ಪ್ರವಾಸೋದ್ಯಮ, ಕೈಗಾರಿಕೆ, ಕೃಷಿ ಅಭಿವೃದ್ಧಿಗೆ ಬಜೆಟ್‌ನಲ್ಲಿ ಬೇಕಿದೆ ಆದ್ಯತೆ

| Published : Feb 13 2024, 12:50 AM IST

ಪ್ರವಾಸೋದ್ಯಮ, ಕೈಗಾರಿಕೆ, ಕೃಷಿ ಅಭಿವೃದ್ಧಿಗೆ ಬಜೆಟ್‌ನಲ್ಲಿ ಬೇಕಿದೆ ಆದ್ಯತೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ವರ್ಷದ ಬಜೆಟ್‌ನಲ್ಲಿಯೂ ಜನರು ಜಿಲ್ಲೆಗೆ ಆದ್ಯತೆ ಸಿಗುತ್ತದೆಯೇ ಎನ್ನುವ ಆಸೆ ಕಣ್ಣಿನಿಂದಲೇ ಬಜೆಟ್ ಗಮನಿಸುತ್ತಿದ್ದು, ಫೆ. 16ರಂದು ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ ಜಿಲ್ಲೆಯ ಪಾಲಿಗೆ ವಿಶೇಷವಾಗಿ ಪರಿಣಮಿಸಿದೆ.

ಶಿವಕುಮಾರ ಕುಷ್ಟಗಿಕನ್ನಡಪ್ರಭ ವಾರ್ತೆ ಗದಗಗದಗ ಜಿಲ್ಲೆಯಾಗಿ 27 ವರ್ಷಗಳು ಪೂರೈಸಿವೆ. ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಆಗಿಲ್ಲ ಎನ್ನುವುದು ಸ್ಪಷ್ಟ. ಪ್ರತಿ ವರ್ಷದ ಬಜೆಟ್‌ನಲ್ಲಿಯೂ ಜನರು ಜಿಲ್ಲೆಗೆ ಆದ್ಯತೆ ಸಿಗುತ್ತದೆಯೇ ಎನ್ನುವ ಆಸೆ ಕಣ್ಣಿನಿಂದಲೇ ಬಜೆಟ್ ಗಮನಿಸುತ್ತಿದ್ದು, ಫೆ. 16ರಂದು ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ ಜಿಲ್ಲೆಯ ಪಾಲಿಗೆ ವಿಶೇಷವಾಗಿ ಪರಿಣಮಿಸಿದೆ.

ಕೈಗಾರಿಕೆಗಳ ಸ್ಥಾಪನೆ, ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿ ಸೇರಿದಂತೆ ಹೇಳಿಕೊಳ್ಳುವಂತಹ ಯೋಜನೆಗಳು ಇದುವರೆಗೂ ಸಾಕಾರಗೊಂಡಿಲ್ಲ. ಅದರ ನಡುವೆ ಕಳಸಾ ಬಂಡೂರಿ, ಮಹದಾಯಿ ಯೋಜನೆ ಅನುಷ್ಠಾನ, ರಸ್ತೆಗಳ ಅಭಿವೃದ್ಧಿ, ಗದಗ-ಬೆಟಗೇರಿ ಅವಳಿ ನಗರಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆ ಯೋಜನೆ, ಕೃಷಿ ಕ್ಷೇತ್ರಕ್ಕೆ ಪ್ರೋತ್ಸಾಹ ಸೇರಿ ಜಿಲ್ಲೆಯ ಅಭಿವೃದ್ಧಿಗೆ ಶಾಶ್ವತವಾದ ಯೋಜನೆಗಳ ಕೊರತೆ ಈಗಲೂ ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಪ್ರವಾಸೋದ್ಯಮ ನಿರೀಕ್ಷೆ ಹೆಚ್ಚು: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲರೇ ಪ್ರವಾಸೋದ್ಯಮ ಸಚಿವರಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಪ್ರವಾಸೋದ್ಯಮ ಇಲಾಖೆಯಿಂದ ಹಿರಿಯ ಅಧಿಕಾರಿ ಮನೋಜ ಕುಮಾರ ನೇತೃತ್ವದಲ್ಲಿ ಗದಗ ಜಿಲ್ಲಾ ಪ್ರವಾಸೋದ್ಯಮ ಸಮಗ್ರ ಅಭಿವೃದ್ಧಿ ಸಮಿತಿ ರಚನೆಯಾಗಿ ಜಿಲ್ಲೆಯ ಪ್ರವಾಸೋದ್ಯಮ ಸಮಗ್ರ ಅಭಿವೃದ್ಧಿಗಾಗಿ 804 ಕೋಟಿ ಅಂದಾಜು ಮೊತ್ತದ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸುವ ಬಗ್ಗೆ ಶಿಫಾರಸ್ಸುಗಳನ್ನು ಮಾಡಲಾಗಿದೆ. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಸಿಎಂ ಇದಕ್ಕೆ ವಿಶೇಷ ಆದ್ಯತೆ ನೀಡುತ್ತಾರೆ ಎನ್ನುವ ನಿರೀಕ್ಷೆ ಸಹಜವಾಗಿಯೇ ಹೆಚ್ಚಾಗಿದೆ.

ಕೈಗಾರಿಕೆ ಬೇಕಿದೆ ಆದ್ಯತೆ: ಕೃಷಿ ಪ್ರಧಾನವಾಗಿರುವ ಜಿಲ್ಲೆಯಲ್ಲಿ ಕೃಷಿ ಆಧಾರಿತ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಡಿ ಇಡಬೇಕಿದೆ. ಈ ಹಿಂದೆ ಜಿಲ್ಲೆಗೆ ಪೋಸ್ಕೋದಂತ ಕಂಪನಿ ಬಂದಾಗ ಕಾಂಗ್ರೆಸ್‌ನವರೇ, ಈ ಕಂಪನಿ ಬೇಡ, ಕೃಷಿ ಆಧಾರಿತ ಕೈಗಾರಿಕೆ ಬೇಕು ಎಂದು ಅದನ್ನು ವಿರೋಧಿಸಿದರು. ಈಗ ಅವರ ಸರ್ಕಾರವಿದೆ. ಅವರಾದರೂ ಒಂದು ಕೃಷಿ ಕೈಗಾರಿಕೆ ಸ್ಥಾಪನೆಗೆ ಆದ್ಯತೆ ನೀಡಲಿ ಎನ್ನುವ ಒತ್ತಾಸೆಗಳು ಜಿಲ್ಲೆಯ ವಾಣಿಜ್ಯೋದ್ಯಮಿಗಳಿಂದ ಕೇಳಿ ಬರುತ್ತಿದೆ.

ನೀರೇ ಸಿಗುತ್ತಿಲ್ಲ: ಗದಗ ಬೆಟಗೇರಿ ಅವಳಿ ನಗರಕ್ಕೆ ಅಂಟಿದ ಬಹು ದೊಡ್ಡ ಶಾಪ ಎಂದರೆ ಕುಡಿವ ನೀರಿನ ಸಮಸ್ಯೆ. ಯಾವುದೇ ಸರ್ಕಾರಗಳು ಬಂದರೂ ಅವಳಿ ನಗರದ ಜನರು 15 ರಿಂದ 20 ದಿನಗಳಿಗೊಮ್ಮೆ ನೀರು ಪಡೆಯುವ ಸ್ಥಿತಿಯಿಂದ ಹೊರಬರಲು ಆಗುತ್ತಿಲ್ಲ. ಇದಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಸರ್ಕಾರಗಳು ಸಾಕಷ್ಟು ಅನುದಾನ ನೀಡಿದ್ದೇವೆ ಎಂದು ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಪ್ರಸಕ್ತ ಬಜೆಟ್‌ನಲ್ಲಿ ಇದಕ್ಕೆ ಶಾಶ್ವತ ಪರಿಹಾರ ನೀಡುವಲ್ಲಿ ಸರ್ಕಾರ ವಿಶೇಷ ಗಮನ ನೀಡಬೇಕಿದೆ. ಮಹದಾಯಿ ಕನಸು, ನನಸಾಗಲಿ:ಹಲವಾರು ದಶಕಗಳಿಂದ ಉತ್ತರ ಕರ್ನಾಟಕದ ಪ್ರಮುಖ ಜೀವನಾಡಿಯಾಗಿರುವ ಮಲಪ್ರಭಾ ನದಿಗೆ ಮಹದಾಯಿ ಜೋಡಣೆ ವಿಷಯದಲ್ಲಿ ಎಲ್ಲಾ ರೀತಿಯ ರಾಜಕೀಯಗಳು ಪೂರ್ಣಗೊಂಡಿವೆ. ಆದರೆ ವಾಸ್ತವದಲ್ಲಿ ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ, ಇದಕ್ಕಿರುವ ಅಡೆತಡೆಗಳನ್ನು ರಾಜ್ಯ ಸರ್ಕಾರ ನೀಗಿಸುವ ನಿಟ್ಟಿನಲ್ಲಿ ದೃಢ ನಿಲುವು ತೆಗೆದುಕೊಂಡು, ಅದಕ್ಕಾಗಿ ವಿಶೇಷ ಅನುದಾನ ನೀಡಬೇಕಿದೆ. ಗದಗ ಸೇರಿದಂತೆ 4 ಜಿಲ್ಲೆ 11 ತಾಲೂಕುಗಳ ರೈತರ ಬಹು ವರ್ಷದ ಕನಸು ನನಸು ಮಾಡಬೇಕಿದೆ. ಆಗುತ್ತಾ ಟ್ರಕ್ ಟರ್ಮಿನಲ್: ಗದಗದಲ್ಲಿ ಬೃಹತ್ ಪ್ರಮಾಣದ ಟ್ರಕ್ ಟರ್ಮಿನಲ್ ನಿರ್ಮಾಣವಾಗಬೇಕು ಇದರಿಂದ ರೈಲುಗಳ ಮೂಲಕ ಭಾರೀ ಪ್ರಮಾಣದಲ್ಲಿ ಆಗಮಿಸುವ ಸರಕುಗಳನ್ನು ಇಲ್ಲಿ ಇಳಿಸಿ ಬೇರೆಡೆ ಸಾಗಿಸಲು ಅನುಕೂಲವಾಗುತ್ತದೆ, ಇದರಿಂದಾಗಿ ಸಾವಿರಾರು ಪರ್ಯಾಯ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎನ್ನುವ ಜಿಲ್ಲೆಯ ಜನರ ಬೇಡಿಕೆಗೆ ಈ ವರ್ಷದ ಬಜೆಟ್‌ನಲ್ಲಾದರೂ ವಿಶೇಷ ಗಮನ ನೀಡುತ್ತಾರೆ ಕಾಯ್ದು ನೋಡಬೇಕು.

ಲಕ್ಕುಂಡಿ ಪ್ರಾಧಿಕಾರಕ್ಕೆ ಅನುದಾನ ಬೇಕಿದೆ: ಐತಿಹಾಸಿಕ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ ಹಲವು ವರ್ಷಗಳೇ ಕಳೆದಿವೆ. ಅಂದಿನ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಸಚಿವರಾಗಿದ್ದ ಎಚ್.ಕೆ. ಪಾಟೀಲ ಅವರು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 3 ಕೋಟಿ ಅನುದಾನವನ್ನು ಮೀಸಲಿರಿಸಿದ್ದರು. ನಂತರ ಜನಪ್ರತಿನಿಧಿಗಳ ಹಾಗೂ ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದಾಗಿ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ನನೆಗುದಿಗೆ ಬಿದ್ದಿದ್ದು. ಅದಕ್ಕೂ ಹೆಚ್ಚಿನ ಅನುದಾನ ಮತ್ತು ಮಾನ್ಯತೆ ಬೇಕಿದೆ. ಪ್ರಸಕ್ತ ಬಜೆಟ್ ನಲ್ಲಿ ಡಂಬಳದಲ್ಲಿ ತೋಟಗಾರಿಕಾ ಕಾಲೇಜು ಸ್ಥಾಪನೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಸಲ್ಲಿಸಿದ್ದೇವೆ, ಮುಖ್ಯಮಂತ್ರಿಗಳು ರಾಜ್ಯದ ಸಮಗ್ರ ಹಿತವನ್ನು ಮುಂದಿಟ್ಟುಕೊಂಡು ಬಜೆಟ್ ಮಂಡಿಸುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.