ಯಳಂದೂರಲ್ಲಿ ಪಟ್ಟಣ ಸ್ವಚ್ಛತಾ ಅಭಿಯಾನ: ಮಹೇಶ್‌ಕುಮಾರ್

| Published : Jul 04 2025, 12:32 AM IST

ಯಳಂದೂರಲ್ಲಿ ಪಟ್ಟಣ ಸ್ವಚ್ಛತಾ ಅಭಿಯಾನ: ಮಹೇಶ್‌ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿಯ ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣದ ವಿಶೇಷ ಸ್ವಚ್ಛತಾ ಅಭಿಯಾನ ಕೈಗೊಂಡಿದ್ದು ಇಡೀ ಪಟ್ಟಣವನ್ನು ಸ್ವಚ್ಛತೆ ಮಾಡಲಾಗುವುದು ಎಂದು ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಇಲ್ಲಿಯ ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣದ ವಿಶೇಷ ಸ್ವಚ್ಛತಾ ಅಭಿಯಾನ ಕೈಗೊಂಡಿದ್ದು ಇಡೀ ಪಟ್ಟಣವನ್ನು ಸ್ವಚ್ಛತೆ ಮಾಡಲಾಗುವುದು ಎಂದು ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್ ಮಾಹಿತಿ ನೀಡಿದರು.

ಪಟ್ಟಣದಲ್ಲಿ ಪ್ರತಿನಿತ್ಯ ಪೌರ ಕಾರ್ಮಿಕರು ಪಟ್ಟಣವನ್ನು ಸ್ವಚ್ಛಗೊಳಿಸುತ್ತಾರೆ. ಆದರೆ ಈ ವಿಶೇಷ ಸ್ವಚ್ಛತಾ ಅಭಿಯಾನದಲ್ಲಿ ಪಟ್ಟಣದ ರಸ್ತೆ ಬದಿಯಲ್ಲಿ ಬೆಳೆದಿರುವ ಹುಲ್ಲು, ಗಿಡಕಡ್ಡಿಗಳನ್ನು ತೆರವುಗೊಳಿಸುವುದು, ಪಟ್ಟಣದ ಸರ್ಕಾರಿ ಕಚೇರಿಗಳ ಆವರಣದಲ್ಲಿ, ಪಟ್ಟಣ ಪಂಚಾಯಿತಿಯ ಖಾಲಿ ನಿವೇಶನಗಳು, ಮುಖ್ಯ ರಸ್ತೆಯ ಬದಿ, ಪಟ್ಟಣದ ಸುವರ್ಣಾವತಿ ಸೇತುವೆ, ಪಟ್ಟಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಸುತ್ತಮುತ್ತ ಸ್ವಚ್ಛತೆ ಮಾಡುವುದು, ಪ್ರಮುಖ ಚರಂಡಿಗಳ ಹೂಳು ಹಾಗೂ ಸುತ್ತ ಬೆಳೆದಿರುವ ಕಳೆ ಸಸ್ಯಗಳನ್ನು ತೆರವುಗೊಳಿಸಲಾಗುತ್ತಿದೆ ಎಂದರು.

ಪ್ರತಿನಿತ್ಯ ಪಂಚಾಯಿತಿಯ ಎಲ್ಲಾ ಪೌರ ನೌಕರರನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದರೊಂದಿಗೆ ಜೆಸಿಬಿಯನ್ನು ಬಳಸಿಕೊಳ್ಳಲಾಗುತ್ತಿದೆ. ಈಗ ಮಳೆಗಾಲವಾಗಿದೆ. ಗಿಡಗಳು, ಪೊದೆ ಬೆಳೆದು ಮಳೆ ನೀರು ಸರಾಗವಾಗಿ ಸಾಗುವುದಿಲ್ಲ. ಪಟ್ಟಣದ ಜೋಡಿ ರಸ್ತೆಯ ಬದಿಯಲ್ಲಿ ನೀರು ಹೋಗಲು ಇರುವ ರಂಧ್ರಗಳು ಮುಚ್ಚಿ ಹೋಗಿದ್ದು ನೀರು ರಸ್ತೆಯಲ್ಲೇ ನಿಲ್ಲುತ್ತಿತ್ತು. ಇದೇ ಸ್ಥಿತಿ ಪಟ್ಟಣದ ಸುವರ್ಣಾವತಿ ಸೇತುವೆ ಮೇಲೂ ಇತ್ತು. ಅಲ್ಲದೆ ಕಳೆ ಸಸ್ಯಗಳಿಗೆ ಸೊಳ್ಳೆ ಕ್ರಿಮಿಕೀಟಗಳು ಹೆಚ್ಚಾಗಿತ್ತು. ಹಾಗಾಗಿ ಇದನ್ನು ಸ್ವಚ್ಛಗೊಳಿಸುವ ವಿಶೇಷ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದರು.

ಪಟ್ಟಣದ 11 ವಾರ್ಡ್‌ಗಳಲ್ಲೂ ಈ ಅಭಿಯಾನ ಪ್ರತಿನಿತ್ಯ ನಡೆಯಲಿದ್ದು ಪ್ರಸ್ತುತ ಪಟ್ಟಣ ಬಳೇಪೇಟೆಯ 10 ಹಾಗೂ 11ನೇ ವಾರ್ಡ್‌ನಲ್ಲಿ ಕೆಲಸಗಳು ಸಾಗುತ್ತಿವೆ ಎಂದರು.

ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಬೀಸಾಡಬಾರದು, ಪ್ರತಿನಿತ್ಯ ಪಂಚಾಯಿತಿಯ ಕಸ ವಿಲೇವಾರಿ ವಾಹನಗಳು ಎಲ್ಲಾ ವಾರ್ಡ್‌ಗಳಿಗೂ ಬರುತ್ತದೆ. ಹಸಿ ಹಾಗೂ ಒಣಕಸವನ್ನು ಬೇರ್ಪಡಿಸಿ ಈ ವಾಹನಕ್ಕೆ ನೀಡಬೇಕು. ಈ ಮೂಲಕ ಪಟ್ಟಣವನ್ನು ಶುಚಿಯಾಗಿಟ್ಟುಕೊಳ್ಳಲು ಪಂಚಾಯಿತಿಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪಪಂ ಸದಸ್ಯ ಮಹೇಶ್, ಸಿಬ್ಬಂದಿ ಮಲ್ಲಿಕಾರ್ಜುನ, ಅರವಿಂದ, ರಘು, ಪೌರ ಕಾರ್ಮಿಕರು ಇತರರು ಇದ್ದರು.