ಗ್ಯಾರಂಟಿ ಯೋಜನೆ ಸಮೀಕ್ಷೆ ಸಮಸ್ಯೆ ನಿವಾರಿಸಿ

| Published : Feb 29 2024, 02:01 AM IST

ಸಾರಾಂಶ

ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮನೆ-ಮನೆ ಸಮೀಕ್ಷೆ ನಡೆಸುವಾಗ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಆಶಾ ಕಾರ್ಯಕರ್ತರು ಒತ್ತಾಯಿಸಿದರು.

ಕಾರವಾರ:

ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮನೆ-ಮನೆ ಸಮೀಕ್ಷೆ ನಡೆಸುವಾಗ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಬುಧವಾರ ಜಿಲ್ಲೆಯ ಆಶಾ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಮೂಲಕ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಸೇರಿದ ಜಿಲ್ಲೆಯ ನೂರಾರು ಆಶಾಕಾರ್ಯಕರ್ತೆಯರು ಜಿಪಂ ಸಿಇಒ ಮೂಲಕ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲು ಮುಂದಾದರು. ಆದರೆ ಅವರು ಕಚೇರಿಯಲ್ಲಿ ಇಲ್ಲದ ಕಾರಣ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೇರಿ, ಪಟ್ಟು ಬಿಡದೆ ಜಿಲ್ಲಾಧಿಕಾರಿ ಆಗಮಿಸುವ ತನಕ ಕಾದು ಮನವಿ ಸಲ್ಲಿಸಿದರು.ಕರ್ನಾಟಕ ರಾಜ್ಯ ಸಂಯುಕ್ತ ಆಶಾಕಾರ್ಯಕರ್ತೆಯರ ಸಂಘ ಆಶಾಕಾರ್ಯಕರ್ತೆಯರ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಗಮನ ಸೆಳೆದರು. ಸರ್ಕಾರದ ಆದೇಶದಂತೆ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಫಲಾನುಭವಿಗಳಿಗೆ ತಲುಪಿರುವ ಕುರಿತಂತೆ ಮನೆ-ಮನೆಗೆ ತೆರಳಿ ಆಶಾಕಾರ್ಯಕರ್ತೆಯರು ಮತ್ತು ಇತರ ಸಿಬ್ಬಂದಿ ಮೂಲಕ ಸಮೀಕ್ಷೆ ಮಾಡಲು ನೇಮಿಸಲಾಗಿದೆ. ಆಶಾಕಾರ್ಯಕರ್ತೆಯರು ಇತ್ತೀಚೆಗೆ ರಾಜ್ಯಮಟ್ಟದಲ್ಲಿ ಬೃಹತ್ ಹೋರಾಟ ನಡೆಸಿ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಕೋರಿರುವುದಲ್ಲದೆ, ಆಶಾಕಾರ್ಯಕರ್ತೆಯರಿಗೆ ಮೊಬೈಲ್ ಇಲ್ಲದಿರುವ ಬಗ್ಗೆ ಸಹ ಗಮನ ಸೆಳೆಯಲಾಗಿತ್ತು. ಆದ್ದರಿಂದ ಈ ಸಂದರ್ಭದಲ್ಲಿ ಆಶಾಕಾರ್ಯಕರ್ತೆಯರ ಕೆಲ ಅತ್ಯಾವಶ್ಯಕ ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.ಆಶಾ ಕಾರ್ಯಕರ್ತೆಯರಾದ ಪದ್ಮಾ ಛಲವಾದಿ, ನೀತಾ ಆಚಾರಿ, ಅನ್ನಪೂರ್ಣಾ ನಾಯ್ಕ, ರೇಖಾ ಆಚಾರಿ, ಗಂಗಾ ನಾಯ್ಕ, ಹಾಲಮ್ಮಾ ಸೇರಿದಂತೆ ಅನೇಕರು ಇದ್ದರು.