ರೇಷ್ಮೆಯಲ್ಲಿ ವರ್ಷಕ್ಕೆ ಹತ್ತು ಬೆಳೆ

| Published : Apr 01 2025, 12:46 AM IST

ಸಾರಾಂಶ

ಅರಣ್ಯ, ತೋಟಗಾರಿಕೆ, ಕೃಷಿ ಬೆಳೆ ಪದ್ಧತಿಯನ್ನು ಅನುಸರಿಸುತ್ತಿದ್ದು, ಬದುಗಳಲ್ಲಿ ತೇಗ (7), ಸಿಲ್ವರ್ (10), ಹೆಬ್ಬೇವು (8), ಆಲ (3) ಮರಗಳನ್ನು ಬೆಳೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರುಕೆ.ಆರ್. ನಗರ ತಾಲೂಕು ಸುಗ್ಗನಹಳ್ಳಿ ಎಸ್‌.ಪಿ. ಪ್ರತಾಪ್ 4.15 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿಯನ್ನು ಅಳವಡಿಸಿಕೊಂಡು ಸಂತೃಪ್ತ ಜೀವನ ನಡೆಸುತ್ತಿದ್ದಾರೆ.ಇವರು ತಮ್ಮ ಜಮೀನಿನಲ್ಲಿ ಭತ್ತ, ರಾಗಿ, ಅಲಸಂದೆ, ಕಬ್ಬು, ತೊಗರಿ, ಹುರುಳಿ, ತೋಟಗಾರಿಕೆ ಬೆಳೆಗಳಾದ ತೆಂಗು, ಪಪ್ಪಾಯಿ, ಬಾಳೆ, ಗುಲಾಬಿ, ಚೆಂಡು ಹೂ ಬೆಳೆಯುತ್ತಿದ್ದಾರೆ. ರೇಷ್ಮೆ ಕೃಷಿಯಲ್ಲಿ ವರ್ಷಕ್ಕೆ 10 ಬೆಳೆಯನ್ನು ಸುಮಾರು 2.16 ಎಕರೆ ಪ್ರದೇಶ ತೆಗೆಯುತ್ತಿದ್ದು, ವಾರ್ಷಿಕ 6 ಲಕ್ಷ ರು. ನಿವ್ವಳ ಅದಾಯ ಗಳಿಸುತ್ತಿದ್ದಾರೆ.ಇವರು ಅರಣ್ಯ, ತೋಟಗಾರಿಕೆ, ಕೃಷಿ ಬೆಳೆ ಪದ್ಧತಿಯನ್ನು ಅನುಸರಿಸುತ್ತಿದ್ದು, ಬದುಗಳಲ್ಲಿ ತೇಗ (7), ಸಿಲ್ವರ್ (10), ಹೆಬ್ಬೇವು (8), ಆಲ (3) ಮರಗಳನ್ನು ಬೆಳೆಸಿದ್ದಾರೆ. ಉಪಕಸುಬುಗಳಾದ ಹೈನುಗಾರಿಕೆ ಹಾಲ್ ಬ್ಲಾಕ್ (2) ಎಚ್.ಎಫ್. (3) ಮತ್ತು ನಾಟಿ ಹಳ್ಳಿಕಾರ್ (2) ಹಸುಗಳು, ನಾಟಿ ಮೇಕೆ (9) ಕುರಿ (13 ಬಂಡೂರು) ಸಾಕಾಣಿಕೆ ಮಾಡುತ್ತಿದ್ದು, ಮೇವಿಗಾಗಿ ಸೂಪರ್ ನೇಪಿಯಾರ್ ಹುಲ್ಲು (ಎನ್.ಬಿ. 21), ಗಿನಿ ಹುಲ್ಲು (ಬಿ.ಎಚ್.18), ಆಫ್ರಿಕನ್ ಟಾಲ್ ಮೆಕ್ಕೆಜೋಳ, ಅಲಸಂದೆ, ರೋಡ್ಸ್‌ ಹುಲ್ಲು, ನುಗ್ಗೆ, ಅಗಸೆ, ಮೇವಿನ ಅಲಸಂದೆ ಬೆಳೆದು, 30-45 ಟನ್ ಸೈಲೇಜ್ ಉತ್ಪಾದಿಸುತ್ತಿದ್ದಾರೆ. 26 ಸ್ವರ್ಣಧಾರಾ, 15 ನಾಟಿ ಕೋಳಿ, 11 ಗಿರಿರಾಜ ಕೋಳಿಗಳನ್ನು ಸಾಕುತ್ತಿದ್ದಾರೆ. 2 ಜೇನು ಪೆಟ್ಟಿಗೆಗಳಿದ್ದು, 3-4 ಕೆ.ಜಿ. ಜೇನು ತುಪ್ಪ ಉತ್ಪಾದಿಸುತ್ತಾರೆ. ಮೇವಿಗಾಗಿ ಮೆಕ್ಕೆಜೋಳವನ್ನು ಹೈಡ್ರೋಫೋನಿಕ್ಸ್ ತಂತ್ರಜ್ಞಾನದ ಮೂಲಕ ಬೆಳೆಯುವುದೂ ಕೂಡ ಇವರ ವಿಶೇಷತೆಗಳಲ್ಲಿ ಒಂದು. ಮೈಸೂರಿನ ಒ.ಡಿ.ಪಿ. ಸಂಸ್ಥೆಯಲ್ಲಿ ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡಿಸಿದ್ದಾರೆ. ಮಣ್ಣು ಪರೀಕ್ಷೆ ಆಧಾರದ ಮೇಲೆ ಪೋಷಕಾಂಶಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಎರೆಹುಳು ಗೊಬ್ಬರ, ಕಾಂಪೋಸ್ಟ್‌ ಗೊಬ್ಬರದ ಜೊತೆಗೆ ಹಸಿರೆಲೆ ಗೊಬ್ಬರಗಳಾದ ಅಲಸಂದೆ, ಡಯಾಂಚ, ಹುರುಳಿ ಬೆಳೆಗಳನ್ನು ಬೆಳೆದು ಮಣ್ಣಿಗೆ ಸೇರಿಸುತ್ತಾರೆ. ಜೈವಿಕ ರೋಗ/ಕೀಟ ನಾಶಕಗಳಾದ ಮೆಟಾರೈಜಿಯಂ, ಪೆಸಿಲೋಮೈಸಿಸ್, ವರ್ಟಿಸೀಲಿಯಂ, ಟ್ರೈಕೋಡರ್ಮಾ, ಸೂಡೋಮೊನಾಸ್ ಹಾಗೂ ಮೈಕೊರೈಜೆಯನ್ನು ಬಳಸುತ್ತಾರೆ. ಮಣ್ಣು ಮತ್ತು ನೀರು ಸಂರಕ್ಷಣೆಗಾಗಿ ಬದುಗಳ ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಇಳಿಜಾರಿಗೆ ಅಡ್ಡಲಾಗಿ ಬಿತ್ತನೆ ಮುಂತಾದ ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಂಡಿದ್ದಾರೆ. ಆಧುನಿಕ ನೀರಾವರಿ ಪದ್ಧತಿಗಳಾದ ಹನಿ ನೀರಾವರಿ ಹಾಗು ತುಂತುರು ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಂಡು ನೀರಿನ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬಾನುಲಿ ಕಾರ್ಯಕ್ರಮದದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ರೇಷ್ಮೆ ಕೃಷಿ ಹಾಗೂ ಗುಲಾಬಿ ಕೃಷಿಯ ಬಗ್ಗೆ ತಾಂತ್ರಿಕ ಮಾಹಿತಿ ನೀಡುತ್ತಿದ್ದು ತಾಲೂಕಿನ ಇತರೆ ರೈತರುಗಳಿಗೆ ಮಾದರಿ ಎನಿಸಿದ್ದಾರೆ. ಕೆ.ಆರ್. ನಗರ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯತ್ವ ಹೊಂದಿರುವ ಇವರು, ರೇಷ್ಮೆ ಸಿರಿ, ಪಶು ಸಿರಿ ಮತ್ತು ಮಂಜು ವಾಣಿ ನಿಯತಕಾಲಿಕೆಗಳಿಗೆ ಚಂದದಾರರಾಗಿದ್ದಾರೆ. ತಿಂಗಳಿಗೊಮ್ಮೆ ಸಾವಯವ ಕೃಷಿಕರ ತೋಟಕ್ಕೆ ರೈತರೊಡನೆ ಭೇಟಿ ನೀಡುವುದು, ಸಂವಾದಗಳು, ರೈತರಿಗೆ ತರಬೇತಿ ಹಾಗೂ ವಿಜ್ಞಾನಿಗಳೊಡನೆ ಸಮಾಲೋಚನೆ ನಡೆಸುತ್ತಾರೆ. ಹಲವಾರು ರೈತ/ರೈತ ಮಹಿಳೆಯರು, ವಿದ್ಯಾರ್ಥಿಗಳು ಇವರ ತೋಟಕ್ಕೆ ಭೇಟಿ ನೀಡಿ ಸಾವಯವ ಕೃಷಿ ಹಾಗೂ ಸಮಗ್ರ ಕೃಷಿಯ ಬಗ್ಗೆ ಮಾಹಿತಿ ಪಡೆಯುತ್ತಾರೆ. ಇವರು ತಮ್ಮ ಕೃಷಿ ಹಾಗೂ ಇತರೆ ಕೃಷಿ ಉಪಕಸುಬುಗಳಿಂದ ವಾರ್ಷಿಕವಾಗಿ 15.90 ಲಕ್ಷ ರು. ನಿವ್ವಳ ಅದಾಯಗಳಿಸಿ ಸಂತೃಪ್ತಿ ಜೀವನ ನಡೆಸುತ್ತಿದ್ದಾರೆ.-----ಪ್ರತಾಪ್‌ ಅವರ ಈ ಪರಿಶ್ರಮವನ್ನು ಗುರುತಿಸಿ ಕೃಷಿ ಇಲಾಖೆ (ಆತ್ಮ) ವತಿಯಿಂದ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ (2022-23), ಕೃಷಿ ವಿಶ್ವವಿದ್ಯಾಾನಿಲಯ, ಬೆಂಗಳೂರು ವತಿಯಿಂದ ಕೃಷಿ ಮೇಳ-2022ರಲ್ಲಿ ತಾಲೂಕು ಮಟ್ಟದ ಅತ್ಯುತ್ತಮ ಯುವ ರೈತ ಪ್ರಶಸ್ತಿ, ಹಾಗೂ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ (2020-21), ದಸರಾ ಕೃಷಿ ಮೇಳ (2023) ಸಮಿತಿಯಿಂದ ಪ್ರಶಂಸನಾ ಪತ್ರ, ತೋಟಗಾರಿಕೆ ಇಲಾಖೆಯಿಂದ 2022-23ನೇ ಸಾಲಿನ ಜಿಲ್ಲಾ ಮಟ್ಟದ ಫಲಶ್ರೇಷ್ಠ ಪ್ರಶಸ್ತಿ, 2023ರ ರೈತ ದಿನಾಚರಣೆ ಅಂಗವಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಕೆ.ಆರ್.ನಗರ ತಾಲೂಕಿನ ಪೃಥ್ವಿ ಜ್ಯುವೆಲ್ಲರ್‌ಸ್‌ ವತಿಯಿಂದ ನೇಗಿಲ ಯೋಗಿ ಪ್ರಶಸ್ತಿ ಲಭಿಸಿವೆ. ಸಂಪರ್ಕ ವಿಳಾಸಃ ಎಸ್‌.ಪಿ. ಪ್ರತಾಪ್, ಬಿನ್ ಪುಟ್ಟರಾಜು, ಸುಗ್ಗನಹಳ್ಳಿ, ಹೊಸಅಗ್ರಹಾರ ಹೋಬಳಿ, ಕೆ.ಆರ್. ನಗರ ತಾಲೂಕು, ಮೈಸೂರು ಜಿಲ್ಲೆ, ಮೊ. 70190 44279----ಕೋಟ್‌...ಪ್ರತಾಪ್‌ ಅವರು, ವಿಸ್ತರಣಾ ಶಿಕ್ಷಣ ಘಟಕ, ಸಾವಯವ ಕೃಷಿ ಸಂಶೋಧನಾ ಕೇಂದ್ರ ನಾಗನಹಳ್ಳಿ, ಜಿಲ್ಲಾ ಕೃಷಿ ತರಬೇತಿ ಸಂಸ್ಥೆ-ಮೈಸೂರು, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಹಾಗೂ ರೇಷ್ಮೆ ಇಲಾಖೆಯ ವಿಜ್ಞಾನಿಗಳು ಹಾಗು ಅಧಿಕಾರಿಗಳೊಡನೆ ಸತತ ಸಂಪರ್ಕದಲ್ಲಿದ್ದು, ಕೃಷಿ ತಾಂತ್ರಿಕತೆ, ತರಬೇತಿಗಳು ಹಾಗೂ ಇಲಾಖೆಯಿಂದ ಲಭಿಸುವ ಸವಲತ್ತುಗಳನ್ನು ಸದುಪಯೋಗ ಪಡೆದು ಆದಾಯ ವೃದ್ಧಿಸಿಕೊಳ್ಳುವಲ್ಲಿ ಇತರರಿಗೆ ಮಾದರಿಯಾಗಿ ಪ್ರಗತಿಪರ ರೈತರಾಗಿ ಗುರುತಿಸಿಕೊಂಡಿದ್ದಾರೆ. - ಡಾ.ಸಿ. ರಾಮಚಂದ್ರ, ಪ್ರಾಧ್ಯಾಪಕರು, ವಿಸ್ತರಣಾ ಶಿಕ್ಷಣ ಘಟಕ, ನಾಗನಹಳ್ಳಿ