ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಕರ್ನಾಟಕ ಸಹಕಾರ ಕುಕ್ಕಟ ಮಹಾಮಂಡಳಿ ನಿಯಮಿತ ಸಹಕಾರದೊಂದಿಗೆ ಶ್ರೀ ಗಂಗಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಎರಡು ದಿನಗಳ ಕೋಳಿ ಸಾಕಾಣಿಕೆ ಉಚಿತ ತರಬೇತಿ ಕಾರ್ಯಗಾರಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.ಡಿ. ದೇವರಾಜ ಅರಸು ರಸ್ತೆಯ ಟ್ರಸ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿದ ಕರ್ನಾಟಕ ಸಹಕಾರ ಕುಕ್ಕಟ ಮಹಾಮಂಡಳಿ ನಿಯಮಿತ ಸಹಾಯಕ ನಿರ್ದೇಶಕ ಡಾ.ಬಿ.ಎಸ್.ನಂಜೇಶ್ ಮಾತನಾಡಿ, 140 ಕೋಟಿ ಜನ0ಸಂಖ್ಯೆಯುಳ್ಳ ಭಾರತದಲ್ಲಿ ಆಹಾರ ಉದ್ಯಮ ಎಂದಿಗೂ ಕುಸಿಯುವುದಿಲ್ಲ. ಅಲ್ಲದೆ ಕೃಷಿಯನ್ನೇ ಪೂರ್ಣಪ್ರಮಾಣದಲ್ಲಿ ನಂಬಲು ಸಾಧ್ಯವಿಲ್ಲ. ಆದ್ದರಿಂದ ಕೃಷಿಯೊಂದಿಗೆ ಹೈಗಾರಿಕೆ ಮುಂತಾದ ಜಾನುವಾರುಗಳ ಸಾಕಾಣಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರುಜಾನುವಾರು ಸಾಕಾಣಿಕೆಯಲ್ಲಿ ಕೋಳಿ ಸಾಕಾಣಿಕೆ ಪ್ರಮುಖವಾಗಿದ್ದು, ಕರ್ನಾಟಕ ರಾಜ್ಯ ಮೊಟ್ಟೆ ಉತ್ಪಾದನೆಯಲ್ಲಿ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದೆ. ದೇಶಕ್ಕೆ ಅಗತ್ಯವಿರುವ ಮೊಟ್ಟೆಯು ಕರ್ನಾಟಕ, ಆಂದ್ರಪ್ರದೇಶ, ತಮಿಳುನಾಡು, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದಲೇ ಪೂರೈಕೆ ಆಗುತ್ತದೆ. ನಾಟಿ ಕೋಳಿ ವರ್ಷದಲ್ಲಿ ಸುಮಾರು 60 ಮೊಟ್ಟೆಗಳನ್ನಿಟ್ಟರೆ, ಗಿರಿರಾಜ ತಳಿ ಹಾಗೂ ಬಾಯ್ಲರ್ ಕೋಳಿ ವರ್ಷಕ್ಕೆ 300ಕ್ಕೂ ಹೆಚ್ಚು ಮೊಟ್ಟೆಗಳನ್ನಿಡಲಿವೆ ಎಂದು ಅವರು ಮಾಹಿತಿ ನೀಡಿದರು.ಮಾಂಸ ಉತ್ಪಾದನೆಯಲ್ಲಿ ಕೋಳಿ ಸಾಕಾಣಿಕೆಯಿಂದ ಶೇ. 50ರಷ್ಟು ಕೊಡುಗೆ ನೀಡಲಾಗುತ್ತಿದೆ. ಗಿರಿರಾಜ ಹಾಗೂ ಬಾಯ್ಲರ್ ಕೋಳಿಗಳು ಕೇವಲ 40 ದಿನಗಳಲ್ಲಿ 2 ಕೆಜಿಗೂ ಹೆಚ್ಚು ತೂಕ ದಪ್ಪವಾಗುತ್ತವೆ. ಇದಕ್ಕೆ ಜೆನೆಟಿಕ್ಸ್ ಹಾಗೂ ಗುಣಮಟ್ಟದ ಆಹಾರ ನೀಡುವುದು ಮುಖ್ಯ ಕಾರಣ. ಕೋಳಿ ಮಾಂಸ ಉತ್ಪಾದನೆಯಲ್ಲಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದೆ. ಕೋಳಿ ಉದ್ಯಮ ಆರಂಭಿಸಲು ಅಲವು ಅವಕಾಶಗಳಿದ್ದು, ಸುಮಾರು 10 ಸಾವಿರ ಕೋಳಿಗಳ ಫಾರಂ ಮಾಡಲು ಸುಮಾರು 80 ಲಕ್ಷ ರೂ.ಖರ್ಚಾಗಲಿದೆ ಎಂದು ಅವರು ಹೇಳಿದರು.ಕೋಳಿ ಸಾಕಾಣಿಕೆಗೆ ರಾಷ್ಟ್ರೀಯ ಜಾನುವಾರು ಯೋಜನೆಯಡಿ ಶೇ. 50ರಷ್ಟು ಸಬ್ಸಿಡಿ ನೀಡಲಾಗುವುದು. 50 ಲಕ್ಷ ಸಾಲ ಪಡೆದರೆ, 25 ಲಕ್ಷ ರೂ.ಸಬ್ಸಿಡಿ ಆಗಿರುತ್ತದೆ. ಲಾಭದಾಯಕವಾದ ಕೋಳಿ ಸಾಕಾಣಿಕೆಯಿಂದ ಉದ್ಯಮಿಗಳಾಗಿ ಆರ್ಥಿಕವಾಗಿ ಸಬಲರಾಗಬಹುದು ಎಂದು ಅವರು ಹೇಳಿದರು.ಸಡಾಕ್ ಮೈಸೂರು ತರಬೇತಿ ಅಧಿಕಾರಿ ಮಿಥುನ್, ಕೃಷಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಶಿವರಾಮೇಗೌಡ, ಬೆಮೆಲ್ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ವಿ. ಶಂಕರ್, ರೈತ ಮುಖಂಡರಾದ ಮರೀಗೌಡ, ವರಕೋಡು ಕೃಷ್ಣೇಗೌಡ, ಕುಣಗಳ್ಳಿ ರಂಗಸ್ವಾಮಿ, ಅಖಿಲ ಭಾರತ ಮಹಿಳಾ ಉದ್ಯಮಿ ಮತ್ತು ತರಬೇತುದಾರರ ಸಂಘದ ಅಧ್ಯಕ್ಷೆ ದಿವ್ಯಶ್ರೀ, ಶ್ರೀ ಗಂಗಾ ಚಾರಿಟಬಲ್ ಟ್ರಸ್ಟ್ ನಿರ್ದೇಶಕ ಚಿಕ್ಕಲಿಂಗೇಗೌಡ, ಅಧ್ಯಕ್ಷ ರಾಜ್ ಕಾಮಯ್ಯ, ಸಂಚಾಲಕ ಎಲ್. ರಾಜಣ್ಣ, ಚಾಂದಿನಿ ಮೊದಲಾದವರು ಇದ್ದರು.