ಕರ್ನಾಟಕ-ಆಂಧ್ರಕ್ಕಿದೆ ಹೊಕ್ಕಳು ಬಳ್ಳಿ ಸಂಬಂಧ: ಭೈರನಟ್ಟಿ ಸ್ವಾಮೀಜಿ

| Published : Aug 26 2024, 01:40 AM IST

ಸಾರಾಂಶ

ಭಾಷಾವಾರು ಪ್ರಾಂತ್ಯದ ವಿಂಗಡಣೆಯಾದ ಮೇಲೆ ಕರ್ನಾಟಕದ ಒಂದಿಷ್ಟು ಪ್ರದೇಶಗಳು ಪಕ್ಕದ ರಾಜ್ಯಗಳಿಗೆ ಸೇರಿಕೊಂಡಿವೆ. ಆದರೆ, ಆಂಧ್ರ ಮತ್ತು ಕರ್ನಾಟಕಕ್ಕೆ ಹೊಕ್ಕುಳ ಬಳ್ಳಿಯ ಸಂಬಂಧವಿದೆ ಎಂದು ಶಾಂತಲಿಂಗ ಸ್ವಾಮೀಜಿ ಹೇಳಿದರು.

ಧಾರವಾಡ: ಹೊರ ರಾಜ್ಯದಲ್ಲಿರುವ ಕನ್ನಡ ಶಾಲೆಗಳಿಗೆ ಕರ್ನಾಟಕ ಸರ್ಕಾರ ಮೂಲಭೂತ ಸೌಲಭ್ಯ ನೀಡಬೇಕು ಎಂದು ನರಗುಂದ ಭೈರನಹಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳ ಎಲ್ಲ ಕನ್ನಡ ಸಂಘಗಳ ಸಹಯೋಗದಲ್ಲಿ ಆಂಧ್ರಪ್ರದೇಶದ ಆದೋನಿಯಲ್ಲಿ ಆಯೋಜಿಸಿದ್ದ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ 9ನೇ ಮಹಾಮೇಳದ ಎರಡು ದಿನಗಳ ಕಾರ್ಯಕ್ರಮದ ಸಮಾರೋಪದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಭಾಷಾವಾರು ಪ್ರಾಂತ್ಯದ ವಿಂಗಡಣೆಯಾದ ಮೇಲೆ ಕರ್ನಾಟಕದ ಒಂದಿಷ್ಟು ಪ್ರದೇಶಗಳು ಪಕ್ಕದ ರಾಜ್ಯಗಳಿಗೆ ಸೇರಿಕೊಂಡಿವೆ. ಆದರೆ, ಆಂಧ್ರ ಮತ್ತು ಕರ್ನಾಟಕಕ್ಕೆ ಹೊಕ್ಕುಳ ಬಳ್ಳಿಯ ಸಂಬಂಧವಿದೆ. ಇಂದಿಗೂ ಇಲ್ಲಿಯ ಅನೇಕ ಜನರು ಕನ್ನಡ ಸಂಸ್ಕೃತಿಯನ್ನೆ ಅನುಸರಿಸುತ್ತಿದ್ದಾರೆ. ತ್ರಿಪದಿ ಮತ್ತು ಚೌಪದಿಯ ಸಾಮಿಪ್ಯ ಈ ನೆಲದಲ್ಲಿ ನಡೆದಿದೆ. ನೆಲ, ಜಲ, ಭಾಷೆಯಲ್ಲಿ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ ಇದೆ. ಭಾಷೆಗೆ ತೊಂದರೆ ಬಂದರೆ ನಮ್ಮ ಸಂಸ್ಕೃತಿಗೆ ತೊಂದರೆ ಬಂದಂತೆ. ನೆಲ-ಜಲದ ವಿಷಯಗಳಲ್ಲಿ ನಾವು ಸ್ವಾಭಿಮಾನಿಗಳಾಗಿ ಹೋರಾಟ ಮಾಡಬೇಕು. ಬೇರೆ ಬೇರೆ ಸಂಸ್ಥೆಗಳು ಆಂಗ್ಲ ಭಾಷೆಯ ಶಾಲೆಗಳನ್ನು ತೆರೆಯುವುದರಿಂದ ಕನ್ನಡದ ಅಸ್ಮಿತೆ ಕುಗ್ಗುತ್ತಿದೆ. ಮಾತೃಭಾಷೆಯಲ್ಲಿಯೇ ಶಿಕ್ಷಣ ದೊರೆಯುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ತರಬೇಕು ಎಂದರು.

ಹಿರಿಯ ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿ, ಆದೋನಿಯ ಕಲ್ಮಠ ಮಂಡಿಗಿರಿ ಗುರುಸಿದ್ಧದೇವರು ಸಮ್ಮುಖ ವಹಿಸಿದ್ದರು. ಕ.ವಿ.ವ. ಸಂಘದಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಚಿತ್ರಕಲೆ, ರಂಗೋಲಿ, ರಸಪ್ರಶ್ನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸ್ಥಳೀಯ ಸಾಧಕರನ್ನು ಗೌರವಿಸಲಾಯಿತು.

ಯಗಟಿ ಪ್ರತಾಪ, ಕೆ.ಎಂ. ಮಲ್ಲಿಕಾಜುನಸ್ವಾಮಿ, ದೇಸಾಯಿ ಚಂದ್ರಣ್ಣ ಉಪಸ್ಥಿತಿರಿದ್ದರು. ಸಿದ್ಧನಗೌಡ ಸ್ವಾಗತಿಸಿದರು. ಶಂಕರ ಹಲಗತ್ತಿ ವಂದಿಸಿದರು. ತೇಜಪ್ಪ ನಿರ್ವಹಿಸಿದರು. ಎಂ. ಶಾಂತವೀರ ಮೂರ್ತಿ ನಿರೂಪಿಸಿದರು. ಎರಡು ದಿನಗಳ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಹೊರನಾಡ ಮತ್ತು ಒಳನಾಡಿನ ಹಾಗೂ ಸ್ಥಳೀಯ ಕನ್ನಡಿಗರು ಭಾಗವಹಿಸಿದ್ದರು. ಸಮ್ಮೇಳನದ ನಿರ್ಣಯಗಳು

ಸಂಘದ ಪದಾಧಿಕಾರಿ ಶಿವಾನಂದ ಭಾವಿಕಟ್ಟಿ ಮಹಾಮೇಳದ ನಾಲ್ಕು ನಿರ್ಣಯಗಳನ್ನು ಮಂಡಿಸಿದರು.

1) ಕರ್ನಾಟದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸಿಗುವ ಎಲ್ಲ ಶೈಕ್ಷಣಿಕ ಮತ್ತು ಉದ್ಯೋಗ ಅವಕಾಶಗಳನ್ನು ಕನ್ನಡ ಮಾಧ್ಯಮದಲ್ಲಿ ಓದಿದ ಗಡಿನಾಡ ಮತ್ತು ಹೊರನಾಡ ಕನ್ನಡಿಗರಿಗೂ ವಿಸ್ತರಿಸಬೇಕು.

2) ಹೊರನಾಡಿನಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಪ್ರೌಢಶಾಲೆ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಓದು ಬಯಸಿದರೆ ವಿದ್ಯಾರ್ಥಿ ನಿಲಯಗಳಲ್ಲಿ ಮೀಸಲಾತಿ ಕಲ್ಪಿಸಬೇಕು.

3) ಹೊರನಾಡ ಕನ್ನಡ ಶಾಲೆಗಳಲ್ಲಿ ಕನ್ನಡ ಪಠ್ಯ ಪುಸ್ತಕಗಳ ಲಭ್ಯವಿಲ್ಲದಿರುವುದು ಸಾಮಾನ್ಯವಾಗಿದ್ದು, ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಈ ಕೊರತೆಯನ್ನು ನೀಗಿಸಲು ಆಯಾ ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸಬೇಕು. ಇಲ್ಲವೇ ಈ ನಿಟ್ಟಿನಲ್ಲಿ ಒಂದು ಸರ್ಕಾರಿ ಸಂಘ ಸ್ಥಾಪಿಸಿ ಅಲ್ಲೆಲ್ಲ ಕನ್ನಡ ಉಳಿಸಲು ಪ್ರಯತ್ನಿಸಬೇಕು.

4) ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಗಡಿ ಭಾಗಗಳ ರಾಜ್ಯದಿಂದ ಗಡಿ ಭಾಗದವರನ್ನು ಕಡ್ಡಾಯವಾಗಿ ಸದಸ್ಯರನ್ನಾಗಿ ನೇಮಿಸಬೇಕು. ಹಾಗೆಯೇ ಸರ್ಕಾರದಿಂದ ನೀಡುತ್ತಿರುವ ಪ್ರಶಸ್ತಿಗಳ ಆಯ್ಕೆಯಲ್ಲಿಯೂ ಅನುಸರಿಸುವುದು.