ಬಿಸಿಲತಾಪದ ರೋಗಿಗಳಿಗೆ ತಕ್ಷಣ ಚಿಕಿತ್ಸೆ ಕೊಡಿ: ಜಿಲ್ಲಾಧಿಕಾರಿ

| Published : Apr 03 2024, 01:47 AM IST / Updated: Apr 03 2024, 07:41 AM IST

ಸಾರಾಂಶ

 ಸಾರ್ವಜನಿಕವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶಾಮಿಯಾನದ ವ್ಯವಸ್ಥೆ ಮಾಡುವಂತೆ ಆಯೋಜಕರಿಗೆ ತಿಳಿಸಬೇಕು - ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್

 ಕಲಬುರಗಿ :  ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಿದ್ದು, ಹೆಚ್ಚು ಜನಸಂದಣಿ, ಮಾರುಕಟ್ಟೆ ಪ್ರದೇಶ, ಕೈಗಾರಿಕೆ ಪ್ರದೇಶದಲ್ಲಿ, ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಸಾರ್ವಜನಿಕರಿಗೆ ಆರೋಗ್ಯ ಸಲಹೆಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು. ವಿಫಲವಾದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.

ಹೀಟ್ ಸ್ಟ್ರೋಕ್ ಹೆಚ್ಚಳ ಹಿನ್ನೆಲೆಯಲ್ಲಿ ತಮ್ಮ ಕಚೇರಿಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿದ ಅವರು, ಬೇಸಿಗೆ ಕಾರಣ ಸಹಜವಾಗಿಯೇ ಮದುವೆ, ಧಾರ್ಮಿಕ ಕಾರ್ಯಕ್ರಮ, ಜಾತ್ರೆ, ಜಯಂತಿ, ಹಬ್ಬ-ಹರಿದಿನಗಳ ಸಾಲುಗಳೇ ನಮ್ಮ ಮುಂದಿವೆ. ಇದರ ಜೊತೆಗೆ ಚುನಾವಣಾ ಪ್ರಚಾರ ಕಾವು ಹೆಚ್ಚುತ್ತಿದೆ. ಸಾರ್ವಜನಿಕವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶಾಮಿಯಾನದ ವ್ಯವಸ್ಥೆ ಮಾಡುವಂತೆ ಆಯೋಜಕರಿಗೆ ತಿಳಿಸಬೇಕು ಎಂದರು.

ಇನ್ನು ಬಿಸಿಲು ತಾಪದಿಂದ ಆಸ್ಪತ್ರೆಗೆ ಬರುವ ಯಾವುದೇ ರೋಗಿಗೆ ನಿಧಾನಗತಿ ಪ್ರವೇಶಾತಿ ಮತ್ತು ಚಿಕಿತ್ಸೆಯನ್ನು ತಾವು ಸಹಿಸುವುದಿಲ್ಲ ಎಂದು ಆರೋಗ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿಗಳು, ರೋಗಿಗೆ ಪ್ರಥಮಾದ್ಯತೆ ಮೇಲೆ ವೈದ್ಯಕೀಯ ಚಿಕಿತ್ಸೆ ನೀಡಬೇಕು. ಇನ್ನು ಜಿಮ್ಸ್ ಆಸ್ಪತ್ರೆಯಲ್ಲಿ 6 ಬೆಡ್, ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 2-3 ಬೆಡ್ ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಂದೆರಡು ಹಾಸಿಗೆಗಳು ಹೀಟ್ ಸ್ಟ್ರೋಕ್ ರೋಗಿಗಳಿಗೆ ಮೀಸಲಿಡಬೇಕು. ಈ ಸಂಬಂಧ ಸರ್ಕಾರದಿಂದ ಬಂದಿರುವ ಎಸ್.ಓ.ಪಿ. ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ಟ್ರಾಫಿಕ್ ಸಿಗ್ನಲ್ ಬೇಡ: ಕಲಬುರಗಿ ನಗರದಲ್ಲಿ ಬಿಸಿಲಿನ ತಾಪ ಹೆಚ್ಚಳವಾಗಿದ್ದು, ಇದು ಕಡಿಮೆ ಆಗುವವರೆಗೆ ನಗರದಲ್ಲಿನ ಪ್ರಮುಖ ವೃತ್ತಗಳಲ್ಲಿ ಹಾಕಲಾಗಿರುವ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯನ್ನು ಮಧ್ಯಾಹ್ನ 12ರಿಂದ ಸಂಜೆ 4ರ ವರೆಗೆ ತೆಗೆದು ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಸಾರ್ವಜನಿಕರು ಮ.12ರಿಂದ ಸಂಜೆ 4 ಗಂಟೆ ವರೆಗೆ ಅನಗತ್ಯ ಓಡಾಟ ಮಾಡದಂತೆ ಸಲಹೆ ನೀಡಬೇಕು ಎಂದು ಹೆಚ್ಚುವರಿ ಎಸ್.ಪಿ. ಶ್ರೀನಿಧಿ ಅವರಿಗೆ ಡಿ.ಸಿ. ಸೂಚನೆ ನೀಡಿದರು.

ನರೇಗಾ ಸೈಟ್‍ಗೆ ಮಕ್ಕಳನ್ನು ಕರೆತರಬೇಡಿ: ಜಿಲ್ಲೆಯಲ್ಲಿ ಬಿರು ಬಿಸಿಲು ಮತ್ತು ಬರಗಾಲ ಎರಡು ಇದೆ. ಗ್ರಾಮೀಣ ಭಾಗದ ನರೇಗಾ ಕೂಲಿ ಕಾರ್ಮಿಕರ ಮಕ್ಕಳಿಗೆಂದೆ ಇಲಾಖೆ ಕೂಸಿನ ಮನೆ ಆರಂಭಿಸಿದೆ. ಮಹಿಳೆಯರು ತಮ್ಮ ಮಕ್ಕಳನ್ನು ಈ ಕೇಂದ್ರದಲ್ಲಿ ಬಿಡಬೇಕು. ಬಿಸಿಲು ತಾಪ ಹೆಚ್ಚಳ ಇರುವುದರಿಂದ ಯಾವುದೇ ಕಾರಣಕ್ಕು ಮಕ್ಕಳನ್ನು ನರೇಗಾ ಸೈಟ್‍ಗೆ ಕರೆತರಬಾರದು. ಇನ್ನು ಕಾರ್ಮಿಕರ ಕೆಲಸದ ಅವಧಿಯನ್ನು ಬೆ.7ರಿಂದ 12ರ ವರೆಗೆ ನಿಗದಿಪಡಿಸಿ ಈ ಅವಧಿಯಲ್ಲಿ ಕುಡಿವ ನೀರಿನ ವ್ಯವಸ್ಥೆ, ಶಾಮಿಯಾನ, ಓ.ಆರ್.ಎಸ್. ಪಾಕಿಟ್ ವ್ಯವಸ್ಥೆ ಮಾಡಬೇಕೆಂದರು.

ಹೆಚ್ಚು ನೀರು ಕುಡಿಯಿರಿ, ನೀರಿನಂಶದ ಹಣ್ಣು-ತರಕಾರಿ ಸೇವಿಸಿ: ಡಿ.ಎಚ್.ಓ ಡಾ. ರತಿಕಾಂತ ಸ್ವಾಮಿ ಮಾತನಾಡಿ, ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಬಾಯಾರಿಕೆ ಇಲ್ಲದಿದ್ದರೂ ಹೆಚ್ಚು ನೀರು ಸೇವಿಸಬೇಕು. ವಿಶೇಷವಾಗಿ ನೀರಿನಂಶ ಹೆಚ್ಚಿರುವ ಕಲ್ಲಂಗಡಿ, ದ್ರಾಕ್ಷಿ, ಕರಬೂಜ್, ಕಿತ್ತಳೆ, ಅನಾನಸ್, ಸೌತೆಕಾಯಿ, ಲೆಟೂಸ್, ದ್ರವ ಪದಾರ್ಥಗಳಾದ ಓ.ಆರ್.ಎಸ್., ಎಳೆನೀರು, ಮಜ್ಜಿಗೆ, ಲಸ್ಸಿ, ನಿಂಬೆ ಹಣ್ಣಿನ ಶರಬತ್ತು, ಹಣ್ಣಿನ ಜ್ಯೂಸ್‍ಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸುವುದು ಆರೋಗ್ಯಕ್ಕೆ ಉತ್ತಮ ಎಂದರು.

ತಿಳಿ ಬಣ್ಣದ, ಹತ್ತಿಯ ಬಟ್ಟೆಯನ್ನು ಧರಿಸುವುದು ಉತ್ತಮ. ಕಪ್ಪು ಬಣ್ಣದ ಬಟ್ಟೆಗಳು ಧರಿಸಬಾರದು. ಬಿಸಿಲಿನಲ್ಲಿ ಹೊರ ಹೋಗುವ ಸಂದರ್ಭಗಳಲ್ಲಿ ಛತ್ರಿ, ಟೋಪಿ, ಹ್ಯಾಟ್, ಟವೆಲ್ ರಕ್ಷಣೆ ಪಡೆಯಬೇಕು. ಪಾದರಕ್ಷೆ ಅಥವಾ ಶೂಸ್‍ಗಳನ್ನು ಧರಿಸಲೇಬೇಕು. ಹೊರಾಂಗಣ ಚಟುವಟಿಕೆಗಳನ್ನು ಬೆ.11 ಗಂಟೆ ಒಳಗಾಗಿ ಅಥವಾ ಸಂಜೆ 4 ಗಂಟೆ ನಂತರ ಭಾಗಿಯಾದಲ್ಲಿ ಒಳ್ಳೆಯದು.

ಹೀಟ್‌ ಸ್ಟ್ರೋಕ್‌ಗೆ ತಕ್ಷಣ ಸ್ಪಂದಿಸಿ: ನವಜಾತ ಶಿಶುಗಳು ಹಾಗೂ ಚಿಕ್ಕ ಮಕ್ಕಳು, ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು, ಆರೋಗ್ಯ ಸಮಸ್ಯೆಗಳಿರುವವರು, ವಿಶೇಷವಾಗಿ ಹೃದ್ರೋಗ ಹಾಗೂ ರಕ್ತದ ಒತ್ತಡದಿಂದ ಬಳಲುತ್ತಿರುವವರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಕಾಲಕಾಲಕ್ಕೆ ವಿವಿಧ ಮಾಧ್ಯಮಗಳ ಮೂಲಕ ಆರೋಗ್ಯ ಇಲಾಖೆ ನೀಡುವ ಸಲಹೆಯನ್ನು ತಪ್ಪದೆ ಪಾಲಿಸಬೇಕು. ಅತಿಯಾದ ಉಷ್ಣತೆಯಿಂದ ತಲೆ ಸುತ್ತು, ವಾಕರಿಕೆ, ವಾಂತಿ, ತಲೆ ನೋವು, ಅತಿಯಾದ ಬಾಯಾರಿಕೆ, ಏರುಗತಿಯ ಉಸಿರಾಟ, ಹಳದಿ ಬಣ್ಣದ ಮೂತ್ರ ವಿಸರ್ಜನೆ ಕಂಡುಬಂದಲ್ಲಿ ತಕ್ಷಣವೇ ತಂಪಾದ ಸ್ಥಳಕ್ಕೆ ತೆರಳಿ ದ್ರವಾಹಾರ ಸೇವಿಸುವುದು. ಇನ್ನು ಯಾವುದೇ ವ್ಯಕ್ತಿ ತಾಪಾಘಾತ (ಹೀಟ್ ಸ್ಟ್ರೋಕ್) ಆದಲ್ಲಿ ಕೂಡಲೆ ವೈದ್ಯಕೀಯ ನೆರವು ಪಡೆಯಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ರೂಪಿಂದರ್ ಕೌರ್, ಆರ್.ಸಿ.ಎಚ್.ಓ ಡಾ.ಶರಣಬಸಪ್ಪ ಕ್ಯಾತನಾಳ, ಜಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ ಪಾಟೀಲ, ಸಿ.ಸಿ.ಟಿ ಕಾರ್ಯಕ್ರಮ ಅಧಿಕಾರಿ ಡಾ.ವಿವೇಕಾನಂದ ರೆಡ್ಡಿ, ಟಿ.ಬಿ. ನಿಯಂತ್ರಣಾಧಿಕಾರಿ ಡಾ.ಚಂದ್ರಕಾಂತ ನರಿಬೋಳ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಗುಳಗಿ, ಡಿ.ಎಲ್.ಓ ಡಾ.ರಾಜಕುಮಾರ ಸೇರದಂತೆ ತಾಲೂಕಾ ತಹಶೀಲ್ದಾರರು, ತಾಲೂಕಾ ಆರೋಗ್ಯ ಅಧಿಕಾರಿಗಳು ಇದ್ದರು.