ಐದು ದಿನಗಳವರೆಗೆ ಆಚರಿಸುವ ಮೂಲಕ ಅಲಾಯಿ (ಪಾಂಜಾ) ದೇವರಿಗೆ ಕುಣಿ ತೆಗೆದು ಅಗ್ನಿಕುಂಡ ಪ್ರವೇಶ ಮಾಡುತ್ತಾರೆ. ಮೊಹರಂ ಕೊನೆಯ ದಿನ ಇನಾಮ್ ಕುಟುಂಬದವರನ್ನು ಸ್ಮರಿಸುವುದಕ್ಕಾಗಿ ಪಟ್ಟಣ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುತ್ತಾರೆ. ದೇವರಿಗೆ ಹರಕೆ ತೀರಿಸಲೆಂದು ಫಕೀರರಾಗುತ್ತಾರೆ. ಅಲ್ಲದೇ ಕೈಯಲ್ಲಿ ಕೆಂಪುಲಾಡಿ ಕಟ್ಟಿಕೊಂಡು ಮೈಗೆ ಬಣ್ಣ ಹಚ್ಚಿಕೊಂಡು ಹರಕೆ ತೀರಿಸಲೆಂದು ಹುಲಿಯಾಗುತ್ತಾರೆ.ಇಲ್ಲಿನ ಬೀಬಿ ಪಾತೀಮಾ, ಹಟೇಲ ಭಾಷಾ, ಮೌಲಾಲಿ ದೇವರುಗಳಿಗೆ ಹಿಂದೂ-ಮುಸ್ಲಿಂ ಭಕ್ತರು ಒಂದೊಂದು ರೀತಿಯಿಂದ ತಮ್ಮ ಹರಕೆ ತೀರಿಸುತ್ತಾರೆ. ಕೆಲವರು ಮೈತುಂಬಾ ಹುಲಿಯ ಬಣ್ಣ ಬರೆಸಿಕೊಂಡು ಜಗ್ಗಲಿಯ ನಾದಕ್ಕೆ ತಕ್ಕಂತೆ ಕುಣಿದು ಜನರು ಕೊಟ್ಟ ದಕ್ಷಿಣೆ ಪಡೆದು, ತಮ್ಮ ಇಷ್ಟದ ದೇವರಿಗೆ ಹರಕೆ ತೀರಿಸುತ್ತಾರೆ.ನೃತ್ಯ ಮಾಡುವ ಸಂದರ್ಭದಲ್ಲಿ ಬಾರಿಸುವ ಹಲಗಿಯ ನಾದಕ್ಕೆ ಮತ್ತು ಹುಲಿ ವೇಷಧಾರಿಗಳನ್ನು ಕಂಡು ಚಿಕ್ಕ ಮಕ್ಕಳು ಭಯದಿಂದ ಓಡುವುದುಂಟು. ಆದರೂ ಕೆಲವರು ತಮ್ಮ ಮಕ್ಕಳನ್ನು ಅವರ ಕೈಯಲ್ಲಿ ಕೊಟ್ಟು ಹೆಜ್ಜೆ ಹಾಕಿಸುತ್ತಾರೆ. ಇದರಿಂದ ಮಕ್ಕಳಿಗೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ.ಇದೆಲ್ಲದರ ಜೊತೆಗೆ ತಮ್ಮದೇ ಆದ ವಿಶಿಷ್ಟ ಹರಕೆ ಸಲ್ಲಿಸುವವರು ಕಪ್ಪು ಮುಖದ ದೇವರ ಸೇವಕರು. ಮುಖದ ತುಂಬಾ ಕಪ್ಪು ಮಸಿ, ಸೊಂಟಕ್ಕೆ ಎತ್ತಿಗೆ ಕಟ್ಟುವ ದೊಡ್ಡ ಶಬ್ದದ ಗೆಜ್ಜೆಸರ, ತಲೆತುಂಬ ಟೋಪಿ, ಕೈಯಲ್ಲಿ ಉದ್ದಕ್ಕೆ ಸುತ್ತಿ ಹದಗೊಳಿಸಿದ ವಸ್ತು, ಇವರೇ ಕಪ್ಪು ಮುಖದ ದೇವರ ಸೇವಕರು. ಚಿಕ್ಕ ಮಕ್ಕಳು ಇವರನ್ನು ಅಳ್ಳೊಳ್ಳಿ ಬವ್ವಾ ಎಂದು ಕರೆಯುತ್ತಾರೆ.ಅಳ್ಳೊಳ್ಳಿ ಬವ್ವಾ ವೇಷಧಾರಿಗಳು ಯಾರೊಂದಿಗೂ ಮಾತನಾಡುವುದಿಲ್ಲ. ಇದರಿಂದ ಮಕ್ಕಳು ಅವರನ್ನು ರೇಗಿಸುತ್ತಾರೆ. ಅವರನ್ನು ಓಡಿಸಲು ಕಪ್ಪು ಮುಖದ ದೇವರ ಸೇವಕರು ಬಟ್ಟೆಯಿಂದ ಹೊಡೆಯಲು ನುಗ್ಗಿದಾಗ ಉಂಟಾಗುವ ಗಜ್ಜೆ ಸಪ್ಪಳ ಜನರಿಗೆ ಮುದ ನೀಡುತ್ತದೆ.ಮೊಹರಂ ಸಂದರ್ಭದಲ್ಲಿ ಒಂದು ವಾರ ಅಳ್ಳೊಳ್ಳಿ ಬವ್ವಾಗಳು ವೇಷ ಧರಿಸಿ ಜನರನ್ನು ರಂಜಿಸುತ್ತಾ ನಗರದ ಮನೆ ಹಾಗೂ ಅಂಗಡಿಗಳಲ್ಲಿ ಕಾಣಿಕೆ ಕೇಳುತ್ತಾರೆ. ಒಂದು ವೇಳೆ ಕಾಣಿಕೆಯನ್ನು ಕೊಡಲು ನಿರಾಕರಿಸಿದರೆ ಜಪ್ಪಯ್ಯ ಅಂದರೂ ಮನೆ ಮತ್ತು ಅಂಗಡಿಯನ್ನು ಬಿಟ್ಟು ಕದಲುವುದಿಲ್ಲ. ಒಟ್ಟಿನಲ್ಲಿ ಮೊಹರಂ ಧರ್ಮ, ಜಾತಿಯ ಹಂಗಿಲ್ಲದ ಹಬ್ಬವಾಗಿದೆ. ಇದು ಎಲ್ಲರ ಭಾವೈಕತೆ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸುವ ಹಬ್ಬವಾಗಿದೆ.