ಸಾರಾಂಶ
ಐದು ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯ ತೋರಿದ ಆರೋಪದಲ್ಲಿ ರಾಜ್ಯ ಅರಣ್ಯ ಸೇವೆಯಲ್ಲಿರುವ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಶುಕ್ರವಾರ ಆದೇಶಿಸಿರುವ ರಾಜ್ಯ ಸರ್ಕಾರ, ಡಿಸಿಎಫ್ ಚಕ್ರಪಾಣಿ ಅಮಾನತಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಶಿಫಾರಸು ಮಾಡಿದೆ.
ಬೆಂಗಳೂರು : ಮಲೆ ಮಹದೇಶ್ವರ ಬೆಟ್ಟ ಸಮೀಪದ ಅರಣ್ಯದಲ್ಲಿ ಐದು ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯ ತೋರಿದ ಆರೋಪದಲ್ಲಿ ರಾಜ್ಯ ಅರಣ್ಯ ಸೇವೆಯಲ್ಲಿರುವ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಶುಕ್ರವಾರ ಆದೇಶಿಸಿರುವ ರಾಜ್ಯ ಸರ್ಕಾರ, ಡಿಸಿಎಫ್ ಚಕ್ರಪಾಣಿ ಅಮಾನತಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಶಿಫಾರಸು ಮಾಡಿದೆ.
ಹುಲಿಗಳ ಅಸಹಜ ಸಾವಿನ ಪ್ರಕರಣ ತನಿಖೆಗೆ ರಚಿಸಲಾಗಿದ್ದ ಉನ್ನತ ಮಟ್ಟದ ತನಿಖಾ ಸಮಿತಿಯು ಈಶ್ವರ್ ಖಂಡ್ರೆ ಅವರಿಗೆ ಪ್ರಾಥಮಿಕ ವರದಿ ಸಲ್ಲಿಸಿದೆ. ಅದನ್ನು ಪರಾಮರ್ಶಿಸಿರುವ ಈಶ್ವರ್ ಖಂಡ್ರೆ, ಹುಲಿಗಳ ಸಾವಿಗೆ ಡಿಸಿಎಫ್ ಚಕ್ರಪಾಣಿ ಜತೆಗೆ ಎಸಿಎಫ್, ಆರ್‌ಎಫ್‌ಒ ಮತ್ತು ಡಿಆರ್‌ಎಫ್‌ಒ ಕೂಡ ಕರ್ತವ್ಯ ಲೋಪ ಎಸಗಿದ್ದಾರೆ. ಅದರಲ್ಲೂ ಗಸ್ತು ಸಿಬ್ಬಂದಿ (ವಾಚರ್) ಕಾರ್ಯಕ್ಷಮತೆ ಮೇಲೆ ನಿಗಾ ಇಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಹುಲಿ ಸಾವಿಗೆ ಸಂಬಂಧಿಸಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪವೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಅಧಿಕಾರಿಗಳ ಅಮಾನತು ಮಾಡುವಂತೆ ಶಿಫಾರಸು ಮಾಡುವ ಜತೆಗೆ, ಇಲಾಖಾ ವಿಚಾರಣೆಗೂ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಕ್ರಪಾಣಿ ವಿರುದ್ಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗಿದ್ದು, ಎಸಿಎಫ್ ಗಜಾನನ ಹೆಗಡೆ, ವಲಯ ಅರಣ್ಯಾಧಿಕಾರಿ ಮಾದೇಶ ಅವರನ್ನು ಅಮಾನತು ಮಾಡಿ ಆದೇಶ ಮಾಡಲಾಗಿದೆ.
ಪ್ರಾಥಮಿಕ ವರದಿಯಲ್ಲೇನಿದೆ?:
ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮದ ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಪಾವತಿಗೆ ಏಪ್ರಿಲ್ ತಿಂಗಳಾಂತ್ಯಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಜೂನ್ ತಿಂಗಳವರೆಗೆ ಡಿಸಿಎಫ್ ಚಕ್ರಪಾಣಿ ಅವರು ವೇತನ ಪಾವತಿಗೆ ಕ್ರಮ ಕೈಗೊಂಡಿಲ್ಲ. ಆ ಮೂಲಕ ಕರ್ತವ್ಯ ಲೋಪ ಎಸಗಿದ್ದಾರೆ. ವೇತನ ವಿಳಂಬದಿಂದಾಗಿ ಗಸ್ತು ಕಾರ್ಯಕ್ಕೆ ಹಿನ್ನಡೆಯುಂಟಾಗಿದೆ. ಅಲ್ಲದೆ, ಮಾರ್ಚ್ ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂದು ಹೊರಗುತ್ತಿಗೆ ನೌಕರರು ಜೂ.23ರಂದು ಪ್ರತಿಭಟನೆಯನ್ನೂ ನಡೆಸಿದ್ದರು. ಸಕಾಲದಲ್ಲಿ ವೇತನ ಸಿಗದಿರುವುದು ಮುಂಚೂಣಿ ಸಿಬ್ಬಂದಿಯು ಕರ್ತವ್ಯ ವಿಮುಖರಾಗಲು ಕಾರಣವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.
ಮೃತಪಟ್ಟಿರುವ ತಾಯಿ ಹುಲಿ 11 ವರ್ಷದ್ದಾಗಿದ್ದು, ನಾಲ್ಕು ಮರಿ ಹುಲಿಗಳು 10 ರಿಂದ 11 ತಿಂಗಳಿನವಾಗಿವೆ. ಈ ಹುಲಿಗಳು ದಾಳಿ ಮಾಡಿ ಕೊಂದ ಹಸುವಿನ ಮೃತದೇಹದ ಒಳಗೆ ಸೇಡು ತೀರಿಸಿಕೊಳ್ಳಲು ರಾಸಾಯನಿಕ ಸಿಂಪಡಿಸಲಾಗಿದೆ. ಆ ಹಸುವಿನ ಮಾಂಸ ಸೇವನೆ ಮಾಡಿದ ಕಾರಣದಿಂದಾಗಿ ಹುಲಿಗಳು ಸಾವನ್ನಪ್ಪಿವೆ ಎಂದೂ ಪ್ರಾಥಮಿಕ ತನಿಖಾ ವರದಿಯಲ್ಲಿ ಹೇಳಲಾಗಿದೆ.
ಜು.10ಕ್ಕೆ ಅಂತಿಮ ವರದಿ:
ಸದ್ಯ ಪ್ರಾಥಮಿಕ ತನಿಖಾ ವರದಿ ನೀಡಿರುವ ಉನ್ನತ ಮಟ್ಟದ ತನಿಖಾ ಸಮಿತಿಯು ಜು.10ಕ್ಕೆ ಅಂತಿಮ ವರದಿ ನೀಡಲಿದೆ. ಅಪರ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ನೇತೃತ್ವದ ಉನ್ನತ ಮಟ್ಟದ ಸಮಿತಿಯಲ್ಲಿ ವನ್ಯಜೀವಿ ವಿಭಾಗದ ಎಪಿಸಿಸಿಎಫ್ ಶ್ರೀನಿವಾಸುಲು, ಚಾಮರಾಜನಗರ ಸಿಸಿಎಫ್ ಹೀರಾಲಾಲ್, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಎಐಜಿ ಹರಿಣಿ ವೇಣುಗೋಪಾಲ್, ವನ್ಯಜೀವಿ ತಜ್ಞ ಡಾ. ಸಂಜಯ್ ಗುಬ್ಬಿ ಮತ್ತು ಮೈಸೂರು ಮೃಗಾಲಯದ ಸಹಾಯಕ ನಿರ್ದೇಶಕ ಡಾ. ಶಶಿಧರ್ ಸದಸ್ಯರಾಗಿದ್ದರು.
ಯಾರ್‍ಯಾರಿಗೆ ಶಿಕ್ಷೆ?
ಎಸಿಎಫ್ ಗಜಾನನ ಹೆಗಡೆ, ವಲಯ ಅರಣ್ಯಾಧಿಕಾರಿ ಮಾದೇಶ ಅಮಾನತು. ಡಿಸಿಎಫ್ ಚಕ್ರಪಾಣಿ ಸಸ್ಪೆಂಡ್‌ಗೆ ಶಿಫಾರಸು
ಇವರ ತಪ್ಪೇನು?
ಅರಣ್ಯ ವಾಚರ್‌ಗಳಾಗಿರುವ ಹೊರಗುತ್ತಿಗೆ ಸಿಬ್ಬಂದಿಗೆ ಏಪ್ರಿಲ್‌ನಲ್ಲೇ ಸಂಬಳ ಬಿಡುಗಡೆ ಮಾಡಿದ್ದರೂ ಕೊಟ್ಟಿರಲಿಲ್ಲ. ತನ್ಮೂಲಕ ಕರ್ತವ್ಯ ಲೋಪ. ಇದರಿಂದಾಗಿ ಗಸ್ತು ಕಾರ್ಯಕ್ಕೆ ಹಿನ್ನಡೆ. ಗಸ್ತು ಮೇಲೆ ನಿಗಾ ವಹಿಸದೆ ನಿರ್ಲಕ್ಷ್ಯ.