ಶ್ರೀಗಂಧದ ಮರ ಕಡಿದು ಸಾಗಿಸಲು ಯತ್ನ

| Published : Aug 25 2024, 01:45 AM IST

ಸಾರಾಂಶ

ಮುಂಡಗೋಡದ ಎಸ್. ನಾರಾಯಣ ರಾವ್ ಎಂಬವರ ಮನೆಯ ಆವರಣದಲ್ಲಿ ಬೆಳೆದ ಶ್ರೀಗಂಧದ ಮರ ಇದಾಗಿದೆ.

ಮುಂಡಗೋಡ: ಶನಿವಾರ ಬೆಳಗಿನ ಜಾವ ಪಟ್ಟಣದ ಸಂತೆ ಮಾರುಕಟ್ಟೆ ಬಳಿಯ ಮನೆಯ ಆವರಣದಲ್ಲಿ ಬೆಳೆದ ಭಾರಿ ಗಾತ್ರದ ಶ್ರೀಗಂಧದ ಮರಗಳ್ಳತನ ವಿಫಲ ಯತ್ನ ನಡೆದಿದೆ.ಎಸ್. ನಾರಾಯಣ ರಾವ್ ಎಂಬವರ ಮನೆಯ ಆವರಣದಲ್ಲಿ ಬೆಳೆದ ಶ್ರೀಗಂಧದ ಮರ ಇದಾಗಿದ್ದು, ಮರವನ್ನು ಕತ್ತರಿಸಿ ನೆಲಕ್ಕುರುಳಿಸಿದ ಕಳ್ಳರು, ಅವರಿಗೆ ಬೇಕಾದ ಮಧ್ಯ ಭಾಗದ(ಕೆಚ್ಚು)ತುಂಡನ್ನು ಕತ್ತರಿಸುವಷ್ಟರಲ್ಲಿ ಅಕ್ಕಪಕ್ಕದವರು ಎದ್ದು ಬಂದಿದ್ದರಿಂದ ಕತ್ತರಿಸಲಾದ ಶ್ರೀಗಂಧದ ಮರವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪಂಚನಾಮೆ ನಡೆಸಿದ್ದಾರೆ. ನಿರಂತರ ಯತ್ನ: ಇದೇ ಸ್ಥಳದಲ್ಲಿ ಈ ಹಿಂದೆಯು ಕೂಡ ಶ್ರೀಗಂಧದ ಮರ ಕತ್ತರಿಸುವ ಯತ್ನಗಳು ನಡೆದಿವೆ. ಆದರೆ ಈ ಬಾರಿ ಮಾತ್ರ ಮರವನ್ನು ಸಂಪೂರ್ಣವಾಗಿ ಕತ್ತರಿಸಿ ಇನ್ನೇನು ಸಾಗಿಸುವ ಹಂತದಲ್ಲಿ ಪ್ರಯತ್ನ ವಿಫಲವಾಗಿದೆ.ಹೆಚ್ಚುವರಿ ಬಡ್ಡಿಗೆ ಒತ್ತಾಯಿಸಿ ಜೀವಬೆದರಿಕೆ: ದೂರು

ಮುಂಡಗೋಡ: ₹೬೦ ಸಾವಿರ ಸಾಲಕ್ಕೆ ಬಡ್ಡಿ ಸಹಿತ ₹೧.೨೭ ಲಕ್ಷ ವಸೂಲಿಗಾಗಿ ಜೀವಬೆದರಿಕೆ ಹಾಕಿದ ನಾಲ್ವರ ಮೇಲೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಗಣೇಶ ಶಿರಾಲಿ ಎಂಬವರು ಪಡೆದ ₹೬೦ ಸಾವಿರ ರೂಪಾಯಿ ಸಾಲಕ್ಕೆ ₹೧.೨೭ ಲಕ್ಷ ಹಣ ವಾಪಸ್ ಕೊಡುವಂತೆ ಒತ್ತಾಯಿಸಿದ್ದಾರಲ್ಲದೇ, ಜತೆಯಲ್ಲಿದ್ದ ಗಣೇಶ ಶಿರಾಲಿ ಅವರ ಅಣ್ಣ ಶಿವರಾಜ ಶಿರಾಲಿ ಅವರಿಗೂ ಜೀವಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.ಅನಾರೋಗ್ಯ ತಂದೆಯ ಚಿಕಿತ್ಸೆಗಾಗಿ ನಾಗರಾಜ ಚವ್ಹಾಣ ಎಂಬವವರಿಗೆ ಖಾಲಿ ಚೆಕ್ ನೀಡಿ ₹೬೦ ಸಾವಿರ ಸಾಲ ಪಡೆದಿದ್ದು, ಪ್ರತಿ ವಾರಕ್ಕೆ ₹೩ ಸಾವಿರದಂತೆ ಈವರೆಗೂ ಬಡ್ಡಿ ಸಹಿತ ₹೪೦ ಸಾವಿರ ವಾಪಸ್ ನೀಡಲಾಗಿದೆ. ಇತ್ತೀಚೆಗೆ ಸ್ವಲ್ಪ ಹಣದ ತೊಂದರೆಯಾಗಿದ್ದರಿಂದ ಕಾಲಾವಕಾಶ ನೀಡುವಂತೆ ಕೇಳಿಕೊಳ್ಳಲಾಗಿತ್ತು.ಆದರೆ ಶುಕ್ರವಾರ ತಮ್ಮ ಕಂಪ್ಯೂಟರ್ ಸೆಂಟರ್‌ನಲ್ಲಿ ತಾನು ಹಾಗೂ ತನ್ನ ಅಣ್ಣ ಶಿವರಾಜ ಶಿರಾಲಿ ಇಬ್ಬರು ಕೆಲಸ ಮಾಡುವಾಗ ನಾಗರಾಜ ಚೌಹಾಣ್ ಎಂಬಾತ ಅವನ ಸಂಗಡ ಪ್ರಸನ್ನ ಗೌಳಿ, ವೀರೇಶ್ ಹುಲಗೂರ ಹಾಗೂ ವಿಶಾಲ ಶೇಟ್ ಎಂಬವರನ್ನು ಕರೆದುಕೊಂಡು ಅಂಗಡಿಯೊಳಗೆ ನುಗ್ಗಿ ಅವಾಚ್ಯವಾಗಿ ಬೈದು ಹಣ ನೀಡಬೇಕು ಎಂದು ಜೀವದ ಬೆದರಿಕೆ ಹಾಕಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗಣೇಶ ಶಿರಾಲಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.