ಧಾರವಾಡ:

ಹೆಚ್ಚುತ್ತಿರುವ ಸೈಬರ್ ಅಪರಾಧಗಳ ತಡೆಗಟ್ಟಲು ಈಗಾಗಲೇ ಅಸ್ತಿತ್ವದಲ್ಲಿರುವ ಸೆನ್ ಠಾಣೆಗಳಿಗೆ ಎಸ್ಪಿ ರ್‍ಯಾಂಕ್‌ನ ಅಧಿಕಾರಿಗಳನ್ನು ನೇಮಿಸಲಾಗುವುದೆಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೈಬರ್ ಅಪರಾಧಗಳು ಯಾವುದೇ ಅಡೆತಡೆಗಳಿಲ್ಲದೇ ಎಲ್ಲೆಡೆ ನಡೆಯುತ್ತಿವೆ. ಈ ಹಿನ್ನಲೆಯಲ್ಲಿ ಆಧುನಿಕ ಅಪರಾಧ ತನಿಖೆಗಳಿಗೆ ತಕ್ಕಂತೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು. ಯಾವುದೇ ಸೈಬರ್ ಅಪರಾಧವಾದರೆ ಹೊಸ ಕಾನೂನುಗಳನ್ವಯ ತನಿಖೆ ನಡೆಸಬೇಕಾಗುತ್ತದೆ ಎಂದರು.

ಪ್ರತಿ ಜಿಲ್ಲೆಗೊಂದರಂತೆ ರಾಜ್ಯದಲ್ಲಿ ಒಟ್ಟು 43 ಸೆನ್ ಪೊಲೀಸ್ ಠಾಣೆಗಳಿದ್ದು, ಸದ್ಯ ಡಿವೈಎಸ್ಪಿ ಅಧಿಕಾರಿಗಳು ಇರುತ್ತಾರೆ. ಮುಂದಿನ ದಿನಗಳಲ್ಲಿ ಎಸ್‌ಪಿ ರ್‍ಯಾಂಕ್‌ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದ ಅವರು, ಸೆನ್ ಠಾಣೆಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ವಿಶೇಷ ರೀತಿಯ ತರಬೇತಿ ರೂಪಿಸಲಾಗುವುದು. ಈ ಹಿನ್ನಲೆಯಲ್ಲಿ ವಿಧಿ-ವಿಜ್ಞಾನ ಸಂಸ್ಥೆಯು ರಾಜ್ಯದ ಪೊಲೀಸ್ ಇಲಾಖೆಗೆ ಹೆಚ್ಚು ಉಪಯೋಗವಾಗಲಿದೆ ಎಂದರು.

ದಿನೇ ದಿನೇ ಅಪರಾಧಗಳ ರೂಪುರೇಷೆ ಬದಲಾಗುತ್ತಿದೆ. ತನಿಖೆಯ ಮಾರ್ಗಗಳು ಸಹ ಬದಲಾಗುತ್ತಿವೆ. ಆಧುನಿಕ ತಂತ್ರಜ್ಞಾನದ ಹಿನ್ನಲೆಯಲ್ಲಿ ಗುಪ್ತಚರ ವಿಭಾಗದಲ್ಲಿ ಪ್ರತ್ಯೇಕ ತರಬೇತಿ ನೀಡಿದಂತೆ ಸೆನ್ ಠಾಣೆ ಸಿಬ್ಬಂದಿಗಳಿಗೆ ಪ್ರತ್ಯೇಕ ತರಬೇತಿ ನೀಡಲಾಗುವುದೆಂದು ಸಚಿವರು ತಿಳಿಸಿದರು.


ಸೈಬರ್ ಕ್ರೈಂಗಳಿಗೆ ಯಾವುದೇ ಅಡೆತಡೆ ಇಲ್ಲದೇ ವಿಶ್ವವ್ಯಾಪಿಯಾಗಿವೆ. ಗುಜರಾತನಲ್ಲಿ ಸೈಬರ್ ವಿಶ್ವವಿದ್ಯಾಲಯ ನಿರ್ಮಿಸಲಾಗಿದ್ದು ವಿವಿಧ ದೇಶಗಳಿಂದ ಬಂದು ತರಬೇತಿ ಪಡೆಯುತ್ತಿದ್ದಾರೆ. ಇದರ ಭಾಗವಾಗಿ ಧಾರವಾಡದಲ್ಲಿ ವಿಧಿವಿಜ್ಞಾನ ಸಂಸ್ಥೆ ಸ್ಥಾಪಿಸಲಾಗಿದ್ದು ರಾಜ್ಯದ ಪೊಲೀಸ್ ಇಲಾಖೆಗೆ ಆಧುನಿಕ ವಿಧಿ-ವಿಜ್ಞಾನವು ಅತೀ ಹೆಚ್ಚು ಮಹತ್ವ ಪಡೆದುಕೊಳ್ಳಲಿದೆ ಎಂದರು.

ಡ್ರಗ್ಸ್‌ ವಿರುದ್ಧ ಸಮರ:

ರಾಜ್ಯ ಸರ್ಕಾರವು ಡ್ರಗ್ಸ್‌ ವಿರುದ್ಧ ಸಮರ ಸಾರಿದ್ದು ಸ್ವತಃ ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಈ ಬಗ್ಗೆ ವಿಶೇಷ ಕಾರ್ಯಪಡೆ ರಚಿಸಿದ್ದಾರೆ. ಈಗಾಗಲೇ ಹೈಡ್ರೊ ಗಾಂಜಾ ನಾಲ್ಕು ಗೋಡೆಗಳ ಕೋಣೆಗಳಲ್ಲಿ ಬೆಳೆಯಲಾಗುತ್ತಿದ್ದು ಇದನ್ನು ಕಂಡು ಹಿಡಿಯುವುದು ಸವಾಲಾಗಿದೆ ಎಂದ ಪರಮೇಶ್ವರ, ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ 10 ಸಾವಿರ ವಿದೇಶಿಗರು ವಾಸಿಸುತ್ತಿದ್ದು ಆಫ್ರಿಕಾ ಪ್ರಜೆಗಳ ಮೇಲೆ ಹೆಚ್ಚು ನಿಗಾ ಇಡಲಾಗಿದೆ. ಕಳೆದೊಂದು ವರ್ಷದಲ್ಲಿ ಡ್ರಗ್ಸ್‌ ಧಂದೆಯಲ್ಲಿ ತೊಡಗಿದ ನೂರಾರು ವಿದ್ಯಾರ್ಥಿಗಳನ್ನು ಅವರವರ ದೇಶಕ್ಕೆ ವಾಪಸ್ ಕಳಸಲಾಗಿದೆ ಎಂದು ತಿಳಿಸಿದರು.

ಆನಂತರ ವಿಧಿ-ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಈ ವಿದ್ಯಾರ್ಥಿಗಳಿಗೆ ಬರುವ ದಿನಮಾನಗಳಲ್ಲಿ ವಿಪುಲ ಅವಕಾಶಗಳಿವೆ. ಸೈಬರ್ ಫಾರೆನ್ಸಿಕ್‍ಗಳು, ಸೈಬರ್ ಕಮಾಂಡೋ, ಸೈಬರ್ ಎಕ್ಸ್‌ಪರ್ಟ್‌ಗಳು ತಯಾರಿ ಮಾಡುವಲ್ಲಿ ವಿಧಿ-ವಿಜ್ಞಾನ ಸಂಸ್ಥೆಯು ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ತಂತ್ರಜ್ಞಾನಕ್ಕೆ ಅನುಗುಣವಾಗಿ ಅಪರಾಧ ಹಾಗೂ ಅಪರಾಧಿಗಳ ಚಟುವಟಿಕೆಗಳನ್ನು ಮೊದಲೇ ವಿಶ್ಲೇಷಿಸಲು ಸರಿಯಾದ ಉಪಕರಣಗಳ ಜತೆ ಪರಿಣಿತರು ಸಹ ಇರಲೇಬೇಕು. ಭಾರತೀಯ 3 ಹೊಸ ಕಾನೂನುಗಳ ಬೇಡಿಕೆಗೆ ಅನುಗುಣವಾಗಿ ಪ್ರಕರಣಗಳನ್ನು ತನಿಖೆ ಮಾಡುವಲ್ಲಿ ಅನುಕೂಲವಾಗುತ್ತದೆ. ಸೈಬರ್ ಪರಿಣಿತರು ನೀಡುವ ವರದಿ ಹಾಗೂ ದಾಖಲೆಗಳು ಹೊಸ ಕಾನೂನಿನಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ ಎಂದರು.

ಡಿಜಿಟಲ್ ವಿಧಿ ವಿಜ್ಞಾನ, ಜೌಷಧಿ ವಿಧಿ ವಿಜ್ಞಾನ, ಬಯೋಕೆಮಿಸ್ಟ್ರಿ ವಿಧಿ-ವಿಜ್ಞಾನ, ಸೈಬರ್ ಸೆಕ್ಯೂರಿಟಿ ಹಾಗೂ ಪರಿಸರ ವಿಧಿ ವಿಜ್ಞಾನಗಳನ್ನು ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ ಘಾಟೆ ತಿಳಿಸಿದರು.

ಪ್ರಯೋಗಾಲಯ ಹಾಗೂ ಪ್ರಾತ್ಯಕ್ಷಿಕೆಗಳನ್ನು ಸಚಿವರು ವೀಕ್ಷಿಸಿದರು. ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ, ಬೆಳಗಾವಿ ವಿಭಾಗದ ಐಜಿಪಿ ವಿಕಾಸಕುಮಾರ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಉಪಸ್ಥಿತರಿದ್ದರು.