ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಕೃಷ್ಣೆ ಈ ಬಾರಿ 2ನೇ ಬಾರಿಗೆ ಮುನಿಸಿಕೊಂಡಿದ್ದಾಳೆ. ತನ್ನ ಒಡಲನ್ನು ತುಂಬಿಕೊಂಡು ಮತ್ತೆ ಉಕ್ಕಿ ಹರಿಯುತ್ತಿದ್ದು, ತಮ್ಮ ರೈತ ಮಕ್ಕಳನ್ನು ಸಂಕಷ್ಟಕ್ಕೆ ಸಿಲುಕಿದ್ದಾಳೆ. ಇದರಿಂದ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸೇರುವ ಏಕೈಕ ಮಾರ್ಗವಾದ ಉಗಾರ-ಕುಡಚಿ ಮಾರ್ಗದ ಮಧ್ಯದ ಸೇತುವೆಯ ಮೇಲೆ 3 ಅಡಿ ನೀರು ಬಂದಿರುವುದರಿಂದ ಬುಧವಾರ ಬೆಳಗ್ಗೆಯಿಂದಲೇ ಸಾರಿಗೆ ಸಂಚಾರ ಸಂಪೂರ್ಣ ಕಡಿತಗೊಂಡಿದೆ.ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಕೃಷ್ಣೆ ಉಕ್ಕಿ ಹರಿಯುತ್ತಿದ್ದಾಳೆ. ನದಿ ದಡದ ಹಳ್ಳಿಗಳಲ್ಲಿಯ ಈಗಷ್ಟೇ ಚೇತರಿಸಿಕೊಳ್ಳುವಷ್ಟರಲ್ಲಿ ಮತ್ತೇ ಕೃಷ್ಣೆ ಮುನಿಸಿಕೊಂಡು ಮಹಾಬಳೇಶ್ವರ, ಕೊಂಕಣ ಹಾಗೂ ಸಹ್ಯಾದ್ರಿ ಶ್ರೇಣಿಯ ಘಟ್ಟ ಪ್ರದೇಶದಲ್ಲಿ ಕಳೆದ 2-3 ದಿನಗಳಿಂದ ಕುಂಭದ್ರೋಣ ಮಳೆ ಸುರಿಯುತ್ತಿರುವುದರಿಂದ ಮಹಾರಾಷ್ಟ್ರದ ಕೊಯ್ನಾ ಜಲಾಶಯ ಭರ್ತಿಗೊಂಡಿದ್ದು, ಸುರಕ್ಷತೆ ದೃಷ್ಟಿಯಿಂದ ನೀರು ಹರಿ ಬಿಟ್ಟಿರುವುದರಿಂದ ಕೃಷ್ಣಾ ನದಿಗೆ ಪ್ರವಾಹ ಬಂದಿರುವುದರಿಂದ ಜನ ಮತ್ತೆ ಭೀತಿ ಎದುರಿಸುವಂತಾಗಿದೆ.
ಮಹಾರಾಷ್ಟ್ರದ ಕೊಯ್ನಾ ಜಲಾಶಯದ ಪರಿಸರದಲ್ಲಿ ಸತತ ಮೂರು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿ ಬಿಟ್ಟಿದ್ದು ರಾಜಾಪುರ ಬ್ಯಾರೇಜ್ ಮೂಲಕ ಕರ್ನಾಟಕಕ್ಕೆ 1, 26,348 ಕ್ಯುಸೆಕ್ ನೀರು ಹರಿದು ಬರುತ್ತಿರುವುದರಿಂದ ಉಗಾರ-ಕುಡಚಿ ಮಾರ್ಗದ ಸೇತುವೆ ಮೇಲೆ ನೀರು ಬಂದು ಸಾರಿಗೆ ಸಂಚಾರ ಸಂಪೂರ್ಣ ಕಡಿತಗೊಂಡಿದೆ.ಈ ಭಾಗದಲ್ಲಿ ಸಮರ್ಪಕ ಮಳೆಯಾಗದಿದ್ದರೂ ಕೂಡ ಮಹಾರಾಷ್ಟ್ರದಲ್ಲಿ ಮಳೆ ಸುರಿಯುತ್ತಿರುವುದರಿಂದ ಈ ಭಾಗದಲ್ಲಿ ಕೃತಕ ಪ್ರವಾಹ ಬಂದು ನಾಗರಿಕ ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿತೀರದ ತಗ್ಗು ಪ್ರದೆಶದಲ್ಲಿ ಮತ್ತೇ ನೀರು ನುಗ್ಗಿದೆ.
ಗುಡ್ಡ ಸುತ್ತಿ ಮೈಲಾರಕ್ಕೆ ಹೋದಂತೆ:ಬಾಗಲಕೋಟೆ, ಜಮಖಂಡಿ, ಮುಧೋಳ, ಮಹಾಲಿಂಗಪೂರ, ಹಾರೂಗೇರಿ ಸೇರಿದಂತೆ ಹಲವಾರು ಪಟ್ಟಣಗಳಿಂದ ವ್ಯಾಪಾರ ವಹಿವಾಟುಗಳಿಗೆ ಈ ರಸ್ತೆ ಬಹಳ ಅನುಕೂಲವಾಗಿದ್ದು, ಈ ಮಾರ್ಗ ಕಡಿತಗೊಂಡಿರುವುದರಿಂದ ಹಾರೂಗೇರಿ ಕ್ರಾಸ್ ಮಾರ್ಗವಾಗಿ ಅಥಣಿ, ಕಾಗವಾಡ ಮಾರ್ಗವಾಗಿ 50 ಕಿಮೀ ಹೆಚ್ಚಿಗೆ ಕ್ರಮಿಸಿ ತೆರಳುವ ಪರಿಸ್ಥಿತಿ ಬಂದೋದಗಿದ್ದು ಗುಡ್ಡಸುತ್ತಿ ಮೈಲಾರಕ್ಕೆ ಹೋದ ಅನುಭವವಾಗುತ್ತಿದೆ.
ಮಳೆಯ ಪ್ರಮಾಣ: ಕೊಯ್ನಾ 76 ಮಿಮೀ, ಮಹಾಬಳೇಶ್ವರ 148 ಮಿಮೀ,ನವಜಾ 104 ಮಿಮೀ ಮಳೆಯಾಗಿದೆ. ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಕರ್ನಾಟಕದ ಕಲ್ಲೋಳ ಸೇತುವೆ ಬಳಿ ಹೊರ ಹರಿವು 89833 ಕ್ಯುಸೆಕ್, ಹಿಪ್ಪರಗಿ ಅಣೆಕಟ್ಟೆಯ ನೀರಿನ ಒಳ ಹರಿವು 93235 ಕ್ಯುಸೆಕ್, ಹೊರ ಹರಿವು 92485 ಕ್ಯುಸೆಕ್ ಇದೆ. ಯಾವುದೇ ನೀರಿನ ಸಂಗ್ರಹವಿಲ್ಲ. ಕೊಯ್ನಾ ಜಲಾಶಯದ ಒಳಹರಿವು 42,608 ಕ್ಯುಸೆಕ್, ಹೊರ ಹರಿವು 22,100 ಕ್ಯುಸೆಕ್ ಇದೆ. ಆಲಮಟ್ಟಿಯ ನೀರಿನ ಸಂಗ್ರಹ 119.74 ಟಿಎಂಸಿ ಇದ್ದು, ಒಳ ಹರಿವು 1,34,108 ಕ್ಯುಸೆಕ್, ಹೊರ ಹರಿವು 1,41, 992 ಕ್ಯುಸೆಕ್ ಇದೆ.ಮಹಾರಾಷ್ಟ್ರದ ಕೊಯ್ನಾ ಅಚ್ಚುಕಟ್ಟು ಪ್ರದೇಶದಲ್ಲಿ ಭಾರೀ ಮಳೆ ಪ್ರಾರಂಭವಾದ ಕಾರಣ ಕೊಯ್ನಾ ಜಲಾಶಯದಿಂದ ಮತ್ತೇ ನೀರು ಬಿಡಲಾಗುತ್ತಿದೆ. ಹೀಗಾಗಿ ಕೃಷ್ಣಾ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಇದರಿಂದ ಪಂಚಗಂಗಾ ಹಾಗೂ ದೂದಗಂಗಾ ನದಿ ಪ್ರವಾಹ ನಿಯಂತ್ರಣವಿದ್ದು ಕೃಷ್ಣಾನದಿ ತೀರದಲ್ಲಿ ಪ್ರವಾಹಭೀತಿ ಕಡಿಮೆ ಇದೆ.
-ಅರುಣಕುಮಾರ ಯಲಗುದ್ರಿ, ನಿವೃತ್ತ ಅಭಿಯಂತರರು ಅಥಣಿ.