ಸಾರಾಂಶ
ಶಿರೂರು ಪಾರ್ಕ್ ರಸ್ತೆಯ ಅಂಚಿನಲ್ಲಿ 32 ಎಕರೆ ಜಾಗದಲ್ಲಿ ₹ 26 ಕೋಟಿ ವ್ಯಯಿಸಿ ಸ್ಮಾರ್ಟ್‌ಸಿಟಿ ಯೋಜನೆಯಡಿ ತೋಳನಕೆರೆ ಅಭಿವೃದ್ಧಿಪಡಿಸಲಾಗಿತ್ತು. ಇದೀಗ ಸೂಕ್ತ ನಿರ್ವಹಣೆ ಕೊರತೆಯಿಂದ ಬಹುಬೇಗನೇ ತನ್ನ ಸೌಂದರ್ಯವನ್ನು ಕಳೆದುಕೊಳ್ಳುವ ಜತೆಗೆ ಪ್ರವಾಸಿಗರ ಸಂಖ್ಯೆಯೂ ಇಳಿಮುಖವಾಗುತ್ತಿದೆ.
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:ಕೋಟ್ಯಂತರ ರುಪಾಯಿ ವ್ಯಯಿಸಿ ಅಭಿವೃದ್ಧಿಪಡಿಸಿರುವ ಇಲ್ಲಿನ ತೋಳನಕೆರೆ ನಿರ್ವಹಣೆ ಕೊರತೆಯಿಂದ ತನ್ನ ಸೊಬಗು ಕಳೆದುಕೊಳ್ಳುತ್ತಿದೆ. ಇದು ವಾಯುವಿಹಾರಿಗಳು ಹಾಗೂ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಶಿರೂರು ಪಾರ್ಕ್ ರಸ್ತೆಯ ಅಂಚಿನಲ್ಲಿ 32 ಎಕರೆ ಜಾಗದಲ್ಲಿ ₹ 26 ಕೋಟಿ ವ್ಯಯಿಸಿ ಸ್ಮಾರ್ಟ್‌ಸಿಟಿ ಯೋಜನೆಯಡಿ ತೋಳನಕೆರೆ ಅಭಿವೃದ್ಧಿಪಡಿಸಲಾಗಿತ್ತು. ಇದೀಗ ಸೂಕ್ತ ನಿರ್ವಹಣೆ ಕೊರತೆಯಿಂದ ಬಹುಬೇಗನೇ ತನ್ನ ಸೌಂದರ್ಯವನ್ನು ಕಳೆದುಕೊಳ್ಳುವ ಜತೆಗೆ ಪ್ರವಾಸಿಗರ ಸಂಖ್ಯೆಯೂ ಇಳಿಮುಖವಾಗುತ್ತಿದೆ.ಹಲವು ಅಭಿವೃದ್ಧಿ ಕಾರ್ಯ:
ಕೆರೆ ಪ್ರದೇಶದಲ್ಲಿ ಅತ್ಯಾಕರ್ಷಕ ಉದ್ಯಾನ, ವಾಯು ವಿಹಾರಕ್ಕಾಗಿ 1.5 ಕಿಮೀ ಪಾದಾಚಾರಿ ಮಾರ್ಗ, ವಿವಿಧ ಜಾತಿಯ ಮರ, ತರಹೇವಾರಿ ಗಿಡಗಳು, ಹುಲ್ಲು ಹಾಸು, ಮನಮೋಹಕ ಪುಷ್ಪಗಳು ಉದ್ಯಾನಕ್ಕೆ ಮೆರಗು ತಂದಿವೆ. ಯುವಜನರು, ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೂ ಪ್ರತ್ಯೇಕವಾದ ತೆರೆದ ಜಿಮ್ ವ್ಯವಸ್ಥೆ, ಹರ್ಬಲ್ ಮತ್ತು ಸೆನ್ಸರಿ ಉದ್ಯಾನ, ಸಾಹಸ ಕ್ರೀಡೆಗಳಿಗಾಗಿ ಬೂಟ್ ಕ್ಯಾಂಪ್ ಪ್ರದೇಶ, ವಾಲಿಬಾಲ್, ಬಾಸ್ಕೆಟ್‌ಬಾಲ್ ಹಾಗೂ ಶೆಟಲ್ ಬ್ಯಾಡ್ಮಿಂಟನ್ ಅಂಕಣಗಳಿವೆ. ಮಕ್ಕಳ ಮನರಂಜನೆಗಾಗಿಯೇ ಪ್ರತ್ಯೇಕ ಆಟದ ಪ್ರದೇಶವಿದೆ. ಸಾಂಸ್ಕೃತಿಕ ಸೇರಿದಂತೆ ಇತರ ಕಾರ್ಯಕ್ರಮಗಳಿಗಾಗಿ 400 ಜನರ ಸಾಮರ್ಥ್ಯದ ತೆರೆದ ಸಭಾಂಗಣ ನಿರ್ಮಿಸಲಾಗಿದೆ. ಇಡೀ ಪ್ರದೇಶವನ್ನು ಕಣ್ಣುಂಬಿಕೊಳ್ಳಲು 2 ಕಡೆ ವೀಕ್ಷಣಾ ಗೋಪುರ ಸಹ ನಿರ್ಮಿಸಲಾಗಿದೆ.ಕಿತ್ತುಹೋದ ಫೇವರ್ಸ್:
ಸೂಕ್ತ ನಿರ್ವಹಣೆ ಇಲ್ಲದೆ ಪಾದಾಚಾರಿ ಮಾರ್ಗದಲ್ಲಿ ಹಾಕಲಾದ ಫೇವರ್ಸ್ ಕಿತ್ತಿವೆ. ಕೆಲವೆಡೆ ಪಾದಾಚಾರಿ ಮಾರ್ಗದ ಅಕ್ಕಪಕ್ಕ ದ ಅಲಂಕಾರಿಕ ಗಿಡಗಳನ್ನು ಕತ್ತರಿಸದೆ ಇರುವುದರಿಂದ ರಸ್ತೆಗೆ ಚಾಚಿಕೊಂಡಿವೆ.ನೀರು ಹಸಿರು ಬಣ್ಣಕ್ಕೆ:
ಕೆರೆ ನೀರಿನ ಶುದ್ಧೀಕರಣಕ್ಕಾಗಿ ಕೆರೆಯಲ್ಲಿ ಫ್ಲೋಟಿಂಗ್ ಏರಿಯೇಟರ್ ಅಳವಡಿಸಲಾಗಿದೆ. ಕೆರೆಗೆ ವಿವಿಧ ಪ್ರದೇಶಗಳಿಂದ ಹರಿದು ಬರುವ ಕೊಳಚೆ ನೀರಿಗೆ ಶುದ್ಧೀಕರಣ ಘಟಕ ಸ್ಥಾಪಿಸಿದರೂ ಕೆರೆ ನೀರು ಸಂಪೂರ್ಣವಾಗಿ ಹಸಿರು ಬಣ್ಣಕ್ಕೆ ತಿರುಗಿದೆ. ಅಲ್ಲದೇ ನೀರಲ್ಲಿ ಪಾಚಿ, ನಾನಾ ಬಗೆಯ ಗಿಡಕಂಟಿ ಹರಡಿಕೊಂಡಿವೆ. ಈ ಕೆರೆಯ ಸುತ್ತಲು ನಾಲ್ಕೈದು ಕಡೆ ಕೆರೆಗೆ ಇಳಿಯಲು ನಿರ್ಮಿಸಿದ ಮೆಟ್ಟಿಲುಗಳು ಹುಲ್ಲುಗಳಿಂದ ಆವೃತವಾಗಿ ಕಾಣದಂತೆ ಆಗಿವೆ. ಕೆಲವೇ ವರ್ಷಗಳಲ್ಲಿ ಕೆರೆ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿರುವುದನ್ನು ನೋಡಿ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಾಮಕಾವಸ್ಥೆಗೆ ಕ್ಯಾಮೆರಾ:
ಉದ್ಯಾನದಲ್ಲಿ ಜನರ ಚಲನವಲನಗಳ ಮೇಲೆ ನಿಗಾಹಿಡಲು ಸಿಸಿ ಕ್ಯಾಮೆರಾ ಹಾಕಲಾಗಿದೆ. ಆದರೆ, ಕಾರ್ಯನಿರ್ವಹಿಸುತ್ತಿವೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಕೆಲವೆಡೆ ಸಾರ್ವಜನಿಕರು ಮಲ, ಮೂತ್ರ ವಿಸರ್ಜನೆ ಮಾಡಿದ್ದರೂ ಅಲ್ಲಿನ ಸಿಬ್ಬಂದಿ ಮಾತ್ರ ಯಾವುದೇ ಕ್ರಮಕೈಗೊಂಡಿಲ್ಲ. ಇದು ಸಿಸಿ ಕ್ಯಾಮೆರಾ ಕಾರ್ಯನಿರ್ವಹಣೆಯ ಮೇಲೆ ಅನುಮಾನ ಮೂಡಿಸಿವೆ.ಸಮಸ್ಯೆಗೆ ಸ್ಪಂದಿಸಿಲ್ಲ:
ಉದ್ಯಾನವನದ ಅವ್ಯವಸ್ಥೆ ಕುರಿತು ಯಾರಿಗೆ ಮಾಹಿತಿ ನೀಡಬೇಕು ಎಂಬ ಮಾಹಿತಿಯೇ ಇಲ್ಲ, ಇಲ್ಲಿನ ಸಿಬ್ಬಂದಿಗೆ ಹೇಳಿದರೂ ಕ್ಯಾರೆ ಎನ್ನುತ್ತಿಲ್ಲ ಎಂಬುದು ವಾಯುವಿಹಾರಿಗಳ ಆರೋಪ. ಉದ್ಯಾನವನದ ಕುಂದು-ಕೊರತೆಗಳ ಬಗ್ಗೆ ದೂರು ನೀಡಲು ಸಂಬಂಧಿಸಿದ ಅಧಿಕಾರಿಗಳ ದೂರವಾಣಿ ಫಲಕ ಹಾಕಬೇಕೆಂದು ಸ್ಥಳೀಯ ಒತ್ತಾಯವಾಗಿದೆ.ಸಮರ್ಪಕ ನಿರ್ವಹಣೆ ಇಲ್ಲದೇ ಈಗ ಉದ್ಯಾನವನ ತನ್ನ ಅಂದ ಕಳೆದುಕೊಳ್ಳುತ್ತಿದೆ. ನಿರ್ವಹಣೆ ಹೊಣೆ ಹೊತ್ತಿರುವ ಸಿಬ್ಬಂದಿ ಇನ್ನಾದರೂ ಇದರ ನಿರ್ವಹಣೆಗೆ ಆದ್ಯತೆ ನೀಡಲಿ ಎಂದು ಗುರುರಾಜ ಕುಲಕರ್ಣಿ ಹೇಳಿದರು.