ಸಾರಾಂಶ
ಪ್ರಸ್ತುತ ಧಾರವಾಡ ಜಿಲ್ಲಾಧಿಕಾರಿಯಾಗಿರುವ ಗುರುದತ್ತ ಹೆಗಡೆ ಅವರನ್ನು ಶಿವಮೊಗ್ಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದ್ದು, ಡಾ.ಸೆಲ್ವಮಣಿ ಅವರನ್ನು ಬೆಂಗಳೂರಿನ ಸೆಂಟರ್ ಫಾರ್ ಇ ಗವರ್‌ನೆನ್ಸ್‌ನ ಸಿಇಒ ಆಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಕನ್ನಡಪ್ರಭವಾರ್ತೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಗುರುದತ್ತ ಹೆಗಡೆ ಅವರನ್ನು ನೇಮಿಸಲಾಗಿದೆ.
ವರ್ಗಾವಣೆಗೊಂಡ ಡಾ.ಸೆಲ್ವಮಣಿ ಅವರನ್ನು ಬೆಂಗಳೂರಿನ ಸೆಂಟರ್ ಫಾರ್ ಇ ಗವರ್‌ನೆನ್ಸ್‌ನ ಸಿಇಒ ಆಗಿ ನೇಮಿಸಲಾಗಿದೆ. ಸೆಲ್ವಮಣಿ ಅವರು 2022ರ ಜನವರಿಯಲ್ಲಿ ಶಿವಮೊಗ್ಗದ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.ಪ್ರಸ್ತುತ ಧಾರವಾಡ ಜಿಲ್ಲಾಧಿಕಾರಿಯಾಗಿರುವ ಗುರುದತ್ತ ಹೆಗಡೆ ಅವರನ್ನು ಶಿವಮೊಗ್ಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ. 2014ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಗುರುದತ್ತ ಹೆಗಡೆ ಅವರು, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ಹೊನ್ನಗದ್ದೆ ಗ್ರಾಮದವರು.ಪಿಯುಸಿವರೆಗೆ ಧಾರವಾಡ ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ, ಬೆಂಗಳೂರಿನ ಆರ್.ವಿ.ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 2014ರಲ್ಲಿ ಲೋಕಸೇವ ಆಯೋಗದ ಪರೀಕ್ಷೆಯಲ್ಲಿ ಪಾಸಾಗಿ ಐಎಎಸ್ ಅಧಿಕಾರಿಯಾಗಿದ್ದಾರೆ.ಬೀದರ್ ಜಿಲ್ಲೆಯಲ್ಲಿ ಪ್ರೊಬೇಷನರಿ ಅವಧಿ ಪೂರೈಸಿದ್ದಾರೆ. ಕೊಪ್ಪಳದ ಉಪ ವಿಭಾಗಾಧಿಕಾರಿಯಾಗಿ, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ, ಧಾರವಾಡದ ಜಿಲ್ಲಾಧಿಕಾರಿಯಾಗಿ 2022ರಲ್ಲಿ ನೇಮಕವಾಗಿದ್ದರು.