ಸಾರಾಂಶ
೧೭ರಿಂದ ಜಲಾನಯನ ವ್ಯಾಪ್ತಿಯಲ್ಲಿ ಭಾರಿ ಮಳೆ- ಹವಾಮಾನ ಇಲಾಖೆ ಮುನ್ಸೂಚನೆ
ಈಗ ಬೇಡ, ದುರಸ್ತಿ ಬಳಿಕ ಮಳೆ ಬರಲಿ- ಜಲಾಶಯ ವ್ಯಾಪ್ತಿ ಅನ್ನದಾತರ ಪ್ರಾರ್ಥನೆಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳತುಂಗಭದ್ರಾ ಜಲಾಶಯದಲ್ಲಿ 19ನೇ ಕ್ರಸ್ಟ್ ಗೇಟ್ ಮುರಿದಿರುವುದರಿಂದ ದುರಸ್ತಿಗಾಗಿ ಇನ್ನಿಲ್ಲದ ಕಸರತ್ತು ನಡೆದಿದ್ದು, ಈ ನಡುವೆ ಹವಾಮಾನ ಇಲಾಖೆಯ ವರದಿ ಆತಂಕ ಹೆಚ್ಚಳವಾಗುವಂತೆ ಮಾಡಿದೆ.
ಜಲಾಶಯದಲ್ಲಿ ಈಗಿರುವ ನೀರನ್ನು ಉಳಿಸಿಕೊಂಡು ದುರಸ್ತಿ ಮಾಡುವ ಪ್ರಯತ್ನ ನಡೆಯುತ್ತಿದ್ದು, ಇದಾಗದಿದ್ದರೆ ನೀರು ತೆರವು ಮಾಡಿ ದುರಸ್ತಿ ಕಾರ್ಯ ನಡೆಯಬೇಕಾಗಿದೆ. ಇದಕ್ಕೆ ಏನಿಲ್ಲವೆಂದರೂ ವಾರ ಕಾಲ ಬೇಕಾಗುತ್ತದೆ. 3-4 ದಿನಗಳಲ್ಲಿ ದುರಸ್ತಿ ಎಂದು ಹೇಳುತ್ತಿದ್ದಾರೆ. ಆದರೆ, ನನ್ನ ಪ್ರಕಾರ ಇನ್ನು ನಾಲ್ಕೈದು ದಿನದಲ್ಲಿ ಸಾಧ್ಯವಾಗುವುದಿಲ್ಲ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಆದರೆ, ಈ ನಡುವೆ ತುಂಗಭದ್ರಾ ಜಲಾಶಯನ ಪ್ರದೇಶದಲ್ಲಿ ಆ. 17ರಿಂದ ಭಾರಿ ಮಳೆಯಾಗಲಿದೆ ಎನ್ನುವ ಮಾಹಿತಿ ಹವಾಮಾನ ಇಲಾಖೆ ನೀಡಿರುವುದು ಆತಂಕಕ್ಕೆ ಕಾರಣವಾಗಿದೆ. ತುಂಗಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆಯಾದರೆ ಒಳಹರಿವು ಹೆಚ್ಚಳವಾಗುತ್ತೆ, ನೀರಿನ ರಭಸವೂ ಮತ್ತಷ್ಟು ಹೆಚ್ಚಾಗುತ್ತದೆ. ಹೀಗಾಗಿ, ಅಷ್ಟರೊಳಗಾಗಿಯೇ ಕ್ರಸ್ಟ್ ಗೇಟ್ ದುರಸ್ತಿ ಮಾಡಿಕೊಳ್ಳಬೇಕು. ಇದಕ್ಕೆ ಇನ್ನು3-4 ದಿನಗಳು ಮಾತ್ರ ಇದ್ದು, ಇದು ದೊಡ್ಡ ಸವಾಲಿನ ಕೆಲಸವಾಗಿದೆ.
ಮಹಾ ದುರಂತ:ತುಂಗಭದ್ರಾ ಜಲಾಶಯಕ್ಕೆ ಕಳೆದ ತಿಂಗಳಿನಂತೆ ಭಾರೀ ಪ್ರಮಾಣದಲ್ಲಿ ನೀರು ಬಂದರೆ ಮಹಾದುರಂತ ಎದುರಾಗಲಿದೆ. ಜಲಾಶಯದಲ್ಲಿರುವ ನೀರು ಮತ್ತು ಹೆಚ್ಚಿನ ಒಳಹರಿವು ಎರಡನ್ನು ನಿಯಂತ್ರಣ ಮಾಡುವುದು ಅಥವಾ ಏಕಾಏಕಿ ಬಿಡುವುದು ಎರಡೂ ಅಪಾಯಕಾರಿಯಾಗಿ ಪರಿಣಮಿಸಲಿದೆ.
ಮುರಿದ ಕ್ರಸ್ಟ್ ಗೇಟ್ ಒಂದರಲ್ಲಿಯೇ 38 ಸಾವಿರ ಕ್ಯುಸೆಕ್ ನೀರು ಹರಿಯುತ್ತಲೇ ಇದೆ. ಇದರ ಒತ್ತಡ ಕಡಿಮೆ ಮಾಡಲು ಇತರೆ ಗೇಟ್ ಗಳನ್ನು ತೆರೆಯಲಾಗಿದೆ. ಹಾಗೊಂದು ವೇಳೆ ಒಳಹರಿವು ಹೆಚ್ಚಳವಾದರೇ ಮುರಿದ ಕ್ರಸ್ಟ್ ಗೇಟ್ ಒತ್ತಡ ಕಡಿಮೆ ಮಾಡಲು ಇತರೆ ಗೇಟ್ ಗಳನ್ನು ತೆರೆದಿದ್ದೇ ಆದರೆ, ಜಲಾಶಯದಲ್ಲಿರುವ ನೀರು ಮತ್ತು ಒಳಹರಿವು ಸೇರಿಕೊಂಡು ಭಾರೀ ಪ್ರವಾಹ ಪರಿಸ್ಥಿತಿ ನದಿ ಪಾತ್ರದಲ್ಲಿ ಸೃಷ್ಟಿಯಾಗುತ್ತದೆ. ಇದರ ಜೊತೆಗೆ ಗೇಟ್ ಕೂಡ್ರಿಸುವ ಕೆಲಸಕ್ಕೂ ಅಡ್ಡಿ ಉಂಟಾಗುವ ಅಪಾಯ ಇದೆ.ಮೂರು ದಿನ ಮಾತ್ರ:
ತುಂಗಭದ್ರಾ ಜಲಾಶಯದ ಮುರಿದ ಕ್ರಸ್ಟ್ ಗೇಟ್ ದುರಸ್ತಿ ಮೂರು ದಿನಗಳಲ್ಲಿಯೇ ಮಾಡಬೇಕಾಗಿದೆ. ಇದಕ್ಕಾಗಿ ಸರ್ಕಾರ ಶತಾಯ ಶ್ರಮಿಸಬೇಕಾಗಿದೆ. ಇಲ್ಲದಿದ್ದರೆ ಆಗುವ ತೊಂದರೆ ಅಷ್ಟಿಷ್ಟಲ್ಲ ಎನ್ನುತ್ತಾರೆ ತುಂಗಭದ್ರಾ ಜಲಾಶಯದ ಹಿರಿಯ ಎಂಜನಿಯರ್.ಆಗಸ್ಟ್ ತಿಂಗಳಲ್ಲಿಯೇ ಹೆಚ್ಚು:
ತುಂಗಭದ್ರಾ ಜಲಾಶಯ ಇತಿಹಾಸವನ್ನು ತಿರುವಿ ಹಾಕಿದರೆ ಜಲಾಶಯಕ್ಕೆ ಆಗಸ್ಟ್ ತಿಂಗಳಲ್ಲಿಯೇ ಅಧಿಕ ಪ್ರಮಾಣದ ನೀರು ಬರುತ್ತದೆ. ಶೇ. 70-80ರಷ್ಟು ನೀರು ಈ ತಿಂಗಳಲ್ಲಿಯೇ ಬಂದಿರುವ ಉದಾಹರಣೆ ಇದೆ. ಈಗ ಜಲಾಶಯಕ್ಕೆ 35-40 ಸಾವಿರ ಕ್ಯುಸೆಕ್ ಒಳಹರಿವು ಇದ್ದು, ಜಲಾನಯನ ವ್ಯಾಪ್ತಿಯಲ್ಲಿ ಮಳೆಯಾದರೇ ದಿಢೀರ್ ಏರಿಕೆಯಾಗಲಿದೆ. ಆಗ ಕಾಮಗಾರಿಗೂ ಸಮಸ್ಯೆಯಾಗಲಿದೆ. ಆದ್ದರಿಂದ ಗೇಟ್ ದುರಸ್ತಿಯಾಗುವವರೆಗೂ ಮಳೆಯಾಗಬಾರದು, ಆದ್ದರಿಂದ ವರುಣ ಕರುಣೆ ತೋರಿ, ಗೇಟ್ ದುರಸ್ತಿಯಾದ ಬಳಿಕವೇ ಮಳೆಯಾದಲ್ಲಿ ಮತ್ತಷ್ಟು ನೀರು ಸಂಗ್ರಹಿಸಿಕೊಳ್ಳಬಹುದು ಎಂದು ಜಲಾಶಯ ವ್ಯಾಪ್ತಿಯ ರೈತರು ಪ್ರಾರ್ಥನೆ ಮಾಡುತ್ತಿದ್ದಾರೆ.ಕನ್ನಯ್ಯ ಕಣ್ಣೀರು:ತುಂಗಭದ್ರಾ ಜಲಾಶಯದಿಂದ ನೀರು ಹರಿದು ಹೋಗುತ್ತಿರುವುದನ್ನು ನೋಡಿ ಡ್ಯಾಂಗಳ ತಜ್ಞ ಎಂಜಿನಿಯರ್ ಕನ್ನಯ್ಯ ಕಣ್ಣೀರು ಹಾಕಿದ್ದಾರೆ.
ಜನಪ್ರತಿನಿಧಿಗಳೊಂದಿಗೆ ಚರ್ಚೆ ಮಾಡುವ ವೇಳೆಯಲ್ಲಿ ಹರಿದು ಹೋಗುವ ನೀರನ್ನು ನೋಡಿ, ದುಃಖವಾಗುತ್ತಿದೆ. ಕಣ್ಣೀರು ಬರುತ್ತಿದೆ ಎಂದು ಹೇಳಿಕೊಂಡಿದ್ದಾರೆ.ಇದನ್ನು ನೋಡಲು ಆಗುತ್ತಿಲ್ಲ. ಜಲಾಶಯ ನಿರ್ವಹಣೆ ಮಾಡುತ್ತಲೇ ಇರಬೇಕು. ಅಷ್ಟಕ್ಕೂ ತುಂಗಭದ್ರಾ ಜಲಾಶಯಕ್ಕೆ ಈಗಾಗಲೇ 70 ವರ್ಷಗಳಾಗಿವೆ. ಪ್ರತಿ 50 ವರ್ಷಗಳಿಗೊಮ್ಮೆ ಸಂಪೂರ್ಣವಾಗಿ ದುರಸ್ತಿ ಕಾರ್ಯ ನಡೆಯಬೇಕು. ಸೆಪ್ಟಿ ಲಾಕ್ ಗೇಟ್ ಅಳವಡಿಸುವುದಕ್ಕೆ ಅವಕಾಶ ಇರುವುದರಿಂದ ಅದನ್ನು ಸಹ ಅಳವಡಿಸಬೇಕು ಎಂದಿದ್ದಾರೆ.