ಸಾರಾಂಶ
ಧರ್ಮಸ್ಥಳ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ ಪ್ರಯುಕ್ತ ಇಂದು ಸಾಹಿತ್ಯ ಸಮ್ಮೇಳನ, ನಾಳೆ ಸರ್ವಧರ್ಮ ಸಮ್ಮೇಳನ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ ಸೋಮವಾರ ಸಂಜೆ 5 ಗಂಟೆಯಿಂದ ಅಮೃತವರ್ಷಿಣಿ ಸಭಾಭವನದಲ್ಲಿ ತುಮಕೂರು ಶ್ರೀ ಕ್ಷೇತ್ರ ಸಿದ್ಧಗಂಗಾ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಸರ್ವಧರ್ಮ ಸಮ್ಮೇಳನದ 91ನೇ ಅಧಿವೇಶನ ಸಂಪನ್ನಗೊಳ್ಳಲಿದೆ. ಬೆಂಗಳೂರಿನ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಇದರ ಸ್ಥಾಪಕ, ವಿದ್ವಾಂಸ ಡಾ. ಗುರುರಾಜ ಕರ್ಜಗಿ ಉದ್ಘಾಟಿಸಲಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಾಗ್ನಿ, ಲೇಖಕ ಡಾ. ಎಂ.ಆರ್. ವೆಂಕಟೇಶ್ , ಬೆಂಗಳೂರಿನ ವಿಭು ಅಕಾಡೆಮಿಯ ಸಂಸ್ಥಾಪಕ ಮುಖ್ಯಸ್ಥ ಡಾ.ವಿ.ಬಿ. ಆರತಿ ಹಾಗೂ ವಿಜಯಪುರದ ವಾಗ್ನಿ ಮಹ್ಮದಗೌಸ ರ. ಹವಾಲ್ದಾರ ಇವರು ಉಪನ್ಯಾಸ ನೀಡಲಿದ್ದಾರೆ. .ಸಮ್ಮೇಳನದ ಬಳಿಕ ಬೆಂಗಳೂರಿನ ಅನುರಾಧಾ ವಿಕ್ರಾಂತ್ ಮತ್ತು ದೃಷ್ಟಿ ನೃತ್ಯ ಮೇಳದವರಿಂದ ನೃತ್ಯ ಸಮರ್ಪಣಂ ಪ್ರಸ್ತುತಗೊಳ್ಳಲಿದೆ. ರಾತ್ರಿ ಶ್ರೀ ಮಂಜುನಾಥ ಸ್ವಾಮಿಗೆ ಕಂಚಿಮಾರು ಕಟ್ಟೆ ಉತ್ಸವ ನಡೆಯಲಿದೆ..ವಸ್ತು ಪ್ರದರ್ಶನ ಮಂಟಪದಲ್ಲಿ ಸಂಜೆ 5.30ರಿಂದ ಮೊದಲಿಗೆ ಕುಂಭಕೋಣಮ್ ಅನಂತನಾರಾಯಣ ಭಾಗವತರ್ ಅವರಿಂದ ನಾಮಸಂಕೀರ್ತನಮ್, ಬಳಿಕ ವಿದುಷಿ ಪ್ರಣತಿ ಚೈತನ್ಯ ಪದ್ಯಾಣ ನಿರ್ದೇಶನದಲ್ಲಿ ಪದಯಾನ ತಂಡದವರಿಂದ ಭರತನೃತ್ಯ, ನಂತರ ಮಂಗಳೂರಿನ ವಿಭಾ ಶ್ರೀನಿವಾಸ ನಾಯಕ್ ಅವರಿಂದ ಭಕ್ತಿ ಸಂಗೀತ, ನಾಲ್ಕನೆಯ ಕಾರ್ಯಕ್ರಮವಾಗಿ ಪೆರ್ಲದ ಶಿವ ನ್ಯಾಟ್ಯಾಂಜಲಿ ನೃತ್ಯ ವಿದ್ಯಾಲಯ ಕೇಂದ್ರದವರಿಂದ ನಾಟ್ಯ ಮಂಜರಿ ಕೊನೆಯಲ್ಲಿ ಬೆಂಗಳೂರಿನ ಶ್ರೀ ಕೃಷ್ಣ ಕಲಾಲಯ ತಂಡದವರಿಂದ ಭರತ ನೃತ್ಯ ಪ್ರಸ್ತುತಗೊಳ್ಳಲಿದೆ. ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಕಂಚಿಮಾರು ಕಟ್ಟೆ ಉತ್ಸವ ನೆರವೇರಲಿದೆ.ನಾಳೆಯ ಕಾರ್ಯಕ್ರಮ: ಲಕ್ಷದೀಪೋತ್ಸವದ ಕೊನೆಯ ದಿನವಾದ ಮಂಗಳವಾರ ಬೆಂಗಳೂರಿನ ವಿದ್ವಾಂಸ, ಗಮಕಿ ಡಾ.ಎ.ವಿ. ಪ್ರಸನ್ನ ಅವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಸಮ್ಮೇಳನದ 91 ನೇ ಅಧಿವೇಶನ ಸಂಜೆ 5 ಗಂಟೆಯಿಂದ ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆಯಲಿದೆ.ಇಸ್ರೋದ ಅಧ್ಯಕ್ಷ ಡಾ.ಎಸ್. ಸೋಮನಾಥ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಹೊನ್ನಾವರದ ಬರಹಗಾರ ಡಾ. ಶ್ರೀಪಾದ ಶೆಟ್ಟಿ, ಬೆಂಗಳೂರಿನ ರಂಗಕರ್ಮಿ ಪ್ರಕಾಶ್ ಬೆಳವಾಡಿ, ಬಂಟ್ವಾಳದ ಲೇಖಕ ಡಾ. ಅಜಕ್ಕಳ ಗಿರೀಶ ಭಟ್ ಉಪನ್ಯಾಸ ನೀಡುವರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರ ನಡೆಯಲಿದೆ.ವಸ್ತು ಪ್ರದರ್ಶನ ಮಂಟಪದಲ್ಲಿ ಸಂಜೆ 5.30ರಿಂದ ಮೊದಲನೇ ಕಾರ್ಯಕ್ರಮವಾಗಿ ಮಂಗಳೂರಿನ ಸವಿಜೀವನಂ ನೃತ್ಯಕಲಾ ಕ್ಷೇತ್ರದವರಿಂದ ನೃತ್ಯ ಕಾರ್ಯಕ್ರಮ, ಬಳಿಕ ಮೈಸೂರಿನ ಶ್ರೀ ದುರ್ಗಾ ನೃತ್ಯ ಅಕಾಡೆಮಿಯ ವಿದುಷಿ ಶ್ರೀವಿದ್ಯಾ ರಾವ್ ಮತ್ತು ಶಿಷ್ಯವೃಂದದವರಿಂದ ನೃತ್ಯಾರ್ಪಣಂ, ನಂತರ ಧಾರವಾಡದ ಕವನಾ ಎಂ. ಹೆಗಡೆ ಅವರಿಂದ ಕಥಕ್ ನೃತ್ಯ, ಮೂರನೇಯ ಕಾರ್ಯಕ್ರಮದಂಗವಾಗಿ ಬೆಂಗಳೂರಿನ ಸರಸ್ವತಿ ನೃತ್ಯಾಲಯ ಅಕಾಡೆಮಿಯ ವಿದುಷಿ ಸುಮಿತ್ರಾ ಸುನಿಲ್ ಅವರ ನಿರ್ದೇಶನದಲ್ಲಿ ಶಿವ ನೃತ್ಯ ರೂಪಕ ಕೊನೆಯಲ್ಲಿ ಪುತ್ತೂರಿನ ಪುನೀತ್ ಆರ್ಕೆಸ್ಟ್ರಾ ದವರಿಂದ ಸಂಗೀತ ರಸಮಂಜರಿ ಪ್ರಸ್ತುಗೊಳ್ಳಲಿದೆ. ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಗೌರಿ ಮಾರುಕಟ್ಟೆ ಉತ್ಸವ ಬೆಳ್ಳಿ ರಥೋತ್ಸವ ನೆರವೇರಲಿದೆ.ಧರ್ಮಸ್ಥಳ ಲಕ್ಷದೀಪೋತ್ಸವದ ಎರಡನೇ ದಿನ ಶನಿವಾರ ರಾತ್ರಿ ಶ್ರೀ ಮಂಜುನಾಥಸ್ವಾಮಿಯ ಕೆರೆಕಟ್ಟೆ ಉತ್ಸವ ನೆರವೇರಿತು.
ದೇವಸ್ಥಾನದ ಪ್ರಾಂಗಣದಲ್ಲಿ ಸ್ವಾಮಿಗೆ ವೈದಿಕರಿಂದ ಪೂಜೆ ನಡೆದು ಸಂಪ್ರದಾಯದಂತೆ ಪಲ್ಲಕ್ಕಿ ಸುತ್ತು, ಚೆಂಡೆ ಸುತ್ತು, ನಾದಸ್ವರ ಸುತ್ತು, ಸಂಗೀತ ಸುತ್ತು, ಕೊಳಲು ಸುತ್ತು, ಶಂಖ ಸುತ್ತು ಸೇರಿ ಸರ್ವವಾದ್ಯಗಳೊಂದಿಗೆ 16 ಸುತ್ತುಗಳಲ್ಲಿ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಲಾಲಕ್ಕಿಯಲ್ಲಿ ಕೂರಿಸಲಾಯಿತು. ತಮಟೆ ವಾದ್ಯ, ಜಾಗಟೆ, ಪಂಜು, ಗೊಂಬೆಗಳ ಮೆರವಣಿಗೆಯ ಜೊತೆಗೆ ಹೊರಟ ಉತ್ಸವ ಮೂರ್ತಿಯ ಪ್ರದಕ್ಷಿಣೆ ನೆರೆದಿದ್ದ ಭಕ್ತಗಣದ ಸಮ್ಮುಖದಲ್ಲಿ ನೆರವೇರಿತು. ದೇವರಿಗೆ ಅಷ್ಟಸೇವೆಯನ್ನು ಒಳಗೊಂಡ ಚತುರ್ವೇದಗಳ ಪಠಣೆ, ಸಂಗೀತ, ಮೌರಿ, ನೃತ್ಯ ಮತ್ತು ಸರ್ವವಾದ್ಯಗಳನ್ನು ಮುಗಿಸಿದಾಗ ಪೂಜೆ ಸಂಪನ್ನವಾಯಿತು.ಬಳಿಕ ದೇವರನ್ನು ಬೆಳ್ಳಿರಥದಲ್ಲಿ ಕೂರಿಸಿ, ಮಂಗಳಾರತಿ ಬೆಳಗಿ ದೇಗುಲಕ್ಕೆ ಕರೆತರುವ ಮೂಲಕ ಕೆರೆಕಟ್ಟೆ ಉತ್ಸವ ಪೂರ್ಣಗೊಂಡಿತು. ಉತ್ಸವದ ಸಂದರ್ಭದಲ್ಲಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಕುಟುಂದವರು, ಕ್ಷೇತ್ರದ ಆಡಳಿತ ವರ್ಗದ ಪ್ರಮುಖರು, ವೈದಿಕ ಸಮಿತಿಯವರು, ಪೊಲೀಸ್ ಇಲಾಖೆಯ ಸಿಬ್ಬಂದಿ ಮತ್ತು ಸಹಸ್ರಾರು ಭಕ್ತರು ಹಾಜರಿದ್ದರು.