ವಿಶ್ವದ 58 ರಾಷ್ಟ್ರೀಯ ಸಂಸ್ಥೆಯ ಪೈಕಿ ಶ್ರೀ ಇಡಗುಂಜಿ ಮೇಳಕ್ಕೆ ಯುನೆಸ್ಕೋ ಮಾನ್ಯತೆ

| Published : Oct 01 2024, 01:34 AM IST / Updated: Oct 01 2024, 10:16 AM IST

ವಿಶ್ವದ 58 ರಾಷ್ಟ್ರೀಯ ಸಂಸ್ಥೆಯ ಪೈಕಿ ಶ್ರೀ ಇಡಗುಂಜಿ ಮೇಳಕ್ಕೆ ಯುನೆಸ್ಕೋ ಮಾನ್ಯತೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವದ 58 ರಾಷ್ಟ್ರೀಯ ಸಂಸ್ಥೆಯ ಪೈಕಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಒಂದಾಗಿದೆ. ಎಂಬುದು ಇಡೀ ಕರ್ನಾಟಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ವಸಂತಕುಮಾರ್ ಕತಗಾಲ

ಕಾರವಾರ: ಶ್ರೀ ಇಡಗುಂಜಿ ಯಕ್ಷಗಾನ ಮಂಡಳಿ ಕೆರೆಮನೆಗೆ ಯುನೆಸ್ಕೋ ಮಾನ್ಯತೆ ದೊರೆತಿದೆ. ಯಕ್ಷರಂಗದಲ್ಲಿ ಹಲವು ಪ್ರಥಮಗಳ ಇತಿಹಾಸ ನಿರ್ಮಿಸಿದ ಮಂಡಳಿಗೆ ಈಗ ವಿಶ್ವಮಾನ್ಯತೆ ದೊರೆತಿರುವುದು ಅಲ್ಲಿನ ಕಲಾವಿದರು, ಪ್ರೋತ್ಸಾಹಕರಲ್ಲಿ ಸಂತಸ ತಂದಿದೆ.

 ವಿಶ್ವದ 58 ರಾಷ್ಟ್ರೀಯ ಸಂಸ್ಥೆಯ ಪೈಕಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ) ಒಂದಾಗಿದೆ. ಎಂಬುದು ಇಡೀ ಕರ್ನಾಟಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಜೂನ್ ತಿಂಗಳಿನಲ್ಲಿ ಯುನೆಸ್ಕೋ ಮುಖ್ಯ ಕಚೇರಿಯಲ್ಲಿ ನಡೆದ 10ನೇ ಅಧಿವೇಶನದಲ್ಲಿ ಮಂಡಳಿಗೆ ಈ ಮಾನ್ಯತೆ ಘೋಷಿಸಲಾಗಿದೆ. ಯುನೆಸ್ಕೂ 2003 ರ ಅಮೂರ್ತ ಸಾಂಸ್ಕೃತಿಕ ಪರಂಪರೆ, ಸಂರಕ್ಷಣೆ, ಆಂತರಿಕ ಸಮಿತಿಗೆ ಸಲಹೆ ಮಾಡಲು ಮಂಡಳಿ ಮಾನ್ಯತೆ ಪಡೆದಿದೆ.

1934 ರಲ್ಲಿ ಸ್ಥಾಪನೆಯಾದ ಇಡಗುಂಜಿ ಮೇಳ 90 ವರುಷಗಳ ವರ್ಣರಂಜಿತ ಕಲಾ ಇತಿಹಾಸದ ಜೊತೆಗೆ ಇಂದು ಎಲ್ಲರ ಗಮನ ಸೆಳೆಯುತ್ತಿದೆ. ಉತ್ತರಕನ್ನಡದ ಹೊನ್ನಾವರದ ಗುಣವಂತೆ ಬಳಿ ಮಂಡಳಿಯ ಕೇಂದ್ರಸ್ಥಾನವಿದೆ. ಯಕ್ಷಗಾನದ ಯುಗಪುರುಷ ದಿ. ಕೆರೆಮನೆ ಶಿವರಾಮ ಹೆಗಡೆಯವರಿಂದ ಸ್ಥಾಪಿಸಲ್ಪಟ್ಟ ಈ ಮಂಡಳಿಯು ಅವರ ಮಗ ಮೇರುನಟ ದಿ.ಕೆರೆಮನೆ ಶಂಭು ಹೆಗಡೆ ಇವರ ಮುಂದಾಳತ್ವದಲ್ಲಿ ಅಪಾರ ಸಾಧನೆ ಮಾಡಿ ಇಂದು ಅವರ ಮೊಮ್ಮಗ ಕೆರೆಮನೆ ಶಿವಾನಂದ ಹೆಗಡೆಯವರ ನಿರ್ದೇಶನದಲ್ಲಿ ಅನೇಕ ದಾಖಲೆಗಳನ್ನು ಮಾಡುತ್ತಿದೆ.

ಅಲ್ಲದೇ ಶಿವಾನಂದ ಹೆಗಡೆಯವರ ಮಗ ಕೆರೆಮನೆ ಶ್ರೀಧರ ಹೆಗಡೆ ಕೂಡಾ ತಮ್ಮ ಉನ್ನತ ವ್ಯಾಸಂಗವನ್ನ ಮುಗಿಸಿ ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಒಟ್ಟೂ 15 ಕಲಾವಿದರ ತಂಡ ದೇಶ ವಿದೇಶದಲ್ಲಿ ಯಶಸ್ವಿ ಪ್ರದರ್ಶನ ನೀಡುತ್ತ ಮುನ್ನಡೆದಿದೆ.ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಕೂಡಾ ಈ ಮಂಡಳಿ ವಹಿಸಿದ ಪಾತ್ರ ಚರಿತ್ರೆಯಲ್ಲಿಯೂ ದಾಖಲಾಗಿದೆ. 

ಈ ಮಂಡಳಿಯ ಕಲಾವಿದರಾದ ದಿ.ಕೆರೆಮನೆ ಶಿವರಾಮ ಹೆಗಡೆ, ದಿ. ಕೆರೆಮನೆ ಶಂಭು ಹೆಗಡೆ ಹಾಗೂ ಕೆರೆಮನೆ ಮಹಾಬಲ ಹೆಗಡೆ ಈ ಮೂವರಿಗೂ ರಾಷ್ಟ್ರಪ್ರಶಸ್ತಿ ದೊರೆತಿದೆ. ಸ್ತ್ರೀ ವೇಷಧಾರಿಯಾಗಿ ಅಪಾರ ಜನಪ್ರಿಯತೆ ಪಡೆದ ದಿ.ಕೆರೆಮನೆ ಗಜಾನನ ಹೆಗಡೆ ಮಂಡಳಿಯ ಪ್ರಮುಖ ಕಲಾವಿದರಾಗಿದ್ದರು.ಈವರೆಗೆ ಮಂಡಳಿಯು ಸುಮಾರು 9000 ಕ್ಕೂ ಮೇಲ್ಪಟ್ಟು ಪ್ರದರ್ಶನಗಳನ್ನು ನೀಡಿದೆ. 

ಯಕ್ಷಗಾನ ಕಲೆಯನ್ನು ಜನಪ್ರಿಯಗೊಳಿಸಲು ದೇಶದ ಉದ್ದಗಲದಲ್ಲಿ ಮಾತ್ರವಲ್ಲದೇ ಇಂಗ್ಲೆಂಡ್, ಪ್ರಾನ್ಸ್, ಚೀನಾ, ನೇಪಾಳ, ಬಹ್ರೇನ್, ಸ್ಪೇನ್, ಬಾಂಗ್ಲಾದೇಶ್, ಅಮೇರಿಕಾ, ಇಂಡೋನೇಷ್ಯಾ, ಫಿಲಿಪೈನ್ಸ, ಸಿಂಗಾಪುರ, ದುಬೈ, ಲಾವೋಸ್, ಮಯನ್ಮಾರ್ ಮೊದಲಾದ ವಿದೇಶಿ ನೆಲದಲ್ಲಿ ಕೂಡ ಯಕ್ಷಗಾನವನ್ನು ಪ್ರದರ್ಶಿಸಿದೆ. 1986ರಲ್ಲಿ ಶ್ರೀಮಯ ಯಕ್ಷಗಾನ ರಂಗ ಶಿಕ್ಷಣ ಕೇಂದ್ರ ಸ್ಥಾಪಿಸಿ ಗುರುಕುಲ ಮಾದರಿಯಲ್ಲಿ ಯಕ್ಷಗಾನದ ಎಲ್ಲ ವಿಧಗಳಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ.ಮಂಡಳಿಯ ಸಂಸ್ಥಾಪಕ ಮೇರು ನಟ ಕೆರೆಮನೆ ಶಿವರಾಮ ಹೆಗಡೆಯವರ ಹೆಸರಿನಲ್ಲಿ 2004 ನಲ್ಲಿ ಗುಣವಂತೆಯ ಯಕ್ಷಾಂಗಣದಲ್ಲಿ ಸರ್ವಸುಸಜ್ಜಿತ ರಂಗಮಂದಿರವನ್ನು ಲೋಕಾರ್ಪಣೆ ಮಾಡಲಾಗಿದೆ.

ಪ್ರಶಸ್ತಿ ಸ್ಥಾಪನೆ: ಅಪ್ರತಿಮ ಸಾಧಕರಾದ ಕೆರೆಮನೆ ಶಿವರಾಮ ಹೆಗಡೆಯವರ ಹೆಸರಿನಲ್ಲಿ ಕೆರೆಮನೆ ಶಿವರಾಮ ಹೆಗಡೆ ರಾಷ್ತ್ರೀಯ ಪ್ರಶಸ್ತಿ 2004ರಿಂದ ಹಿರಿಯ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. 

ಮಂಡಳಿಗೆ ದೊರೆತ ಪ್ರಶಸ್ತಿಗಳು: ಮಧ್ಯಪ್ರದೇಶ ಸರ್ಕಾರದ ಸಂಸ್ಕೃತಿ ವಿಭಾಗದಿಂದ 2015-16 ನೇ ಸಾಲಿನ ಪ್ರತಿಷ್ಠಿತ ’ರಾಜಾ ಮಾನಸಿಂಹ ತೋಮರ್ ಸಮ್ಮಾನ’ ಪ್ರಶಸ್ತಿ. 2008 ರಲ್ಲಿ -ಅಖಿಲ ಹವ್ಯಕ ಮಹಾಸಭಾ (ರಿ), ಬೆಂಗಳೂರು ಇವರಿಂದ ’ಹವ್ಯಕ ಸಾಧಕ ರತ್ನ’ ಪ್ರಶಸ್ತಿ. ಶ್ರೀಮತಿ ರಮಾಬಾಯಿ ಚಾರಿಟೇಬಲ್ ಫೌಂಡೇಶನ್ ಮತ್ತು ಶ್ರೀ ಗೋಪಿನಾಥ ಶೆಣೈ ಚಾರಿಟೇಬಲ್ ಟ್ರಸ್ಟ್, ಮೈಸೂರು ಇವರಿಂದ 2020ನೇ ಸಾಲಿನ ’ರಮಾಗೋವಿಂದ ಪುರಸ್ಕಾರ. 2004ರಲ್ಲಿ - ಶ್ರೀಮಯ ಯಕ್ಷಗಾನ ರಂಗಶಿಕ್ಷಣ ಕೇಂದ್ರಕ್ಕೆ ’ಕಲಾರಂಗ ಉಡುಪಿ’ ನೀಡುವ -ಶ್ರೀ ಶ್ರೀ ವಿಶ್ವೇಶ ತೀರ್ಥ ಪ್ರಶಸ್ತಿ.ಛತ್ತಿಸಘಡ ಸರ್ಕಾರದಿಂದ ರಾಯಘಡದಲ್ಲಿ ನಡೆದ ಪ್ರತಿಷ್ಠಿತ ರಾಷ್ಟ್ರೀಯ ರಾಮಾಯಣ ಮಹೋತ್ಸವದಲ್ಲಿ (2023  ಜೂನ್) ಮಂಡಳಿಗೆ ಪ್ರಥಮ ಬಹುಮಾನ ಲಭಿಸಿದೆ.

ವಿಶ್ವಮನ್ನಣೆ: 1934ರಲ್ಲಿ ಸ್ಥಾಪನೆಯಾದ ಮಂಡಳಿಗೆ ಈಗ 90ನೇ ವರ್ಷದ ಸಂಭ್ರಮ. ಇದೇ ಸಂದರ್ಭದಲ್ಲಿ ವಿಶ್ವಮನ್ನಣೆ ಸಂಸ್ಥೆಗೆ ದೊರಕಿದ್ದು, ಅತಿಯಾದ ಹೆಮ್ಮೆ, ಸಂತೋಷದ ಸಂಗತಿಯಾಗಿದೆ ಎಂದು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದರು.