ಮಕ್ಕಳ ಕನಸು ಅರ್ಥೈಸಿಕೊಂಡು ಬೆಳೆಯಲು ಬಿಡಿ : ಪ್ರಕಾಶ್‌ ರಾಜ್‌

| N/A | Published : Jul 07 2025, 01:33 AM IST / Updated: Jul 07 2025, 10:14 AM IST

ಮಕ್ಕಳ ಕನಸು ಅರ್ಥೈಸಿಕೊಂಡು ಬೆಳೆಯಲು ಬಿಡಿ : ಪ್ರಕಾಶ್‌ ರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಬಹುರೂಪಿ ಪ್ರಕಾಶನ ಪ್ರಕಟಿಸಿದ 14 ಮಕ್ಕಳ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು. ಕಲಾವಿದರಾದ ಪ್ರಕಾಶ್‌ ರಾಜ್‌ ,ಡಾ. ನೆಲ್ಲುಕುಂಟೆ ವೆಂಕಟೇಶ್‌, ಜಿ.ಎನ್‌. ಮೋಹನ್‌ ಮುಂತಾದವರು ಉಪಸ್ಥಿತರಿದ್ದರು.

  ಬೆಂಗಳೂರು :  ಮಕ್ಕಳನ್ನು ಬೆಳೆಸುತ್ತೇವೆ ಎಂಬ ಅಹಂಕಾರ ಭಾವ ಮತ್ತು ಅವರನ್ನು ನಿಗ್ರಹಿಸುವುದನ್ನು ಬಿಟ್ಟು ಅವರ ಗ್ರಹಿಕೆ, ಕನಸನ್ನು ಅರ್ಥೈಸಿಕೊಂಡು ಬೆಳೆಯಲು ಬಿಡಬೇಕು ಎಂದು ಕಲಾವಿದ ಪ್ರಕಾಶ್‌ ರಾಜ್‌ ಹೇಳಿದರು.

ಭಾನುವಾರ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಬಹುರೂಪಿ ಫೌಂಡೇಷನ್‌ ಪ್ರಕಟಿಸಿದ ಮಕ್ಕಳ ಲೋಕಕ್ಕೆ 14 ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳನ್ನು ನಾವು ಸಮಾಜದ ಭಾಗ ಎಂದು ನಾವು ಅರ್ಥ ಮಾಡಿಕೊಂಡಿಲ್ಲ. ಅವರನ್ನು ನಾವು ನೋಡಿಕೊಳ್ಳಬೇಕು, ಬೆಳೆಸಬೇಕು ಎಂದಷ್ಟೇ ನಾವು ಯೋಚಿಸುತ್ತೇವೆ. ಪ್ರಕೃತಿಯಲ್ಲಿ ಮಕ್ಕಳನ್ನು ಬೆಳೆಸುತ್ತೇವೆ ಎನ್ನುವುದು ಅಹಂಕಾರ, ಬೆಳೆಯಲು ಬಿಡುತ್ತೇವೆ ಎನ್ನುವುದು ವಿನಯ. ಇದು ಸ್ನೇಹ, ದಾಂಪತ್ಯ ಸೇರಿ ಎಲ್ಲ ಸಂಬಂಧಗಳಿಗೂ ಅನ್ವಯಿಸುತ್ತದೆ ಎಂದರು.

ಮಕ್ಕಳಿಗೆ ಈಗ ನಾವು ಕಲಿಸುವ ವಿಚಾರದ ಪ್ರಸ್ತುತತೆ ಹತ್ತು ವರ್ಷದ ಬಳಿಕ ಹೇಗಿರುತ್ತದೆ ಎಂಬುದನ್ನು ಯೋಚಿಸಬೇಕಿದೆ. ಅವರನ್ನು ನಿಗ್ರಹಿಸುವ ಬದಲು ಕನಸು, ಗ್ರಹಿಕೆಯನ್ನು ಅರ್ಥಮಾಡಿಕೊಳ್ಳಬೇಕು. ಅವರ ಮಾತನ್ನು ಕೇಳಿಸಿಕೊಳ್ಳಬೇಕು. ಇವತ್ತಿನ ಶಿಕ್ಷಣ, ಟ್ಯೂಷನ್‌ ಮಕ್ಕಳಲ್ಲಿ ಆತ್ಮಹತ್ಯೆಯಂತ ಯೋಚನೆ ಹುಟ್ಟಿಸುತ್ತದೆ. ಸಾಹಿತ್ಯ, ರಂಗಭೂಮಿ, ಸಿನಿಮಾ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.

ಮಕ್ಕಳ ಹಕ್ಕುಗಳ ಬಗ್ಗೆ ಹೋರಾಟ

ಡಾ. ನೆಲ್ಲುಕುಂಟೆ ವೆಂಕಟೇಶ್‌ ಮಾತನಾಡಿ, ಮಹಿಳಾ ಹಕ್ಕುಗಳ ಬಗ್ಗೆ ನಡೆದಷ್ಟು ಹೋರಾಟ ಮಕ್ಕಳ ಹಕ್ಕುಗಳ ಬಗ್ಗೆ ನಡೆದಿಲ್ಲ. ಮಕ್ಕಳ ವಿಕಾಸಕ್ಕೆ ಬೇಕಾದ ವಾತಾವರಣ ಸಮಾಜದಲ್ಲಿ ಇಲ್ಲ. ಕಳೆದ ಹತ್ತು ಹದಿನೈದು ವರ್ಷಗಳಲ್ಲಿನ ಜಾಗತಿಕ ಬೆಳವಣಿಗೆ ಮಕ್ಕಳ ಮನಸ್ಸನ್ನು ಕೆಡಿಸಿದೆ.‌ ಹೀಗಾಗಿ ಅವರನ್ನು ಅರ್ಥೈಸಿಕೊಳ್ಳಲು ಮಕ್ಕಳ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ ಎಂದರು.

ಮಗು ಕನಸು ಕಾಣುವ, ಕುತೂಹಲಕರ ಮನಸ್ಸು ಕಳೆದುಕೊಂಡರೆ ಅಲ್ಲಿ ಸೃಷ್ಟಿ, ಕ್ರಿಯಾಶೀಲತೆ ಹುಟ್ಟುವುದಿಲ್ಲ. ಕೋವಿಡ್‌ ಬಳಿಕ ಅವರಲ್ಲಿ ಖಿನ್ನತೆ, ತಳಮಳ, ಒಂಟಿತನ ಆತ್ಮಹತ್ಯೆಗೆ ಯೋಚಿಸುವ ಪ್ರಮಾಣ ಜಾಗತಿಕವಾಗಿ ನೂರಾರು ಪಟ್ಟು ಹೆಚ್ಚಾಗಿದೆ ಎಂದು ಅಧ್ಯಯನ ಹೇಳುತ್ತಿದೆ. ಜತೆಗೆ ಯುದ್ಧದಾಹ, ಮಾರುಕಟ್ಟೆ ದಾಹ ಮಕ್ಕಳನ್ನು ಹೊಸಕಿಹಾಕುತ್ತಿದೆ. ಇಂತದ್ದಕ್ಕೆ ಕಡಿವಾಣ ಹಾಕಲು ಮಕ್ಕಳ ಪುಸ್ತಕಗಳನ್ನು ಇನ್ನಷ್ಟು ಹೊರತರುವ ಕೆಲಸ ಅಭಿಯಾನದಂತೆ ಆಗಬೇಕು ಎಂದು ಹೇಳಿದರು.

ಬಹುರೂಪಿ ಸಂಸ್ಥಾಪಕ ಜಿ.ಎನ್‌. ಮೋಹನ್‌ ಮಾತನಾಡಿ, ಮಕ್ಕಳ ಸಾಹಿತ್ಯ ಪುಸ್ತಕಗಳ ಆಕಾರ, ಅದರಲ್ಲಿನ ಕ್ರಿಯಾಶೀಲತೆಗಳನ್ನೆ ಕಾನೂನು ಉಲ್ಲಂಘನೆ ಎಂದು ಗ್ರಂಥಾಲಯಗಳು ಭಾವಿಸುತ್ತಿವೆ. ಇಂಥ ಕ್ಷುಲ್ಲಕ ವಿಚಾರಕ್ಕೆ ಪುಸ್ತಕಗಳನ್ನೇ ಕೊಳ್ಳುವುದಿಲ್ಲ. ಇಂತದ್ದು ಬದಲಾಗದಿದ್ದಲ್ಲಿ ಮಕ್ಕಳಲ್ಲಿ ಓದಿನ ಅಭಿರುಚಿ ಬೆಳೆಯುವುದು ಹೇಗೆ ಎಂದು ಪ್ರಶ್ನಿಸಿದರು.

ಗ್ರಂಥಾಲಯ ತಜ್ಞ ತೇಜಸ್ವಿ ಶಿವಾನಂದ, ಲೇಖಕ ಅಬ್ದುಲ್‌ ರೆಹಮಾನ್‌ ಪಾಷಾ, ಏಕಲವ್ಯ ಪ್ರಕಾಶನದ ಲಕ್ಷ್ಮೀ ಕರುಣಾಕರನ್, ಟಾಟಾ ಟ್ರಸ್ಟ್‌ನ ವಿವೇಕ್‌ ಬಿ.ಜಿ. ಸೇರಿ ಇತರರಿದ್ದರು.

Read more Articles on