ತಿಪಟೂರು: ಪಾಳು ಬಿದ್ದಿರುವ ತಿಮ್ಲಾಪುರ ಆರೋಗ್ಯ ಕೇಂದ್ರ

| Published : Feb 09 2024, 01:50 AM IST

ಸಾರಾಂಶ

ತಿಮ್ಲಾಪುರ ಆರೋಗ್ಯ ಕೇಂದ್ರವು ಪಾಳುಬಿದ್ದಿದೆ. ಜನರಿಗೆ ಚಿಕಿತ್ಸೆ ನೀಡಬೇಕಿದ್ದ ಈ ಕೇಂದ್ರದಲ್ಲಿ ಇಲಿ, ಹೆಗ್ಗಣ, ಹಂದಿ, ನಾಯಿಗಳು ವಾಸ್ತವ್ಯ ಹೂಡಿರುವುದು ತಾಲೂಕು ಆಡಳಿತದ ವೈಖರಿ ಎಷ್ಟು ಎಂಬುದುನ್ನು ತೋರಿಸುತ್ತದೆ.

ಕನ್ನಡಪ್ರಭ ವಾರ್ತೆ ತಿಪಟೂರು

ಗ್ರಾಮೀಣ ಜನರ ಆರೋಗ್ಯ ದೃಷ್ಟಿಯಿಂದ ಹೋಬಳಿ ವ್ಯಾಪ್ತಿಯ ಮುಖ್ಯ ಹಳ್ಳಿಗಳಲ್ಲಿ ಸರ್ಕಾರದಿಂದ ಲಕ್ಷಾಂತರ ರು ವೆಚ್ಚದಲ್ಲಿ ಆರೋಗ್ಯ ಕ್ಷೇಮ ಕೇಂದ್ರಗಳನ್ನು ತೆರೆಯಲಾಗಿದ್ದು, ಜನಪ್ರತಿನಿಧಿಗಳ, ಅಧಿಕಾರಿಗಳ ಬೇಜವಾಬ್ದಾರಿಯಿಂದ ತಾಲೂಕಿನ ತಿಮ್ಲಾಪುರ ಆರೋಗ್ಯ ಕೇಂದ್ರವು ಪಾಳುಬಿದ್ದಿದೆ. ಜನರಿಗೆ ಚಿಕಿತ್ಸೆ ನೀಡಬೇಕಿದ್ದ ಈ ಕೇಂದ್ರದಲ್ಲಿ ಇಲಿ, ಹೆಗ್ಗಣ, ಹಂದಿ, ನಾಯಿಗಳು ವಾಸ್ತವ್ಯ ಹೂಡಿರುವುದು ತಾಲೂಕು ಆಡಳಿತದ ವೈಖರಿ ಎಷ್ಟು ಎಂಬುದುನ್ನು ತೋರಿಸುತ್ತದೆ.

ಹೌದು ಬರದ ನಾಡೆಂದೆ ಬಿಂಬಿತವಾಗಿರುವ ತಾಲೂಕಿನ ಹೊನ್ನವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಗುಡಿಗೊಂಡನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿರುವ ತಿಮ್ಲಾಪುರ ಗ್ರಾಮದಲ್ಲಿರುವ ಆರೋಗ್ಯ ಮತ್ತು ಕ್ಷೇತ್ರ ಉಪಕೇಂದ್ರ ಇದಕ್ಕೆಲ್ಲಾ ಸಾಕ್ಷಿಯಾಗಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ತಿಳಿದ ಸರ್ಕಾರಗಳು ಗ್ರಾಮೀಣ ಭಾಗದ ಜನರ ಹಿತದೃಷ್ಟಿಯಿಂದ ಕೊಟ್ಯಂತರ ರು. ವೆಚ್ಚದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತವೆ. ಹೊನ್ನವಳ್ಳಿ ಗ್ರಾಮದಲ್ಲಿ ಹತ್ತಾರು ಹಳ್ಳಿಗಳ ಜನರಿಗೆ ಉಪಯುಕ್ತವಾಗಲೆಂದು ಆರೋಗ್ಯ ಕೇಂದ್ರವನ್ನು ನಿರ್ಮಿಸಿ ತಜ್ಞ ನರ್ಸಗಳನ್ನು ನಿಯೋಜಿಸಿ ಜನರ ಸೇವೆಗೆ ನೇಮಿಸಲಾಗಿತ್ತು. ತಡರಾತ್ರಿಯಲ್ಲಿ ರೋಗಿಗಳು ಬಂದರೂ ಚಿಕಿತ್ಸೆ ಮಾಡುತ್ತಿದ್ದರು. ತುರ್ತು ಸಂದರ್ಭದಲ್ಲಿ ಗರ್ಭಿಣಿಯರಿಗೆ ಹೆರಿಗೆಯನ್ನೂ ಮಾಡಿದುಂಟು. ಆದರೆ ಇಷ್ಟೆಲ್ಲಾ ಹೆಸರುವಾಸಿಯಾಗಿದ್ದ ಈ ಕೇಂದ್ರವು ಊರ ಮಧ್ಯದಲ್ಲಿಯೇ ಇದ್ದು ಈಗ ಪಾಳು ಬಿದ್ದು ಪ್ರಯೋಜನಕ್ಕೆ ಬಾರದಂತಾಗಿ ಹಾಳುಕೊಂಪೆಯಾಗಿದೆ.

ತುರ್ತು ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ: ಈ ಆರೋಗ್ಯ ಕೇಂದ್ರವು ಸುತ್ತಮುತ್ತಲ ಗ್ರಾಮಗಳಾದ ತಿಮ್ಲಾಪುರ, ಹರಚನಹಳ್ಳಿ, ವಾಸುದೇವರಹಳ್ಳಿ, ಬೈರನಾಯಕನಹಳ್ಳಿ, ಕೊಬ್ಬರಿ ದೊಡ್ಡಯ್ಯನಪಾಳ್ಯ, ಗುಡಿಗೊಂಡನಹಳ್ಳಿ, ಬೊಮ್ಮಲಾಪುರ, ಮಾರುಗೊಂಡನಹಳ್ಳಿ, ಬಾಗುವಾಳ, ವಿಠಲಾಪುರ, ಕಾಲೋನಿಗಳು ಸೇರಿದಂತೆ ಸುಮಾರು ೧೫ಕ್ಕೂ ಹೆಚ್ಚು ಗ್ರಾಮಸ್ಥರು ಇದೇ ಕೇಂದ್ರವನ್ನು ಆಶ್ರಿಯಿಸಿದ್ದರು. ಜ್ವರ, ತಲೆನೋವು, ನೆಗಡಿ ಇಂತಹ ಸಣ್ಣ ಪ್ರಮಾಣದ ಕಾಯಿಲೆಗಳು ಬಂದ ತಕ್ಷಣ ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸರಿಸುಮಾರು ಬಹಳ ವರ್ಷಗಳಿಂದಲೂ ಇಲ್ಲಿರುವ ಆರೋಗ್ಯ ಕೇಂದ್ರ ಪಾಳುಬಿದ್ದಿದ್ದು ಗಿಡಗೆಂಟೆಗಳು ಬೆಳೆದು ಕೇಂದ್ರವೇ ಕಾಣದಂತಾಗಿರುವುದರಿಂದ ಜನರು ಜನಪ್ರತಿನಿಧಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಾಡಿಗೆ ಕಟ್ಟಡದಲ್ಲಿ ಕೇಂದ್ರ: ಸರ್ಕಾರಿ ಜಾಗದಲ್ಲಿ ಈ ಹಳೆ ಕೇಂದ್ರವಿದ್ದರೂ ಹೊಸ ಕೇಂದ್ರ ಕಟ್ಟುವ ಬಗ್ಗೆ ಚಿಂತಿಸದ ಅಧಿಕಾರಿಗಳು ಕಳೆದ ಎರಡು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಕೇಂದ್ರವನ್ನು ನಡೆಸುತ್ತಿರುವುದು ಸರ್ಕಾರ ಬೊಕ್ಕಸಕ್ಕೆ ನಷ್ಟವುಂಟು ಮಾಡುತ್ತಿದೆ.

ಅನೈರ್ಮಲ್ಯ, ಸೊಳ್ಳೆಗಳ ಕಾಟ: ಶಿಥಿಲಗೊಂಡ ಆಸ್ಪತ್ರೆಯ ಸುತ್ತಲೂ ಅನಪೇಕ್ಷಿತ ಗಿಡಗಳು ಬೆಳೆದುಕೊಂಡಿದ್ದು ಪಕ್ಕದಲ್ಲಿಯೇ ಕುಡಿಯುವ ನೀರಿನ ಟ್ಯಾಂಕ್ ಮತ್ತು ಅಕ್ಕಪಕ್ಕದಲ್ಲಿ ಮನೆಗಳು ಇರುವ ಕಾರಣ ಸೊಳ್ಳೆಗಳ ಕಾಟ ಹೆಚ್ಚಿದೆ.

ಒಟ್ಟಾರೆ ಆಸ್ಪತ್ರೆಗಳು ಜನರ ರೋಗವನ್ನು ಗೂಣಪಡಿಸಿದರೆ ಇಲ್ಲಿರುವ ಕೇಂದ್ರ ಜನರಿಗೆ ರೋಗಗಳನ್ನು ತರಿಸುವಂತಿದ್ದು ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಆಸ್ಪತ್ರೆಯನ್ನು ದುರಸ್ತಿಗೊಳಿಸಿ ಹೊಸ ಕಟ್ಟಡ ನಿರ್ಮಿಸಿ ಗ್ರಾಮೀಣರ ಅನುಕೂಲ ಕಲ್ಪಿಸಿಕೊಡುತ್ತಾರೋ ಕಾಯ್ದು ನೋಡಬೇಕಿದೆ.